Koti Kanta Gaayana: ಕೋಟಿ ಕಂಠ ಗಾಯನದ ಮೂಲಕ ಗಟ್ಟಿಯಾಯ್ತಾ ಬಿಜೆಪಿ ವೋಟ್ ಬ್ಯಾಂಕ್?
Karnataka BJP: ದಾವಣಗೆರೆಯಲ್ಲಿ ನಡೆದ ಸಿದ್ದರಾಮೋತ್ಸವದಲ್ಲಿ 15 ಲಕ್ಷಕ್ಕೂ ಅಧಿಕ ಜನರನ್ನು ಸೇರಿಸಿದ್ದೇವೆ ಎಂದು ವಿಪಕ್ಷ ಕಾಂಗ್ರೆಸ್ ಹೆಮ್ಮೆಯಿಂದ ಹೇಳಿಕೊಂಡಿತ್ತು. ಇದೀಗ ಆಡಳಿತಾರೂಢ ಬಿಜೆಪಿ ಸರ್ಕಾರ ಕೋಟಿ ಕಂಠ ಗಾಯನದ ಮೂಲಕ ಸುಲಭವಾಗಿ ಒಂದು ಕೋಟಿಗೂ ಅಧಿಕ ಜನರನ್ನು ತಲುಪುವಿಕೆಯ ಸೂತ್ರವನ್ನು ಸಿದ್ದಪಡಿಸಿತ್ತು ಎಂದೇ ಹೇಳಲಾಗುತ್ತಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಶುಕ್ರವಾರ ವಿಶ್ವ ವ್ಯಾಪಿಯಾಗಿ ಆಯೋಜಿಸಿದ್ದ ಕೋಟಿ ಕಂಠ ಗಾಯನ (Koti Kanta Gaayana) ಕಾರ್ಯಕ್ರಮ ಗಿನ್ನೆಸ್ ದಾಖಲೆಯತ್ತ ಸಾಗಿದೆ. ದಾಖಲೆಯ ಜೊತೆಗೆ ಕನ್ನಡ ಅಸ್ಮಿತೆಯ ಹೆಸರಿನಲ್ಲಿ (kannadigas) ಆಡಳಿತ ಪಕ್ಷ ಬಿಜೆಪಿ (Karnataka BJP) ಚುನಾವಣೆಗಾಗಿ (Karnataka Assembly Elections 2023) ತನ್ನ ವೋಟ್ ಬ್ಯಾಂಕ್ ಅನ್ನು ಗಟ್ಟಿಪಡಿಸಿಕೊಂಡಿದೆ ಎಂದೂ ಹೇಳಲಾಗುತ್ತಿದೆ. ಕನ್ನಡದ ಆಯ್ದ ಆರು ಹಾಡುಗಳನ್ನು ಸಾರ್ವಜನಿಕವಾಗಿ ಹಾಡುವ ಕಾರ್ಯಕ್ರಮವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲಕ ರಾಜ್ಯ ಸರ್ಕಾರದಿಂದ ಆಯೋಜನೆ ಮಾಡಲಾಗಿತ್ತು. ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ 50000 ಜನರಿಂದ ಗಾಯನ ನಡೆಯಿತಲ್ಲದೇ, ಬೆಂಗಳೂರು ಸೇರಿ ರಾಜ್ಯದ ಪ್ರಮುಖ ಸ್ಥಳಗಳಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನೀಲ್ ಕುಮಾರ್ ನೇತೃತ್ವದಲ್ಲಿ ನಡೆದ ಎರಡನೇ ಕನ್ನಡದ ಕಾರ್ಯಕ್ರಮವಾಗಿದ್ದು, ಸುಮಾರು ಒಂದೂವರೆ ಕೋಟಿಯಷ್ಟು ಜನ ಅಧಿಕೃತವಾಗಿ ನೋಂದಣಿ ಮಾಡಿಕೊಂಡಿದ್ದರು. ಈ ಮೂಲಕ ಒಂದೂವರೆ ಕೋಟಿ ಜನರನ್ನು ನೇರವಾಗಿ ತಲುಪಿದಂತಾಗಿದೆ. ಕಾರ್ಯಕ್ರಮದ ಯಶಸ್ಸಿಗೆ ರಾಜ್ಯ ವ್ಯಾಪಿ ಸಿದ್ಧತೆ ಮಾಡಿದ್ದ ಆಡಳಿತ ಪಕ್ಷ ಬಿಜೆಪಿ, ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲಿ ಶಾಸಕರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಸುವಂತೆ ಸೂಚನೆ ನೀಡಿತ್ತು.
ಇದೀಗ ಕೋಟಿ ಕಂಠ ಗಾಯನ ಕಾರ್ಯಕ್ರಮದ ಹಿಂದೆ ರಾಜಕೀಯ ಲೆಕ್ಕಾಚಾರ ಅಡಗಿದ್ಯಾ ಎಂಬ ಸಣ್ಣ ಅನುಮಾನ ಕಾಣಿಸಿದೆ. ಚುನಾವಣಾ ವರ್ಷದಲ್ಲಿ ಕನ್ನಡ ಅಸ್ಮಿತೆ ಬಳಸಿಕೊಳ್ಳಲು ರಾಜ್ಯ ಸರ್ಕಾರ ಮುಂದಾದ ರೀತಿಯಲ್ಲಿ ದೂರದಲ್ಲಿ ಕಂಡು ಬರುತ್ತಿದೆ. ಧರ್ಮದ ವಿಚಾರಗಳಲ್ಲಿನ ಬಿಜೆಪಿ ನಿಲುವಿನ ಬಗ್ಗೆ ಎದ್ದಿದ್ದ ಸಾರ್ವಜನಿಕ ಚರ್ಚೆಗೆ ಕನ್ನಡ ಪ್ರೇಮದ ಮೂಲಕ ತೆರೆ ಎಳೆಯುವ ಪ್ರಯತ್ನವನ್ನೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲಕ ಆಡಳಿತ ಪಕ್ಷ ಮಾಡಿದೆ ಎನ್ನಲಾಗುತ್ತಿದೆ.
