CNR Rao: ಭಾರತ ರತ್ನ ಪ್ರೊ. ಸಿಎನ್ಆರ್ ರಾವ್ ಅವರಿಗೆ ಪ್ರತಿಷ್ಠಿತ ಎನಿ ಎನರ್ಜಿ ಫ್ರೊಂಟೈರ್ಸ್- 2020 ಪ್ರಶಸ್ತಿ ಪ್ರದಾನ
Eni International Award: ಇಟಲಿ ಸರ್ಕಾರದಿಂದ ನೀಡುವ ಪ್ರಶಸ್ತಿ ಇದಾಗಿದ್ದು ಈ ಪ್ರಶಸ್ತಿಯನ್ನು ಎನರ್ಜಿ ಕ್ಷೇತ್ರದಲ್ಲಿನ ನೋಬೆಲ್ ಪ್ರಶಸ್ತಿ ಎಂದೇ ವ್ಯಾಖ್ಯಾನಿಸುತ್ತಾರೆ. ಬೆಂಗಳೂರಿನ ಜವಾಹರಲಾಲ್ ನೆಹರು ಸೆಂಟರ್ ಫಾರ್ ಅಡ್ವಾನ್ಸ್ಡ್ ಸೈಂಟಿಫಿಕ್ ರಿಸರ್ಚ್ ಸಭಾಭವನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗಿದೆ.
ಬೆಂಗಳೂರು: ಪ್ರತಿಷ್ಠಿತ ಎನಿ ಎನರ್ಜಿ ಫ್ರೊಂಟೈರ್ಸ್- 2020 ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಎನರ್ಜಿ ಕ್ಷೇತ್ರದಲ್ಲಿ ಮಾಡಿದ ಸಾಧನೆಗೆ ನೀಡುವ ಪ್ರಶಸ್ತಿಯನ್ನು ಭಾರತ ರತ್ನ ಪ್ರೊ.ಸಿ.ಎನ್.ಆರ್. ರಾವ್ ಅವರಿಗೆ ನೀಡಲಾಗಿದೆ. ಬೆಂಗಳೂರಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿರಿಂದ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಇಟಲಿ ಸರ್ಕಾರದಿಂದ ನೀಡುವ ಪ್ರಶಸ್ತಿ ಇದಾಗಿದ್ದು ಈ ಪ್ರಶಸ್ತಿಯನ್ನು ಎನರ್ಜಿ ಕ್ಷೇತ್ರದಲ್ಲಿನ ನೋಬೆಲ್ ಪ್ರಶಸ್ತಿ ಎಂದೇ ವ್ಯಾಖ್ಯಾನಿಸುತ್ತಾರೆ. ಬೆಂಗಳೂರಿನ ಜವಾಹರಲಾಲ್ ನೆಹರು ಸೆಂಟರ್ ಫಾರ್ ಅಡ್ವಾನ್ಸ್ಡ್ ಸೈಂಟಿಫಿಕ್ ರಿಸರ್ಚ್ ಸಭಾಭವನದಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗಿದೆ.
ಪ್ರೊ. ರಾವ್ ಅವರು ಇಡೀ ಏಷ್ಯಾ ಖಂಡದಲ್ಲಿಯೇ ಈ ಪ್ರಶಸ್ತಿ ಪಡೆಯುತ್ತಿರುವ ಮೊದಲ ವಿಜ್ಞಾನಿ ಆಗಿರುವುದು ವಿಶೇಷವಾಗಿದೆ. ಈ ಪ್ರಶಸ್ತಿಯನ್ನು ಈ ಮೊದಲೇ ಘೋಷಿಲಾಗಿತ್ತು. ಆದರೆ ಕೊವಿಡ್ ಹಿನ್ನೆಲೆಯಲ್ಲಿ ಪ್ರಶಸ್ತಿ ಪ್ರದಾನ ಮಾಡಿರಲಿಲ್ಲ. ಇಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಪ್ರಶಸ್ತಿ ಪ್ರದಾನ ಮಾಡಿದ್ದಾರೆ. ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ. ಸಿ.ಎನ್. ಅಶ್ವತ್ಥ ನಾರಾಯಣ, ಡಾ. ಇಂದುಮತಿ ರಾವ್, ಜವಾಹರಲಾಲ್ ನೆಹರೂ ಸೆಂಟರ್ ಫಾರ್ ಅಡ್ವಾನ್ಸ್ಡ್ ಸೈಂಟಿಫಿಕ್ ರಿಸರ್ಚ್ ಅಧ್ಯಕ್ಷ ಪ್ರೊ. ಜಿ.ಯು ಕುಲಕರ್ಣಿ ಸೇರಿದಂತೆ ಅನೇಕ ವಿಜ್ಞಾನಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಸಿಎನ್ಆರ್ ರಾವ್; ವಿಜ್ಞಾನದೆಡೆಗೆ ಅದೇ ಕೌತುಕ-ಮುಗ್ಧತೆ!
