ಜನವಸತಿ ಪ್ರದೇಶದಲ್ಲಿ ಶವ ಸಂಸ್ಕಾರ; ಪ್ರಶ್ನಿಸಿದ ಲೇಔಟ್ ಅಸೋಸಿಯೇಷನ್ ಅಧ್ಯಕ್ಷರಿಗೆ ಮೃತರ ಸಂಬಂಧಿಗಳಿಂದ ಕಲ್ಲೇಟು

| Updated By: preethi shettigar

Updated on: Feb 02, 2022 | 1:01 PM

ಬೆಂಗಳೂರಿನ ಬೊಮ್ಮನಹಳ್ಳಿ ವಲಯದ ಪಾಂಡುರಂಗ ಲೇಔಟ್​ನಲ್ಲಿ ನಡೆದ ವಿಚಿತ್ರ ಪ್ರಕರಣ ಸದ್ಯ ಬೆಳಕಿಗೆ ಬಂದಿದ್ದು, ಜನ ಓಡಾಡುವ ಜಾಗದಲ್ಲಿಯೇ ಅಂತ್ಯಸಂಸ್ಕಾರ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಅಲ್ಲದೇ ಕಲ್ಲಿನಿಂದ ಪ್ರಶ್ನಿಸಿದ ಜನರಿಗೆ ಮೃತ ಕುಟುಂಬಸ್ಥರು ಹಲ್ಲೆ ಮಾಡಿದ್ದಾರೆ.

ಜನವಸತಿ ಪ್ರದೇಶದಲ್ಲಿ ಶವ ಸಂಸ್ಕಾರ; ಪ್ರಶ್ನಿಸಿದ ಲೇಔಟ್ ಅಸೋಸಿಯೇಷನ್ ಅಧ್ಯಕ್ಷರಿಗೆ ಮೃತರ ಸಂಬಂಧಿಗಳಿಂದ ಕಲ್ಲೇಟು
ಅಂತ್ಯಸಂಸ್ಕಾರ
Follow us on

ಬೆಂಗಳೂರು: ಜನವಸತಿ ಪ್ರದೇಶದಲ್ಲಿ ಶವ ಸಂಸ್ಕಾರ ಮಾಡಿರುವ ಆರೋಪ(Allegation) ಕೇಳಿ ಬಂದಿದ್ದು, ಸ್ಥಳೀಯರು ಮನೆಯ ಪಕ್ಕದಲ್ಲಿ ಶವ ಸಂಸ್ಕಾರ(cremation) ಮಾಡುವಂತಿಲ್ಲ ಎಂದು ಗಲಾಟೆ ಮಾಡಿದ್ದಾರೆ. ಅಲ್ಲದೇ ಇದನ್ನು ವಿರೋಧಿಸಿದ ಸ್ಥಳೀಯರಿಗೆ ಮೃತರ ಸಂಬಂಧಿಗಳು ಕಲ್ಲಿನಿಂದ ಹಲ್ಲೆ ಮಾಡಿದ್ದಾರೆ. ಈ ವೇಳೆ ಲೇಔಟ್(Layout) ಅಸೋಸಿಯೇಷನ್​ನ ಅಧ್ಯಕ್ಷರಿಗೆ ಕಲ್ಲೇಟು ಬಿದ್ದಿದೆ. ಬೆಂಗಳೂರಿನ ಬೊಮ್ಮನಹಳ್ಳಿ ವಲಯದ ಪಾಂಡುರಂಗ ಲೇಔಟ್​ನಲ್ಲಿ ನಡೆದ ವಿಚಿತ್ರ ಪ್ರಕರಣ ಸದ್ಯ ಬೆಳಕಿಗೆ ಬಂದಿದ್ದು, ಜನ ಓಡಾಡುವ ಜಾಗದಲ್ಲಿಯೇ ಅಂತ್ಯಸಂಸ್ಕಾರ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಶವವನ್ನು ಹೊರ ತೆಗೆದು ಬೇರೆಡೆ ಹೂಳಲು ಸ್ಥಳೀಯರ ಒತ್ತಡ

