AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನನ್ನ ವಿರುದ್ಧ ದೂರು ಕೊಟ್ಟ ಹೆಸರಿನವರಿಗೆ ಯಾವುದೇ ಗುತ್ತಿಗೆ ಕೊಟ್ಟಿಲ್ಲ: ಈಶ್ವರಪ್ಪ

ನನ್ನ ವಿರುದ್ಧ ಯಾವುದೋ ಷಡ್ಯಂತ್ರ ನಡೆದಿದೆ. ಸಂತೋಷ್ ಪಾಟೀಲ್ ಯಾರು ಅಂತಾ ಬೆಳಗಾವಿ ಜಿಲ್ಲಾ ಬಿಜೆಪಿ ಅಧ್ಯಕ್ಷರಿಗೂ ಕೇಳಿದೆ. ಅವರಿಗೂ ಇದು ಗೊತ್ತಾಗಿಲ್ಲ ಎಂದು ಪ್ರತಿಕ್ರಿಯಿಸಿದರು.

ನನ್ನ ವಿರುದ್ಧ ದೂರು ಕೊಟ್ಟ ಹೆಸರಿನವರಿಗೆ ಯಾವುದೇ ಗುತ್ತಿಗೆ ಕೊಟ್ಟಿಲ್ಲ: ಈಶ್ವರಪ್ಪ
ಸಚಿವ ಈಶ್ವರಪ್ಪ
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on:Mar 29, 2022 | 11:00 AM

Share

ಬೆಂಗಳೂರು: ತಮ್ಮ ವಿರುದ್ಧ ಕೇಳಿಬಂದಿರುವ ಕಮಿಷನ್ ಆರೋಪ ಕುರಿತು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ (KS Eshrappa) ಮಂಗಳವಾರ ಪ್ರತಿಕ್ರಿಯಿಸಿದರು. ನನ್ನ ವಿರುದ್ಧ ಸಂತೋಷ್ ಪಾಟೀಲ್ ಎಂಬ ವ್ಯಕ್ತಿ ದೆಹಲಿಗೆ ಹೋಗಿ ದೂರು ಕೊಟ್ಟಿದ್ದಾರೆ. ನಮ್ಮ ಕಡೆಯವರು ಯಾರೋ ಕಮಿಷನ್ ಕೇಳಿದ್ದಾರೆ ಎನ್ನುವುದು ಅವರ ಆರೋಪ. ಈ ದೂರಿಗೆ ಕರ್ನಾಟಕ ಸರ್ಕಾರದ ಪ್ರತಿಕ್ರಿಯೆ ಕೇಳಿ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಗಿರಿರಾಜ್ ಸಿಂಗ್ ಕಿಶೋರ್ ಅವರ ಕಚೇರಿಯಿಂದ ಪತ್ರ ಬಂದಿತ್ತು. ನಮ್ಮ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅತೀಕ್ ಅವರು ಈ ಸಂಬಂಧ ಸ್ಪಷ್ಟನೆ ನೀಡಿದ್ದಾರೆ ಎಂದು ತಿಳಿಸಿದರು.

ಪಂಚಾಯತ್ ರಾಜ್ ಇಲಾಖೆಯಿಂದ ಸಂತೋಷ್ ಅವರಿಗೆ ಯಾವುದೇ ಕಾರ್ಯಾದೇಶ (ವರ್ಕ್ ಆರ್ಡರ್) ಮಂಜೂರು ಮಾಡಿಲ್ಲ ಎಂದು ಕೇಂದ್ರ ಗ್ರಾಮೀಣಾಭಿವೃದ್ಧಿ ಇಲಾಖೆ ಕಾರ್ಯದರ್ಶಿಗೆ ನಮ್ಮ ಅಧಿಕಾರಿಗಳು ವಿವರಣೆ ಕೊಟ್ಟಿದ್ದಾರೆ. ಸಂತೋಷ್ ಪಾಟೀಲ್ ಎನ್ನುವವರು ಯಾರು ಎಂಬುದೇ ನನಗೆ ಗೊತ್ತಿಲ್ಲ. ನನ್ನ ವಿರುದ್ಧ ಯಾವುದೋ ಷಡ್ಯಂತ್ರ ನಡೆದಿದೆ. ಸಂತೋಷ್ ಪಾಟೀಲ್ ಯಾರು ಅಂತಾ ಬೆಳಗಾವಿ ಜಿಲ್ಲಾ ಬಿಜೆಪಿ ಅಧ್ಯಕ್ಷರಿಗೂ ಕೇಳಿದೆ. ಅವರಿಗೂ ಇದು ಗೊತ್ತಾಗಿಲ್ಲ ಎಂದು ಪ್ರತಿಕ್ರಿಯಿಸಿದರು.

