
ಬೆಂಗಳೂರು, ಜನವರಿ 01: ಕೋಗಿಲು ಬಡಾವಣೆಯಲ್ಲಿ ಅಕ್ರಮ ವಸತಿಗಳ ತೆರವು ಪ್ರಕರಣ ಸಂಬಂಧ ಒಂದೆಡೆ ರಾಜಕೀಯ ಜಟಾಪಟಿಗಳು ನಡೆಯುತ್ತಿದ್ದರೆ ಮತ್ತೊಂದೆಡೆ ಪುನರ್ವಸತಿ ಮತ್ತು ಪರಿಹಾರ ಕೋರಿ ಹೈಕೋರ್ಟ್ಗೆ ಪಿಐಎಲ್ ಸಲ್ಲಿಕೆಯಾಗಿದೆ. ಜೈಬಾ ತಬಸ್ಸುಮ್ ಮತ್ತಿತರರು ಹೈಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆ ಮಾಡಿದ್ದು, ಹಲವು ಬೇಡಿಕೆಗಳನ್ನು ನ್ಯಾಯಾಲಯದ ಮುಂದಿಟ್ಟಿದ್ದಾರೆ.
30 ವರ್ಷಗಳಿಂದ ಇಲ್ಲಿ 3 ಸಾವಿರ ಜನರು ವಾಸಿಸುತ್ತಿದ್ದಾರೆ. ವಸೀಂ, ಫಕೀರ್ ಕಾಲೋನಿಗಳ ತೆರವಿನಿಂದ ನಿರ್ವಸತಿಕರಾಗಿದ್ದು, ಎಸ್ಡಿಪಿಐ ಮತ್ತು ಎಂಐಎಂ ಪಕ್ಷಗಳು ಈಗ ನೆರವು ಒದಗಿಸುತ್ತಿವೆ. ಸರ್ಕಾರ 5 ಕಿ.ಮೀ. ಅಂತರದಲ್ಲೇ ಮರುವಸತಿ ಕಲ್ಪಿಸಬೇಕು ಮತ್ತು ಅಲ್ಲಿಯವರೆಗೆ 3 ಹೊತ್ತಿನ ಪೌಷ್ಟಿಕಾಂಶಯುತ ಆಹಾರ ಒದಗಿಸಬೇಕು. 300 ಪ್ರತ್ಯೇಕ ಟೆಂಟ್, ಶೌಚಾಲಯದ ವ್ಯವಸ್ಥೆ ಕಲ್ಪಿಸಬೇಕು. ವೈದ್ಯಕೀಯ ವ್ಯವಸ್ಥೆ ಕಲ್ಪಿಸಿ ಆರೋಗ್ಯ ತಪಾಸಣೆ ಮಾಡಬೇಕು. ಜೊತೆಗೆ ಕಟ್ಟಡ ತೆರವಿಗೆ ಪರಿಹಾರ ನೀಡಬೇಕೆಂದು ಆಗ್ರಹಿಸಲಾಗಿದೆ.
