Mekedatu Padayatra 2.0 Highlights: ಬಿಡದಿಯಲ್ಲಿ ಮೊದಲನೇ ದಿನದ ಮೇಕೆದಾಟು ಪಾದಯಾತ್ರೆ ಅಂತ್ಯ
Congress Mekedatu Padayatra Updates: ನ್ಯಾಷನಲ್ ಕಾಲೇಜು ಮೈದಾನದಲ್ಲಿ ಕಾರ್ಯಕ್ರಮಕ್ಕೆ ಬಿಬಿಎಂಪಿ ಅನುಮತಿ ನೀಡಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಈ ಕಾರ್ಯಕ್ರಮಕ್ಕೆ ಮನವಿ ಮಾಡಿದ್ದರು. ಈ ಹಿನ್ನೆಲೆ, ಕಾಂಗ್ರೆಸ್ ಬೃಹತ್ ಸಮಾವೇಶಕ್ಕೆ ಕೊವಿಡ್ ನಿಯಮ ಪಾಲಿಸುವಂತೆ ಹೇಳಿ ಷರತ್ತು ಬದ್ಧ ಅನುಮತಿ ನೀಡಲಾಗಿದೆ.
ಬೆಂಗಳೂರು: ಮೇಕೆದಾಟು ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್ ಪಾದಯಾತ್ರೆ ಇಂದಿನಿಂದ (ಫೆಬ್ರವರಿ 27) ಆರಂಭ ಆಗಿದೆ. ಮೊದಲನೇ ದಿನದ ಮೇಕೆದಾಟು ಪಾದಯಾತ್ರೆ ಬಿಡದಿಯಲ್ಲಿ ಮುಕ್ತಾಯವಾಗಿದೆ. ಜನರಿಗೋಸ್ಕರ ಈ ಪಾದಯಾತ್ರೆ ಮಾಡುತ್ತಿದ್ದೇವೆ. ಎಲ್ಲರಿಗೂ ಕೂಡ ಅಹ್ವಾನ ಮಾಡಿದ್ದೇವೆ. ಯಾರು ಬೇಕಾದರೂ ಈ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಬಹುದು. ಇತಿಹಾಸ ಪುಟಕ್ಕೆ ಸೇರುವ ಒಂದು ಅವಕಾಶ ಇದು. ನಾವು ಯಾರು ಎಷ್ಟು ದಿನ ಬದುಕಿರುತ್ತೇವೆ ಎಂಬುದು ಮುಖ್ಯವಲ್ಲ. ಬದುಕಿದ್ದಾಗ ಏನು ಮಾಡಿದ್ದೇವೆ ಎಂಬುದು ಮುಖ್ಯ ಎಂದು ನಿನ್ನೆ ಡಿ.ಕೆ. ಶಿವಕುಮಾರ್ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲು ಕರೆ ನೀಡಿದ್ದರು. ಪಾದಯಾತ್ರೆ ಹಿನ್ನೆಲೆ ಬೆಂಗಳೂರಿನಲ್ಲಿ ನಡೆಯಲಿರುವ ಕಾಂಗ್ರೆಸ್ ಬೃಹತ್ ಸಮಾವೇಶಕ್ಕೆ ಕೂಡ ಬಿಬಿಎಂಪಿಯಿಂದ ಅನುಮತಿ ನೀಡಲಾಗಿದೆ.
LIVE NEWS & UPDATES
-
ಮೇಕೆದಾಟು ಪಾದಯಾತ್ರೆ ನಡುವೆ ಕಾರ್ಯಕರ್ತರ ಡ್ಯಾನ್ಸ್
-
ಡಿಕೆ ಶಿವಕುಮಾರ್ ಇಂದು ಆದಿಚುಂಚನಗಿರಿ ಮಠದಲ್ಲಿ ವಾಸ್ತವ್ಯ
ಇಂದು ಪರಿಷತ್ ಸದಸ್ಯ ಸಿಎಂ ಲಿಂಗಪ್ಪ ಮನೆಯಲ್ಲಿ ಭೋಜನ ಮಾಡಲಿರುವ ಡಿಕೆ ಶಿವಕುಮಾರ್ ಬಳಿಕ ಆದಿಚುಂಚನಗಿರಿ ಮಠದಲ್ಲಿ ವಾಸ್ತವ್ಯ ಹೂಡಲಿದ್ದಾರೆ. ನಾಳೆ ಬೆಳಗ್ಗೆ 8 ಗಂಟೆಗೆ ಬಿಡದಿ ಸರ್ಕಲ್ನಿಂದಲೇ ಮತ್ತೆ ಪಾದಯಾತ್ರೆ ಶುರು ಆಗಲಿದೆ. ನಾಳೆ ಬಿಡದಿಯಿಂದ ಕೆಂಗೇರಿ ತನಕ ಪಾದಯಾತ್ರೆ ಸಾಗಿ ಬರಲಿದೆ.