ಪ್ರಪಂಚದಾದ್ಯಂತ ಇರುವ 83 ವಿಶ್ವವಿದ್ಯಾಲಯಗಳಿಂದ ಗೌರವ ಡಾಕ್ಟರೇಟ್ ಪಡೆದಿರುವ ಸಿಎನ್ಆರ್ ರಾವ್ ರಾಜಧಾನಿ ಬೆಂಗಳೂರಿನಿಂದ 80 ಕಿಮಿ ದೂರದ ಚಿಂತಾಮಣಿ ಪಟ್ಟಣದವರು. ಆರೇಳು ದಶಕಗಳಿಂದ ರಸಾಯನಶಾಸ್ತ್ರದಲ್ಲಿ ಒಂದಿಲ್ಲೊಂದು ಪ್ರಯೋಗಗಳಲ್ಲಿ ತೊಡಗಿರುವ ಪ್ರತಿಷ್ಠಿತ ಶಾಂತಿ ಸ್ವರೂಪ್ ಭಟ್ನಾಗರ್ ಪ್ರಶಸ್ತಿ ಪುರಸ್ಕೃತ ಸಿಎನ್ಆರ್ ರಾವ್ ಇಂದಿಗೂ ಯಾವುದಾದರೂ ಸಂಶೋಧನೆ ಮಾಡಿದರೆ ಅದಾಗತಾನೆ ಪ್ರಯೋಗಾಲಯಕ್ಕೆ ಪ್ರವೇಶಿಸಿದ ಕಾಲೇಜು ವಿದ್ಯಾರ್ಥಿಯಂತೆ ಸಂಭ್ರಮಿಸುತ್ತಾರೆ.
1770 ಸಂಶೋಧನಾ ಪ್ರಕಟಣೆಗಳು, 50ಕ್ಕೂ ಹಚ್ಚು ವಿಜ್ಞಾನ ಪುಸ್ತಕಗಳನ್ನು ಬರೆದಿರುವ ಪದ್ಮವಿಭೂಷಣ ಪುರಸ್ಕೃತ ಹೆಮ್ಮೆಯ ಕನ್ನಡಿಗ ಸಿಎನ್ಆರ್ ರಾವ್ ತಮ್ಮ 17ನೇ ವಯಸ್ಸಿನಲ್ಲಿ ಮೈಸೂರಿನಲ್ಲಿ BSc ಪದವಿ ಪಡೆದು, ದೇಶದ ಪ್ರತಿಷ್ಠಿತ ಮಹಾ ವಿಶ್ವವಿದ್ಯಾಲಯವಾದ, ಭಾರತ ರತ್ನ ಬನಾರಸ್ ವಿಶ್ವ ವಿದ್ಯಾಯದಲ್ಲಿ MSc ಪದವಿ ಗಳಿಸಿದ್ದಾರೆ. ಒಂದೇ ಉಸುರಿನಲ್ಲಿ ವಿಜ್ಞಾನದಲ್ಲಿ ಪದವಿಗಳನ್ನು ಬಾಚಿಕೊಳ್ಳುತ್ತಾ ಸಾಗಿದ ಸಿಎನ್ಆರ್ ಸರ್, ಅಮೆರಿಕದ ಪುರಾತನ ಯೂನಿವರ್ಸಿಗಳಲ್ಲಿ ಒಂದಾದ Purdue Universityಯಲ್ಲಿ PhD ಗಳಿಸಿದ್ದಾರೆ.
