ಬೆಂಗಳೂರು ಶಾಲೆಗಳಿಗೆ ಬಾಂಬ್ ಬೆದರಿಕೆ ಪ್ರಕರಣ: 48 ಎಫ್ಐಆರ್ ದಾಖಲು
ಬೆಂಗಳೂರಿನ ಹಲವು ಖಾಸಗಿ ಶಾಲೆಗಳಿಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಸಂದೇಶ ರವಾನಿಸಲಾಗಿತ್ತು. 48 ಶಾಲೆಗಳಿಗೆ ಕಳುಹಿಸಿದ ಇಮೇಲ್ನಲ್ಲಿ ಉಗ್ರವಾದ ಪದ ಬಳಿಕೆ ಮಾಡಲಾಗಿದ್ದು, ಪೊಲೀಸ್ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಿದೆ. ಅಲ್ಲದೆ, ಒಟ್ಟು 48 ಎಫ್ಐಆರ್ಗಳನ್ನು ದಾಖಲಿಸಿದ್ದಾರೆ.
ಬೆಂಗಳೂರು, ಡಿ.2: ನಗರದ (Bengaluru) ಹಲವು ಶಾಲೆಗಳಿಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ (Bomb Threat) ಹಾಕಿದ ಪ್ರಕರಣ ಸಂಬಂಧ 48 ಎಫ್ಐಆರ್ಗಳು ದಾಖಲಾಗಿವೆ. ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಅವರ ಸೂಚನೆಯಂತೆ ಆಯಾ ಠಾಣಾ ವ್ಯಾಪ್ತಿಯಲ್ಲಿ ಎಫ್ಐಆರ್ಗಳು ದಾಖಲಾಗಿವೆ. ಈ ಎಲ್ಲಾ ಎಫ್ಐಆರ್ಗಳನ್ನು ಕ್ರೂಡೀಕರಿಸಿ ಪೊಲೀಸರು ತನಿಖೆ ನಡೆಸಲಿದ್ದಾರೆ.
ರೈಲ್ವೇ ನಿಲ್ದಾಣ, ವಿಮಾನ ನಿಲ್ದಾಣ, ಬಸ್ ನಿಲ್ದಾಣಗಳಿಗೆ ಬಾಂಬ್ ಬೆದರಿಕೆಗಳು ಅಗ್ಗಾಗೆ ಬರುತ್ತಿರುತ್ತವೆ. ಆದರೆ, ನಿನ್ನೆ ಬೆಂಗಳೂರಿನ 48 ಶಾಲೆಗಳಿಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಸಂದೇಶ ರವಾನೆ ಮಾಡಲಾಗಿತ್ತು. ಈ ಬೆದರಿಕೆಯಲ್ಲಿ ಉಗ್ರವಾದ ಪದಗಳ ಉಲ್ಲೇಖವಾಗಿದ್ದರಿಂದ ಆತಂಕಕ್ಕೆ ಕಾರಣವಾಗಿದೆ.
ಇದನ್ನೂ ಓದಿ: ಬೆಂಗಳೂರು ಮಾತ್ರವಲ್ಲದೆ, ವಿದೇಶಗಳಲ್ಲೂ ಶಾಲೆಗಳಿಗೆ ಬಂದಿದ್ದ ಬಾಂಬ್ ಬೆದರಿಕೆ ಸಂದೇಶ
ಮೊದಲು 15 ಶಾಲೆಗಳಿಗೆ ಬೆದರಿಕೆ ಇಮೇಲ್ ಬಂದಿದೆ. ಬಳಿಕ ಇನ್ನುಳಿದ ಆಡಳಿತ ಮಂಡಳಿಗಳು ತಮ್ಮ ತಮ್ಮ ಶಾಲೆಯ ಇಮೇಲ್ ಪರಿಶೀಲನೆ ಮಾಡಿದ ಬಳಿಕ 48 ಶಾಲೆಗಳಿಗೆ ಅಂತಹದ್ದೇ ಬೆದರಿಕೆ ಸಂದೇಶಗಳು ಬಂದಿರುವುದು ತಿಳಿದುಬಂದಿದೆ. ಬನ್ನೇರುಘಟ್ಟದ 7 ಶಾಲೆಗಳಿಗೆ, ಹೆಬ್ಬಗೋಡಿಯ 4, ಸರ್ಜಾಪುರದ 5, ಜಿಗಣಿಯ 2 ಶಾಲೆಗಳಿಗೆ ಬೆದರಿಕೆ ಸಂದೇಶಗಳು ಬಂದಿದ್ದವು.
ಬೆಂಗಳೂರಿನ ದಕ್ಷಿಣ ವಲಯ-1 ರಲ್ಲಿ 15 ಶಾಲೆಗಳಿಗೆ, ದಕ್ಷಿಣ ವಲಯ 2ರಲ್ಲಿ 3, ವಲಯ 3ರಲ್ಲಿ 10 ಹಾಗೂ ವಲಯ 4ರಲ್ಲಿ 4 ಶಾಲೆಗಳಿಗೆ ಬೆದರಿಕೆ ಸಂದೇಶಗಳು ಬಂದಿದ್ದವು. ಉತ್ತರ ವಲಯಗಳಲ್ಲಿ ಒಟ್ಟು 7 ಶಾಲೆಗಳಿಗೆ ಹಾಗೂ ಅನೇಕಲ್ ತಾಲೂಕಿನ 5 ಶಾಲೆಗಳಿಗೂ ಇಂತಹದ್ದೇ ಇಮೇಲ್ ಬಂದಿದ್ದವು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