ಅಮ್ಮನ ಬದಲು ಮಗ ಕೆಲಸಕ್ಕೆ ಹಾಜರ್: ಲೋಕಾಯುಕ್ತ ದಾಳಿ ವೇಳೆ ಬಯಲು

| Updated By: ಗಂಗಾಧರ​ ಬ. ಸಾಬೋಜಿ

Updated on: Jan 10, 2025 | 6:40 PM

ಬೆಂಗಳೂರಿನ ಬಿಬಿಎಂಪಿ ಕಚೇರಿಗಳ ಮೇಲೆ ಉಪಲೋಕಾಯುಕ್ತ ವೀರಪ್ಪ ಅವರು ದಿಢೀರ್ ಪರಿಶೀಲನೆ ನಡೆಸಿದ್ದು, ಅಧಿಕಾರಿಗಳ ಗೈರುಹಾಜರಿ, ಲಂಚಕ್ಕೆ ಬೇಡಿಕೆ ಮತ್ತು ನಿಧಾನಗತಿಯ ಕೆಲಸದ ಬಗ್ಗೆ ದೂರುಗಳು ಬಂದ ಹಿನ್ನಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಕೆಲವು ಕಚೇರಿಗಳಲ್ಲಿ ಅಧಿಕಾರಿಗಳು ದೇವಸ್ಥಾನಕ್ಕೆ ಹೋಗಿದ್ದರು ಎಂದು ತಿಳಿದುಬಂದಿದೆ. ಒಬ್ಬ ಅಧಿಕಾರಿಯ ಮಗ ತಾಯಿಯ ಹೆಸರಿನಲ್ಲಿ ಕೆಲಸ ಮಾಡುತ್ತಿದ್ದದ್ದು ಕಂಡುಬಂದಿದೆ.

ಅಮ್ಮನ ಬದಲು ಮಗ ಕೆಲಸಕ್ಕೆ ಹಾಜರ್: ಲೋಕಾಯುಕ್ತ ದಾಳಿ ವೇಳೆ ಬಯಲು
ಅಮ್ಮನ ಬದಲು ಮಗ ಕೆಲಸಕ್ಕೆ ಹಾಜರ್: ಲೋಕಾಯುಕ್ತ ದಾಳಿ ವೇಳೆ ಬಯಲು
Follow us on

ಬೆಂಗಳೂರು, ಜನವರಿ 10: ಲಂಚಕ್ಕೆ ಬೇಡಿಕೆ ಹಾಗೂ ನಿಧಾನಗತಿಯ ಕೆಲಸ, ಅಧಿಕಾರಿಗಳ ಗೈರು ಬಗ್ಗೆ ದೂರು ಬಂದ ಹಿನ್ನಲೆ ಬಿಬಿಎಂಪಿ (BBMP) ಕಚೇರಿಗಳ‌ ಮೇಲೆ ಉಪಲೋಕಾಯುಕ್ತ ವೀರಪ್ಪ ದಿಢೀರ್ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ನಗರದ ಲಾಲ್​ಬಾಗ್​ ರಸ್ತೆ, ಜಯನಗರ ಸೌತ್ ಜೋನ್ ಹಾಗೂ ಸೌತೆಂಡ್ ಸರ್ಕಲ್ ಬಳಿಯ ಬಿಬಿಎಂಪಿ ಕಚೇರಿಗೆ ಭೇಟಿ ನೀಡಿ ಪರಿಶೀಲನೆ ಮಾಡಲಾಗಿದೆ.

ಬಿಬಿಎಂಪಿ ಅಧಿಕಾರಿಗಳಿಗೆ ಚಳಿ ಬಿಡಿಸಿದ ಉಪಲೋಕಾಯುಕ್ತ

ಈ ವೇಳೆ ಬಿಬಿಎಂಪಿ ಅಧಿಕಾರಿಗಳಿಗೆ ಉಪಲೋಕಾಯುಕ್ತ ನ್ಯಾ.ವೀರಪ್ಪ ಚಳಿ ಬಿಡಿಸಿದ್ದಾರೆ. ಲಾಲ್​ಬಾಗ್ ರಸ್ತೆಯ ಕಚೇರಿ ಭೇಟಿ ವೇಳೆ ಅಧಿಕಾರಿಗಳೇ ಇರಲಿಲ್ಲ. ಅಧಿಕಾರಿಗಳೆಲ್ಲಾ ದೇವಸ್ಥಾನಕ್ಕೆ ಹೋಗಿದ್ದಾರೆ ಎಂದು ಅಸಿಸ್ಟೆಂಟ್​​ಗಳು ಹೇಳಿದ್ದಾರೆ. ವೈಕುಂಠ ಏಕಾದಶಿ ಮಾಡಲು ದೇವಸ್ಥಾನಕ್ಕೆ ಹೋದರೆ ಇಲ್ಲಿ ಯಾರು ಕೆಲಸ ಮಾಡುತ್ತಾರೆ ಎಂದು ಬಿಬಿಎಂಪಿ ಅಧಿಕಾರಿಗಳ ಮೇಲೆ ಉಪಲೋಕಾಯುಕ್ತರು ಗರಂ ಆಗಿದ್ದಾರೆ.