1934ರ ಜೂನ್ 30ರಂದು ಜನಿಸಿದ ಸಿಎನ್ಆರ್ ರಾವ್ ಅವರು ಇಂದಿಗೂ ದೇಶಕ್ಕಾಗಿ ಏನಾದರೂ ಮಹತ್ತರ ಕೊಡುಗೆ ನೀಡಬೇಕು ಎಂದು ತುಡಿಯುವ ಯುವ ಮನಸುಳ್ಳವರು. ಪಿಎಚ್ಡಿ ಪಡೆದು ಅಮೆರಿಕದಿಂದ ವಾಪಸಾದ ಸಿಎನ್ಆರ್ ರಾವ್ ಅವರಿಗೆ ಆಗ 24 ವರ್ಷ. ಅಷ್ಟು ಚಿಕ್ಕ ವಯಸ್ಸಿಗೇ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ (Indian Institute of Science) ಲೆಕ್ಚರರ್ ಆಗಿ ಸೇರಿಕೊಂಡವರು ಅವರು. ನಾನು ಬಸವನಗುಡಿಯಲ್ಲಿದ್ದೆ. ನಾನೂ ‘ಎಪಿಎಸ್ ಪ್ರಾಡಕ್ಟ್’ (Acharya Patashala high school) ಎಂದು ಸಿಎನ್ಆರ್ ರಾವ್ ಅದೊಮ್ಮೆ ಸಂದರ್ಶನದಲ್ಲಿ ಹೆಮ್ಮೆಯಿಂದ ಮೆಲುಕು ಹಾಕಿದ್ದರು.
ಈ ಮಧ್ಯೆ ಇಡೀ ಪ್ರಪಂಚ ಸುತ್ತಿಬಂದು ಇದೀಗ ಐಐಎಸ್ಇ ಸಮೀಪದಲ್ಲೇ ವಿಶ್ರಾಂತ ಜೀವನ ನಡೆಸುತ್ತಿದ್ದಾರಾದರೂ ಇಂದಿಗೂ ಪುಸ್ತಕಗಳ ಮಧ್ಯೆಯೇ ಶಿಸ್ತಾಗಿ ಕುಳಿತು ಅಧ್ಯಯನ ನಿರತರು. ಇವರ ಪತ್ನಿ ಇಂದುಮತಿ (Indumati Rao) ಸಹ ಇವರಷ್ಟೇ ಚಟುವಟಿಕೆಯಿಂದ ಸಕ್ರಿಯರಾಗಿದ್ದಾರೆ. ಅವರೂ ಶೈಕ್ಷಣಿಕ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ರಾವ್, ಎರಡು ಬಾರಿ ಪ್ರಧಾನ ಮಂತ್ರಿಗಳಿಗೆ ವೈಜ್ಞಾನಿಕ ಸಲಹೆಗಾರರಾಗಿದ್ದರು. ಈ ಹಿಂದೆ ಬಿಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ವೈಜ್ಞಾನಿಕ ಸಲಹೆಗಾರರಾಗಿ ಕರ್ನಾಟಕಕ್ಕೆ ಸೇವೆ ಸಲ್ಲಿಸಿದ್ದಾರೆ. ಇದುವರೆಗೂ ಮೂವರು ವಿಜ್ಞಾನಿಗಳು ಮಾತ್ರವೇ ಭಾರತ ರತ್ನ ಪುರಸ್ಕೃತರು. ಮೊದಲನೆಯವರು ಸರ್ ಸಿವಿ ರಾಮನ್(C.V. Raman) ನಂತರ ಎಪಿಜೆ ಅಬ್ದುಲ್ ಕಲಾಂ (A. P. J. Abdul Kalam). ಮೂರನೆಯವರು ಸಿಎನ್ಆರ್ ರಾವ್.
ಇದನ್ನೂ ಓದಿ: ಸಮುದ್ರ ತೀರದಲ್ಲಿ 1800ರ ಸಮಯದ ಹಡಗಿನ ಅವಶೇಷ ಪತ್ತೆ: ಸಂಶೋಧನೆಗೆ ಮುಂದಾದ ವಿಜ್ಞಾನಿಗಳ ತಂಡ
Published On - 12:57 pm, Wed, 23 March 22