ಇನ್ನು ರಾಜ್ಯದಲ್ಲಿ ಕೆಲವು ತಿಂಗಳುಗಳಿಂದ ನಡೆಯುತ್ತಿದ್ದ ಧಾರ್ಮಿಕ ಸಂಘರ್ಷದಿಂದಾಗಿ ಕಾನೂನು ಮತ್ತು ಸುವ್ಯವಸ್ಥೆ ಇಲ್ಲ ಎಂಬ ವಿಪಕ್ಷಗಳ ಟೀಕೆಯನ್ನೂ ಮರೆ ಮಾಚುವ ದೂರದ ಪ್ರಯತ್ನದ ಭಾಗವಾಗಿಯೂ ರಾಜ್ಯ ಸರ್ಕಾರ ಇಂತಹದ್ದೊಂದು ಕಾರ್ಯಕ್ರಮವನ್ನು ರೂಪಿಸಿತ್ತು ಎಂಬ ಚರ್ಚೆಯ ನಡುವೆಯೇ ಕೇಂದ್ರ ಸರ್ಕಾರದ ಹಿಂದಿ ಹೇರಿಕೆ ನಡೆಯಿಂದ ವೋಟ್ ಬ್ಯಾಂಕ್ ಮೇಲೆ ಪರೋಕ್ಷ ಹೊಡೆತ ಬೀಳದಂತೆ ತಡೆಯುವ ಲೆಕ್ಕಾಚಾರವೂ ಇದರ ಹಿಂದಿತ್ತು ಎಂದು ಹೇಳಲಾಗುತ್ತಿದೆ.
ದಾವಣಗೆರೆಯಲ್ಲಿ ನಡೆದ ಸಿದ್ದರಾಮೋತ್ಸವದಲ್ಲಿ 15 ಲಕ್ಷಕ್ಕೂ ಅಧಿಕ ಜನರನ್ನು ಸೇರಿಸಿದ್ದೇವೆ ಎಂದು ವಿಪಕ್ಷ ಕಾಂಗ್ರೆಸ್ ಹೆಮ್ಮೆಯಿಂದ ಹೇಳಿಕೊಂಡಿತ್ತು. ಆಡಳಿತ ಪಕ್ಷವಾಗಿ ಬಿಜೆಪಿ ಆ ಹಂತಕ್ಕೆ ಸಮಾವೇಶದ ಮೂಲಕ ಜನರನ್ನು ಸೇರಿಸಲು ಮತ್ತು ತಲುಪಲು ಸಾಧ್ಯವಾಗಲೇ ಇಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಅದು ಸಾಧ್ಯವಿಲ್ಲದ ವಿಚಾರ ಎಂಬುದು ಮನದಟ್ಟು ಆಗಿದ್ದ ಕಾರಣ ಕೋಟಿ ಕಂಠ ಗಾಯನದ ಮೂಲಕ ಸುಲಭವಾಗಿ ಒಂದು ಕೋಟಿಗೂ ಅಧಿಕ ಜನರನ್ನು ತಲುಪುವಿಕೆಯ ಸೂತ್ರವನ್ನು ಬಿಜೆಪಿ ಸಿದ್ದಪಡಿಸಿತ್ತು ಎಂದೇ ಹೇಳಲಾಗುತ್ತಿದೆ.
ಕನ್ನಡದ ಹೆಸರಲ್ಲಿ ಜನರನ್ನು ಒಂದೇ ವೇದಿಕೆಗೆ ತಂದು ವೋಟ್ ಬ್ಯಾಂಕ್ ಗಟ್ಟಿ ಮಾಡಿಕೊಳ್ಳುವ ಪರೋಕ್ಷ ತಂತ್ರಗಾರಿಕೆ ಮಾಡಿದ ಬಿಜೆಪಿ, ಧರ್ಮದ ವಿಚಾರಗಳ ಜತೆಗೆ ಕನ್ನಡ ಅಸ್ಮಿತೆ ವಿಚಾರ ಸೇರಿಕೊಂಡಲ್ಲಿ ಚುನಾವಣೆಯಲ್ಲಿ ಮತ್ತಷ್ಟು ಚುನಾವಣಾ ಲಾಭದ ಲೆಕ್ಕಾಚಾರವನ್ನು ಹಾಕಿದೆ. ಅಲ್ಲದೇ, ಪಕ್ಷಕ್ಕೆ ಅಂಟಿರುವ ಧರ್ಮದ ಹೆಸರಿನಲ್ಲಿ ರಾಜಕಾರಣ ಎಂಬ ಆರೋಪವನ್ನು ಸಾರ್ವಜನಿಕರಿಂದ ದೂರ ಮಾಡುವ ಬಿಜೆಪಿ ಪ್ಲ್ಯಾನ್ ಕೂಡಾ ಕೋಟಿ ಕಂಠ ಗಾಯನದ ಪರಿಕಲ್ಪನೆಯ ಹಿಂದೆ ಇದ್ದಂತಿದೆ.
(ವರದಿ: ಕಿರಣ್ ಹನಿಯಡ್ಕ)
ಕೋಟಿ ಕಂಠ ಗಾಯನ ಕಣ್ತುಂಬಿಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ
Published On - 2:07 pm, Sat, 29 October 22