ಇದನ್ನೂ ಓದಿ: ಬೋರ್​ವೆಲ್ ಅಕ್ರಮ ಆರೋಪ: ಬಿಬಿಎಂಪಿ 43 ಮಾಜಿ ಕಾರ್ಪೊರೇಟರ್​ಗಳ ಮೇಲೆ ಇಡಿ ಕಣ್ಣು

ಜಯನಗರ ಸೌತ್ ವಲಯದ ಬಿಬಿಎಂಪಿ ಕಚೇರಿಯಲ್ಲಿ ಡೆಮಾಲಿಷನ್ ಆರ್ಡರ್ ಪಟ್ಟಿ ನೀಡುವಂತೆ ಉಪ ಲೋಕಾಯುಕ್ತರು ಕೇಳಿದ್ದು, ಇದಕ್ಕೆ ಅಧಿಕಾರಿಗಳು ಮಾಹಿತಿ ನೀಡಿಲ್ಲ. ಏನು ಮಾಡುತ್ತಿದ್ದೀರಿ ಸರ್ಕಾರಿ ಕಚೇರಿಯಲ್ಲಿ ಎಂದು ಪ್ರಶ್ನೆ ಮಾಡಿದ್ದಾರೆ. ಎಕ್ಸಿಕ್ಯೂಟಿವ್ ಇಂಜಿನಿಯರ್ ಅನುಷಾರನ್ನು ತರಾಟೆಗೆ ತಗೆದುಕೊಳ್ಳಲಾಗಿದೆ. ಕಚೇರಿಯಲ್ಲಿ ಫೋನ್, ಕಾರು ಚೆಕ್ಕಿಂಗ್ ಮಾಡಲಾಗಿದೆ.

ಇನ್ನು ಸೌತ್ ಆ್ಯಂಡ್ ಸರ್ಕಲ್ ಬಿಬಿಎಂಪಿ ಕಚೇರಿಯಲ್ಲಿ ರಿಜಿಸ್ಟರ್ ಬುಕ್ ಪರಿಶೀಲನೆ ಮಾಡಿದ್ದು, ಈ ವೇಳೆ ನಿತ್ಯ ಹಾಜರಾತಿ ಹಾಕದೆ ಇರುವುದು ಬೆಳಕಿಗೆ ಬಂದಿದೆ. ಹಾಜರಾತಿ ಬುಕ್ ಯಾಕೆ ಮೆಂಟೇನ್ ಮಾಡುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ. ಅಧಿಕಾರಿಗಳೆಲ್ಲಾ ಎಲ್ಲೋಗಿದ್ದಾರೆ. ಐದು ಗಂಟೆ ಆದರೂ ಸರ್ವೆ ಆಫೀಸರ್ ಕಚೇರಿಗೆ ಯಾಕೆ ಬಂದಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.

ಅಮ್ಮನ ಬದಲು ಮಗ ಕೆಲಸಕ್ಕೆ ಹಾಜರ್

ಸೌತ್ ಆ್ಯಂಡ್​​ ಸರ್ಕಲ್ ಬಿಬಿಎಂಪಿ ಕಚೇರಿಯಲ್ಲಿ ಅಮ್ಮನ ಬದಲು ಮಗ ಹಾಜರಾಗಿದ್ದಾರೆ. ಕೇಸ್ ವರ್ಕರ್ ಕವಿತಾ ಬದಲು ಮಗ ನವೀನ್ ಹಾಜರಾಗಿದ್ದಾರೆ. ಮಗನ ಜೊತೆ ಸಹಾಯಕ್ಕೆ ನಿಯಮ ಮೀರಿ ಗೀತಾ ಎಂಬ ಸಹಾಯಕಿಯನ್ನು ಕವಿತಾ ನೇಮಿಸಿದ್ದಾರೆ. ಕಚೇರಿಯಲ್ಲಿ ನಿವು ಯಾರು ಅಂತ ಪ್ರಶ್ನೆ ಮಾಡಿದಾಗ ಅಸಲಿ ವಿಚಾರ ಬಯಲಾಗಿದೆ.

