ಪ್ರತ್ಯೇಕ ಲಿಂಗಾಯತ ಧರ್ಮ‌ ವಿಚಾರ; ಕಾಂಗ್ರೆಸ್​ ನಾಯಕ ಎಂ.ಬಿ.ಪಾಟೀಲ್ ಸುದ್ದಿಗೋಷ್ಠಿ

ಹಿಂದೆ 99 ಉಪಪಂಗಡ ಸೇರಿಸಿ, ವೀರಶೈವರನ್ನು ಸೇರಿಸಿ, ಧರ್ಮದ ಮಾನ್ಯತೆಯನ್ನು ಕೇಳಿದ್ದೆವು. ಇಂದು ಎಲ್ಲರೂ ಒಗ್ಗಟ್ಟಿನಿಂದ ಹೋಗುತ್ತಿದ್ದೇವೆ. ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ. ಈಗ ಯಾವುದೇ ಭಿನ್ನಾಭಿಪ್ರಾಯದ ಕೂಗು ಇಲ್ಲ.

ಪ್ರತ್ಯೇಕ ಲಿಂಗಾಯತ ಧರ್ಮ‌ ವಿಚಾರ; ಕಾಂಗ್ರೆಸ್​ ನಾಯಕ ಎಂ.ಬಿ.ಪಾಟೀಲ್ ಸುದ್ದಿಗೋಷ್ಠಿ
ಮಾಜಿ ಸಚಿವ ಎಂ.ಬಿ.ಪಾಟೀಲ್ (ಫೈಲ್ ಚಿತ್ರ)
Follow us
TV9 Web
| Updated By: Skanda

Updated on:Sep 03, 2021 | 11:44 AM

ಪ್ರತ್ಯೇಕ ಲಿಂಗಾಯತ ಧರ್ಮ‌ ವಿಚಾರ ಬೆಂಗಳೂರಿನ ಮನೆಯಲ್ಲಿ ಮಾಜಿ ಸಚಿವ, ಕಾಂಗ್ರೆಸ್ ನಾಯಕ ಎಂ.ಬಿ.ಪಾಟೀಲ್ ಸುದ್ದಿಗೋಷ್ಠಿ ನಡೆಸಿದ್ದು, ಈ ಹಿಂದೆ 99 ಉಪಪಂಗಡ ಸೇರಿಸಿ, ವೀರಶೈವರನ್ನು ಸೇರಿಸಿ, ಧರ್ಮದ ಮಾನ್ಯತೆಯನ್ನು ಕೇಳಿದ್ದೆವು. ಇಂದು ಎಲ್ಲರೂ ಒಗ್ಗಟ್ಟಿನಿಂದ ಹೋಗುತ್ತಿದ್ದೇವೆ. ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ. ಈಗ ಯಾವುದೇ ಭಿನ್ನಾಭಿಪ್ರಾಯದ ಕೂಗು ಇಲ್ಲ. ಆದರೆ, ಏನು ಸಮಸ್ಯೆಯಾಗುತ್ತಿದೆ ಎಂದು ತಿಳಿಯುತ್ತಿಲ್ಲ ಎನ್ನುವುದಾಗಿ ವಿವರಿಸಿದ್ದಾರೆ.

ಎಲ್ಲರೂ ಸೇರಿ ಸಮಾಜಕ್ಕೆ ಒಳ್ಳೆಯದು ಮಾಡುವ ಉದ್ದೇಶ ಇದೆ. ಅದರ ಹೊರತಾಗಿ ಕೂಗು, ಹೋರಾಟ, ಪ್ರತ್ಯೇಕ ಎಂದು ಎಲ್ಲೂ ಹೇಳಿಲ್ಲ. ಅಲ್ಪಸಂಖ್ಯಾತ ಮಾನ್ಯತೆ ಸಿಕ್ಕಿದರೆ ಯಾರೂ 2ಎ ಕೇಳುವ ಪರಿಸ್ಥಿತಿ ಬರುತ್ತಿರಲಿಲ್ಲ. ಈಗ ಮುಂದಿನ ನಡೆ 2023ರ ಚುನಾವಣೆ ನಂತರ ಎಂದು ನಾನು ಹೇಳಿದ್ದೇನೆ. ಚುನಾವಣೆ ನಂತರ, ಎಲ್ಲರೂ ಸೇರಿ ಮುಕ್ತವಾಗಿ ಶಾಂತ ರೀತಿಯಿಂದ ಎಲ್ಲರನ್ನೂ ಸೇರಿಸಿ ಒಮ್ಮತದ ಅಭಿಪ್ರಾಯದೊಂದಿಗೆ ಎಂದು ಹೇಳಿದ್ದೇನೆ. ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ಈಗ ಯಾವುದೇ ರೀತಿಯ ಕೂಗು, ಗೊಂದಲ ಇಲ್ಲ ಎಂದು ತಿಳಿಸಿದ್ದಾರೆ.

