ಕರ್ನಾಟಕದಲ್ಲಿ ತಗ್ಗದ ಮಳೆ ಅಬ್ಬರ; ವರುಣನ ರೌದ್ರನರ್ತನಕ್ಕೆ ಹಲವೆಡೆ ರೆಡ್, ಆರೆಂಜ್ ಅಲರ್ಟ್​ ಘೋಷಣೆ

| Updated By: Skanda

Updated on: Jul 23, 2021 | 7:57 AM

ಕರ್ನಾಟಕದಲ್ಲಿ ಇನ್ನೂ ಎರಡು ಮೂರು ದಿನ ಉತ್ತಮ ಮಳೆಯಾಗಲಿದ್ದು, ಉತ್ತರ ಕನ್ನಡ, ಉಡುಪಿ, ಮಂಗಳೂರು, ಚಿಕ್ಕಮಗಳೂರು, ಶಿವಮೊಗ್ಗ, ಕೊಡಗಿನಲ್ಲಿ ಮಳೆಯ ಅಬ್ಬರವನ್ನು ಜನ ಸಹಿಸಿಕೊಳ್ಳಬೇಕಾಗಿದೆ.

ಕರ್ನಾಟಕದಲ್ಲಿ ತಗ್ಗದ ಮಳೆ ಅಬ್ಬರ; ವರುಣನ ರೌದ್ರನರ್ತನಕ್ಕೆ ಹಲವೆಡೆ ರೆಡ್, ಆರೆಂಜ್ ಅಲರ್ಟ್​ ಘೋಷಣೆ
ಹವಾಮಾನ ವರದಿ (ಸಾಂಕೇತಿಕ ಚಿತ್ರ)
Follow us on

ಬೆಂಗಳೂರು: ಕರ್ನಾಟಕದಲ್ಲಿ ಮುಂಗಾರಿನ (Monsoon 2021) ಸೆಕೆಂಡ್ ಇನ್ನಿಂಗ್ಸ್​ ಭರ್ಜರಿಯಾಗೇ ಸಾಗುತ್ತಿದೆ. ಜೂನ್​ ತಿಂಗಳ ಆರಂಭದಲ್ಲಿ ಆರ್ಭಟಿಸಿದ್ದ ವರುಣ (Karnataka Rain) ಕೆಲ ದಿನಗಳ ಕಾಲ ವಿರಾಮ ಕೊಟ್ಟು ಪುನರಾಗಮನ ಮಾಡಿದ ನಂತರ ಬಿಡುವು ನೀಡುವ ಸುಳಿವೇ ಕಾಣುತ್ತಿಲ್ಲ. ಮಲೆನಾಡು, ಕರಾವಳಿ ಭಾಗದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಕೃಷಿಕರು ಗಾಳಿ, ಮಳೆಯ ಅಬ್ಬರವನ್ನು (Heavy Rain) ನೋಡಿ ಕಂಗಾಲಾಗಿದ್ದಾರೆ. ಮೂರ್ನಾಲ್ಕು ದಿನಗಳಿಂದ ಮತ್ತಷ್ಟು ಬಿರುಸುಗೊಂಡಿರುವ ಮಳೆ ಹಲವೆಡೆ ತನ್ನ ರೌದ್ರಾವತಾರವನ್ನು ಪ್ರದರ್ಶಿಸಿದೆ. ಮಳೆಯ ರಭಸಕ್ಕೆ ಶಿರಾಢಿ ಘಾಟ್ ಬಳಿ ರಸ್ತೆಯೂ ಕುಸಿದಿದ್ದು ಮಂಗಳೂರು-ಬೆಂಗಳೂರು ಮಾರ್ಗದಲ್ಲಿ ಚಲಿಸುವ ವಾಹನಗಳಿಗೆ ಚಾರ್ಮಾಡಿ ಮೂಲಕ ಪರ್ಯಾಯ ಮಾರ್ಗವನ್ನು ಕಲ್ಪಿಸಿಕೊಡಲಾಗಿದೆ.

ಇಂದು ಕೂಡ ಕರಾವಳಿ ಮತ್ತು ಮಲೆನಾಡಿನಲ್ಲಿ ಭಾರೀ ಮಳೆಯಾಗುವ ಸಂಭವವಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ (Weather Forecast) ನೀಡಿದೆ. ಉತ್ತರ ಒಳನಾಡು, ದಕ್ಷಿಣ ಒಳನಾಡಿನಲ್ಲೂ ಇಂದು ಅಧಿಕ ಮಳೆಯಾಗುವ ನಿರೀಕ್ಷೆ ಇದ್ದು, ಇಂದು (ಜುಲೈ 23) ವಾಯುಭಾರ ಕುಸಿತ ಆಗುವ ಸಾಧ್ಯತೆಯೂ ಇರುವುದರಿಂದ ಜುಲೈ 24ರವರಗೆ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ ಎಂದು ರಾಜ್ಯ ಹವಾಮಾನ ಇಲಾಖೆ ನಿರ್ದೇಶಕ ಸಿ.ಎಸ್ ಪಾಟೀಲ್ ಎರಡು ದಿನಗಳ ಹಿಂದೆಯೇ ಮಾಹಿತಿ ನೀಡಿದ್ದಾರೆ.