-
ಈಶ್ವರಪ್ಪನಿಗೆ ಮೆಂಟಲ್ ಆಸ್ಪತ್ರೆಗೆ ಸೇರಿಸುವ ವ್ಯವಸ್ಥೆ ಮಾಡಬೇಕು: ಡಿಕೆಶಿ ವಾಗ್ದಾಳಿ
ಇದೇ ವೇಳೆ, ಡಿಕೆ ಶಿವಕುಮಾರ್ ಸಚಿವ ಕೆ.ಎಸ್ ಈಶ್ವರಪ್ಪಗೆ ತಿರುಗೇಟು ನೀಡಿದ್ದಾರೆ. ನಮಗೆ ಮಾಡೋದಕ್ಕೆ ಉದ್ಯೋಗ ಇಲ್ಲ. ಅವರಿಗೆ 40 ಪರ್ಸೆಂಟ್ ಹೊಡೆಯುವ ಉದ್ಯೋಗ ಇದೆ. ನಮಗೆ ಜನರ ಮಧ್ಯೆ ಹೋಗುವ ಕೆಲಸ ಇದೆ. ಈಶ್ವರಪ್ಪನಿಗೆ ಮೆಂಟಲ್ ಆಸ್ಪತ್ರೆಗೆ ಸೇರಿಸುವ ವ್ಯವಸ್ಥೆ ಮಾಡಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ.
ಜನತಾ ದಳದವರು ಜಲಧಾರೆ ಅಂತ ಮಾಡ್ತಾರಂತೆ, ನಮ್ದೇನೂ ತಕರಾರಿಲ್ಲ: ಡಿಕೆ ಶಿವಕುಮಾರ್
ಜನತಾ ದಳದವರು ಜಲಧಾರೆ ಅಂತ ಮಾಡ್ತಾರಂತೆ. ನಮ್ದೇನೂ ತಕರಾರಿಲ್ಲ. ಕುಮಾರಣ್ಣ ಮಾಡಲಿ. ಬೀದರ್ ತನಕ ಯಾತ್ರೆ ಮಾಡಲಿ. ಆದ್ರೆ ನಮ್ಮದು ಒಂದು ಪಕ್ಷದ ಹೋರಾಟವಲ್ಲ ಜನರ ಹೋರಾಟ ಎಂದು ಡಿಕೆ ಶಿವಕುಮಾರ್ ತಿಳಿಸಿದ್ದಾರೆ. ನಮ್ಮದು ಗಾಂಧಿಜೀಯವರ ತತ್ವ ಸಿದ್ದಾಂತ, ವಂಶಸ್ಥರ ಪಕ್ಷ ಇದು. ಗಾಂಧಿಯವರು ಹೇಳಿಕೊಟ್ಟ ಹೋರಾಟ ಎಂದು ತಿಳಿಸಿದ್ದಾರೆ.
ನೀರಿಲ್ಲದೇ ಬದುಕೋದಕ್ಕಾಗತ್ತಾ? ಅದಕ್ಕಾಗಿಯೇ ನಮ್ಮ ನೀರು ನಮ್ಮ ಹಕ್ಕು ಹೋರಾಟ
ನೀರಿಲ್ಲದೇ ಬದುಕೋದಕ್ಕಾಗತ್ತಾ ಇಲ್ಲ ಅದಕ್ಕಾಗಿಯೇ ನಮ್ಮ ನೀರು ನಮ್ಮ ಹಕ್ಕು ಹೋರಾಟ. ದೇವೇಗೌಡರು ರಾಜ್ಯದಲ್ಲಿ ಹೋರಾಟ ಮಾಡಿದ್ದಾರೆ ಹೆಜ್ಜೆ ಹಾಕಿದ್ದಾರೆ. ಹಿಂದೆ ಬೇಕಾದಷ್ಡು ಹೋರಾಟ ಮಾಡಿದ್ದಾರೆ. ಎಸ್.ಎಂ ಕೃಷ್ಣ ಕೂಡ ಹೆಜ್ಜೆ ಹಾಕಿದ್ರು. ಲಾಲ್ ಕೃಷ್ಣ ಅಡ್ವಾನಿ ರಥ ಯಾತ್ರೆ ಮಾಡಿದರು. ಆಂಧ್ರದ ಮಾಜಿ ಸಿಎಂ ಈಗಿನ ಸಿಎಂ ಇಬ್ಬರೂ ನಡೆದರು. ಏನೋ ಒಂದು ಹೋರಾಟದ ಛಲ. ನಮಗೂ ಛಲ ಕೊಟ್ಟಿದ್ದು ಗಾಂಧೀಜಿ. ರಾಷ್ಟ್ರ ಧ್ವಜ ಕೊಟ್ಟಿದ್ದು ಕಾಂಗ್ರೆಸ್. ಇದಕ್ಕೆ ದಳದವರು ಬಿಜೆಪಿಯವರು ಟೀಕೆ ಮಾಡ್ತಿದ್ದಾರೆ. ನಮಗೇನೂ ಬೇಸರ ಇಲ್ಲ. ಕೈಯಿಂದ ಹೊಡೆಯುವವರನ್ನು ಕೈ ಹಿಡಿದು ತಪ್ಪಿಸಬಹುದು. ಆದರೆ ನಾಲಿಗೆಯಿಂದ ಹೊಡೆಯುವವರನ್ನು ಹೇಗೆ ತಪ್ಪಿಸೋದು. ನಾಲಿಗೆ ಇದೆ ಅಂತ ಯಾಕೆ ಹಾಳು ಮಾಡ್ಕೋತಿರಣ್ಣ ಎಂದು ಡಿಕೆ ಶಿವಕುಮಾರ್ ಪ್ರಶ್ನೆ ಮಾಡಿದ್ದಾರೆ.