80 ವರ್ಷದ ವೃದ್ಧೆ ಮೂರು ದಿನಗಳ ಹಿಂದೆ ಮೃತಪಟ್ಟಿದ್ದರು. ಮನೆಯ ಹಿಂಭಾಗದಲ್ಲಿ ಮೃತ ವೃದ್ಧೆಯ ಶವ ಸಂಸ್ಕಾರವಾಗಿದೆ. ಶವ ಸಂಸ್ಕಾರ ಮಾಡಿರುವ ಜಾಗದ ಸುತ್ತ ಮನೆಗಳು ಇವೆ. ಹೀಗಾಗಿ ಸ್ಥಳೀಯರು ವಿರೋಧಿಸಿದ್ದರು. ಆದರೆ ಪೊಲೀಸ್ ಭದ್ರತೆಯಲ್ಲಿ ಅಂತ್ಯಸಂಸ್ಕಾರ ಮಾಡಲಾಗಿದೆ. ಹೀಗಾಗಿ ಗಲಾಟೆ ನಡೆದಿದ್ದು, ಮೃತರ ಸಂಬಂಧಿಕರು ಕಲ್ಲಿನಿಂದ ಸ್ಥಳೀಯರ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ಈ ವೇಳೆ ಲೇಔಟ್ ಅಸೋಸಿಯೇಷನ್​ನ ಅಧ್ಯಕ್ಷರಿಗೆ ಕಲ್ಲೇಟು ಬಿದ್ದಿದೆ. ಪುಟ್ಟೇನಹಳ್ಳಿ ಪೊಲೀಸರು ಸದ್ಯ ಸಂಬಂಧಿಕರು, ಸ್ಥಳೀಯರನ್ನು ರಾಜಿ ಸಂದಾನ ಮಾಡುವ ಕೆಲಸಕ್ಕೆ ಮುಂದಾಗಿದ್ದಾರೆ.

ಘಟನೆ ಏನು?

80 ವರ್ಷದ ವಯೋವೃದ್ಧೆ ಮೃತಪಟ್ಟಿದ್ದಾರೆ. ಹೀಗಾಗಿ ಮೃತ ಸಂಬಂಧಿಕರು ತಮ್ಮದೇ ಮನೆಯ ಹಿಂಭಾಗದಲ್ಲಿ ಶವ ಸಂಸ್ಕಾರಕ್ಕೆ ಮುಂದಾಗಿದ್ದಾರೆ. ಗುಂಡಿಯಲ್ಲಿ ಶವಕ್ಕೆ ಪೂಜೆ ಮಾಡಿ, ಮಣ್ಣು ಮುಚ್ಚುವುದಕ್ಕೆ ಸಿದ್ಧತೆ ನಡೆಯುತ್ತಿದ್ದಂತೆ ಶವ ಹೊರ ತೆಗೆಯಿರಿ ಎಂದು ಸ್ಥಳೀಯರು ಬಿಗಿಪಟ್ಟು ಹಿಡಿದ್ದಾರೆ. ಆದರೆ ಪೊಲೀಸರು, ಬಿಬಿಎಂಪಿ ಅಧಿಕಾರಿಗಳ ಸಮ್ಮುಖದಲ್ಲಿ ಸ್ಥಳೀಯ ನಿವಾಸಿಗಳನ್ನು ಮನವೊಲಿಸಿ ಅಂತ್ಯಸಂಸ್ಕಾರ ಪೂರ್ತಿ ಮಾಡಲಾಗಿದೆ.

