ತರಕಾರಿಯಷ್ಟೇ ಅಲ್ಲ ರಾಜ್ಯದ ಜನರು ಕುಡಿಯುವ ನೀರೂ ಕಲುಷಿತ!: ಶಾಕಿಂಗ್​ ವಿಚಾರ ಬಹಿರಂಗ

ರಾಜ್ಯದ ಕುಡಿಯುವ ನೀರು ವ್ಯಾಪಕವಾಗಿ ಕಲುಷಿತಗೊಂಡಿದ್ದು, ಜಲಜೀವನ್ ಮಿಷನ್ ವರದಿ ಆತಂಕಕಾರಿ ಸಂಗತಿಗಳನ್ನು ಬಹಿರಂಗಪಡಿಸಿದೆ. ಪರೀಕ್ಷಿಸಿದ ಮಾದರಿಗಳಲ್ಲಿ ರಾಸಾಯನಿಕ ಅಂಶ ಹಾಗೂ ಬ್ಯಾಕ್ಟೀರಿಯಾದಿಂದ ನೀರು ಕಲುಷಿತವಾಗಿರುವುದು ದೃಢಪಟ್ಟಿದೆ. ಈ ಕಲುಷಿತ ನೀರು ಜನರ ಆರೋಗ್ಯಕ್ಕೆ ಗಂಭೀರ ಅಪಾಯ ತಂದೊಡ್ಡಿದ್ದು, ತಕ್ಷಣದ ಕ್ರಮಕ್ಕೆ ಪರಿಸರವಾದಿಗಳು ಒತ್ತಾಯಿಸಿದ್ದಾರೆ.

ತರಕಾರಿಯಷ್ಟೇ ಅಲ್ಲ ರಾಜ್ಯದ ಜನರು ಕುಡಿಯುವ ನೀರೂ ಕಲುಷಿತ!: ಶಾಕಿಂಗ್​ ವಿಚಾರ ಬಹಿರಂಗ
ಸಾಂದರ್ಭಿಕ ಚಿತ್ರ
Image Credit source: Getty Images
Edited By:

Updated on: Aug 17, 2026 | 12:35 PM

ಬೆಂಗಳೂರು, ಫೆಬ್ರವರಿ 24: ರಾಜ್ಯದ ತರಕಾರಿಗಳಲ್ಲಿ ಹೇರಳವಾಗಿ ಸೀಸ ಮತ್ತು ಕೀಟನಾಶಕಗಳ ಅಂಶಗಳು ಪತ್ತೆಯಾಗಿರುವ ವಿಚಾರ ಜನರಲ್ಲಿ ಆತಂಕ ಹುಟ್ಟಿಸಿರುವ ನಡುವೆ, ಬೇಸಿಗೆ ಆರಂಭದ ಹೊತ್ತಲ್ಲಿ ನೀರಿನ ಗುಣಮಟ್ಟ ಹದಗೆಟ್ಟ ಶಾಕಿಂಗ್ ರಿಪೋರ್ಟ್ ಹೊರಬಂದಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಂಗ್ರಹಿಸಲಾಗಿದ್ದ ನೀರಿನ ಮಾದರಿಯನ್ನು ಜಲಜೀವನ್ ಮಿಷನ್ ಯೋಜನೆ ಅಡಿ ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆಸಲಾಗಿದ್ದು, ಈ ವೇಳೆ ಕುಡಿಯುವ ನೀರಿನಲ್ಲಿ ರಾಸಾಯನಿಕ ಹಾಗೂ ಬ್ಯಾಕ್ಟೀರಿಯಾ ಅಂಶ ಪತ್ತೆಯಾಗಿದೆ. 2023ರಿಂದ 2026ರ ಫೆಬ್ರವರಿವರೆಗೆ ಸಂಗ್ರಹಿಸಿದ್ದ ನೀರಿನ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು.

ನೀರು ಕಲುಷಿತಗೊಳ್ಳುತ್ತಿರೋದೇಕೆ?

9.34 ಲಕ್ಷ ಮಾದರಿಯಲ್ಲಿ 53 ಸಾವಿರ ಮಾದರಿಗಳಲ್ಲಿ ರಾಸಾಯನಿಕ ಅಂಶಗಳು ಪತ್ತೆಯಾಗಿದ್ದರೆ, 7,696 ನೀರಿನ ಸ್ಯಾಂಪಲ್​​ಗಳಲ್ಲಿ ಬ್ಯಾಕ್ಟೀರಿಯಾ ಅಂಶಗಳು ಕಂಡುಬಂದಿವೆ. ಕೊಳಚೆ ನೀರು ಸೋರಿಕೆ, ಕೈಗಾರಿಕಾ ತ್ಯಾಜ್ಯ ಸೇರ್ಪಡೆ, ಟ್ಯಾಂಕರ್ ಗಳಲ್ಲಿ ಫಂಗಸ್ ಉತ್ಪತ್ತಿ ಮುಂತಾದವುಗಳೇ ನೀರಿನ ಗುಣಮಟ್ಟ ಕೆಡಲು ಪ್ರಮುಖ ಕಾರಣವಾಗುತ್ತಿದ್ದು, ನೈಸರ್ಗಿಕ ಜಲಸಂಪನ್ಮೂಲಗಳ ಸಂರಕ್ಷಣೆಗೆ ಪರಿಸರವಾದಿಗಳಿಂದ ಆಗ್ರಹ ಕೇಳಿಬಂದಿದೆ. ಈ ಬಗ್ಗೆ ಜಲತಜ್ಞ ಟಿ.ವಿ ರಾಮಚಂದ್ರ ಕಳವಳ ವ್ಯಕ್ತಪಡಿಸಿದ್ದು, ನಗರೀಕರಣ ಹಿನ್ನಲೆ ವಾತಾವರಣ ಕಾಂಕ್ರಿಟ್ ನಾಡಾಗಿ ಪರಿವರ್ತನೆ ಆಗುತ್ತಿದೆ. ನೈಸರ್ಗಿಕ ಜಲಸಂಪನ್ಮೂಲಗಳು ಕಲುಷಿತ ಆಗುತ್ತಿರುವುದೇ ಇದಕ್ಕೆ ಕಾರಣ. ಜಲಜೀವನ್ ಮಿಷನ್ ಅಡಿ ರಾಜ್ಯದ ಎಲ್ಲ ಜಿಲ್ಲೆಗಳಿಗೂ ನೀರು ಪೂರೈಕೆ ಆಗುತ್ತಿದ್ದು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕು ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ರಾಜ್ಯದ ತರಕಾರಿಗಳಲ್ಲಿ ಹೇರಳವಾಗಿ ಸಿಕ್ತು ಸೀಸದ ಅಂಶ!ನೀವು ತಿನ್ನುವುದು ನಿಜವಾಗಲೂ ಆರ್ಗ್ಯಾನಿಕ್ ತರಕಾರಿನಾ?