ನಾನು ಮಣ್ಣಿನ ಮಗ ಅಲ್ಲ ಕಲ್ಲಿನ ಮಗ: ಡಿಕೆ ಶಿವಕುಮಾರ್
ಪಾದಯಾತ್ರೆ ಶುರುವಾದಾಗ ಉರಿ ಬಿಸಿಲು, ಟಾರ್ ರೋಡ್, ಕನಕಪುರ ರಸ್ತೆಯಲ್ಲಿ ಮರಗಳಿದ್ದವು. ಆದ್ರೂ 7 ಕಿಲೋ ಮೀಟರ್ ಜನ ಇದ್ರು. ನನ್ನನ್ನು ಇಲ್ಲಿ ಮಣ್ಣಿನ ಮಗ ಅಂದ್ರು, ಆದ್ರೆ ನಾನು ಮಣ್ಣಿನ ಮಗ ಅಲ್ಲ ಕಲ್ಲಿನ ಮಗ. ಕಲ್ಲು ಜಜ್ಜಿದಾಗ ತಾನೇ ಶಿಲ್ಪವಾಗೋದು, ಮಣ್ಣಾಗೋದು, ರೂಪ ಬರೋದು. ಈ ಕಲ್ಲನ್ನ ಹೇಗೆ ಬೇಕೋ ಹಾಗೆ ಉಪಯೋಗಿಸಿಕೊಳ್ಳಿ ಎಂದು ಬಿಡದಿಯಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಡಿ.ಕೆ. ಶಿವಕುಮಾರ್ ಮಾತನಾಡಿದ್ದಾರೆ.
ಡ್ರೋನ್ ಕ್ಯಾಮರಾ ಕಣ್ಣಲ್ಲಿ ಮೇಕೆದಾಟು ಪಾದಯಾತ್ರೆ
ಬಿಡದಿಯಲ್ಲಿ ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ಸಮಾವೇಶ
ಬಿಡದಿಯಲ್ಲಿ ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ಸಮಾವೇಶ ನಡೆಯಲಿದೆ. ಎರಡನೇ ಹಂತದ ಮೊದಲ ದಿನದ ಪಾದಯಾತ್ರೆ ಅಂತ್ಯದಲ್ಲಿ ಸಮಾವೇಶ ನಡೆಯಲಿದೆ. ಬಿಡದಿ ಸರ್ಕಲ್ ನಲ್ಲಿ ವೇದಿಕೆ ಮೇಲೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಭಾಷಣ ಮಾಡಲಿದ್ದಾರೆ.
ಬಿಡದಿ ತಲುಪಿದ ಮೇಕೆದಾಟು ಪಾದಯಾತ್ರೆ
ಮೇಕೆದಾಟು ಯೋಜನೆಗೆ ಆಗ್ರಹಿಸಿ ನಡೆಯುತ್ತಿರುವ ಕಾಂಗ್ರೆಸ್ ಪಾದಯಾತ್ರೆ ರಾಮನಗರ ತಾಲೂಕಿನ ಬಿಡದಿ ತಲುಪಿದೆ. ಬಿಡದಿಯಲ್ಲಿ ಇಂದು ಮೊದಲ ದಿನದ ಪಾದಯಾತ್ರೆ ಅಂತ್ಯಗೊಳ್ಳಲಿದೆ.
ಕಂಸಾಳೆ ಬಾರಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ
ಪಾದಯಾತ್ರೆ ವೇಳೆ ವಿಪಕ್ಷ ನಾಯಕ ಸಿದ್ದರಾಮಯ್ಯ ಕಂಸಾಳೆ ಬಾರಿಸಿದ್ದಾರೆ. ಸಿದ್ದರಾಮಯ್ಯಗೆ ಮಾಜಿ ಸಚಿವ ಶಿವರಾಜ್ ತಂಗಡಗಿ ಸಾಥ್ ನೀಡಿದ್ದಾರೆ. ಪಾದಯಾತ್ರೆ ವೇಳೆ ಸಿದ್ದರಾಮಯ್ಯನವರಿಗೆ ಮಹಿಳೆ ಒಬ್ಬರು ಆರತಿ ಬೆಳಗಿದ್ದಾರೆ. ಕಲ್ಲುಗೊಪ್ಪಹಳ್ಳಿ ಗ್ರಾಮಸ್ಥರಿಂದ ಸಿದ್ದರಾಮಯ್ಯನವರಿಗೆ ಸೇಬಿನ ಹಾರ ಹಾಕಲಾಗಿದೆ. ಬೃಹತ್ ಸೇಬಿನ ಹಾರ ಹಾಕಿ ಗ್ರಾಮಸ್ಥರು ಸ್ವಾಗತಿಸಿದ್ದಾರೆ. ಕಲ್ಲುಗೊಪ್ಪಹಳ್ಳಿ ಬಳಿ ಸಿದ್ದರಾಮಯ್ಯ ವಿಶ್ರಾಂತಿಗೆ ಕುಳಿತಿದ್ದಾರೆ. ಇದೇ ವೇಳೆ, ಕಲ್ಲುಗೊಪ್ಪಹಳ್ಳಿ ಬಳಿ ಡಿ.ಕೆ ಶಿವಕುಮಾರ್ ಗೆ ಕೂಡ ಬೃಹತ್ ಸೇಬಿನ ಹಾರ ಹಾಕಿ ಸ್ವಾಗತಿಸಲಾಗಿದೆ.
