ಕೇಶವಾನಂದ ಭಾರತೀ vs ಕೇರಳ ಸರ್ಕಾರ ತೀರ್ಪು ಮಹತ್ವದ್ದು: ಸಂತೋಷ್ ಹೆಗ್ಡೆ
Kesavananda Bharati vs State of Kerala: ದೇಶದ ಇತಿಹಾಸದಲ್ಲಿ ಮಹತ್ವದ ಸಂಚಲನ ಮೂಡಿಸಿದ್ದ ಕೇಶವಾನಂದ ಭಾರತೀ ಹಾಗೂ ಕೇರಳ ಸರ್ಕಾರದ ವಿರುದ್ಧದ ವ್ಯಾಜ್ಯಕ್ಕೆ ಸಂಬಂಧಿಸಿದ ಐತಿಹಾಸಿಕ ತೀರ್ಪಿನ 50ನೇ ವರ್ಷಾಚರಣೆ ಶನಿವಾರ ಬೆಂಗಳೂರಿನಲ್ಲಿ ನಡೆಯಿತು. ಇದೇ ವೇಳೆ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ತೀರ್ಪಿನ ಮಹತ್ವ ಬಣ್ಣಿಸಿದರು.

ಬೆಂಗಳೂರು, ಫೆಬ್ರವರಿ 11: ಭಾರತದ ಸ್ವಾತಂತ್ರ್ಯೋತ್ಸವದ ನಂತರದ ಇತಿಹಾಸದಲ್ಲಿ ಕಾಸರಗೋಡಿನ (Kasaragod) ಎಡನೀರು ಮಠದ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ ಮತ್ತು ಕೇರಳ ಸರ್ಕಾರದ (Kerala Government) ನಡುವಣ ವ್ಯಾಜ್ಯಕ್ಕೆ ಸಂಬಂಧಿಸಿದ ತೀರ್ಪು ಮಹತ್ವದ್ದಾಗಿದೆ. ಇದು ದೇಶದ ಜನರ ಹಕ್ಕಿನ ಬದಲಾವಣೆ ಮಾಡಲು ಶಾಸಕಾಂಗಕ್ಕೆ ಹಕ್ಕಿಲ್ಲ ಎಂಬುದನ್ನು ಸ್ಪಷ್ಟಪಡಿಸಿತ್ತು ಎಂದು ಕರ್ನಾಟಕ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ, ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ನ್ಯಾ. ಎನ್ ಸಂತೋಷ್ ಹೆಗ್ಡೆ (N Santhosh Hegde) ಅಭಿಪ್ರಾಯಪಟ್ಟಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದ ಸುಪ್ರೀಂ ಕೋರ್ಟಿನ ಐತಿಹಾಸಿಕ ತೀರ್ಪಿನ 50 ನೇ ವರ್ಷಾಚರಣೆ ಅಂಗವಾಗಿ ‘ಯುನಿವರ್ಸಲ್ ಸ್ಕೂಲ್ ಆಫ್ ಲಾ’ ಹಮ್ಮಿಕೊಂಡಿದ್ದ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಕೇರಳ ಸರ್ಕಾರ ಹಾಗೂ ಧಾರ್ಮಿಕ ಸಂಸ್ಥೆ ನಡುವಣ ಈ ಕಾನೂನು ಸಮರದ ತೀರ್ಪು, ಕಾನೂನು ವಿದ್ಯಾರ್ಥಿಗಳಿಗೆ ಹಾಗು ವಿದ್ವಾಂಸರಿಗೆ ದೊಡ್ಡ ಮಟ್ಟದ ಅಧ್ಯಯನ ವಸ್ತುವಾಗಿದೆ ಎಂದು ಹೇಳಿದ್ದಾರೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಎಡನೀರು ಮಠದ ಸಚ್ಚಿದಾನಂದ ಭಾರತಿ ಸ್ವಾಮೀಜಿ ಈ ದೇಶದ ಪ್ರಜಾಪ್ರಭುತ್ವ, ಸಂವಿಧಾನ ರಕ್ಷಣೆಯಲ್ಲಿ ಈ ತೀರ್ಪಿನ ಪಾತ್ರ ದೊಡ್ಡದು ಎಂದು ತಿಳಿಸಿದ್ದಾರೆ.