ಈ ವಿಚಾರದಲ್ಲಿ ಸಾಮೂಹಿಕ ನಾಯಕತ್ವದಲ್ಲಿ ಹೋಗೋಣ ಎಂದಿದ್ದೇನೆ. ಎಲ್ಲರೂ ಸೇರಿ ಯಾವ ರೀತಿ ಮುನ್ನಡೆಯಬೇಕೆಂದು ಚರ್ಚೆ ಮಾಡೋಣ, ಹೇಗೆ ಹೆಜ್ಜೆ ಹಾಕಬೇಕೆಂದು ಚರ್ಚಿಸೋಣ. ನಾನು 2ಎ ಮೀಸಲಾತಿ ಹೋರಾಟದ ಪಾದಯಾತ್ರೆಯಲ್ಲಿ ಭಾಗಿಯಾಗಿ ಬೆಂಬಲಿಸಿದ್ದೇನೆ. ಆದರೆ, ಈಗ ಮುಂದಿನ ಯಾವುದೇ ಬೆಳವಣಿಗೆ 2023ರ ಚುನಾವಣೆ ನಂತರವೇ ಇರಲಿದೆ. ಇದಕ್ಕೆ ಕಾಂಗ್ರೆಸ್​ ಪಕ್ಷ ಅಥವಾ ರಾಜಕೀಯ ಎಂಬ ಆಯಾಮ ಬೇಡ. ನಾವು ಎಲ್ಲರೂ ಒಟ್ಟಾಗಿ ಹೋಗುತ್ತೇವೆ. ಯಾವುದೇ ಅಸಮಾಧಾನ, ಗೊಂದಲ ಇಲ್ಲದೇ ಹೋಗುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.

ಸ್ವಪ್ರತಿಷ್ಠೆ ಬದಿಗಿಟ್ಟು ಹೋಗುವುದರಿಂದ ಇದರಲ್ಲಿ ಬಹಳ ಮುಕ್ತ ಮನಸ್ಸಿನ ಚರ್ಚೆ ಇರಲಿದೆ. ಇಷ್ಟಕ್ಕೂ ಈ ಹಿಂದೆಯೇ ಎಲ್ಲರನ್ನ ಸೇರಿಸಿ ಧರ್ಮದ ಬಗ್ಗೆ ಮಾತನಾಡಿದ್ದೆ. ಆದರೆ ಆಗ ವೀರಶೈವರನ್ನ ಪ್ರತ್ಯೇಕಿಸಿದರು ಅಂತ ಅಪಪ್ರಚಾರ ಮಾಡಿದರು. ಚುನಾವಣೆ ಹತ್ತಿರ ಇದ್ದಾಗ ರಾಜಕೀಯ ಬಣ್ಣ ಕೊಟ್ಟರು. ನಮ್ಮಲ್ಲೂ ಕೆಲ ಲೋಪದೋಷ ಆಯ್ತು. ಮೇಲಾಗಿ, ನಾವು ಹಿಂದೆ ಮಾಡಿದಾಗ ಸಮಯ ಕಡಿಮೆ ಇತ್ತು. ಹಾಗಾಗಿ ಇನ್ನು ಮುಂದಿನ ನಡೆಯಲ್ಲಿ ಈ ಎಲ್ಲವನ್ನೂ ಗಮನದಲ್ಲಿಟ್ಟುಕೊಳ್ಳೋಣ. ಇದರ ಬಗ್ಗೆ ಅಪಪ್ರಚಾರ ಬೇಡ. ನಮ್ಮಲ್ಲಿ ತಾತ್ವಿಕ ಭಿನ್ನಾಭಿಪ್ರಾಯ ಇದೆ. ಅದು ಒಂದೇ ದಿನದಲ್ಲಿ ಪರಿಹಾರ ಆಗುವುದಲ್ಲ. ಹೀಗಾಗಿ ಇದನ್ನು ಸರಿಪಡಿಸಿಕೊಳ್ಳಲು ನಾವು ಚುನಾವಣೆ ನಂತರ ಕೂಡಿದರೆ ಏನು ಸಮಸ್ಯೆ? ನಾವು ಕೂಡಬಾರದಾ? ಏನಾದರೂ ಸಮಸ್ಯೆ ಇದೆಯಾ? ಎಂದು ಕೇಳಿದ್ದಾರೆ.