ಸಿಎಂಗೆ ಸಂಸದರಿಗೆ ಮೋದಿ ಜೊತೆ ಮಾತನಾಡುವ ದೈರ್ಯವಿಲ್ಲ: ಸಿದ್ದರಾಮಯ್ಯ
ಡಬಲ್ ಎಂಜಿನ್ ಸರ್ಕಾರವಿದೆ. ಹಾಗಿದ್ರು ಪರಿಸರ ಇಲಾಖೆಯಿಂದ ಕ್ಲಿಯರನ್ಸ್ ಮಾಡ್ಸೋಕೆ ಆಗಿಲ್ಲ ಇವರ ಕೈಯಲ್ಲಿ. ಸಿಎಂಗೆ ಸಂಸದರಿಗೆ ಮೋದಿ ಜೊತೆ ಮಾತನಾಡುವ ದೈರ್ಯವಿಲ್ಲ. ಮೇಕೆದಾಟು ಯೋಜನೆಗಾಗಿ ನಾವೂ ಹೋರಾಟ ಮಾಡುತ್ತಿದ್ದೇವೆ. ಹೋರಾಟಗಳಿಗೆ ಅನುಮತಿಯ ಅವಶ್ಯಕತೆ ಇಲ್ಲ. ಇವರು ಯಾವುದಾದರೂ ಜನಪರ ಯೋಜನೆ ಮಾಡಿದ್ದಾರಾ!? ಇವರ ಸರ್ಕಾರ ಏನ್ ಸಾಧನೆ ಮಾಡಿದೆ ಹೇಳಿ. ಇವರು ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ತರುತ್ತಾರೆ ಅನ್ನೋ ಭರವಸೆ ನನಗೆ ಇಲ್ಲ. ಇದನ್ನ ಜನರ ಮುಂದೆ ತೆಗೆದುಕೊಂಡು ಹೋಗುತ್ತಿದ್ದೇವೆ. ಎಲ್ಲರೂ ಉತ್ಸಾಹದಿಂದ ಭಾಗವಹಿಸಿದ್ದಾರೆ ಎಂದು ಟಿವಿ9ಗೆ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.
ಡೊಳ್ಳು ಬಾರಿಸಿದ ಸಿದ್ದರಾಮಯ್ಯ
ವಿಶ್ರಾಂತಿ ಬಳಿಕ ಮತ್ತೆ ಮೇಕೆದಾಟು ಪಾದಯಾತ್ರೆಯಲ್ಲಿ ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಮತ್ತೆ ಹೆಜ್ಜೆ ಹಾಕತೊಡಗಿದ್ದಾರೆ. ಮಾಯಗಾನಹಳ್ಳಿಯಿಂದ ಹೊರಟ ಮೇಕೆದಾಟು ಪಾದಯಾತ್ರೆ ಮುಂದೆ ಸಾಗುತ್ತಿದೆ. ಮೇಕೆದಾಟು ಮಧ್ಯಾಹ್ನದ ಪಾದಯಾತ್ರೆ ವೇಳೆ ಸಿದ್ದರಾಮಯ್ಯ ಡೊಳ್ಳು ಬಾರಿಸಿದ್ದಾರೆ. ತಾವೇ ಹೆಜ್ಜೆ ಹಾಕುತ್ತ ಸಿದ್ದರಾಮಯ್ಯ ಡೊಳ್ಳು ಬಾರಿಸಿದ್ದಾರೆ.
ರೈತರಿಂದ ಬಾರುಕೋಲು ಚಳುವಳಿ
ವಿಶ್ರಾಂತಿ ಬಳಿಕ ಮತ್ತೆ ಶುರುವಾಗಿರುವ ಮೇಕೆದಾಟು ಪಾದಯಾತ್ರೆಯಲ್ಲಿ ಮಾಯಗಾನಹಳ್ಳಿ ಬಳಿ ರೈತರಿಂದ ಬಾರ್ ಕೋಲ್ ಚಳುವಳಿ ನಡೆಸಲಾಗಿದೆ. ಪಟಾಪಟ್ಟಿ ಚಡ್ಡಿ ಬಾರ್ ಕೋಲ್ ಹಿಡಿದು ರೈತ ಮಕ್ಕಳು ಘೋಷಣೆ ಕೂಗುತ್ತಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಎಂದೆಂದಿಗೂ ಅಧಿಕಾರಕ್ಕೆ ಬರಲ್ಲ: ಕೆಎಸ್ ಈಶ್ವರಪ್ಪ ವಾಗ್ದಾಳಿ
ಕಾಂಗ್ರೆಸ್ ಪಾದಯಾತ್ರೆಗೆ ಸಚಿವ ಕೆ.ಎಸ್. ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ. ಕಾಂಗ್ರೆಸ್ ಪಕ್ಷದ ನಾಯಕರಿಗೆ ಉದ್ಯೋಗವೇ ಇಲ್ಲ. ಪಾದಯಾತ್ರೆ ಪಾದಯಾತ್ರೆ ಅಂತ ಹೊರಟಿದ್ದಾರೆ. ಉದ್ಯೋಗ ಇಲ್ಲದವರು ಏನಾದರೂ ಮಾಡಬೇಕಲ್ಲ. ಪಾದಯಾತ್ರೆಯಿಂದ ಅಧಿಕಾರದ ಕನಸು ಕಾಣ್ತಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಎಂದೆಂದಿಗೂ ಅಧಿಕಾರಕ್ಕೆ ಬರಲ್ಲ ಎಂದು ಯಾದಗಿರಿಯಲ್ಲಿ ಸಚಿವ ಕೆ.ಎಸ್. ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.
