ಕೆಪಿಎಸ್​ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್​​ಗೆ ಇಡಿ ಶಾಕ್​: ಪಶುವೈದ್ಯಾಧಿಕಾರಿ ಹುದ್ದೆಗೆ ಆಯ್ಕೆಯಾದವರ ಮನೆಗಳ ಮೇಲೂ ದಾಳಿ

ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿಯಲ್ಲಿ ನಡೆದಿದೆ ಎನ್ನಲಾದ ಬೃಹತ್ ಅಕ್ರಮ ಹಾಗೂ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ED) ಕರ್ನಾಟಕದ 21ಕ್ಕೂ ಹೆಚ್ಚು ಸ್ಥಳಗಳಲ್ಲಿ ಏಕಕಾಲಕ್ಕೆ ಬೃಹತ್ ಶೋಧ ಕಾರ್ಯಾಚರಣೆ ನಡೆಸಿದೆ. ಕೆಪಿಎಸ್​ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್​​ ಸೇರಿದಂತೆ ಹಲವರ ಮನೆಗಳ ಮೇಲೆ ದಾಳಿ ನಡೆಸಲಾಗಿದೆ.

ಕೆಪಿಎಸ್​ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್​​ಗೆ ಇಡಿ ಶಾಕ್​: ಪಶುವೈದ್ಯಾಧಿಕಾರಿ ಹುದ್ದೆಗೆ ಆಯ್ಕೆಯಾದವರ ಮನೆಗಳ ಮೇಲೂ ದಾಳಿ
ಶಿವಶಂಕರಪ್ಪ ಸಾಹುಕಾರ್​​ಗೆ ಇಡಿ ಶಾಕ್
Image Credit source: Tv9 Kannada

Updated on: Aug 18, 2026 | 4:46 PM

ಮುಖ್ಯಾಂಶಗಳು

  • ಕೆಪಿಎಸ್​ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್​​ಗೆ ಇಡಿ ಶಾಕ್
  • ಶಿವಶಂಕರಪ್ಪನಿವಾಸ ಸೇರಿ ಒಟ್ಟು 13 ಕಡೆ ದಾಳಿ, ಪರಿಶೀಲನೆ
  • ಪಶುವೈದ್ಯಾಧಿಕಾರಿ ಹುದ್ದೆಗೆ ಆಯ್ಕೆಯಾದವರಿಗೂ ತಟ್ಟಿದ ಬಿಸಿ

ಬೆಂಗಳೂರು, ಆಗಸ್ಟ್​​ 18: ಪಶುವೈದ್ಯಾಧಿಕಾರಿಗಳ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ಪ್ರಕರಣ ಸಂಬಂಧ ಕೆಪಿಎಸ್​ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್​​ಗೆ ಇಡಿ ಶಾಕ್​ ನೀಡಿದೆ. ಶಿವಶಂಕರಪ್ಪನಿವಾಸ ಸೇರಿ ಒಟ್ಟು 13 ಕಡೆ ದಾಳಿ ನಡೆಸಿ, ಪರಿಶೀಲನೆ ನಡೆಸಲಾಗಿದ್ದು, ಕೆಪಿಎಸ್​ಸಿ ಕಚೇರಿ ಮೇಲೂ ರೇಡ್​​ ನಡೆದಿದೆ. ಶಿವಶಂಕರಪ್ಪ ಅವರ ಬೆಂಗಳೂರಿನ ಡಾಲರ್ಸ್​ ಕಾಲೋನಿಯಲ್ಲಿರುವ ಮನೆ ಮತ್ತು ಕಲಬುರಗಿ ಜಿಲ್ಲೆ ಆಳಂದ ನಿವಾಸದ ಮೇಲೂ ಮನಿಲ್ಯಾಂಡ್ರಿಂಗ್ ಆಗಿರುವ ಬಗ್ಗೆ ಅನುಮಾನ ಹಿನ್ನೆಲೆ ದಾಳಿ ನಡೆಸಲಾಗಿದೆ.

