ಕೋಗಿಲು ಬಡಾವಣೆಯಲ್ಲಿ ಮನೆಗಳ ತೆರವಿಗೆ ಕೇರಳ, ಪಾಕ್ ಖ್ಯಾತೆ: ಕೇಂದ್ರ ಸಚಿವ ಸೋಮಣ್ಣ ಕಿಡಿ
ಯಲಹಂಕದ ಕೋಗಿಲು ಬಡಾವಣೆಯಲ್ಲಿ ನಡೆದ ಅಕ್ರಮ ಮನೆಗಳ ತೆರವು ವಿಚಾರವಾಗಿ ಕೇರಳ ಮತ್ತು ಪಾಕಿಸ್ತಾನ ಮೂಗು ತೂರಿಸಿರೋದಕ್ಕೆ ಕೇಂದ್ರ ಸಚಿವ ವಿ. ಸೋಮಣ್ಣ ಗರಂ ಆಗಿದ್ದಾರೆ. ಈ ವಿಚಾರದಲ್ಲಿ ಕರ್ನಾಟಕ ಕಾಂಗ್ರೆಸ್ ಸರ್ಕಾರ ಸಮಜಾಯಿಷಿ ನೀಡಿ, ಸಂತ್ರಸ್ತರಿಗೆ ಮನೆ ನಿರ್ಮಿಸಿಕೊಡುವ ಭರವಸೆ ನೀಡಿರುವುದನ್ನೂ ಅವರು ಪ್ರಶ್ನಿಸಿದ್ದಾರೆ. ಅಕ್ರಮ ಒತ್ತುವರಿದಾರರನ್ನು ಸಂತ್ರಸ್ತರೆಂದು ಪರಿಗಣಿಸುವ ಸರ್ಕಾರದ ನಡೆಗೆ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಇದು ಮತೀಯ ರಾಜಕಾರಣ ಎಂದು ಟೀಕಿಸಿದ್ದಾರೆ.

ಬೆಂಗಳೂರು, ಡಿಸೆಂಬರ್ 30: ಯಲಹಂಕದ ಕೋಗಿಲು ಬಡಾವಣೆಯಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದ್ದ ಮನೆಗಳನ್ನು ಕರ್ನಾಟಕ ಸರ್ಕಾರ ನೆಲಸಮಗೊಳಿಸಿದ ವಿಚಾರ ದೇಶಾದ್ಯಂತ ಚರ್ಚೆಯಲ್ಲಿದೆ. ನೆರೆ ರಾಜ್ಯ ಕೇರಳವಂತೂ ಈ ವಿಚಾರವಾಗಿ ಕರ್ನಾಟಕದ ವಿರುದ್ಧ ನಿಗಿ ನಿಗಿ ಕೆಂಡ ಕಾರಿದೆ. ಆದರೆ ಯಾವುದಕ್ಕೂ ಸಂಬಂಧವೇ ಇಲ್ಲದ ಪಾಪಿ ಪಾಕಿಸ್ತಾನವೂ ಈ ವಿಚಾರದಲ್ಲಿ ಮೂಗು ತೂರಿಸಿರೋದೀಗ ಭಾರಿ ಆಕ್ರೋಶಕ್ಕೆ ಕಾರಣವಾಗ್ತಿದೆ. ಈ ಬಗ್ಗೆ ಕೇಂದ್ರ ಸಚಿವ ವಿ. ಸೋಮಣ್ಣ ಕಿಡಿ ಕಾರಿದ್ದಾರೆ.
