ಬೆಂಗಳೂರು, ಡಿ.02: ಬಾಂಬ್ ಈ ಹೆಸರು ಕೇಳಿದ್ರೆ ಸಾಕು ನಿಂತಲ್ಲೆ ನಡುಗಿ ಹೋಗ್ತೀವಿ. ಅಂತದ್ರಲ್ಲಿ ಪುಟ್ಟ ಪುಟ್ಟ ಮಕ್ಕಳು ಓದ್ತಿರೊ ಶಾಲೆಗಳಿಗೆ ಬಾಂಬ್ ಬೆದರಿಕೆ ಬಂದ್ರೆ ಮಕ್ಕಳು ಹಾಗೂ ಪೋಷಕರ ಸ್ಥಿತಿ ಹೇಗಿರ್ಬೇಡ ಹೇಳಿ (Bomb Threat). ಬೆಂಗಳೂರು ನಗರ ಮತ್ತು ಗ್ರಾಮಾಂರರ ಜಿಲ್ಲೆಯ ಸುಮಾರು 60 ಶಾಲೆಗಳಿಗೆ ಬಾಂಬ್ ಬೆದರಿಕೆ ಇ-ಮೇಲ್ ಬಂದಿದ್ದು ಸಿಟಿ ಜನ ಬೆಚ್ಚಿ ಬೀಳುವಂತೆ ಮಾಡಿದೆ. ತೆರೆಮರೆಯಲ್ಲಿ ಕುಳಿತು ಮೇಲ್ ಕಳುಹಿಸಿರುವ ಆಸಾಮಿ ಕಣ್ಣಾ ಮುಚ್ಚಾಲೆ ಆಟ ಆಡ್ತಿದ್ದಾನೆ. ಇಂತಹ ಬೆದರಿಕೆ ಇದೇ ಮೊದಲಲ್ಲ. ಕಳೆದ ಕೆಲ ತಿಂಗಳಿಂದ ಬೆಂಗಳೂರಿನಲ್ಲಿ ಹಲವು ಹುಸಿ ಬಾಂಬ್ ಬೆದರಿಕೆ ಕರೆ ಮತ್ತು ಇ-ಮೇಲ್ ಗಳು ಬಂದಿವೆ. ಕಳೆದ ಕೆಲ ದಿನಗಳಿಂದ ಬಂದ ಹುಸಿ ಬಾಂಬ್ ಬೆದರಿಕೆ ಪ್ರಕರಣ ಮಾಹಿತಿ ಇಲ್ಲಿದೆ.
2023ರ ಜನವರಿಯಲ್ಲಿ ಸಿಟಿ ಸಿವಿಲ್ ಕೋರ್ಟ್ ಗೆ ಬಾಂಬ್ ಇಟ್ಟಿರೋದಾಗಿ ವ್ಯಕ್ತಿ 112 ಗೆ ಕರೆ ಮಾಡಿ ಹೇಳಿದ್ದ. ಆದರೆ ಇದೊಂದು ಹುಸಿ ಬಾಂಬ್ ಕರೆ ಅನ್ನೋದು ಗೊತ್ತಾಗಿತ್ತು. ಆರೋಪಿ ಸುನೀಲ್ ಬಂಧಿಸಿ ವಿಚಾರಣೆ ನಡೆಸಿದಾಗ ಆತ ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣದ ಆರೋಪಿಯಾಗಿದ್ದು ಕೋರ್ಟ್ ಗೆ ಅಲೆದು ಸುಸ್ತಾಗಿದ್ದ. ಹಾಗಾಗಿ ಹುಸಿ ಬಾಂಬ್ ಕರೆ ಮಾಡಿದ್ದಾಗಿ ವಿಚಾರಣೆ ವೇಳೆ ಗೊತ್ತಾಗಿತ್ತು.
2023ರ ಜನವರಿ 6 ರಂದು ಖಾಸಗಿ ಶಾಲೆಗಳಿಗೆ ಇ-ಮೇಲ್ ಮಾಡಿದ್ದ ಆರೋಪಿಗಳು 4 ಜಿಲೆಟಿನ್ ಕಡ್ಡಿ ಇಟ್ಟೋರೋದಾಗಿ ಉಲ್ಲೇಖಿಸಿದ್ರು. ತನಿಖೆ ನಡೆಸಿದ ಪೊಲೀಸರು ಅಪ್ರಾಪ್ತ ವಿದ್ಯಾರ್ಥಿಯೊಬ್ಬನ ಕೃತ್ಯ ಅನ್ನೋದು ಗೊತ್ತಾಗಿತ್ತು.
