
ಬೆಂಗಳೂರು, ಜನವರಿ 23: ಮ್ಯಾಟ್ರಿಮೋನಿಯಲ್ಲಿ ಮದುವೆ ಆಗುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ಮೋಸ ಮಾಡಿದ್ದಾನೆ ಎಂದು ಯುವತಿಯೊಬ್ಬರು ನೀಡಿದ ದೂರಿನ ಅನ್ವಯ ಕೆಲವು ದಿನಗಳ ಹಿಂದೆ ಬೆಂಗಳೂರಿನ (Bangalore) ಕಾಡುಗೋಡಿ ಠಾಣೆಯಲ್ಲಿ ವಿಜಯ್ ರಾಜ್ ಗೌಡ ಎಂಬಾತ ಸೇರಿ ಆತನ ಇಡೀ ಕುಟುಂಬದ ವಿರುದ್ಧ ಕೇಸ್ ದಾಖಲಾಗಿತ್ತು. ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಈ ಆಸಾಮಿ ಮ್ಯಾಟ್ರಿಮೋನಿಯಲ್ಲಿ ಮೋಸ ಮಾಡಿರುವುದು ಇದೇ ಮೊದಲಲ್ಲ ಎಂಬುದು ಗೊತ್ತಾಗಿದೆ. ಕಳೆದ ಏಳೆಂಟು ವರ್ಷಗಳಿಂದ 2019 ರಿಂದಲೂ 2026 ರ ವರೆಗೆ ಹಲವಾರು ಯುವತಿಯರಿಗೆ ಮೋಸ ಮಾಡಿದ್ದು, ಕಂಡು ಬಂದಿದೆ.
2019 ರಲ್ಲಿ ಕುಣಿಗಲ್ನಲ್ಲಿ, 2022 ರಲ್ಲಿ ಅತ್ತಿಬೆಲೆಯಲ್ಲಿ 2023 ರಲ್ಲಿ ಶಿವಮೊಗ್ಗ, 2025 ರಲ್ಲಿ ಬೆಂಗಳೂರು, 2026 ರಲ್ಲಿ ಕಾಡುಗೋಡಿ ಠಾಣೆಯಲ್ಲಿ ಕೇಸ್ ದಾಖಲಾಗಿವೆ. ಮ್ಯಾಟ್ರಿಮೋನಿಯಲ್ಲಿ ಪರಿಚಯ ಆದ ನಂತರ, ‘ನಾನು ದೊಡ್ಡ ಉದ್ಯಮಿ, ಇಡಿಯಲ್ಲಿ ಕೇಸ್ ಒಂದರ ಸಂಬಂದ ಹಣ ಪ್ರೀಜ್ ಆಗಿದೆ. ಅದನ್ನು ರಿಲೀಸ್ ಮಾಡಿಸಲು ಹಣ ಬೇಕು’ ಎಂದು ಹೇಳುತ್ತಿದ್ದ. ಅಲ್ಲದೆ, ಲಕ್ಷ ಲಕ್ಷ ಹಣ ಬ್ಯಾಂಕ್ನಲ್ಲಿ ಪ್ರೀಜ್ ಆಗಿರುವುದಕ್ಕೆ ಬೇಕಾದ ನಕಲಿ ದಾಖಲೆಗಳನ್ನು, ಕೋರ್ಟ್ ಪ್ರತಿಗಳನ್ನು ತೋರಿಸಿ ಹಣ ಪಡೆದುಕೊಂಡು ನಂತರ ಪೋನ್ ಸ್ವಿಚ್ ಆಫ್ ಮಾಡಿಕೊಂಡು ಪರಾರಿಯಾಗುತ್ತಿದ್ದ.
ಹೀಗೆ ಒಬ್ಬೊಬರಿಂದ 10 ಲಕ್ಷ, 30 ಲಕ್ಷ, 13 ಲಕ್ಷ ಪಡೆದಿದ್ದಾನೆ. ಕೆಂಗೇರಿಯಲ್ಲಿ 1.53 ಕೋಟಿ ರೂ. ಹಣ ಪಡೆದುಕೊಂಡು ಹೆಂಡತಿಯನ್ನು ಅಕ್ಕ ಎಂದು ಪರಿಚಯ ಮಾಡಿಕೊಟ್ಟಿದ್ದ.