ನಡೆದು ನಡೆದು ಸುಸ್ತಾದ ಕೈ ನಾಯಕರಿಗೆ ಲೈಟ್ ಮಸಾಜ್
ನಡೆದು ನಡೆದು ಸುಸ್ತಾದ ಕೈ ನಾಯಕರಿಗೆ ಲೈಟ್ ಮಸಾಜ್ ಮಾಡಲಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಕಾಲಿಗೆ ಬೆಂಬಲಿಗರು ಮಸಾಜ್ ಮಾಡಿದ್ದಾರೆ. ಬೆಡ್ ಮೇಲೆ ಅಡ್ಡಾಗಿ ಕಾಲಿಗೆ ಮಸಾಜ್ ಮಾಡಲಾಗಿದೆ. ಈ ವೇಳೆ, ಡಿ.ಕೆ. ಶಿವಕುಮಾರ್ಗೆ ಬಿಪಿ ಚೆಕಪ್ ಕೂಡ ಮಾಡಲಾಗಿದೆ.
ಪಾದಯಾತ್ರೆಗೆ ಭೋಜನ ವಿರಾಮ
ಮೇಕೆದಾಟು ಪಾದಯಾತ್ರೆ ಮಾಯಗಾನಹಳ್ಳಿ ತಲುಪಿದೆ. ಇಲ್ಲಿಂದ ಬಿಡದಿಗೆ ಇನ್ನೂ 6-7 ಕಿಲೋ ಮೀಟರ್ ಮಾತ್ರ ಬಾಕಿ ಇದೆ. ಸದ್ಯ ಭೋಜನ ವಿಶ್ರಾಂತಿಗೆ ಕಾಂಗ್ರೆಸ್ ನಾಯಕರಾದ ಸುರ್ಜೆವಾಲಾ, ಡಿಕೆಶಿ, ಸಿದ್ದರಾಮಯ್ಯ ತೆರಳಿದ್ದಾರೆ.
ತುಮಕೂರು ಸಿದ್ದಲಿಂಗ ಶ್ರೀಗಳಿಂದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ಗೆ ಪತ್ರ
ತುಮಕೂರು ಸಿದ್ದಗಂಗಾ ಮಠದ ಸಿದ್ದಲಿಂಗ ಶ್ರೀಗಳು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ಗೆ ಪತ್ರ ಬರೆದಿದ್ದಾರೆ. ಸಿದ್ದಗಂಗಾ ಮಠದಲ್ಲಿ ಸಿದ್ದಲಿಂಗೇಶ್ವರಸ್ವಾಮಿ ಜಾತ್ರಾ ಮಹೋತ್ಸವ ನಡೆಯುತ್ತಿರುವ ಹಿನ್ನೆಲೆ ಮೇಕೆದಾಟು ಪಾದಯಾತ್ರೆಗೆ ಪಾಲ್ಗೊಳ್ಳಲು ಸಾಧ್ಯವಿಲ್ಲ ಎಂದು ಪತ್ರದಲ್ಲಿ ತಿಳಿಸಿದ್ದಾರೆ. ಕುಡಿಯುವ ನೀರಿನ ಪಾದಯಾತ್ರೆ ಯಶಸ್ವಿಯಾಗಿ ಆದಷ್ಟು ಬೇಗ ಯೋಜನೆ ಜಾರಿಯಾಗಲಿ. ರೈತಾಪಿ ಜನಗಳಿಗೆ ಹಾಗೂ ಕುಡಿಯುವ ನೀರಿನ ಬವಣೆ ನಿಗಲೆಂದು ಹಾರೈಸುತ್ತೇನೆ ಅಂತ ಹೇಳಿದ್ದಾರೆ.
2 ಬಿಂದಿಗೆಗಳಲ್ಲಿ ನೀರನ್ನ ತುಂಬಿಸಿಕೊಂಡು ಹೆಗಲ ಮೇಲೆ ಹೊತ್ತುಕೊಂಡು ಸಾಗುತ್ತಿರುವ ಹುಸೇನ್
ಪಾದಯಾತ್ರೆಯಲ್ಲಿ ಕೆಪಿಸಿಸಿ ಜನರಲ್ ಸೆಕ್ರೇಟ್ರಿ ಸೈಯದ್ ಹುಸೇನ್ ವಿಭಿನ್ನ ರೀತಿಯಲ್ಲಿ ಹೋರಾಟ ಮಾಡಿದ್ದಾರೆ. 2 ಬಿಂದಿಗೆಗಳಲ್ಲಿ ನೀರನ್ನ ತುಂಬಿಸಿಕೊಂಡು ಹೆಗಲ ಮೇಲೆ ಹೊತ್ತುಕೊಂಡು ಹುಸೇನ್ ಸಾಗುತ್ತಿದ್ದಾರೆ. ಮೇಕೆದಾಟು ಕೊಳದಿಂದ ನೀರು ತುಂಬಿಸಿಕೊಂಡು ಹುಸೇನ್ ನಡೆಯುತ್ತಿದ್ದಾರೆ. ನಮಗೆ ಮುಂದಿನ ದಿನಗಳಲ್ಲಿ ಇದೇ ರೀತಿ ನೀರು ತುಂಬಿಸಿಕೊಂಡು ನಡೆಯಬೇಕಾದ ಪರಿಸ್ಥಿತಿ ಬರಬಹುದು ಅನ್ನೋ ಸೂಚನೆ ಇದು. ಹೈಕಮಾಂಡ್ ಜೊತೆ ಮಾತನಾಡಿ ಈ ನೀರನ್ನ ಒಂದು ಮುಖ್ಯ ಕಾರ್ಯಕ್ಕೆ ಬಳಸಿಕೊಳ್ಳುತ್ತೇನೆ. ಬಿಸಿಲಿನಲ್ಲಿ ನಾವೂ ನಡೆಯೋದೆ ಕಷ್ಟ. ಆದ್ರೆ ನಾನು ಬಿಂದಿಗೆಗಳಲ್ಲಿ ನೀರನ್ನು ತುಂಬಿಸಿಕೊಂಡು ಹೋಗ್ತಿರೋದು ನಮ್ಮ ನೀರಿಗಾಗಿ. ಈ ಹೋರಾಟ ಎಷ್ಟೇ ಕಷ್ಟವಾದರೂ ನಿರಂತರವಾಗಿ ಸಾಗಲಿದೆ ಎಂದು ಸೈಯದ್ ಹುಸೇನ್ ಹೇಳಿದ್ದಾರೆ.
