
ಬೆಂಗಳೂರು, ಸೆಪ್ಟೆಂಬರ್ 02: ಕೆಪಿಎಸ್‌ಸಿ (KPSC) ಪಶುವೈದ್ಯಾಧಿಕಾರಿ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಅತ್ಯಂತ ಸ್ಫೋಟಕ ಮಾಹಿತಿ ‘ಟಿವಿ9’ಗೆ ಲಭ್ಯವಾಗಿದೆ. 400 ಹುದ್ದೆಗಳ ಭಾರಿ ಅಕ್ರಮದ ಇಡೀ ಜಾಲ ಪರೀಕ್ಷಾ ನಿಯಂತ್ರಕ, ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಮತ್ತು ಮಧ್ಯವರ್ತಿ ಬಸವರಾಜ್ ಕನ್ನಾಳೆ ಕಂಟ್ರೋಲ್‌ನಲ್ಲಿ ಫಿಲ್ಮಿ ಸ್ಟೈಲ್‌ನಲ್ಲಿ ನಡೆದಿರುವುದು ಸಿಐಡಿ ತನಿಖೆಯಲ್ಲಿ ಬಯಲಾಗಿದೆ.
ಸಿಐಡಿ (CID) ಅಧಿಕಾರಿಗಳಿಗೆ ಪ್ರಮುಖ ಆರೋಪಿ ಹಾಗೂ ಮಧ್ಯವರ್ತಿ ಬಸವರಾಜ್ ಕನ್ನಾಳೆ ಮನೆಯಲ್ಲಿ ಮತ್ತಷ್ಟು ಸ್ಫೋಟಕ ಸಾಕ್ಷ್ಯಾಧಾರಗಳು ಲಭ್ಯವಾಗಿವೆ.ನಸಿಐಡಿ ಅಧಿಕಾರಿಗಳು ಬಸವರಾಜ್ ಕನ್ನಾಳೆ ನಿವಾಸದ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದ ವೇಳೆ, ಇತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಜರಾಗಿದ್ದ 6 ಅಭ್ಯರ್ಥಿಗಳ ಪ್ರವೇಶಪತ್ರಗಳು (Hall Tickets) ಜಪ್ತಿಯಾಗಿವೆ. ಈ ಪ್ರವೇಶಪತ್ರಗಳು 2025ರಲ್ಲಿ ನಡೆದ ಬಿ ಗ್ರೂಪ್ ಹುದ್ದೆಗಳ ನೇಮಕಾತಿ ಪರೀಕ್ಷೆಗೆ ಸಂಬಂಧಿಸಿದ್ದಾಗಿವೆ ಎಂದು ತಿಳಿದುಬಂದಿದೆ.
ಪಶುವೈದ್ಯಾಧಿಕಾರಿ ಪರೀಕ್ಷೆ ಮಾತ್ರವಲ್ಲದೆ, ಬಿ ಗ್ರೂಪ್ ಹುದ್ದೆಗಳ ನೇಮಕಾತಿಯಲ್ಲೂ ಕನ್ನಾಳೆ ಅಕ್ರಮ ಎಸಗಿರುವ ಶಂಕೆ ವ್ಯಕ್ತವಾಗಿದ್ದು, ಜಪ್ತಿಯಾದ ಹಾಲ್ ಟಿಕೆಟ್‌ಗಳಲ್ಲಿದ್ದ 6 ಅಭ್ಯರ್ಥಿಗಳಿಗೂ ವಿಚಾರಣೆಗೆ ಹಾಜರಾಗುವಂತೆ ಸಿಐಡಿ ಅಧಿಕಾರಿಗಳು ಬುಲಾವ್ ನೀಡಿದ್ದಾರೆ. ಈ ಮೂಲಕ KPSC ನೇಮಕಾತಿ ಅಕ್ರಮದ ಜಾಲ ಮತ್ತಷ್ಟು ವಿಸ್ತರಿಸುವ ಲಕ್ಷಣಗಳು ಕಂಡುಬರುತ್ತಿವೆ.
ಇದೇ ವೇಳೆ ಜೆಡಿಎಸ್ ಪಕ್ಷವು ಬಸವರಾಜ್ ಕನ್ನಾಳೆಗೆ ಸಚಿವ ಈಶ್ವರ ಖಂಡ್ರೆ ಸಿಹಿ ತಿನ್ನಿಸುವ ಫೋಟೋವನ್ನು ಎಕ್ಸ್ (X) ಖಾತೆಯಲ್ಲಿ ಹಂಚಿಕೊಂಡಿದೆ. “ಕಿಂಗ್‌ಪಿನ್‌ಗಳಿಗೆ ಸಿಹಿ ಊಟ ನೀಡುತ್ತಿರುವ ಸಚಿವರು ಹಾಗೂ ಸರ್ಕಾರದ ಪರ್ಸೆಂಟೇಜ್ ಪಾತ್ರವೇನು?” ಎಂದು ಪ್ರಶ್ನಿಸಿರುವ ಜೆಡಿಎಸ್, ನಿರುದ್ಯೋಗಿ ಯುವಜನತೆಗೆ ಸ್ಪಷ್ಟನೆ ನೀಡುವಂತೆ ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ.
ವರದಿ: ಕಿರಣ್ ಹೆಚ್.ವಿ ಮತ್ತು ಪ್ರಜ್ವಲ್ ಕುಮಾರ್, ಟಿವಿ9 ಬೆಂಗಳೂರು
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:23 am, Wed, 2 September 26