ಈ ಆರೋಪಿ ಟೆಂಡರ್ ಕೊಡಿಸುವ ಡೀಲ್ನಲ್ಲಿ ಕುಣಿಗಲ್ನಲ್ಲಿ ಮಾಜಿ ಸಂಸದ ಡಿಕೆ ಸುರೇಶ್ ಹೆಸರನ್ನು ದುರ್ಬಳಕೆ ಮಾಡಿಕೊಂಡಿರುವ ಆರೋಪವೂ ಇದೆ. ಡಿಕೆ ಸುರೇಶ್ ನನಗೆ ಆಪ್ತರು ಎಂದು ಹೇಳಿಕೊಂಡು ಟೆಂಡರ್ ಕೊಡಿಸುವುದಾಗಿ ನಂಬಿಸಿದ್ದ. ಟಾಟಾ ಪವರ್ ಡಿಡಿಎಲ್ ಕಂಪನಿಗೆ ವಾಹನದ ಗುತ್ತಿಗೆ ಕೊಡಿಸುವುದಾಗಿ ಕೂಡ ಹೇಳಿದ್ದ. 2019 ರಲ್ಲಿ ಕುಣಿಗಲ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಪ್ರಾಜೆಕ್ಟ್ ಕೊಡಿಸುವುದಕ್ಕೆ ನಕಲಿ ಸಹಿ ಸೀಲ್ ರೆಡಿ ಉಪಯೋಗಿಸಿಕೊಂಡು ವಂಚನೆ ಮಾಡಿದ್ದ.
ಆನೇಕಲ್ನಲ್ಲಿ ಸಿಮೆಂಟ್ ಫ್ಯಾಕ್ಟರಿಯನ್ನು ಮಾರಾಟ ಮಾಡಿ ಹಣ ಪಾವಸ್ ಕೊಡುತ್ತೇನೆ ಎಂದು ನಂಬಿಸಿ ಯುವತಿಗೆ ಮೋಸ ಮಾಡಿದ್ದ. ಆರೋಪಿ ವಿರುದ್ಧ ಶಿವಮೊಗ್ಗ, ಆನೇಕಲ್, ಅತ್ತಿಬೆಲೆ, ಬೆಂಗಳೂರು ಉತ್ತರ ವಿಭಾಗದ ಸೆನ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಹೀಗೆ ಕಳೆದ ಕೆಲವು ವರ್ಷಗಳಿಂದ ಮೋಸ, ವಂಚನೆ ಮಾಡಿಕೊಂಡು ಜೀವನ ನಡೆಸುತ್ತಿರುವ ಆರೋಪಿ ಈಗ ಲಾಕ್ ಆಗಿದ್ದಾನೆ.
ಇದನ್ನೂ ಓದಿ: ಪತ್ನಿಯನ್ನೇ ಅಕ್ಕ ಎಂದು ಪರಿಚಯಿಸಿ ಮತ್ತೊಬ್ಬಳಿಗೆ ಗಾಳ! ಬರೋಬ್ಬರಿ 1.53 ಕೋಟಿ ರೂ. ವಂಚನೆ
ಒಟ್ಟಿನಲ್ಲಿ ತಂದೆಯನ್ನು ನಿವೃತ್ತ ತಹಶೀಲ್ದಾರ್, ಹೆಂಡತಿಯನ್ನು ಅಕ್ಕ, ತಾಯಿಯನ್ನು ಪ್ರೊಫೆಸರ್ ಎಂದು ಹೇಳಿಕೊಂಡಿದ್ದ ವಂಚಕನ ಕುಟುಂಬ ಇವನಿಗೆ ಸಾಥ್ ಕೊಟ್ಟಿರುವುದು ಮಾತ್ರ ದುರಂತ. ಆರೋಪಿ ವಿರುದ್ದ ಮತ್ತಷ್ಟು ಪ್ರಕರಣಗಳು ದಾಖಲಾಗುವ ಸಾಧ್ಯತೆಗಳಿದ್ದು, ವಂಚನೆಗೊಳಾಗದವರು ದೂರು ನೀಡುವಂತೆ ಪೊಲೀಸರು ಮನವಿ ಮಾಡಿದ್ದಾರೆ.