ನನ್ನ ವಿರುದ್ಧ ನಮ್ಮ ಪಕ್ಷದ ನಾಯಕರಿಗೆ ಹಾಗೂ ಕೇಂದ್ರ ಸಚಿವರಿಗೆ ಗುತ್ತಿಗೆದಾರರು ಪತ್ರ ಬರೆದಿದ್ದಾರೆ ಎಂದು ನಿನ್ನೆಯಷ್ಟೇ ದೆಹಲಿಯಲ್ಲಿ ಕಾಂಗ್ರೆಸ್ ಸಂಸದರು ಸುದ್ದಿಗೋಷ್ಠಿ ಮಾಡಿದ್ದರು. ನಮ್ಮ ಇಲಾಖೆಯಿಂದ ಯಾವುದೇ ಕಾರ್ಯಾದೇಶ ಕೊಟ್ಟಿಲ್ಲ. ಕೆಲಸವೇ ಮಾಡಿಸಿಲ್ಲ ಎಂದ ಮೇಲೆ ಹಣ ಕೊಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಈ ಷಡ್ಯಂತ್ರದ ಬಗ್ಗೆ ಮಾರ್ಚ್ 10ರಂದೇ ಮಾನನಷ್ಟ ಮೊಕದ್ದಮೆ ಹೂಡಿದ್ದೇನೆ. ನಮ್ಮ ವಕೀಲರು ಅವರಿಗೆ ನೊಟೀಸ್ ಕಳಿಸುತ್ತಾರೆ. ಇಂಥ ಷಡ್ಯಂತ್ರ ರೂಪಿಸಿರುವ ವಿಷಯ ಮಾರ್ಚ್ 9ರಂದು ಈ ನನ್ನ ಗಮನಕ್ಕೆ ಬಂದಿತ್ತು ಎಂದು ಹೇಳಿದರು.

ದೂರಿನಲ್ಲಿ ಸಂತೋಷ್ ಪಾಟೀಲ್ ಮಾಡಿರುವ ಆರೋಪಕ್ಕೂ ನಮ್ಮ ಇಲಾಖೆಗೂ ಯಾವುದೇ ಸಂಬಂಧವಿಲ್ಲ. ನಿನ್ನೆ ದೆಹಲಿಯಲ್ಲಿ ಕಾಂಗ್ರೆಸ್ ಮಾಡಿರುವ ಆರೋಪದಲ್ಲಿ ಹುರುಳಿಲ್ಲ. ಈ ಷಡ್ಯಂತ್ರದಲ್ಲಿ ಯಾರೆಲ್ಲಾ ಇದ್ದಾರೆ ಎಂಬುದು ಇನ್ನೂ ನನಗೆ ಗೊತ್ತಾಗಿಲ್ಲ ಎಂದರು. ಟಿಪ್ಪು ಸುಲ್ತಾನ್ ವಿಚಾರವಾಗಿ ರಾಜ್ಯ ಸರ್ಕಾರಕ್ಕೆ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ಸಲ್ಲಿಸಿರುವ ವರದಿಯ ಬಗ್ಗೆ ನನಗೆ ಇನ್ನೂ ಸರಿಯಾದ ಮಾಹಿತಿ ಲಭ್ಯವಾಗಿಲ್ಲ. ಈ ಸಂಬಂಧ ತಿಳಿದುಕೊಂಡು ನಂತರ ಪ್ರತಿಕ್ರಿಯಿಸುತ್ತೇನೆ ಎಂದರು.

ನನ್ನ ವಿರುದ್ಧ 4 ಕೋಟಿ ಅವ್ಯವಹಾರದ ಆರೋಪ ಹೇಗೆ ಬಂತು ಎನ್ನುವುದು ತಿಳಿಯುತ್ತಿಲ್ಲ. ಇವರ ಹೆಸರಿಗೆ ಯಾವುದೇ ಆಡಳಿತ ಅನುಮೋದನೆ ನೀಡಿಲ್ಲ ಯೋಜನೆ ಕೂಡ ಆಗಿಲ್ಲ. ಖಾಸಗಿ ಚಾನೆಲ್ ಒಂದರಲ್ಲಿ ಪ್ರಸಾರವಾಗಿರು ಸಂದರ್ಶನದಲ್ಲಿ ಕಮಿಷನ್ ವಿಚಾರ ಹೇಳಿದ್ದಾರೆ. ಆ ವ್ಯಕ್ತಿಯ ಮೇಲೆ ಮಾನನಷ್ಟ ಮೊಕದ್ದಮೆ ಹಾಕಿದ್ದದೇನೆ. ಈಗಾಗಲೇ ನ್ಯಾಯಾಲಯವು ಹೇಳಿಕೆ ಪಡೆದಿದೆ ಎಂದರು.