ಶವ ಸಂಸ್ಕಾರ ಮಾಡಿರುವ ಜಾಗದ ಪಕ್ಕದಲ್ಲಿಯೇ ಮನೆಗಳು, ಅಪಾರ್ಟ್‌ಮೆಂಟ್ ಇದೆ. ಜನವಸತಿ ಪ್ರದೇಶಗಳಲ್ಲಿ ಅಂತ್ಯಸಂಸ್ಕಾರ ಮಾಡುವ ಹಾಗಿಲ್ಲ ಎಂಬ ನಿಯಮವಿದೆ. ಸ್ವಂತ ಜಾಗವಿದ್ದರೆ, ಭೂ ಮಾಲೀಕನ ಜಾಗದಲ್ಲಿಯೇ ಅಂತ್ಯಸಂಸ್ಕಾರಕ್ಕೆ ಅವಕಾಶ ಕೊಟ್ಟರೂ ಅಕ್ಕಪಕ್ಕದ ಮನೆಯವರ ಅನುಮತಿ ಅನಿವಾರ್ಯ. ಅಕ್ಕಪಕ್ಕದ ಮನೆಯವರು ಅಂತ್ಯಸಂಸ್ಕಾರ ಇಲ್ಲಿ ಬೇಡ ಎಂದ ಮೇಲೆಯೂ, ಪೊಲೀಸರ ಭದ್ರತೆಯಲ್ಲಿ ಅಂತ್ಯ ಸಂಸ್ಕಾರ ಮಾಡಿದ್ದಾರೆ. ಸ್ವಂತ ಜಾಗದಲ್ಲಿ ಶವ ಸಂಸ್ಕಾರಕ್ಕೆ ಅವಕಾಶ ಕೊಡೋದಾದ್ರೆ, ನಮ್ಮ ಸ್ವಂತ ಜಾಗಗಳಲ್ಲಿ ಬಾಂಬ್ ಕೂಡ ತಯಾರಿಸಬಹುದಾ? ಎಂದು ಸ್ಥಳೀಯರು ಸದ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೊರೋನಾ 2ನೇ ಅಲೆಯ ಸಮಯದಲ್ಲಿ, ಕೊವಿಡ್, ನಾನ್ ಕೊವಿಡ್​ನಿಂದ ಮೃತಪಟ್ಟವರನ್ನು ಸ್ವಂತ ಜಾಗಗಳಲ್ಲಿ ಶವ ಸಂಸ್ಕಾರಕ್ಕೆ ಅವಕಾಶ ನೀಡಿಲ್ಲ. ಈಗ ಯಾಕೆ ಈ ರೀತಿಯ ಅವಕಾಶ ಎಂದು ಸ್ಥಳೀಯರು ಕಿಡಿಕಾರಿದ್ದಾರೆ.

ಸ್ವಿಮಿಂಗ್ ಪೂಲ್ ಪಕ್ಕದಲ್ಲಿಯೇ ಶವ ಸಂಸ್ಕಾರ ಮಾಡಿದ್ದಾರೆ. ಸ್ವಿಮಿಂಗ್ ಪೂಲ್ ಮಾಲೀಕರ ಸಂಬಂಧಿಕರು 6 ವರ್ಷಗಳ ಹಿಂದೆ ಸಾವನ್ನಪ್ಪಿದ್ದರು. ಈಗ ಮೂರು ದಿನಗಳ ಹಿಂದೆ ಅವರ ಪತ್ನಿ ತೀರಿಕೊಂಡಿದ್ದಾರೆ. ಈಗ ಮೃತರನ್ನು ಇಲ್ಲಿಯೇ ಪಕ್ಕದಲ್ಲಿ ಅಂತ್ಯಸಂಸ್ಕಾರ ಮಾಡುವುದಕ್ಕೆ ಮುಂದಾಗಿದ್ದಾರೆ. ಈ ಮೊದಲು ಈ ಜಾಗ ಖಾಲಿ ಇತ್ತು. ಆದರೆ ಈಗ ಮನೆಗಳಿವೆ. ಹೀಗಾಗಿ ಇಲ್ಲಿ ಅಂತ್ಯಸಂಸ್ಕಾರ ಮಾಡುವುದು ಸರಿಯಲ್ಲ. ಈ ಬಗ್ಗೆ ಪೊಲೀಸ್ ಠಾಣೆಗೆ ದೂರನ್ನು ನೀಡಿದ್ದೇವೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:

Crime News: ಆಸ್ತಿ ವಿಚಾರಕ್ಕೆ ತಾಯಿ ಮೇಲೆ ಇಟ್ಟಿಗೆಯಿಂದ ಹಲ್ಲೆ; ಬಂಧನದ ಭೀತಿಯಿಂದ ವಿಷ ಸೇವಿಸಿದ ಮಗ

ವಿವಾಹಿತ ಮಹಿಳೆಯ ಜೊತೆ ಅಕ್ರಮ ಸಂಬಂಧ ಆರೋಪ; ಬೈಕ್ನಲ್ಲಿ ತೆರಳುತ್ತಿದ್ದ ಒಂದೇ ಕುಟುಂಬದ ಮೂವರ ಮೇಲೆ ಹಲ್ಲೆ

Published On - 12:44 pm, Wed, 2 February 22