ಜೂನ್ 13 ರಂದು ಬೆಳ್ಳಂದೂರಿನ ಇಕೋಸ್ಪೇಸ್ ನಲ್ಲಿರುವ ಐಬಿಡಿಓ ಕಂಪನಿಗೆ ನವನೀತ್ ಎಂಬಾತ ಬಾಂಬ್ ಇಟ್ಟಿರೋದಾಗಿ ಬೆದರಿಕೆ ಕರೆ ಮಾಡಿದ್ದ. ತನಿಖೆ ನಡಿಸಿದ ಬೆಳ್ಳಂದೂರು ಪೊಲೀಸರು ಆರೋಪಿ ಬಂಧಿಸಿ ವಿಚಾರಣೆ ನಡೆಸಿದ್ರು. ಈ ವೇಳೆ ಟೀಂ ಲೀಡರ್ ಜೊತೆಗೆ ಜಗಳ ಮಾಡಿಕೊಂಡಿದ್ದ ನವನೀತ್ ಹುಸಿ ಬಾಂಬ್ ಕರೆ ಮಾಡಿರೋದಾಗಿ ಗೊತ್ತಾಗಿತ್ತು.
ಇದನ್ನೂ ಓದಿ: ಬೆಂಗಳೂರು ಶಾಲೆಗಳಿಗೆ ಬಾಂಬ್ ಬೆದರಿಕೆ ಪ್ರಕರಣ: 48 ಎಫ್ಐಆರ್ ದಾಖಲು
2023 ರ ಜುಲೈ ನಲ್ಲಿ ರಾತ್ರಿ 112 ಗೆ ಕರೆ ಮಾಡಿದ್ದ ಆರೋಪಿ ಮಸೀದಿಗೆ ಬಾಂಬ್ ಇಟ್ಟಿರೋದಾಗಿ ಕರೆ ಮಾಡಿದ್ದ.ಪೊಲೀಸರು ಭೇಟಿ ನೀಡಿ ಮಸೀದಿ ಪರಿಶೀಲನೆ ನಡೆಸಿದ್ರು. ಆದ್ರೆ ಯಾವುದೇ ಸ್ಫೋಟಕ ವಸ್ತು ಕಂಡು ಬಂದಿರಲಿಲ್ಲ. ಶಿವಾಜಿನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ಮಾಡೆಸಿದಾಗ ಅಸಲಿಯತ್ತು ಗೊತ್ತಾಗಿತ್ತು. ಕ್ಷುಲ್ಲಕ ಕಾರಣಕ್ಕೆ ಆತ ಕರೆ ಮಾಡಿದ್ದು ಗೊತ್ತಾಗಿತ್ತು. ಮದರಸ ಹೆಸರಲ್ಲಿ ಪತ್ರ ತಂದಿದ್ದ ಆರೋಪಿ ಅದನ್ನ ತೋರಿಸಿ ಹಣ ತೆಗೆದುಕೊಳ್ತಿದ್ದ. ಮಸೀದಿಯಲ್ಲಿ ಮಲಗಲು ಜಾಗ ಕೊಡಲಿಲ್ಲ. ಹಾಗಾಗಿ ಬುದ್ಧಿ ಕಲಿಸೊ ದುರುದ್ದೇಶದಿಂದ ಕರೆ ಮಾಡಿದ್ದಾಗಿ ಗೊತ್ತಾಗಿದೆ.
2023ರ ಆಗಸ್ಟ್ ನಲ್ಲಿ ಪ್ರತಿಷ್ಠಿತ ಹೋಟೆಲ್ ಟಾರ್ಗೆಟ್ ಮಾಡಿದ್ದ ದುಷ್ಕರ್ಮಿಗಳು, ಶಾಂಗ್ರೀಲಾ ಹೋಟೆಲ್ ಗೆ ಬಾಂಬ್ ಬೆದರಿಕೆ ಮೇಲ್ ಮಾಡಿದ್ರು. luisamaclare@proton.me ಎಂಬ ಮೇಲ್ ಐ.ಡಿ ಮೂಲಕ ಬಾಂಬ್ ಬೆದರಿಕೆ ಹಾಕಿದ್ರು. ಅನಾಮಿಕ ವ್ಯಕ್ತಿಗಳು ಇ ಮೇಲ್ ಮಾಡಿದ್ದು 1000 ಯೂರೋ ಗಳನ್ನು ಹಾಕಬೇಕು. ಇಲ್ಲವಾದಲ್ಲಿ ನಿಮಗೆ ಸಂಬಂಧಿಸಿದ ಜಾಗದಲ್ಲಿ ಬಾಂಬ್ ಬ್ಲಾಸ್ಟ್ ಮಾಡಲಾಗುವುದು ಎಂದು ಇಂಗ್ಲಿಷ್ ಮತ್ತು ಚೈನಿಸ್ ಸೇರಿದಂತೆ ಒಟ್ಟು 2 ಭಾಷೆಯಲ್ಲಿ ಮೇಲ್ ಹಾಕಲಾಗಿತ್ತು. ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಇದುವರೆಗೂ ಆರೋಪಿ ಪತ್ತೆಯಾಗಿಲ್ಲ.
ಇನ್ನು ನಿನ್ನೆ 60 ಶಾಲೆಗಳಿಗೆ ಬಾಂಬ್ ಬೆದರಿಕೆ ಇ ಮೇಲ್ ಬಂದಿದ್ದು ಬೀಬಲ್ ಡಾಟ್ ಕಾಮ್ ಮೂಲಕ ಕೃತ್ಯ ನಡೆಸಿರೋದು ಗೊತ್ತಾಗಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ನಗರ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