AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಖರ್ಗೆ ಟ್ರಸ್ಟ್‌ಗೆ ಭೂಮಿ ಹಂಚಿಕೆ ಕೇಸ್​: ಕ್ರಮಕೈಗೊಳ್ಳದ ಲೋಕಾಯುಕ್ತ ಪೊಲೀಸರಿಗೆ ಹೈಕೋರ್ಟ್ ಶಾಕ್

Kharge Trust Land Case: ಬಿಡಿಎ, ಕೆಐಎಡಿಬಿಯಿಂದ ಖರ್ಗೆ ಟ್ರಸ್ಟ್​ಗೆ ಭೂಮಿ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ಬೆಳವಣಿಗೆಯೊಂದು ನಡೆದಿದೆ. BNSS ಸೆಕ್ಷನ್ 223 ಅಡಿ ಕೋರ್ಟ್ ವಿಚಾರಣೆ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ಮಾಡಿದ ಹೈಕೋರ್ಟ್, ಲೋಕಾಯುಕ್ತ ಪೊಲೀಸರಿಗೆ ಶಾಕ್ ನೀಡಿದ್ದು, ನೋಟಿಸ್ ಜಾರಿಗೊಳಿಸುವಂತೆ ಶುಕ್ರವಾರ ಆದೇಶ ಹೊರಡಿಸಿದೆ.

ಖರ್ಗೆ ಟ್ರಸ್ಟ್‌ಗೆ ಭೂಮಿ ಹಂಚಿಕೆ ಕೇಸ್​: ಕ್ರಮಕೈಗೊಳ್ಳದ ಲೋಕಾಯುಕ್ತ ಪೊಲೀಸರಿಗೆ ಹೈಕೋರ್ಟ್ ಶಾಕ್
ಹೈಕೋರ್ಟ್ Image Credit source: Getty images
ರಮೇಶ್​ ಎಮ್​.
| Edited By: |

Updated on:Aug 14, 2026 | 4:17 PM

Share

ಬೆಂಗಳೂರು, ಆಗಸ್ಟ್​​ 14: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ಹಾಗೂ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯಿಂದ (KIEDBI) ಸಿದ್ದಾರ್ಥ ವಿಹಾರ ಟ್ರಸ್ಟ್‌ಗೆ ಭೂಮಿ ಹಂಚಿಕೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ, ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಪ್ರಕ್ರಿಯೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್, ಲೋಕಾಯುಕ್ತ ಪೊಲೀಸರಿಗೆ ನೋಟಿಸ್ ಜಾರಿಗೊಳಿಸುವಂತೆ ಆದೇಶಿಸಲಾಗಿದೆ.

ಮಹತ್ವದ ಆದೇಶ ನೀಡಿದ ಹೈಕೋರ್ಟ್ 

ದೂರುದಾರ ವಿಜಯರಾಘವ ಮರಾಠೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಮಾಡಿ ಹೈಕೋರ್ಟ್ ಈ ಮಹತ್ವದ ನಿರ್ದೇಶನ ನೀಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಲ್ಲಿಕಾರ್ಜುನ ಖರ್ಗೆ, ರಾಧಾಕೃಷ್ಣ, ರಾಧಾಬಾಯಿ ಖರ್ಗೆ, ರಾಹುಲ್ ಖರ್ಗೆ, ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಸಚಿವ ಎಂ.ಬಿ. ಪಾಟೀಲ್​​ ವಿರುದ್ಧ ದೂರು ದಾಖಲಾಗಿತ್ತು.

ಇದನ್ನೂ ಓದಿ: ‘ಕರ್ನಾಟಕದಲ್ಲಿ ಖರ್ಗೆ ಕುಟುಂಬದಿಂದ 100 ಕೋಟಿ ಮೌಲ್ಯದ ಸರ್ಕಾರಿ ಭೂಮಿ ಲೂಟಿ’; ಬಿಜೆಪಿಯಿಂದ ಗಂಭೀರ ಆರೋಪ

ತಮ್ಮ ಸಿದ್ದಾರ್ಥ ವಿಹಾರ ಟ್ರಸ್ಟ್‌ಗೆ ಲಾಭ ಮಾಡಿಕೊಡುವ ಉದ್ದೇಶದಿಂದ, ಪರಿಶಿಷ್ಟ ಜಾತಿಯ ಟ್ರಸ್ಟ್ ಎಂಬ ಕಾರಣ ನೀಡಿ ಶೇಕಡ 50ರಷ್ಟು ರಿಯಾಯಿತಿ ಪಡೆದುಕೊಳ್ಳಲಾಗಿದೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ. ಏರೋಸ್ಪೇಸ್ ಹಾಗೂ ಸಂಶೋಧನೆಯಲ್ಲಿ ಯಾವುದೇ ಅನುಭವವಿಲ್ಲದಿದ್ದರೂ ದೇವನಹಳ್ಳಿಯ ಏರೋಸ್ಪೇಸ್ ಪಾರ್ಕ್‌ನಲ್ಲಿ ಭೂಮಿ ಮಂಜೂರು ಮಾಡಲಾಗಿದೆ ಹಾಗೂ ಬಿಟಿಎಂ ಬಡಾವಣೆಯಲ್ಲಿ ಶೇಕಡಾ 50ರಷ್ಟು ಸಬ್ಸಿಡಿ ಪಡೆದು 2 ಎಕರೆ ಬಿಡಿಎ ಜಮೀನು ಹಂಚಿಕೆ ಮಾಡಿಕೊಳ್ಳಲಾಗಿದೆ. ಈ ಕುರಿತು ಆರೋಪಗಳು ಕೇಳಿಬಂದ ಬಳಿಕ ಜಮೀನನ್ನು ಹಿಂತಿರುಗಿಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ದೂರು ನೀಡಿದ್ದರೂ ಕ್ರಮಕೈಗೊಳ್ಳದ ಲೋಕಾಯುಕ್ತ ಪೊಲೀಸ್​​

ಈ ಕುರಿತು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಅಧೀನ ನ್ಯಾಯಾಲಯವು ಲೋಕಾಯುಕ್ತ ಪೊಲೀಸರ ತನಿಖೆಗೆ ಆದೇಶಿಸಬೇಕಿತ್ತು. ಆದರೆ, ಸಲ್ಲಿಕೆಯಾಗಿದ್ದ ಪ್ರಮಾಣಪತ್ರ ಕ್ರಮಬದ್ಧವಾಗಿಲ್ಲ ಎಂಬ ಕಾರಣ ನೀಡಿ ತನಿಖೆಗೆ ಆದೇಶಿಸದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು, ತಾನೇ ನೇರವಾಗಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ  ಸೆಕ್ಷನ್ 223ರ ಅಡಿಯಲ್ಲಿ ವಿಚಾರಣೆಗೆ ಮುಂದಾಗಿದೆ. ಆದ್ದರಿಂದ ಈ ಆದೇಶದಲ್ಲಿ ಮಾರ್ಪಾಡು ಮಾಡುವ ಅಗತ್ಯವಿದೆ ಎಂದು ದೂರುದಾರರ ಪರ ವಕೀಲರು ವಾದಿಸಿದರು. ವಾದವನ್ನು ಆಲಿಸಿದ ಹೈಕೋರ್ಟ್, ಲೋಕಾಯುಕ್ತ ಪೊಲೀಸರಿಗೆ ನೋಟಿಸ್ ಜಾರಿಗೊಳಿಸುವಂತೆ ಆದೇಶಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:12 pm, Fri, 14 August 26

Follow Us