ರಾಜ್ಯದ 21 ಸ್ಥಳಗಳಲ್ಲಿ ಶೋಧ

ಇಡಿ ಅಧಿಕಾರಿಗಳು KPSC ಕಚೇರಿ ಸೇರಿ, ರಾಜ್ಯದ 21ಸ್ಥಳಗಳಲ್ಲಿ ಏಕಕಾಲಕ್ಕೆ ಶೋಧ ನಡೆಸಿದ್ದಾರೆ. ಶಿವಶಂಕರಪ್ಪ ಸಾಹುಕಾರ್ ಪ್ಲಾಟ್ ಮೇಲೂ ದಾಳಿ ನಡೆಸಲಾಗಿದ್ದು, KPSC ಸದಸ್ಯೆ ಶಾಂತಾ ಹೊಸಮನಿ ಮನೆ ಮೇಲೂ ರೇಡ್ ನಡೆದಿದೆ. ಮಧ್ಯವರ್ತಿಗಳಿಗೂ ಶಾಕ್​​ ಕೊಡಲಾಗಿದ್ದು, ಪಶುವೈದ್ಯಾಧಿಕಾರಿ ಹುದ್ದೆಗೆ ಆಯ್ಕೆಯಾದವರ ಮನೆಗಳ ಮೇಲೂ ದಾಳಿ ನಡೆದಿದೆ. ರಾಜ್ಯದ 8 ಜಿಲ್ಲೆಗಳಲ್ಲಿ ಇಡಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ. ಪಶುವೈದ್ಯಾಧಿಕಾರಿ ನೇಮಕಾತಿಯಲ್ಲಿ ಅಕ್ರಮ ನಡೆದಿದ್ದು, ಅಭ್ಯರ್ಥಿಗಳಿಂದ 70-80 ಲಕ್ಷ ಲಂಚ ಪಡೆದಿರೋ ಆರೋಪ ಕೇಳಿಬಂದಿತ್ತು. ಮಧ್ಯವರ್ತಿಗಳ ಲಂಚದ ಬೇಡಿಕೆ ಕುರಿತು 4 FIR ಕೂಡ ದಾಖಲಾಗಿತ್ತು. ಲಂಚದ ಬೇಡಿಕೆಯ ಆಡಿಯೋ ಸಾಕ್ಷ್ಯ ಇಡಿಗೂ ಸಲ್ಲಿಕೆಯಾಗಿತ್ತು. ಹೀಗಾಗಿ ನೇಮಕಾತಿ ಅಕ್ರಮದ ಹಣದ ಜಾಡು ಹಿಡಿದು ಇಡಿ ಶೋಧಕ್ಕೆ ಮುಂದಾಗಿದ್ದು, ದಾಖಲೆ, ಡಿಜಿಟಲ್ ಸಾಕ್ಷ್ಯಗಳಿಗಾಗಿ ಹುಡುಕಾಟ ನಡೆಸಿದೆ ಎನ್ನಲಾಗಿದೆ.

ಇದನ್ನೂ ಓದಿ: ಸುಳ್ಳು ಆದಾಯ ಪ್ರಮಾಣಪತ್ರ ವಿವಾದ: ಸುಮಾ ಸಾಹುಕಾರ್‌ಗೆ ಹೈಕೋರ್ಟ್ ತರಾಟೆ, ಕೆಪಿಎಸ್​ಸಿ ಕಾರ್ಯವೈಖರಿ ಬಗ್ಗೆ ಗರಂ

ಪಶು ವೈದ್ಯರ ನೇಮಕಾತಿ ಹಗರಣದಲ್ಲಿ ಭಾಗಿಯಾದ ಆರೋಪ ಹಿನ್ನೆಲೆ ಶಿವಶಂಕರಪ್ಪರನ್ನು ಜು.13ರಂದು ರಾಜ್ಯಪಾಲರು ಅಮಾನತು ಮಾಡಿದ್ದರು. ಇದಾದ ಬಳಿಕ ಪ್ರಕರಣದ ಬಗ್ಗೆ ತನಿಖೆಯನ್ನು ಸಿಐಡಿ ಟೀಂ ನಡೆಸುತ್ತಿದೆಯಾದರೂ, ಅಕ್ರಮದ ಹಣ ಬೇರೆ ಕಡೆಗೆ ವರ್ಗಾವಣೆ ಶಂಕೆ ಹಿನ್ನೆಲೆ ಇಡಿ ದಾಳಿ ನಡೆದಿದೆ. ನಾಲ್ಕು ವಾಹನಗಳಲ್ಲಿ ವಿಧಾನಸೌಧ ಬಳಿಯ ಕೆಪಿಎಸ್ಸಿ ಕೇಂದ್ರ ಕಚೇರಿಗೆ 10ಕ್ಕೂ ಹೆಚ್ಚು ಇಡಿ ಅಧಿಕಾರಿಗಳು ಆಗಮಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. 2019ರ ಸೆಪ್ಟೆಂಬರ್ 3ರಂದು ಕೆಪಿಎಸ್‌ಸಿ ಸದಸ್ಯರಾಗಿ ನೇಮಕವಾಗಿದ್ದ ಶಿವಶಂಕರಪ್ಪ, 2021ರ ಏಪ್ರಿಲ್ 3ರಂದು ಕೆಪಿಎಸ್‌ಸಿ ಅಧ್ಯಕ್ಷರಾಗಿ ನೇಮಕಗೊಂಡಿದ್ದರು. ಏಪ್ರಿಲ್​​ 4ರಂದು ಅಧಿಕೃತ ಆದೇಶವಾಗಿತ್ತು. ಅಂದಿನಿಂದ 2026ರ ಜು.13ರ ವರೆಗೆ ಅವರೇ ಅಧ್ಯಕ್ಷರಾಗಿದ್ದರು.

ವರದಿ: ವಿಕಾಸ್​​, ಟಿವಿ9 ಬೆಂಗಳೂರು

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 11:36 am, Tue, 18 August 26

Loading...
Unable to load recommendations.
Follow Us