ಸೋಮಣ್ಣ ಆಕ್ರೋಶ

ವಿ. ಸೋಮಣ್ಣ ಅವರ ಎಕ್ಸ್ ಪೋಸ್ಟ್
ತಮ್ಮಲ್ಲೇ ಹುಳುಕಿಟ್ಟುಕೊಂಡಿರುವ ಕೇರಳ ಸರ್ಕಾರ ಮತ್ತು ಪಾಕಿಸ್ತಾನ, ಕರ್ನಾಟಕದ ವಿಚಾರದಲ್ಲಿ ಮೂಗುತೂರಿಸುತ್ತಿರುವುದು ನಾಚಿಕೆಗೇಡು. ಈ ನಡುವೆ ಕೇರಳ ಮತ್ತು ಪಾಕಿಸ್ತಾನ ಸರ್ಕಾರಗಳು ಕ್ಯಾತೆ ತೆಗೆದ ಕೂಡಲೇ ಕರ್ನಾಟಕ ಕಾಂಗ್ರೆಸ್ ಸರ್ಕಾರ ಓಲೈಕೆಗಾಗಿ ಸಮಜಾಯಿಷಿ ನೀಡುತ್ತಿರುವುದು ಅದಕ್ಕಿಂತಲೂ ವಿಪರ್ಯಾಸದ ಸಂಗತಿ. ಒತ್ತುವರಿ ಜಾಗದಲ್ಲಿದ್ದ ಮನೆಗಳನ್ನು ತೆರವು ಮಾಡಿದ್ದೇವೆ ಎಂದು ಸ್ಪಷ್ಟನೆ ಕೊಟ್ಟ ಮೇಲೆ, ಸಂತ್ರಸ್ತರಿಗೆ ಹೊಸವರ್ಷಕ್ಕೆ ಮನೆ ನಿರ್ಮಿಸಿಕೊಡುತ್ತೇವೆ ಎನ್ನುವ ಭರವಸೆ ನೀಡಿರುವುದರ ಹಿಂದಿನ ಹುನ್ನಾರವೇನು? ಅಷ್ಟಕ್ಕೂ ಅಕ್ರಮ ಬಡಾವಣೆಗಳನ್ನು ನಿರ್ಮಿಸಿಕೊಂಡವರನ್ನು ಸಂತ್ರಸ್ತರು ಎನ್ನುವುದಾದರೆ, ಉತ್ತರ ಕರ್ನಾಟಕ ಭಾಗದಲ್ಲಿ ಇಂದಿಗೂ ಅದೆಷ್ಟೋ ನಿರಾಶ್ರಿತರು, ಅಲೆಮಾರಿ ಕೂಲಿ ಕಾರ್ಮಿಕ ವರ್ಗದವರು ಸೂರಿಲ್ಲದೆ ಹೆಣಗಾಡುತ್ತಿರುವುದು ಈ ಜಾಣ ಕುರುಡು ಕಾಂಗ್ರೆಸ್ ಸರ್ಕಾರಕ್ಕೆ ಕಾಣಿಸುತ್ತಿಲ್ಲವೇ? ಎಂದು ಅವರು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು ಕೋಗಿಲು ಲೇಔಟ್ನಲ್ಲಿ ಮನೆಗಳ ತೆರವು; ಹೈಕಮಾಂಡ್ ಲೀಡರ್ ಮಧ್ಯಪ್ರವೇಶಕ್ಕೆ ಡಿಕೆಶಿ ಹೇಳಿದ್ದಿಷ್ಟು
‘ಸಿದ್ದರಾಮಯ್ಯಗೆ ಏನು ನೈತಿಕತೆಯಿದೆ?’
ಸಮರ್ಪಕವಾಗಿ ನೋಟಿಸ್ ನೀಡಿದ ನಂತರವೇ ಮನೆಗಳನ್ನು ನಾಶ ಮಾಡಿರುವ ಅಧಿಕಾರಿಗಳ ಮೇಲೆ ತಪ್ಪಿತಸ್ಥರು ಎನ್ನುವ ಹಣೆಪಟ್ಟಿ ಹೊರಿಸಿ, ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎನ್ನುವ ಹೇಳಿಕೆ ನೀಡುವ ಸಿಎಂ ಸಿದ್ದರಾಮಯ್ಯನವರಿಗೆ ಏನು ನೈತಿಕತೆಯಿದೆ? ಇಂತಹ ಮತೀಯ ರಾಜಕಾರಣಕ್ಕಿಳಿದು ಜನತೆಯಲ್ಲಿ ಕೋಮುದಳ್ಳುರಿಯನ್ನು ಹೆಚ್ಚಿಸುವುದೇ ಕಾಂಗ್ರೆಸ್‌ನ ಷಡ್ಯಂತ್ರ ಎನ್ನುವುದು ಜನತೆಗೆ ಅರ್ಥವಾಗಿದೆ ಎಂದು ಸೋಮಣ್ಣ ಆರೋಪಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:20 pm, Tue, 30 December 25