ಅಮ್ಮ ಎಲ್ಲಿ ಅಂತ ಕೇಳಿದಾಗ ಮನೆಯಲ್ಲಿ ಅಡುಗೆ ಮಾಡುತ್ತಿದ್ದಾರೆ ಎಂದು ಮಗ ಹೇಳಿದ್ದಾನೆ. ನೇರವಾಗಿ ಕವಿತಾಗೆ ಕರೆ ಮಾಡಿಸಿದ ನ್ಯಾ.ವೀರಪ್ಪ, ಈ ವೇಳೆ ತಿಥಿ ಕಾರ್ಯಕ್ರಮದಲ್ಲಿ ಇದ್ದೇನೆ ಎಂದಿದ್ದಾರೆ. ಅಮ್ಮನ ಬದಲು ನಾನು ಜನರಿಗೆ ಸಹಾಯ ಮಾಡಲು ಬಂದಿದ್ದೇನೆ. ಈ ವೇಳೆ ನವೀನ್​ಗೆ ನ್ಯಾ.ವೀರಪ್ಪ ತರಾಟೆ ತೆಗೆದುಕೊಂಡಿದ್ದಾರೆ.

ತಪ್ಪಿತಸ್ಥ ಅಧಿಕಾರಿಗಳ ವಿರುದ್ದ ಸುಮೊಟೊ ಕೇಸ್: ಉಪ ಲೋಕಾಯುಕ್ತ ವೀರಪ್ಪ

ಪರಿಶೀಲನೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಉಪ ಲೋಕಾಯುಕ್ತ ವೀರಪ್ಪ, ಬಿಬಿಎಂಪಿ ಬಗ್ಗೆ ಹಲವು ದೂರುಗಳು ಬಂದಿದ್ದವು. ಬೆಂಗಳೂರಿನಾದ್ಯಂತ 60 ಬಿಬಿಎಂಪಿ ಆಫೀಸ್​ಗಳಲ್ಲಿ ಭೇಟಿ ನೀಡಿ ಪರಿಶೀಲನೆ ಮಾಡಿದ್ದೇವೆ. ಬಹುತೇಕ ಬಿಬಿಎಂಪಿ ಆಫೀಸ್​ಗಳಲ್ಲಿ ಅಧಿಕಾರಿಗಳೇ ಇಲ್ಲ. ಎಲ್ಲೋದ್ರು ಅಂತಾ ಕೇಳಿದರೆ, ಇವತ್ತು ವೈಕುಂಠ ಏಕಾದಶಿ ಪೂಜೆಗೆ ಹೋಗಿದ್ದಾರಂತೆ. ರಿಜಿಸ್ಟರ್ ಬುಕ್​ನಲ್ಲಿ ಎಂಟ್ರಿ ಇಲ್ಲ, ಯಾರು ಯಾವಾಗ ಬೇಕಾದರೂ ಬರಬಹುದು, ಯಾವಾಗ ಬೇಕಾದರೂ ಹೋಗಬಹುದು.

ಇದನ್ನೂ ಓದಿ: ಕಂದಾಯ ಇಲಾಖೆ ಬಿತ್ತಿ ಪತ್ರದಲ್ಲಿ ಹಸ್ತದ ಚಿಹ್ನೆ: ಜೆಡಿಎಸ್ ಶಾಸಕ ಆಕ್ಷೇಪ..!

ಏನೇ ಕೇಳಿದರೂ., ಫುಲ್ ಸೈಲೆಂಟ್ ಆಗಿ ನಿಲ್ಲುತ್ತಾರೆ. ಶಾಕಿಂಗ್ ವಿಚಾರ ಅಂದರೆ ಅಮ್ಮನ ಬದಲಿಗೆ ಮಗ ಕೆಲಸಕ್ಕೆ ಬಂದಿದ್ದಾನೆ. ಎಆರ್​ಓ ಸುಜಾತ ಎನ್ನುವವರು ಮೂರುವರೆಗೆ ಆಫೀಸ್​ಗೆ ಬಂದಿದ್ದಾರೆ. ಬಿಬಿಎಂಪಿ ಆಫೀಸ್​ಗಳಿಗೆ ಅಪ್ಪ, ಅಮ್ಮ ಯಾರು ಇಲ್ಲ. ಯಾರು ಬೇಕಾದರೂ ಬರಬಹುದು, ಯಾರಬೇಕಾದರೂ ಹೋಗಬಹುದು. ಬಿಬಿಎಂಪಿ ಆಫೀಸ್​​ನ ಸ್ವಂತ ಆಸ್ತಿ ಮಾಡಿಕೊಂಡಿದ್ದಾರೆ. ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್​ನ ಕರೆಸಿ‌ ಮಾಹಿತಿ ಪಡೆಯುತ್ತೇವೆ. ತಪ್ಪಿತಸ್ಥ ಅಧಿಕಾರಿಗಳ ವಿರುದ್ದ ಸುಮೊಟೊ ಕೇಸ್ ದಾಖಲಿಸುತ್ತೇವೆ ಎಂದು ಹೇಳಿದ್ದಾರೆ.

ವರದಿ: ಪ್ರದೀಪ್​ ಕ್ರೈಂ 

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.