ಮೇಕೆದಾಟು ಪಾದಯಾತ್ರೆಯಲ್ಲಿ ಪಾಲ್ಗೊಂಡವರಿಗೆ ಮಜ್ಜಿಗೆ, ಎಳನೀರು, ಐಸ್ ಕ್ರೀಮ್, ಬಾಳೆಹಣ್ಣು ಹಂಚಿಕೆ
ಮೇಕೆದಾಟು ಪಾದಯಾತ್ರೆಯಲ್ಲಿ ಪಾಲ್ಗೊಂಡವರಿಗೆ ಮಜ್ಜಿಗೆ, ಎಳೆನೀರು, ಐಸ್ ಕ್ರೀಮ್, ಬಾಳೆಹಣ್ಣು ಹಂಚಲಾಗಿದೆ. ದಾರಿಯುದ್ದಕ್ಕೂ ಅಲ್ಲಲ್ಲಿ ಸ್ಟಾಲ್ಗಳನ್ನ ಹಾಕಿ ಹಂಚಲಾಗುತ್ತಿದೆ. ಎಳೆನೀರು, ಕಲ್ಲಂಗಡಿಗಾಗಿ ಕಾರ್ಯಕರ್ತರು ಮುಗಿಬೀಳ್ತಿದ್ದಾರೆ.
ಕಾಂಗ್ರೆಸ್‌ನವರಿಗೆ ಕೆಲಸದ ಕೊರತೆಯಿರುವ ಹಿನ್ನೆಲೆ ಪಾದಯಾತ್ರೆ ಮಾಡುತ್ತಿದ್ದಾರೆ: ಲಕ್ಷ್ಮಣ ಸವದಿ
ಕಾಂಗ್ರೆಸ್‌ನವರಿಗೆ ಸ್ವಲ್ಪ ಬಿಪಿ, ಶುಗರ್ ಜಾಸ್ತಿಯಾಗಿದೆ. ಕಾಂಗ್ರೆಸ್‌ನವರಿಗೆ ಕೆಲಸದ ಕೊರತೆಯಿರುವ ಹಿನ್ನೆಲೆ ಪಾದಯಾತ್ರೆ ಮಾಡುತ್ತಿದ್ದಾರೆ. ನಾಲ್ಕು ವರ್ಷದಿಂದ ಕೂತಲ್ಲೆ ಕೂತೀದಾರೆ. ಹೀಗಾಗಿ ಪಾದಯಾತ್ರೆ ಮಾಡ್ತೀದಾರೆ. ಪಾದಯಾತ್ರೆಯಿಂದ ಆರೋಗ್ಯ ಸುಧಾರಣೆ ಆಗತ್ತೆ ಎಂದು ಪಾದಯಾತ್ರೆ ಮಾಡುತ್ತಿದ್ದಾರೆ. ಅವರೇ ನೀರಾವರಿ ಮಂತ್ರಿ ಇದ್ದಾಗ ಕೆಲಸ ಮಾಡಲಿಲ್ಲ. ಮಾಹಾದಾಯಿ ವಿಚಾರದ ಬಗ್ಗೆ ಕಾಂಗ್ರೆಸ್ನವರು ನಮಗೆ ಹೇಳೋ ಅವಶ್ಯಕತೆ ಇಲ್ಲ. ಮಹಾದಾಯಿ ನಮ್ಮ ಬದ್ಧತೆ. ನಾವು ಮಹಾದಾಯಿ ಕೆಲಸ ಮಾಡೇ ಮಾಡ್ತೀವಿ ಎಂದು ಕಾಂಗ್ರೆಸ್ ಪಾದಯಾತ್ರೆಗೆ ಲಕ್ಷ್ಮಣ ಸವದಿ ತಿರುಗೇಟು ನೀಡಿದ್ದಾರೆ.
ಪಾದಯಾತ್ರೆಯಿಂದ ಸುಸ್ತಾಗಿ ನಿಂತ ಡಿಕೆಶಿ, ಸುರ್ಜೆವಾಲಾ
ಮೆಕೆದಾಟು ಪಾದಯಾತ್ರೆಯಿಂದ ಡಿಕೆಶಿ, ಸುರ್ಜೆವಾಲಾ ಸುಸ್ತಾಗಿ ನಿಂತಿದ್ದಾರೆ. ಡಿಕೆಶಿ ಕಲ್ಲಂಗಡಿ ಹಣ್ಣು ತಿಂದರೆ, ಇತ್ತ ಸುರ್ಜೆವಾಲಾ ಬಾಳೆಹಣ್ಣು ತಿಂದು ಸುಧಾರಿಸಿಕೊಳ್ಳುತ್ತಿದ್ದಾರೆ. ಸದ್ಯ ನೀರು ಕುಡಿದು ಕೆಲ ಕಾಲ ಸುಧಾರಿಸಿಕೊಂಡು ಇಬ್ಬರು ನಾಯಕರು ಪಾದಯಾತ್ರೆ ಮುಂದುವರಿಸಿದ್ದಾರೆ.
