
ಬೆಂಗಳೂರು, ಜುಲೈ 20: ಯುಪಿಐ (UPI) ಮೂಲಕ 40 ಲಕ್ಷ ರೂಪಾಯಿಗಿಂತ ಅಧಿಕ ವಹಿವಾಟು ನಡೆಸಿದ ಬೇಕರಿ, ಕಾಂಡಿಮೆಂಟ್ಸ್, ಬೀಡ ಅಂಗಡಿಗಳು ಕಮರ್ಷಿಯಲ್ ಟ್ಯಾಕ್ಸ್ ಪಾವತಿ ಮಾಡಬೇಕೆಂಬ ಕರ್ನಾಟಕ ವಾಣಿಜ್ಯ ತೆರಿಗೆ ಇಲಾಖೆ (Karnataka Commercial Tax Department) ನೋಟಿಸ್ಗೆ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ವಾಣಿಜ್ಯ ಇಲಾಖೆಯ ನೋಟಿಸ್ಗೆ ಸಿಡಿದೆದ್ದಿರುವ ವರ್ತಕರು ‘ನೋ ಗೂಗಲ್, ಫೋನ್ ಪೇ’ ಕ್ಯಾಶ್ ನೀಡಿ ಅಂತ ಬೋರ್ಡ್ಗಳನ್ನು ಹಾಕುತ್ತಿದ್ದಾರೆ. ಅಲ್ಲದೆ, ವಾಣಿಜ್ಯ ಇಲಾಖೆಯ ನೋಟಿಸ್ ನೀಡಿದ್ದನ್ನು ಖಂಡಿಸಿ ಕಾಂಡಿಮೆಂಟ್, ಕಾಫಿ, ಟೀ ಅಂಗಡಿ ಮಾಲೀಕರು ಹಾಗೂ ಸಣ್ಣಪುಟ್ಟ ವ್ಯಾಪಾರಿಗಳು ಜು.25ರಂದು ತಮ್ಮ ಅಂಗಡಿಗಳನ್ನು ಬಂದ್ ಮಾಡಲು ನಿರ್ಧರಿಸಿದ್ದಾರೆ. ಈಗಾಗಲೆ ವರ್ತಕರು ಕರಪತ್ರ ಹಂಚಿ ಜುಲೈ 25ರಂದು ಬಂದ್ ಮಾಡುವಂತೆ ಮನವಿ ಮಾಡುತ್ತಿದ್ದಾರೆ.
ವರ್ತಕರು ಜುಲೈ 25ರ ಬೆಳಗ್ಗೆ 10 ಗಂಟೆಗೆಯಿಂದ ಬೆಂಗಳೂರಿನ ಫ್ರೀಡಂಪಾರ್ಕ್ನಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದಾರೆ. ಇನ್ನು, ಜುಲೈ 23ರಿಂದ ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟದಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ. ಏಕೆಂದರೆ, ವ್ಯಾಪಾರಿಗಳು ಜುಲೈ 23ರಿಂದ ಕಪ್ಪುಪಟ್ಟಿ ಕಟ್ಟಿಕೊಂಡು, ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟ ಬಿಟ್ಟು, ಇತರೆ ವಸ್ತುಗಳನ್ನು ವ್ಯಾಪಾರ ಮಾಡುವ ನಿರ್ಧಾರ ಮಾಡಿದ್ದಾರೆ.
ಬೆಂಗಳೂರಿನ ಮಂಜುನಾಥ ನಗರದಲ್ಲಿರುವ ಕೆಂಪೇಗೌಡ ತರಕಾರಿ ಅಂಗಡಿ ಮಾಲೀಕರಿಗೂ ವಾಣಿಜ್ಯ ತೆರಿಗೆ ಇಲಾಖೆ ನೋಟಿಸ್ ನೀಡಿದ್ದು, 43 ಲಕ್ಷ ರೂ. ಕಮರ್ಷಿಯಲ್ ಟ್ಯಾಕ್ಸ್ ಪಾವತಿಸುವಂತೆ ಸೂಚಿಸಿದೆ. ನೋಟಿಸ್ನಿಂದ ಆಘಾತಕ್ಕೆ ಒಳಗಾಗಿರುವ ತರಕಾರಿ ಅಂಗಡಿ ಮಾಲೀಕ ಟಿವಿ9 ಪ್ರತಿನಿಧಿ ಮುಂದೆ ಅಳಲು ತೋಡಿಕೊಂಡಿದ್ದಾರೆ. “ಎರಡು ವರ್ಷದಿಂದ ವ್ಯಾಪಾರ ಮಾಡುತ್ತಿದ್ದೇನೆ. ಎರಡು ಬಾರಿ ನೋಟಿಸ್ ನೀಡಿ 43 ಲಕ್ಷ ರೂ. ಕಟ್ಟಲು ಹೇಳುತ್ತಿದ್ದಾರೆ. ಇಷ್ಟು ಹಣ ಕಟ್ಟಲು ಹೇಳಿದರೇ, ಅಂಗಡಿ ಬಂದ್ ಮಾಡಿ ಊರಿಗೆ ಹೋಗಬೇಕಾಗುತ್ತದೆ” ಎಂದು ತರಕಾರಿ ಅಂಗಡಿ ಮಾಲೀಕ ಸಾಗರ್ ಹೇಳಿದ್ದಾರೆ.
ಇದನ್ನೂ ಓದಿ: ಬೇಕರಿ, ಕಾಂಡಿಮೆಂಟ್ಸ್, ಬೀಡ ಅಂಗಡಿ ಮಾಲೀಕರಿಗೆ ಸಿಹಿ ಸುದ್ದಿ ನೀಡಿದ ವಾಣಿಜ್ಯ ಇಲಾಖೆ
ಕೆ.ಆರ್. ಮಾರುಕಟ್ಟೆ ಸುತ್ತಮುತ್ತಲಿನ ಹಲವು ಅಂಗಡಿ, ಮುಂಗಟ್ಟುಗಳಲ್ಲಿ ನೋ ಗೂಗಲ್, ಫೋನ್ ಪೇ’ ಕ್ಯಾಶ್ ನೀಡಿ ಎಂದು ಬೋರ್ಡ್ಗಳನ್ನು ಹಾಕಲಾಗಿದೆ. ವ್ಯಾಪಾರಿಗಳು ನಗದು ವ್ಯವಹಾರಕ್ಕೆ ಮಾತ್ರ ಆಸಕ್ತಿ ತೋರುತ್ತಿದ್ದಾರೆ.
Published On - 1:31 pm, Sun, 20 July 25