
ಬೆಂಗಳೂರು, ಜುಲೈ 24: ರಾಜ್ಯದಲ್ಲಿ ಪ್ರವಾಸೋದ್ಯಮ ಕ್ಷೇತ್ರದ ಸಂಪೂರ್ಣ ಸಾಮರ್ಥ್ಯವನ್ನು ಬಳಸಿಕೊಳ್ಳಲು ಹಾಗೂ ಖಾಸಗಿ ಹೂಡಿಕೆಯನ್ನು ಉತ್ತೇಜಿಸಲು ಸರ್ಕಾರ ಪ್ರವಾಸೋದ್ಯಮ ನೀತಿಗಳನ್ನು ಮತ್ತಷ್ಟು ಸರಳೀಕರಿಸುತ್ತಿದೆ ಎಂದು ಪ್ರವಾಸೋದ್ಯಮ ಹಾಗೂ ಇಂಧನ ಸಚಿವ ಕೆ.ಜೆ. ಜಾರ್ಜ್ ತಿಳಿಸಿದ್ದಾರೆ. ನಗರದಲ್ಲಿ ಆಯೋಜಿಸಲಾಗಿದ್ದ ಮೂರು ದಿನಗಳ ‘ಇಂಡಿಯನ್ ಇಂಟರ್‌ನ್ಯಾಷನಲ್ ಟ್ರಾವೆಲ್ ಮಾರ್ಟ್’ (IITM 2026) ಪ್ರದರ್ಶನದ ವೇಳೆ ಅವರು ಮಾತನಾಡಿ ಈ ಬಗ್ಗೆ ಮಾಹಿತಿ ತಿಳಿಸಿದ್ದಾರೆ.
ಹೂಡಿಕೆದಾರರಿಗೆ ಆಡಳಿತಾತ್ಮಕ ತೊಡಕುಗಳು ಎದುರಾಗದಂತೆ ನೋಡಿಕೊಳ್ಳುವುದು ಸರ್ಕಾರದ ಮುಖ್ಯ ಉದ್ದೇಶವಾಗಿದೆ. ಇದಕ್ಕಾಗಿ ಅನಗತ್ಯ ನೌಕರಶಾಹಿ ನಿಯಮಗಳನ್ನು ಸಡಿಲಗೊಳಿಸಿ, ಏಕಗವಾಕ್ಷಿ ಮಂಜೂರಾತಿ (Single-window clearances) ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದೆ. ಜೊತೆಗೆ ನೂತನ ಪ್ರವಾಸೋದ್ಯಮ ಯೋಜನೆಗಳನ್ನು ಕೈಗೆತ್ತಿಕೊಳ್ಳುವ ಖಾಸಗಿ ಹೂಡಿಕೆದಾರರಿಗೆ ಆಕರ್ಷಕ ಸಬ್ಸಿಡಿ ಮತ್ತು ಪ್ರೋತ್ಸಾಹಕಗಳನ್ನು ನೀಡಲಾಗುವುದು ಎಂದು ಸಚಿವರು ಭರವಸೆ ನೀಡಿದರು.
ಸಾಹಸ ಪ್ರವಾಸೋದ್ಯಮ (Adventure Tourism), ಕರಾವಳಿ ಭಾಗದಲ್ಲಿ ಕ್ರೂಸ್ (ಹಡಗು) ಪ್ರವಾಸೋದ್ಯಮ, ಪರಿಸರ ಪ್ರವಾಸೋದ್ಯಮ ಹಾಗೂ ವಿಶ್ವದರ್ಜೆಯ ರೆಸಾರ್ಟ್‌ಗಳನ್ನು ನಿರ್ಮಿಸಲು ಖಾಸಗಿ ಸಂಸ್ಥೆಗಳಿಗೆ ಮುಕ್ತ ಆಹ್ವಾನ ನೀಡಲಾಗಿದೆ. ಈ ಹೆಜ್ಜೆಯು ಕೇವಲ ಪ್ರವಾಸಿಗರನ್ನು ಆಕರ್ಷಿಸುವುದಷ್ಟೇ ಅಲ್ಲದೆ, ಸ್ಥಳೀಯವಾಗಿ ಲಕ್ಷಾಂತರ ಯುವಕರಿಗೆ ಉದ್ಯೋಗಾವಕಾಶ ಸೃಷ್ಟಿಸಲಿದೆ.ಕರ್ನಾಟಕದಲ್ಲಿ ಪ್ರವಾಸೋದ್ಯಮ ಉದ್ದಿಮೆ ಪ್ರಾರಂಭಿಸಲು ಬಯಸುವ ಹೂಡಿಕೆದಾರರಿಗೆ ಸರ್ಕಾರ ಸಂಪೂರ್ಣ ಆಡಳಿತಾತ್ಮಕ ಬೆಂಬಲ ನೀಡಲಿದೆ ಎಂದು ಕೆ.ಜೆ. ಜಾರ್ಜ್ ಹೇಳಿದ್ದಾರೆ.
ಈ ಕಾರ್ಯಕ್ರಮದಲ್ಲಿ ಪ್ರವಾಸೋದ್ಯಮ ಇಲಾಖೆಯ ಉನ್ನತಾಧಿಕಾರಿಗಳು, 16 ರಾಜ್ಯಗಳ 850ಕ್ಕೂ ಹೆಚ್ಚು ಪ್ರತಿನಿಧಿಗಳು ಹಾಗೂ 26ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಪ್ರವಾಸೋದ್ಯಮ ಸಂಸ್ಥೆಗಳು ಭಾಗವಹಿಸಿದ್ದವು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