ಇದನ್ನೂ ಓದಿ: ಯೋಗಿ ಬುಲ್ಡೋಜರ್ ರಾಜ್ ಜತೆ ಹೋಲಿಕೆ ಬೇಡ; ಕೋಗಿಲು ಶೆಡ್ಗಳ ತೆರವು ವಿಚಾರದಲ್ಲಿ ಕಾಂಗ್ರೆಸ್ ಬೆಂಬಲಕ್ಕೆ ನಿಂತ ಮುಸ್ಲಿಂ ಲೀಗ್
ಕೋಗಿಲು ಬಡಾವಣೆ ನಿರಾಶ್ರಿತರಿಗೆ ನಾಳೆಯೂ ಮನೆ ಹಂಚಿಕೆ ನಡೆಯುವುದು ಅನುಮಾನವಾಗಿದೆ. ಇನ್ನೂ ನಮಗೆ ಪಟ್ಟಿ ಬಂದಿಲ್ಲ ಎಂದು ರಾಜೀವ್ ಗಾಂಧಿ ವಸತಿ ನಿಗಮದ ಎಂಡಿ ಪರಶುರಾಮ್ ಶಿನ್ನಾಳ್ಕರ್ ಹೇಳಿದ್ದಾರೆ. ಬೆಂಗಳೂರು ನಗರ ಜಿಲ್ಲಾಧಿಕಾರಿಯಿಂದ ನಮಗೆ ಪಟ್ಟಿ ಬರಬೇಕಾಗಿದೆ. ಆ ಬಳಿಕವೇ ಪರಿಶೀಲಿಸಿ ನಾವು ಮನೆ ಹಂಚಿಕೆಪತ್ರ ನೀಡಬೇಕು ಎಂದಿದ್ದಾರೆ. ಹೀಗಾಗಿ ಮನೆ ಹಂಚಿಕೆ ಇನ್ನೂ 2-3 ದಿನಗಳು ತಡವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಕೋಗಿಲು ನಿರಾಶ್ರಿತರಿಗೆ ಮನೆ ಹಂಚಿಕೆ ವಿಚಾರವಾಗಿ ಬಿಜೆಪಿ ಆರೋಪಗಳಿಗೆ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ತಿರುಗೇಟು ನೀಡಿದ್ದಾರೆ. ಕರ್ನಾಟಕದವರಲ್ಲದೆ ಹೊರಗಿನವರಿಗೆ ಹೇಗೆ ಮನೆ ಕೊಡುತ್ತೇವೆ? ಬಾಂಗ್ಲಾದೇಶದವರು ಹೇಗೆ ಬೆಂಗಳೂರಿನಲ್ಲಿ ಇರಲು ಸಾಧ್ಯ? ಹಾಗೇನಾದ್ರೂ ಅವರು ಬಾಂಗ್ಲಾದೇಶದವರಾಗಿದ್ದರೆ ಸಾಬೀತುಪಡಿಸಲಿ. ಅದನ್ನು ಬಿಟ್ಟು ಬಾಯಿಗೆ ಬಂದಂತೆ ಮಾತನಾಡಬಾರದು. ಉರ್ದು ಮಾತನಾಡುವವರಿಗೂ ಮನೆ ಕೊಡಲ್ಲ. ಆಧಾರ್ ಕಾರ್ಡ್, ಬಿಪಿಎಲ್ ಕಾರ್ಡ್, ವೋಟರ್ ಐಡಿ ಇರಬೇಕು. ಎಲ್ಲಾ ದಾಖಲೆಗಳು ಇದ್ದರೆ ಮಾತ್ರ ಅವರಿಗೆ ಮನೆ ಕೊಡುತ್ತೇವೆ ಎಂದು ತಿಳಿಸಿದ್ದಾರೆ.
ಡಿಸಿ ರಿಪೋರ್ಟ್ ಬಂದ ನಂತರ ಅರ್ಹರ ಬಗ್ಗೆ ನಿಖರ ಮಾಹಿತಿ ಸಿಗುತ್ತೆ. ಯಾರಿಗೂ ಅನ್ಯಾಯ ಆಗಬಾರದೆಂದು ಒಂದು ದಿನ ಹೆಚ್ಚು ಸಮಯತೆಗೆದುಕೊಂಡು ಪರಿಶೀಲಿಸುತ್ತಿದ್ದೇವೆ. ಕೋಗಿಲು ಬಡಾವಣೆಯಲ್ಲಿ ಒಟ್ಟು 257 ಮನೆಗಳು ಇದ್ದವು. ಅದರಲ್ಲಿ 157 ಮನೆಗಳನ್ನಷ್ಟೇ ಡೆಮಾಲಿಷನ್ ಮಾಡಲಾಗಿದೆ. ಇವರಲ್ಲಿ ಯಾರು ಅರ್ಹರು ಅನ್ನೋದನ್ನ ಪತ್ತೆ ಮಾಡಲಾಗ್ತಿದೆ ಎಂದಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.