ನೀರಿಗಾಗಿ ಕಾಂಗ್ರೆಸ್ ಮಾಡುತ್ತಿರುವ ಹೋರಾಟ ಯಶಸ್ವಿಯಾಗಲಿದೆ: ವಿಧಾನಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್
ಬಿಜೆಪಿಗೆ ನೈತಿಕತೆ ಇಲ್ಲದೇ ನಮ್ಮ ಮೇಲೆ ಆರೋಪ ಮಾಡ್ತಿದೆ. ನೀರಿಗಾಗಿ ನಾವೂ ಮಾಡುತ್ತಿರುವ ಹೋರಾಟ ಯಶಸ್ವಿಯಾಗಲಿದೆ. ಹೋರಾಟಕ್ಕೆ ಯಾರ ಅನುಮತಿಯೂ ಬೇಕಾಗಿಲ್ಲ. ಸರ್ಕಾರದ ಮೇಲೆ ನಿರಂತರವಾಗಿ ಒತ್ತಡ ಹೇರೋ ಕೆಲಸ ಮಾಡ್ತಿವಿ. ಮಟ ಮಟ ಮಧ್ಯಾಹ್ನದಲ್ಲೂ ಜನರ ರಣೋತ್ಸಾಹ ಕಮ್ಮಿಯಾಗಿಲ್ಲ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ತಿಳಿಸಿದ್ದಾರೆ.
ಪಾದಯಾತ್ರೆ ಮಾಡಿದ್ರೆ ಸಿಎಂ ಆಗುತ್ತೆನೆಂದು ಡಿಕೆಶಿ ಭ್ರಮೆಯಲ್ಲಿದ್ದಾರೆ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
ಇದೇ ರೀತಿ ಧರಣಿ, ಸತ್ಯಾಗ್ರಹ ಮಾಡುವ ಪರಿಸ್ಥಿತಿ ಮುಂದೆಯೂ ದೇವರು ಅವರಿಗೆ ಕೊಡಲಿ. ಅವರು ಇನ್ನೂ ಮುಂದಿನ ವರ್ಷಗಳಲ್ಲಿ ವಿರೋಧ ಪಕ್ಷದಲ್ಲಿ ಇರುವಂತಾಗಿಲಿ. ಮಹಾದಾಯಿ ಪಾದಯಾತ್ರೆ ಮಾಡುವ ಉದ್ದೇಶ ಕಾಂಗ್ರೆಸ್ ಇದೆ. ಸುಳ್ಳು ಹೇಳುವುದು ಕಾಂಗ್ರೆಸ್ ಡಿಎನ್ಎಯಲ್ಲಿ ಬಂದಿದೆ. ಪಾದಯಾತ್ರೆ ಮಾಡಿದ್ರೆ ಸಿಎಂ ಆಗುತ್ತೆನೆಂದು ಡಿಕೆಶಿ ಭ್ರಮೆಯಲ್ಲಿದ್ದಾರೆ. ಪಾದಯಾತ್ರೆ ಮಾಡಿ ಸಿದ್ದರಾಮಯ್ಯ ಸಿಎಂ ಆದಂತೆ ಡಿಕೆಶಿ ಸಿಎಂ ಭ್ರಮೆಯಲ್ಲಿದ್ದಾರೆ. ಈ ಪಾದಯಾತ್ರೆ ಮಾಡಿದ್ರೆ ಡಿಕೆಶಿ ಸಿಎಂ ಆಗಲ್ಲ ಬೇಕಾದ್ರೆ ವಿರೋಧ ಪಕ್ಷದ ನಾಯಕನಾಗಬಹುದು. ಜೆಡಿಎಸ್ ನಿಮ್ಮ ಜೊತೆಗೆ ಸರ್ಕಾರ ಮಾಡಿದ್ರೆ ಒರಿಜಿನಲ್ ಪಕ್ಷ ನಮ್ಮ ಜೊತೆಗೆ ಮಾಡಿದ್ರೆ ಡುಬ್ಲಿಕೆಟ್ ಪಕ್ಷನಾ ಎಂದು ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ಮತ್ತೆ ಆರಂಭ ಹಿನ್ನೆಲೆ ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿಕೆ ನೀಡಿದ್ದಾರೆ.
ರಾಮನಗರ ಸರ್ಕಲ್ ಬಳಿ ಫುಲ್ ಟ್ರಾಫಿಕ್ ಜಾಮ್
ಮೇಕೆದಾಟು ಯೋಜನೆಗಾಗಿ ಪಾದಯಾತ್ರೆ ಹಿನ್ನಲೆ ರಾಮನಗರ ಸರ್ಕಲ್ ಬಳಿ ಟ್ರಾಫಿಕ್ ಜಾಮ್ ಆಗಿದೆ. ಈಗಷ್ಟೇ ಪಾದಯಾತ್ರೆ ಶುರುವಾಗಿದೆ.
