ಬೆಂಗಳೂರು: ಪಿಎಸ್ಐ ಹುದ್ದೆಗಳ (PSI Recruitment) ನೇಮಕಾತಿಯಲ್ಲಿ ನಡೆದ ಅಕ್ರಮ ಈಗಾಗಲೇ ಬಯಲಾಗಿದ್ದು, ಸಿಐಡಿ ಅಧಿಕಾರಿಗಳು ವಿಚಾರಣೆಯನ್ನು ಚುರುಕುಗೊಳಿಸಿದ್ದಾರೆ. ಪರೀಕ್ಷಾ ಅಕ್ರಮ ಬಯಲಾದ ಬೆನ್ನಲ್ಲೇ ಕೆಪಿಎಸ್ಸಿ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಮುಂದೆ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಯನ್ನು (Competitive Exam) ಸ್ಟ್ರಿಕ್ಟ್ ಆಗಿ ನಡೆಸಲು ಕೆಪಿಎಸ್ಸಿ ನಿರ್ಧರಿಸಿದ್ದು, ಪರೀಕ್ಷಾ ಕೇಂದ್ರಗಳಲ್ಲಿ ಹೈಫ್ರೀಕ್ವೆನ್ಸಿ ಜಾಮರ್ ಅಳವಡಿಕೆ ಮಾಡಲು ತೀರ್ಮಾನಿಸಿದೆ. ಪರೀಕ್ಷಾ ಕೇಂದ್ರದಲ್ಲಿ ಬ್ಲೂಟೂತ್, ಮೊಬೈಲ್ ಬಳಕೆ ಆಗದಂತೆ ಎಚ್ಚರಿಕೆ ವಹಿಸುತ್ತದೆ. ಜೊತೆಗೆ ಸರ್ಕಾರಿ, ಅನುದಾನಿತ ಶಾಲೆಗಳಲ್ಲಿ ಮಾತ್ರ ಪರೀಕ್ಷೆ ನಡೆಸಲು ನಿರ್ಧಾರ ಮಾಡಿದೆ. ಇನ್ನು ಮುಂದೆ ಖಾಸಗಿ ಶಾಲಾ ಕಾಲೇಜುಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ನಡೆಸದಿರಲು ತೀರ್ಮಾನ ಕೈಗೊಂಡಿದೆ. ಕೆಪಿಎಸ್ಸಿ ಸದ್ಯ ಡಿಸಿಗಳಿಂದ ಸರ್ಕಾರಿ, ಅನುದಾನಿತ ಶಾಲೆಗಳ ಪಟ್ಟಿ ಪಡೆದಿದೆ.
ಮುಂದೆ ನಡೆಯುವ ಪರೀಕ್ಷೆಗಳಲ್ಲಿ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರ ಪ್ರವೇಶಿಸುವ ಮುನ್ನ ಸಂಪೂರ್ಣ ತಪಾಸಣೆ ಮಾಡಲಾಗುತ್ತದೆ. ಮೆಟಲ್ ಡಿಟೆಕ್ಟರ್ ಮೂಲಕ ಎಲೆಕ್ಟ್ರಾನಿಕ್ ಡಿವೈಸ್ ಪತ್ತೆಹಚ್ಚಲಾಗುತ್ತದೆ. ಆಯಾ ಜಿಲ್ಲೆಯ ಅಭ್ಯರ್ಥಿಗಳು ಅಲ್ಲೇ ಪರೀಕ್ಷೆ ಬರೆಯಲು ಅವಕಾಶವಿರಲ್ಲ. ಮುಂದಿನ ಸ್ಪರ್ಧಾತ್ಮಕ ಪರೀಕ್ಷೆ ವೇಳೆ ಈ ನಿಯಮಗಳು ಅನುಷ್ಠಾನಕ್ಕೆ ಬರಲಿದೆ.
ಪಿಡಬ್ಲೂಡಿ ಪರೀಕ್ಷಾ ಅಕ್ರಮದಲ್ಲೂ ರುದ್ರಗೌಡ ಪಾಟೀಲ್ ಕೈವಾಡ:
545 ಪಿಎಸ್ಐ ನೇಮಕಾತಿಯಲ್ಲಿ ನಡೆದ ಅಕ್ರಮದ ಆರೋಪಿ ರುದ್ರಗೌಡ ಪಾಟೀಲ್ನನ್ನು ಪೊಲೀಸರು ಬೆಂಗಳೂರಿಗೆ ಕರೆತಂದಿದ್ದಾರೆ. ಪಿಡಬ್ಲ್ಯುಡಿ ಜೆಇ ಪರೀಕ್ಷಾ ಅಕ್ರಮ ಸಂಬಂಧ ರುದ್ರಗೌಡನ ವಿಚಾರಣೆ ಮಾಡಲಾಗುತ್ತದೆ. ಬಾಡಿ ವಾರಂಟ್ ಮೇಲೆ ಪೊಲೀಸರು ರುದ್ರಗೌಡನನ್ನು ಕರೆತಂದಿದ್ದಾರೆ. ಪೊಲೀಸರು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸುತ್ತಾರೆ.
2021ರ ಡಿಸೆಂಬರ್ ತಿಂಗಳಲ್ಲಿ ಪಿಡಬ್ಲೂಡಿ ಪರೀಕ್ಷಾ ಅಕ್ರಮ ನಡೆದಿತ್ತು. ಕೇಂದ್ರದಲ್ಲಿ ಬ್ಲೂಟೂತ್ ಬಳಸಿ ಪರೀಕ್ಷೆ ಬರೆಯಲು ಯತ್ನಿಸುವಾಗ ಓರ್ವ ಅಭ್ಯರ್ಥಿ ಮೇಲ್ವಿಚಾರಕರ ಕೈಗೆ ಸಿಕ್ಕಿಬಿದ್ದಿದ್ದ. ಅಭ್ಯರ್ಥಿ ವೀರಣ್ಣಗೌಡ ಚಿಕ್ಕೇಗೌಡನನ್ನು ಪೊಲೀಸರು ಬಂಧಿಸಿದ್ದರು. ಬನಿಯನ್ನಲ್ಲಿ ಬ್ಲೂಟೂತ್ ಇಟ್ಟು ಪರೀಕ್ಷೆ ಬರೆಯುತ್ತಿದ್ದ. ಈ ಪ್ರಕರಣದಲ್ಲೂ ಆರ್.ಡಿ.ಪಾಟೀಲ್ ಕೈವಾಡ ಇರುವ ಶಂಕೆ ವ್ಯಕ್ತವಾಗಿದೆ.
ಇದನ್ನೂ ಓದಿ
ಮೈಸೂರಿನಲ್ಲಿ ಬೆಳ್ಳಿ ಆಸೆಗೆ ಕೆಲಸ ಕೊಟ್ಟವನನ್ನೇ ಕೊಲೆಗೈದಿದ್ದ ಆರೋಪಿ ಬಂಧನ!
ಶ್ರೀಲಂಕಾದ ಮಾಜಿ ಪ್ರಧಾನಿ ಭಾರತಕ್ಕೆ ಪಲಾಯನದ ಸುದ್ದಿ ತಳ್ಳಿ ಹಾಕಿದ ರಾಯಭಾರ ಕಚೇರಿ
Published On - 8:53 am, Wed, 11 May 22