
ಬೆಂಗಳೂರು, ಅಕ್ಟೋಬರ್ 16: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ (ಬಿಡಿಎ) ಹಾಗೂ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯಿಂದ (ಕೆಐಎಡಿಬಿ) ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕುಟುಂಬದ ಸಿದ್ಧಾರ್ಥ ವಿಹಾರ ಟ್ರಸ್ಟ್ಗೆ ಭೂಮಿ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆ.18ರಂದು ನೀಡಿದ್ದ ಆದೇಶವನ್ನು ಹೈಕೋರ್ಟ್ ಹಿಂಪಡೆದಿದೆ. ಆದೇಶ ಹಿಂಪಡೆಯುವಂತೆ ಕೋರಿ ರಾಹುಲ್ ಖರ್ಗೆ ಅರ್ಜಿ ಸಲ್ಲಿಸಿದ್ದ ಹಿನ್ನೆಲೆ ಪುನಃ ವಿಚಾರಣೆಗೆ ಹೈಕೋರ್ಟ್ ಮುಂದಾಗಿದೆ. ಅ.30ರಂದು ಮರುವಿಚಾರಣೆಗೆ ನಿರ್ಧರಿಸಲಾಗಿದ್ದು, ನ್ಯಾ. ಎಂ.ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ ಆದೇಶ ಹೊರಡಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಆಗಸ್ಟ್ 18ರಂದು ಬಿಎನ್ಎಸ್ಎಸ್ ಸೆಕ್ಷನ್ 223 ಅಡಿಯ ಕೋರ್ಟ್ ವಿಚಾರಣೆಯನ್ನು ಹೈಕೋರ್ಟ್ ರದ್ದುಪಡಿಸಿತ್ತು. ಪ್ರಮಾಣಪತ್ರದ ದೋಷ ಸರಿಪಡಿಸಲು ದೂರುದಾರರಿಗೆ ಅವಕಾಶ ನೀಡಲಾಗಿತ್ತು. ಆ ಬಳಿಕ ಪೊಲೀಸರ ತನಿಖೆ ಕುರಿತಂತೆ ತೀರ್ಮಾನಿಸಲು ಸೂಚಿಸಿತ್ತು. 82ನೇ ಸಿಸಿಹೆಚ್ ಕೋರ್ಟ್ಗೆ ನೀಡಿದ್ದ ನಿರ್ದೇಶನ ಹಿಂಪಡೆದ ಹೈಕೋರ್ಟ್, ಪ್ರತಿವಾದ ಆಲಿಸಲು ಅ.30ರಂದು ಮರುವಿಚಾರಣೆಗೆ ನಿರ್ಧರಿಸಿದೆ.
2014ರಲ್ಲಿ ಮಲ್ಲಿಕಾರ್ಜುನ ಖರ್ಗೆ ಹಾಗೂ ಕುಟುಂಬದ ಸಿದ್ಧಾರ್ಥ ಟ್ರಸ್ಟ್ ಶೈಕ್ಷಣಿಕ ನೆಪ ನೀಡಿ ಬಿಡಿಎಯಿಂದ ಬಿಟಿಎಂ 4ನೇ ಸ್ಟೇಜ್ನ ಎರಡನೇ ಬ್ಲಾಕ್ನಲ್ಲಿ 2 ಎಕರೆಯಷ್ಟು ಸಿಎ ನಿವೇಶನವನ್ನು ಪರಭಾರೆ ಮಾಡಿಸಿಕೊಂಡಿದ್ದ ಆರೋಪ ಕೇಳಿಬಂದಿತ್ತು. ಅದಾದ 10 ವರ್ಷಗಳ ಬಳಿಕ ಅದೇ ಶೈಕ್ಷಣಿಕ ನೆಪದಲ್ಲಿ ಬಾಗಲೂರು ಬಳಿ 5 ಏಕರೆಯಷ್ಟು KIADB ಭೂಮಿಯನ್ನು ಮತ್ತೆ ಅದೇ ಟ್ರಸ್ಟ್ ಹೆಸರಿಗೆ ಬರೆಸಿಕೊಳ್ಳಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಈ ನಿವೇಶಗಳ ಮೌಲ್ಯ ಬರೋಬ್ಬರಿ 240 ಕೋಟಿಗೂ ಅಧಿಕ ಎನ್ನಲಾಗಿತ್ತು.
ಇದನ್ನೂ ಓದಿ: ಖರ್ಗೆ ಟ್ರಸ್ಟ್ಗೆ ಭೂಮಿ ಹಂಚಿಕೆ ಕೇಸ್: ವಿಚಾರಣೆ ರದ್ದುಪಡಿಸಿ ತನಿಖೆ ಪರಿಶೀಲನೆಗೆ ಹೈಕೋರ್ಟ್ ಆದೇಶ
ಈ ವಿಚಾರವಾಗಿ ಮಲ್ಲಿಕಾರ್ಜುನ ಖರ್ಗೆ, ರಾಧಾಕೃಷ್ಣ, ರಾಧಾಬಾಯಿ ಖರ್ಗೆ, ರಾಹುಲ್ ಖರ್ಗೆ,
ಪ್ರಿಯಾಂಕ್ ಖರ್ಗೆ, ಎಂ.ಬಿ.ಪಾಟೀಲ್ ವಿರುದ್ಧ ದೂರು ದಾಖಲಾಗಿತ್ತು. ಆರೋಪ ಬಂದ ನಂತರ ಜಮೀನು ಹಿಂತಿರುಗಿಸಿದ್ದಾರೆ. ಇನ್ನು ಈ ಕುರಿತಾಗಿ ಲೋಕಾಯುಕ್ತ ಪೊಲೀಸರಿಗೆ ದೂರು ಸಲ್ಲಿಸಿದರೂ ಕ್ರಮವಾಗಿಲ್ಲ. ಹೀಗಾಗಿ ಲಂಚಮುಕ್ತ ಕರ್ನಾಟಕ ವೇದಿಕೆ ಅಧ್ಯಕ್ಷ ವಿಜಯರಾಘವ ಮರಾಠೆ ಎಂಬುವವರು ಖಾಸಗಿ ದೂರು ದಾಖಲಿಸಿದ್ದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:10 pm, Fri, 16 October 26