ಈ ಸರ್ಕಾರ 2 ದಿನದಲ್ಲಿ ಮೇಕೆದಾಟು ಯೋಜನೆಗೆ ಅನುಮತಿ ಕೊಡಿಸಲಿ
ಡಬಲ್ ಇಂಜಿನ್ ಸರ್ಕಾರ ಎಂದು ಹೇಳುತ್ತಾರೆ. ಈ ಸರ್ಕಾರ 2 ದಿನದಲ್ಲಿ ಮೇಕೆದಾಟು ಯೋಜನೆಗೆ ಅನುಮತಿ ಕೊಡಿಸಲಿ. ನಾವೆಲ್ಲಾ ಸೇರಿಕೊಂಡು ಶಂಕುಸ್ಥಾಪನೆ ಮಾಡೋಣ ಎಂದು ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಹೇಳಿಕೆ ನೀಡಿದ್ದಾರೆ.
ರಾಷ್ಟ್ರಧ್ವಜ ಹಿಡಿದುಕೊಂಡು ಪಾದಯಾತ್ರೆಯಲ್ಲಿ ಭಾಗವಹಿಸಿರುವ ಕಾರ್ಯಕರ್ತರು
ಎರಡನೇ ಹಂತದ ಕಾಂಗ್ರೆಸ್ ಪಾದಯಾತ್ರೆ ಹಿನ್ನೆಲೆಯಲ್ಲಿ ರಾಷ್ಟ್ರಧ್ವಜ ಹಿಡಿದುಕೊಂಡು ಪಾದಯಾತ್ರೆಯಲ್ಲಿ ಕ್ರಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದಾರೆ.
ಮೊಹಮದ್ ನಲಪಾಡ್ಗೆ ಏಟು ಕೊಟ್ಟ ಡಿಕೆಶಿ
ವೇದಿಕೆ ಮೇಲೆ ಎಲ್ಲಾ ಕಲಾ ತಂಡಗಳು ಬರುತ್ತಿದ್ದ ವೇಳೆ ಹಿಂತಿರುಗಿ ನಿಂತು ಫೋನ್ನಲ್ಲಿ ಮಾತನಾಡುತ್ತಿದ್ದ ನಲಪಾಡ್ ತೋಳಿಗೆ ಡಿ.ಕೆ.ಶಿವಕುಮಾರ್ ಏಟು ಕೊಟ್ಡು ನಿಲ್ಲಿಸಿದ್ದಾರೆ.
ಸಾಧನೆ ಇಲ್ಲದೆ ಸತ್ತರೇ ಸಾವಿಗೆ ಅವಮಾನ: ಅಧ್ಯಕ್ಷ ಡಿ.ಕೆ ಶಿವಕುಮಾರ್
ಇದೊಂದು ಐತಿಹಾಸಿಕ ನಡಿಗೆ. ಸಾಧನೆ ಇಲ್ಲದೆ ಸತ್ತರೇ ಸಾವಿಗೆ ಅವಮಾನ. ಬಿಜೆಪಿ ಜೆಡಿಎಸ್ ನಾಯಕರು ವಿಭಿನ್ನವಾಗಿ ಟಿಕೇ ಮಾಡುತ್ತಿದ್ದಾರೆ. ಒಳ್ಳೇಯ ಗಳಿಗೆಯಲ್ಲಿ ಪಾದಯಾತ್ರೆ ಆರಂಭ ಮಾಡಿದ್ದೇವೆ. ಇದು ನಮ್ಮ ಹೋರಾಟ ಅಲ್ಲ. ಜನರ ಕುಡಿಯುವ ನೀರಿಗಾಗಿ ಹೋರಾಟ. ದೇಶಕ್ಕೆ ಸಂದೇಶ ಹೋಗಬೇಕು. ಡಬಲ್ ಇಂಜಿನ್ ಸರ್ಕಾರ ಇದೆ. ಎರಡು ದಿನದಲ್ಲಿ ಅನುಮತಿ ಕೊಡಿಸಿ. ನಾವೇಲ್ಲ ಸೇರಿಸಿ ಶಂಕು ಸ್ಥಾಪನೆ ಮಾಡೋಣಾ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿಕೆ ನೀಡಿದ್ದಾರೆ.
ಬಿಜೆಪಿಯವರಿಗೆ ಮಾನ ಮರ್ಯಾದೆ ಇದ್ರೆ ಕೂಡಲೇ ಕೇಂದ್ರದ ಜೊತೆಗೆ ಮಾತನಾಡಿ: ಸಿದ್ದರಾಮಯ್ಯ
ಮೇಕೆದಾಟು ಯೋಜನೆ ಬಂದರೆ ಮುಂದಿನ 50-60 ವರ್ಷಕ್ಕೆ ಕುಡಿಯುವ ನೀರಿನ ಸಮಸ್ಯೆ ಇರಲ್ಲ. ರಾಮನಗರ, ಕನಕಪುರ ಭಾಗಕ್ಕೂ ಯೋಜನೆಯಿಂದ ನೀರು ಕೊಡಲು ಸಾಧ್ಯವಾಗುತ್ತದೆ. ಕೇಂದ್ರ ಸರ್ಕಾರ ಕೂಡಲೇ ಪರಿಸರ ಕ್ಲಿಯರೆನ್ಸ್ ಕೊಡಬೇಕು. ಬಿಜೆಪಿ ಯೋಜನೆ ಮಾಡದೇ ಹೋದರೆ ಕರ್ನಾಟಕದ ಜನರಿಗೆ ಮಾಡುತ್ತಿರುವ ದ್ರೋಹ. ಬಿಜೆಪಿಯವರಿಗೆ ಮಾನ ಮರ್ಯಾದೆ ಇದ್ರೆ ಜನರ ಬಗ್ಗೆ ