ಹಿಜಾಬ್ ವಿವಾದ: ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಚುರುಕು, ವಕ್ಘ್ ಬೋರ್ಡ್ ಅಧ್ಯಕ್ಷರಿಂದ ವಕೀಲರ ಭೇಟಿ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Mar 23, 2022 | 2:56 PM

ಪವಿತ್ರ ಕುರಾನ್ ಹಿಜಾಬ್ ಕಡ್ಡಾಯ ಎಂದಿದೆ. ಈ ಅಂಶವನ್ನು ಸುಪ್ರೀಂಕೋರ್ಟ್​ಗೆ ಮನವರಿಕೆ ಮಾಡಿಕೊಡಬೇಕಿದೆ ಎಂದು ವಕ್ಫ್​ ಬೋರ್ಡ್ ಅಧ್ಯಕ್ಷ ಷಫಿ ಅಸದಿ ಹೇಳಿದರು.

ಹಿಜಾಬ್ ವಿವಾದ: ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಚುರುಕು, ವಕ್ಘ್ ಬೋರ್ಡ್ ಅಧ್ಯಕ್ಷರಿಂದ ವಕೀಲರ ಭೇಟಿ
ವಕ್ಫ್​ ಮಂಡಳಿ ಅಧ್ಯಕ್ಷ ಷಫಿ ಸಅದಿ
Follow us on

ದೆಹಲಿ: ಹಿಜಾಬ್ ಸಂಬಂಧ ಹೈಕೋರ್ಟ್ ನೀಡಿರುವ ತೀರ್ಪನ್ನು ಆತಂಕದಿಂದ ನೋಡುವಂತಾಗಿದೆ ಎಂದು ದೆಹಲಿಯಲ್ಲಿ ವಕ್ಫ್ ಬೋರ್ಡ್ ಅಧ್ಯಕ್ಷ ಸಅದಿ ಹೇಳಿದರು. ಈ ತೀರ್ಪು ಪ್ರಶ್ನಿಸಿ ವಿದ್ಯಾರ್ಥಿನಿಯರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ. ಹೈಕೋರ್ಟ್ ಹಿಜಾಬ್ ಕಡ್ಡಾಯ ಅಲ್ಲ ಎಂದಿದೆ. ಆದರೆ ಪವಿತ್ರ ಕುರಾನ್ ಹಿಜಾಬ್ ಕಡ್ಡಾಯ ಎಂದಿದೆ. ಈ ಅಂಶವನ್ನು ಸುಪ್ರೀಂಕೋರ್ಟ್​ಗೆ ಮನವರಿಕೆ ಮಾಡಿಕೊಡಬೇಕಿದೆ. ಈ ಹಿನ್ನೆಲೆಯಲ್ಲಿ ಇಂದು ವಕೀಲರನ್ನು ಭೇಟಿ ಮಾಡಿ, ಮುಂದಿನ ಕಾನೂನು ಹೋರಾಟದ ಬಗ್ಗೆ ಚರ್ಚೆ ನಡೆಸುತ್ತೇನೆ. ವಕೀಲರಿಗೆ ಇಸ್ಲಾಂ ನಿಯಮಗಳ ಬಗ್ಗೆ ಮನವರಿಕೆ ಮಾಡಿಕೊಡುತ್ತೇನೆ ಎಂದು ಹೇಳಿದರು. ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಿಗೆ ವಿಷಯವನ್ನು ಪೂರ್ಣಪ್ರಮಾಣದಲ್ಲಿ ಮನವರಿಕೆ ಮಾಡಿಕೊಡಲು ಇದರಿಂದ ಸಾಧ್ಯವಾಗುತ್ತದೆ ಎಂದು ನುಡಿದರು.

ಹೈಕೋರ್ಟ್ ತೀರ್ಪು ಪಾಲಿಸಲು ಮಂಗಳೂರು ವಿವಿ ಸುತ್ತೋಲೆ
ಮಂಗಳೂರು:
ಹಿಜಾಬ್ ಸಂಬಂಧ ಹೈಕೋರ್ಟ್ ನೀಡಿರುವ ತೀರ್ಪು ಪಾಲಿಸಲು ಮಂಗಳೂರು ವಿಶ್ವವಿದ್ಯಾಲಯವು ಸುತ್ತೋಲೆ ಹೊರಡಿಸಿದೆ. ಮಂಗಳೂರು ವಿವಿ ವ್ಯಾಪ್ತಿಯ 212 ಕಾಲೇಜುಗಳಿಗೆ ಸುತ್ತೋಲೆ ಅನ್ವಯವಾಗಲಿದೆ ಎಂದು ತಿಳಿಸಲಾಗಿದೆ.

ವಿಧಾನ ಪರಿಷತ್​ನಲ್ಲಿ ಹಿಜಾಬ್ ಪ್ರಸ್ತಾಪ
ಬೆಂಗಳೂರು: ವಿಧಾನಪರಿಷತ್​ನ ಶೂನ್ಯವೇಳೆಯಲ್ಲಿ ಹಿಜಾಬ್ ವಿಚಾರವನ್ನು ಸದಸ್ಯ ಡಿ.ಎಸ್​.ಅರುಣ್ ಪ್ರಸ್ತಾಪಿಸಿದರು. ಹಿಜಾಬ್ ಪ್ರಕರಣದಲ್ಲಿ ಹೈಕೋರ್ಟ್ ಈಗಾಗಲೇ ತೀರ್ಪು ನೀಡಿದೆ. ಹೈಕೋರ್ಟ್ ಆದೇಶವನ್ನು ಸುಪ್ರೀಂಕೋರ್ಟ್​ನಲ್ಲಿ ಪ್ರಶ್ನೆ ಮಾಡಲು ಅವಕಾಶ ಇದೆ. ಆದರೂ ಕೆಲವರು ಹೈಕೋರ್ಟ್ ಆದೇಶದ ವಿರುದ್ಧ ಪ್ರತಿಭಟನೆ ಮಾಡಿದ್ದಾರೆ. ಇಂಥವರು ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಇಂತಹ ಪ್ರತಿಭಟನೆಗಳಿಗೆ ಸರ್ಕಾರ ಅವಕಾಶ ಕೊಡಬಾರದು ಎಂದು ಆಗ್ರಹಿಸಿದರು.

ಮುಸ್ಲಿಂ ಸಂಘಟನೆಗಳ ಪ್ರತಿಭಟನೆ ಬಗ್ಗೆ ಪ್ರಶ್ನೆ ಕೇಳಿದ್ದಕ್ಕೆ ಕಾಂಗ್ರೆಸ್​ನ ನಜೀರ್ ಅಹ್ಮದ್​, ಪ್ರಕಾಶ್ ರಾಥೋಡ್ ವಿರೋಧ ವ್ಯಕ್ತಪಡಿಸಿದರು. ಶೂನ್ಯವೇಳೆಯಲ್ಲಿ ಇಂತಹ ವಿಷಯ ಪ್ರಸ್ತಾಪಕ್ಕೆ ಅವಕಾಶ ಕೊಡಬಾರದು. ಪ್ರಕರಣ ಸುಪ್ರೀಂಕೋರ್ಟ್​ನಲ್ಲಿದೆ ಈ ಬಗ್ಗೆ ಚರ್ಚೆ ಮಾಡೋದು ಸರಿಯಲ್ಲ ಎಂದು ನಜೀರ್ ಅಹ್ಮದ್ ಅಭಿಪ್ರಾಯಪಟ್ಟರು.

ಈ ಕುರಿತು ಗೃಹ ಸಚಿವರಿಂದ ಉತ್ತರ ಕೊಡಿಸಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ್ ಭರವಸೆ ನೀಡಿದರು. ಸದನದಲ್ಲಿ ಗದ್ದಲ ಹೆಚ್ಚಾದಾಗ, ‘ಸಚಿವರು ಉತ್ತರ ಕೊಡ್ತಾರೆ ಕುಳಿತುಕೊಳ್ಳಿ’ ಎಂದು ಕಾಂಗ್ರೆಸ್ ಸದಸ್ಯರನ್ನು ಸಭಾಪತಿ ಬಸವರಾಜ ಹೊರಟ್ಟಿ ಸುಮ್ಮನಾಗಿಸಿದರು.

ಇದನ್ನೂ ಓದಿ: ಹಿಜಾಬ್ ತೀರ್ಪು: ಜಡ್ಜ್​ಗಳಿಗೆ ಬೆದರಿಕೆ, ಬಾಡಿ ವಾರೆಂಟ್ ಮೂಲಕ ಆರೋಪಿ ರಹಮತ್ ಬೆಂಗಳೂರಿಗೆ, 8 ದಿನ ಬೆಂಗಳೂರು ಪೊಲೀಸರ ವಶಕ್ಕೆ

ಇದನ್ನೂ ಓದಿ: ಮೊದಲೆರಡು ಪರೀಕ್ಷೆಯಲ್ಲಿ ಹಿಜಾಬ್​ಗೆ ಅವಕಾಶ ಕೊಟ್ಟು, 3ನೇ ಬಾರಿಗೆ ತೆಗೆದಿಟ್ಟು ಬರುವಂತೆ ಹೇಳಿದಕ್ಕೆ ಪರೀಕ್ಷೆ ಬಹಿಷ್ಕರಿಸಿದರು