ರಾಜ್ಯದ ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಹಾಗೂ ಮಲೆನಾಡು ಜಿಲ್ಲೆಗಳಾದ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಸೇರಿದಂತೆ ರಾಜ್ಯದ ವಿವಿಧೆಡೆ ನಿರಂತರವಾಗಿ ಮಳೆ ಸುರಿಯುತ್ತಿದೆ. ಹೀಗಾಗಿ ಆಯಾ ಪ್ರದೇಶಕ್ಕೆ ಅನುಸಾರವಾಗಿ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಇಂದು (ಜುಲೈ 23) ಗುಡುಗು ಸಹಿತ ಭಾರೀ ಗಾಳಿ ಮಳೆಯಾಗುವ ಸಾಧ್ಯತೆ ಇರುವುದರಿಂದ ಸದರಿ ಜಿಲ್ಲೆಗಳಲ್ಲಿ ರೆಡ್​​​ ಅಲರ್ಟ್​​ ಘೋಷಿಸಲಾಗಿದೆ.

ಬೆಳಗಾವಿ, ಧಾರವಾಡ, ಚಿಕ್ಕಮಗಳೂರು, ಹಾಸನ, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಕೂಡಾ ಇಂದು ಭಾರೀ ಮಳೆಯಾಗುವ ನಿರೀಕ್ಷೆ ಇದ್ದು, ಈ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್​ ಘೋಷಣೆ ಮಾಡಲಾಗಿದೆ. ಅಂತೆಯೇ, ಬೀದರ್, ಗದಗ, ಹಾವೇರಿ, ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ ಇರುವುದರಿಂದ ಯೆಲ್ಲೋ ಅಲರ್ಟ್​ ನೀಡಲಾಗಿದೆ.

ಇತ್ತ ರಾಜ್ಯ ರಾಜಧಾನಿ ಬೆಂಗಳೂರಿನಲ್ಲೂ ಮಳೆಯ ವಾತಾವರಣ ಮುಂದುವರೆದಿದ್ದು, ಪ್ರತಿನಿತ್ಯ ಸುರಿಯುವ ಮಳೆಯಿಂದಾಗಿ ವಾಹನ ಸವಾರರು ಪರದಾಡುವ ಸ್ಥಿತಿ ಎದುರಾಗಿದೆ. ಇಂದು ಕೂಡಾ ಬೆಂಗಳೂರಿನಲ್ಲಿ ತಕ್ಕಮಟ್ಟಿಗೆ ಮಳೆಯಾಗುವ ಸಾಧ್ಯತೆ ಇದ್ದು, ರಸ್ತೆಗಿಳಿಯುವ ಮುನ್ನ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವುದು ಉತ್ತಮ. ಒಟ್ಟಾರೆಯಾಗಿ ಕರ್ನಾಟಕದಲ್ಲಿ ಇನ್ನೂ ಎರಡು ಮೂರು ದಿನ ಉತ್ತಮ ಮಳೆಯಾಗಲಿದ್ದು, ಉತ್ತರ ಕನ್ನಡ, ಉಡುಪಿ, ಮಂಗಳೂರು, ಚಿಕ್ಕಮಗಳೂರು, ಶಿವಮೊಗ್ಗ, ಕೊಡಗಿನಲ್ಲಿ ಮಳೆಯ ಅಬ್ಬರವನ್ನು ಜನ ಸಹಿಸಿಕೊಳ್ಳಬೇಕಾಗಿದೆ.

(Karnataka Weather Today Monsoon 2021 likely to be continued till July 24th across state)

ಇದನ್ನೂ ಓದಿ:
Karnataka Rain: ಉತ್ತರ ಕನ್ನಡದಲ್ಲಿ ಕುಂಭದ್ರೋಣ ಮಳೆ: ಗಂಗಾವಳಿ ನದಿ ತಟದಲ್ಲಿ ಪ್ರವಾಹ ಭೀತಿ; ಅಲ್ಲಲ್ಲಿ ಭೂಕುಸಿತ 

Shiradi Ghat: ಭೂಕುಸಿತವಾಗಿ ಮಂಗಳೂರು- ಬೆಂಗಳೂರು ಹೆದ್ದಾರಿಯ ಶಿರಾಡಿ ಘಾಟ್ ಬಂದ್; ಬದಲಿ ಮಾರ್ಗ ಇಲ್ಲಿದೆ