ಬೆಚ್ಚಿ ಬೀಳಿಸುವಂತಿದೆ ಅಂಕಿ-ಅಂಶ

ವರ್ಷ ಪರೀಕ್ಷಿಸಲಾದ ಮಾದರಿ ಸಂಖ್ಯೆ ರಾಸಾಯನಿಕ ಪತ್ತೆಯಾದ ಮಾದರಿಗಳು ಬ್ಯಾಕ್ಟೀರಿಯಾ ಪತ್ತೆಯಾದ ಮಾದರಿಗಳು
2023-24 2.98 ಲಕ್ಷ 24917 4670
2024-25 3.90 ಲಕ್ಷ 17261 2574
2025-26 2.46 ಲಕ್ಷ 10911 452

ಬಿಜೆಪಿ ಶಾಸಕ ಸುರೇಶ್​​ ಕುಮಾರ್​​ ಕಳವಳ

ಬೆಂಗಳೂರಿನ 142 ಕೆರೆಗಳ ನೀರು ಸಂಪೂರ್ಣ ಕಲುಷಿತಗೊಂಡಿದೆ ಎಂಬ ವರದಿ ಬಂದಾಗ, ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ಅವರು, ಬೆಂಗಳೂರಿನ ಕೆರೆ ನೀರನ್ನು ಕುಡಿಯಲು ಹಾಗೂ ಸ್ನಾನಕ್ಕೆ ಬಳಸಿ ಎಂದು ಸರ್ಕಾರ ಹೇಳಿಲ್ಲ, ಈ ಕೆರೆಗಳು ಇರುವುದು ಅಂತರ್ಜಲ ಮಟ್ಟ ಹೆಚ್ಚಿಸಲು ಎಂದು ಅತ್ಯಂತ ಹಗುರವಾದ ಹೇಳಿಕೆ ನೀಡಿದ್ದರು. ಕೆರೆಯ ನೀರನ್ನು ನಾವು ನೇರವಾಗಿ ಲೋಟದಲ್ಲಿ ಕುಡಿಯುತ್ತಿಲ್ಲದಿರಬಹುದು. ಆದರೆ, ರಾಜ್ಯ ಸರ್ಕಾರ ನಿರ್ಲಕ್ಷ್ಯ ಮಾಡಿರುವ ಅದೇ ಕಲುಷಿತ ಕೆರೆಯ ನೀರು ಅಂತರ್ಜಲವನ್ನು ಸೇರಿ, ನಮ್ಮ ರೈತರ ಬೆಳೆಗಳ ಮೂಲಕ ನಿತ್ಯವೂ ನಮ್ಮ ತಟ್ಟೆಯನ್ನು ಸೇರುತ್ತಿದೆ. ನಿಮ್ಮ ಪ್ರಕಾರ ಅಂತರ್ಜಲ ಹೆಚ್ಚಿಸಲು ಬಿಟ್ಟಿರುವ ಆ ಮೋರಿ ಮತ್ತು ಕೈಗಾರಿಕಾ ತ್ಯಾಜ್ಯದ ನೀರು, ಇಂದು ಬೆಂಗಳೂರಿಗರ ಕಿಡ್ನಿ, ಮಿದುಳುಗಳನ್ನು ಹಾಳು ಮಾಡುತ್ತಿದೆ. ಸಮಸ್ಯೆಯ ಮೂಲವನ್ನು ತಡೆಯುವ ಜವಾಬ್ದಾರಿ ಸರ್ಕಾರದ ಮೇಲಿದೆ ಎಂದು ಬಿಜೆಪಿ ಶಾಸಕ ಸುರೇಶ್​​ ಕುಮಾರ್​​ ಆಗ್ರಹಿಸಿದ್ದಾರೆ.

ವರದಿ: ಲಕ್ಷ್ಮೀ ನರಸಿಂಹ, ಟಿವಿ9 ಬೆಂಗಳೂರು

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 2:56 pm, Tue, 24 February 26

Loading...
Unable to load recommendations.
Follow Us