2ಎ ಮೀಸಲಾತಿ ಹೋರಾಟದ ಪಾದಯಾತ್ರೆಯಲ್ಲಿ ಭಾಗಿಯಾಗಿ ಬೆಂಬಲಿಸಿದ್ದೇನೆ. ಆದರೆ, ಈಗ ಅಂತಹ ಯಾವುದನ್ನೂ ನಾವು ಮಾಡುವುದಿಲ್ಲ. ಚುನಾವಣೆ ಬಳಿಕ ಎಲ್ಲರನ್ನೂ ಸೇರಿಸಿ ಚರ್ಚಿಸಿ ಅಭಿಪ್ರಾಯ ಪಡೆದು ಚರ್ಚೆ ಮಾಡಲಾಗುವುದು. ನಮ್ಮ ಸಮುದಾಯದ ಮಕ್ಕಳಿಗೆ ಶಿಕ್ಷಣದಲ್ಲಿ, ಉದ್ಯೋಗದಲ್ಲಿ ಮೀಸಲಾತಿ ಸಿಗಬೇಕು. ನಮ್ಮ ಮಠ ಮಾನ್ಯಗಳಿಗೆ ನೆರವು ಸಿಗಬೇಕೆಂಬುದು ಉದ್ದೇಶ. ಅದರ ಹೊರತಾಗಿ ಪ್ರತ್ಯೇಕತೆಯ ಕೂಗು ಇಲ್ಲವೇ ಇಲ್ಲ. ಮಾನ್ಯತೆ ಸಿಗಲಿ ಎಂಬ ಅಭಿಪ್ರಾಯವಷ್ಟೇ ಎಂದು ಸ್ಪಷ್ಟನೆ ನೀಡುವ ಪ್ರಯತ್ನ ಮಾಡಿದ್ದಾರೆ.

ಕಳೆದ ಬಾರಿ ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ಹಾನಿ ಆಗಿಲ್ಲ, ಹಿಂದೆಯೂ ಕೂಡ ಇದರ ಬಗ್ಗೆ ಹೇಳಿದ್ದೆ. ನಮ್ಮ ಲಿಂಗಾಯತ ಮತಗಳು ಒಟ್ಟಾಗಿ ಇದ್ದವು. ಅದರಿಂದ ಮತಗಳು ಹೋಗಿದೆ ಎಂದು ನಾನು ಹೇಳೋದಿಲ್ಲ. ಲಿಂಗಾಯತ ವಿಚಾರಕ್ಕೆ ಸಂಬಂಧಪಟ್ಟಂತೆ ಯಡಿಯೂರಪ್ಪ ಜತೆಗೂ ಮಾತನಾಡುವೆ. ಬೇಕಾದರೆ ಅವರ ನಾಯಕತ್ವದಲ್ಲೇ ಹೋಗೋಣ. ಸಮಾಜದ ಒಳಿತಿಗೆ ಎಲ್ಲರೂ ಕೆಲಸ ಮಾಡೋಣ ಎಂದಿದ್ದಾರೆ.

ಇದನ್ನೂ ಓದಿ: ಪ್ರತ್ಯೇಕ ಲಿಂಗಾಯತ ಧರ್ಮ ಆಗಬೇಕು: ಮಾಜಿ ಸಚಿವ ಎಂ.ಬಿ.ಪಾಟೀಲ್ ಆಗ್ರಹ

Published On - 11:08 am, Fri, 3 September 21