ಇದು ಕೇವಲ ಒಂದು ಮಠದ ಜಮೀನಿನ ಪ್ರಶ್ನೆಯಲ್ಲ. ಈ ಕಾನೂನು ಹೋರಾಟದ ಮೂಲಕ ಸಂವಿಧಾನ ಹಾಗೂ ಪ್ರಜಾಪ್ರಭುತ್ವ ರಕ್ಷಿಸಲು ಸಾಧ್ಯವಾಗಿದ್ದು ನಮಗೆ ಅತ್ಯಂತ ಖುಷಿಕೊಟ್ಟ ಸಂಗತಿ. ನಾವು ಸಂಸತ್ ಬಗ್ಗೆ ಭರವಸೆ ಕಳೆದುಕೊಂಡಾಗ, ನಮಗಿರುವ ಆಶಾಭಾವನೆ ನ್ಯಾಯಾಂಗ ಮತ್ತು ಸಂವಿಧಾನ ಮಾತ್ರ ಎಂದು ಅವರು ಹೇಳಿದ್ದಾರೆ.
ಚುನಾವಣೆಗೆ ಮೊದಲು ಮತದಾರರು ಭ್ರಷ್ಟ್ರರಾಗುತ್ತಾರೆ. ಚುನಾವಣೆ ನಂತರ ನಾಯಕರು ಭ್ರಷ್ಟರಾಗುತ್ತಾರೆ ಎಂದು ಅವರು ಹೇಳಿದ್ದಾರೆ.
ಯುನಿವರ್ಸಲ್ ಸಂಸ್ಥೆ, ಬೆಂಗಳೂರು ಅಧ್ಯಕ್ಷ ಆರ್ ಉಪೇಂದ್ರ ಶೆಟ್ಟಿ, ಕಾಲೇಜು ಪ್ರಾಂಶುಪಾಲ ವಿಶ್ವಾಸ್ ಪುಟ್ಟಸ್ವಾಮಿ, ಕಾಲೇಜು ಆಡಳಿತಾಧಿಕಾರಿ ಸಂತೋಷ್ ಶೆಟ್ಟಿ, ಮತ್ತಿತರರು ಉಪಸ್ಥಿತರಿದ್ದರು.
ಇದನ್ನೂ ಓದಿ: ಬೆಂಗಳೂರು: ಭಾರೀ ಟ್ರಾಫಿಕ್ ಸ್ಪಾಟ್‌ಗಳನ್ನು ಕಡಿಮೆ ಮಾಡಲು ಸಂಚಾರದಲ್ಲಿ ಬದಲಾವಣೆ ಮಾಡಿದ ಪೊಲೀಸರು
ಏನಿದು ಕೇಶವಾನಂದ ಭಾಇರತೀ ತೀರ್ಪು?
1969ರಲ್ಲಿ ಕೇರಳ ಸರ್ಕಾರ ಭೂ ಸುಧಾರಣಾ ಕಾಯ್ದೆ ಜಾರಿಗೊಳಿಸಿತ್ತು. 1970ರಲ್ಲಿ ಅದು ಧಾರ್ಮಿಕ ಸಂಸ್ಥೆಗಳು ಹೊಂದಬಹುದಾದ ಭೂಮಿಯ ಒಡೆತನಕ್ಕೆ ಮಿತಿ ಹೇರಿತ್ತು. ಇದರ ಸಾಂವಿಧಾನಿಕ ಅಸ್ತಿತ್ವವನ್ನು ಪ್ರಶ್ನಿಸಿ ಎಡನೀರು ಕೇಶವಾನಂದ ಭಾರತೀ ಸ್ವಾಮೀಜಿ ಕೇರಳ ಹೈಕೋರ್ಟ್ ಮೆಟ್ಟಿಲೇರಿದ್ದರು. ನಂತರ ಪ್ರಕರಣ ಸುಪ್ರೀಂಕೋರ್ಟ್ ಮೆಟ್ಟಿಲೇರಿ ಸುಮಾರು 68 ದಿನಗಳಷ್ಟು ವಿಚಾರಣೆ ನಡೆದಿತ್ತು. ಸಂವಿಧಾನದ ಮೂಲ ರಚನೆಯನ್ನು ಉಲ್ಲಂಘಿಸಿ ಸಂವಿಧಾನ ತಿದ್ದುಪಡಿ ಮಾಡುವುದಕ್ಕೆ ಸಾಧ್ಯವಿಲ್ಲ ಎಂಬುದಾಗಿ ತೀರ್ಪು ನೀಡಲಾಗಿತ್ತು. ದೇಶದ ನ್ಯಾಯಾಂಗದ ಇತಿಹಾಸದಲ್ಲೇ ಈ ತೀರ್ಪು ಬಹಳ ಮಹತ್ವ ಪಡೆದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