ಸಂತೋಷ್ ಮಾಡಿರುವ ಆರೋಪವನ್ನೇ ಆಧಾರವಾಗಿ ಇರಿಸಿಕೊಂಡು ಕಾಂಗ್ರೆಸ್ ನಾಯಕರಾದ ಹನುಮಂತಯ್ಯ, ಹುಸೇನ್, ಸುರೇಶ್, ಚಂದ್ರಶೇಖರ್ ಸುದ್ದಿಗೋಷ್ಠಿ ಮಾಡಿದೆ. ಕಾಂಗ್ರೆಸ್ ಇಷ್ಟು ವರ್ಷ ಆಡಳಿತ ಮಾಡಿದೆ. ವರ್ಕ್ ಆಡರ್ ಇಲ್ಲದೆ ಯಾರಿಗಾದರೂ ಕಾಮಗಾರಿಗಳನ್ನು ವಹಿಸಿಕೊಡಲು ಸಾಧ್ಯವೇ? ಇವರಗೆ ಅಷ್ಟೂ ತಿಳಿಯುವುದಿಲ್ಲವೇ ಏಂದು ಪ್ರಶ್ನಿಸಿದರು. ಮಲಗಿದನವ ಮೇಲೆ ಅಲ್ಲ, ನಡೆಯುವವನ ಮೇಲೆ ತಾನೆ ಕಲ್ಲು ಹೊಡೆಯುವುದು. ಹಾಗಾಗಿ ನನ್ನನ್ನು ಟಾರ್ಗೆಟ್ ಮಾಡ್ತಾ ಇದ್ದಾರೆ. ಗ್ರಾಮೀಣಾಭಿವೃದ್ಧಿ ಇಲಾಖೆ ಚೆನ್ನಾಗಿ ಕೆಲಸ ಮಾಡುತ್ತಿದೆ. ಹಾಗಾಗಿ ಕಲ್ಲು ಹೊಡೆಯುವ ಪ್ರಯತ್ನ ನಡೆದಿದೆ ಎಂದು ಕಾಂಗ್ರೆಸ್ ಆರೋಪಕ್ಕೆ ಈಶ್ವರಪ್ಪ ತಿರುಗೇಟು ನೀಡಿದರು.

ಈಶ್ವರಪ್ಪ ವಿರುದ್ಧ ಪತ್ರ

ಸಚಿವ ಕೆಎಸ್ ಈಶ್ವರಪ್ಪ ವಿರುದ್ಧ ಹಿಂದೂ ವಾಹಿನಿ ನ್ಯಾಷನಲ್ ಸಂಘಟನೆಯ ಕಾರ್ಯದರ್ಶಿ, ಬಿಜೆಪಿ ಕಾರ್ಯಕರ್ತ ಕೂಡ ಆಗಿರುವ ಬೆಳಗಾವಿಯ ಗುತ್ತಿಗೆದಾರ ಸಂತೋಷ್ ಕೆ.ಪಾಟೀಲ್ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ. ಕಾಮಗಾರಿ ಮಾಡಿದ ಬಿಲ್ ಕೊಡಿಸುವಂತೆ ಪ್ರಧಾನಿಗೆ ಪತ್ರದ ಮೂಲಕ ಮನವಿ ಮಾಡಿದ್ದಾರೆ ಎಂದು ಸೋಮವಾರ (ಮಾರ್ಚ್ 22) ವರದಿಯಾಗಿತ್ತು.

ಸಚಿವ ಈಶ್ವರಪ್ಪ ಬೆಂಬಲಿಗರು ಕಮಿಷನ್ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ. 108 ಕಾಮಗಾರಿಗಳನ್ನು ನಾಲ್ಕು ಕೋಟಿ ರೂಪಾಯಿ ವೆಚ್ಚದಲ್ಲಿ ಮಾಡಿ ಪೂರ್ಣಗೊಳಿಸಲಾಗಿದೆ. ಆದ್ರೆ ವರ್ಕ್ ಆರ್ಡರ್ ಕೊಟ್ಟಿಲ್ಲ. ಕಳೆದ ವರ್ಷದ ಫೆಬ್ರವರಿ 12 ರಂದು ಕೆಲಸ ಪೂರ್ಣಗೊಳಿಸಲು ಈಶ್ವರಪ್ಪ ಸೂಚಿಸಿದ್ದರು. ಆದರೆ ವರ್ಕ್ ಆರ್ಡರ್ ಕೊಟ್ಟಿಲ್ಲ, ಹಣವೂ ಬಿಡುಗಡೆ ಆಗಿಲ್ಲ. ಕಾಮಗಾರಿ ಪೂರ್ಣವಾಗಿ 1 ವರ್ಷ ಕಳೆದರೂ ಹಣ ನೀಡಿಲ್ಲ. ಸಾಲಕ್ಕೆ ಬಡ್ಡಿ ಪಾವತಿಸಿ ಹಣ ತಂದು ಕೆಲಸ ಪೂರ್ಣಗೊಳಿಸಿದ್ದೇವೆ. ಸಚಿವರಿಗೆ, ಅಧಿಕಾರಿಗಳಿಗೆ ಮನವಿ ಮಾಡಿದ್ರೂ ಸ್ಪಂದಿಸುತ್ತಿಲ್ಲ. ಇದನ್ನು ವೈಯಕ್ತಿಕವಾಗಿ ಪರಿಗಣಿಸಿ ಹಣ ಕೊಡಿಸುವಂತೆ ಮನವಿ ಮಾಡುತ್ತಿದ್ದೇವೆ. ಒಂದು ವೇಳೆ ಹಣ ನೀಡದಿದ್ದರೆ, ಆತ್ಮಹತ್ಯೆ ಮಾಡಿಕೊಳ್ಳುವುದೊಂದೇ ಉಳಿದಿರುವ ಮಾರ್ಗ ಎಂದು ಸಂತೋಷ ಪಾಟೀಲ್, ಪ್ರಧಾನಿ ನರೇಂದ್ರ ಮೋದಿಗೆ ಬರೆದ ಪತ್ರದಲ್ಲಿ ತಿಳಿಸಿದ್ದರು.

ಪ್ರಿಯಾಂಕ್ ಖರ್ಗೆ ವಾಗ್ದಾಳಿ

ಗುತ್ತಿಗೆದಾರರೊಬ್ಬರಿಗೆ ಬಿಲ್ ಮಂಜೂರು ಮಾಡಲು ಸಚಿವ ಕೆ.ಎಸ್.ಈಶ್ವರಪ್ಪ (KS Eshwarappa) ಶೇ 40ರಷ್ಟು ಕಮಿಷನ್ ಕೇಳಿದ್ದಾರೆ ಎಂದು ಗುತ್ತಿಗೆದಾರರೊಬ್ಬರು ಬರೆದ ಪತ್ರ ಉಲ್ಲೇಖಿಸಿ ಶಾಸಕ ಪ್ರಿಯಾಂಕ್ ಖರ್ಗೆ (Priyank Kharge) ಗಂಭೀರ ಆರೋಪ ಮಾಡಿದರು. ಈ‌ ಹಿಂದೆ ಈಶ್ವರಪ್ಪನವರೇ ರಾಜ್ಯಪಾಲರಿಗೆ ಪತ್ರ ಬರೆದಿದ್ದರು. ಗುತ್ತಿಗೆದಾರರು ಕೂಡ ಶೇ 40ರ ಕಮಿಷನ್ ಬಗ್ಗೆ ಆರೋಪ ಮಾಡಿ ಪ್ರಧಾನಿಗೆ ಪತ್ರ ಬರೆದಿದ್ದಾರೆ. ಕೇವಲ ಯಡಿಯೂರಪ್ಪ, ಮುಖ್ಯಮಂತ್ರಿ ಬೊಮ್ಮಾಯಿ ಮಾತ್ರವಲ್ಲ, ಇಡೀ ರಾಜ್ಯ ಸರ್ಕಾರವೇ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಅವರು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: ಕಾಮಗಾರಿ ಮಾಡಿದ ಬಿಲ್ ಕೊಡಿಸುವಂತೆ ಸಚಿವ ಕೆಎಸ್ ಈಶ್ವರಪ್ಪ ವಿರುದ್ಧ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದ ಸಂತೋಷ್ ಪಾಟೀಲ್

ಇದನ್ನೂ ಓದಿ: ಈಶ್ವರಪ್ಪ ವಿರುದ್ಧ ಕಮಿಷನ್​ಗೆ ಬೇಡಿಕೆಯಿಟ್ಟ ಆರೋಪ: ಶಿಸ್ತುಕ್ರಮಕ್ಕೆ ಪ್ರಿಯಾಂಕ್ ಖರ್ಗೆ, ಹರಿಪ್ರಸಾದ್ ಒತ್ತಾಯ

Published On - 10:35 am, Tue, 29 March 22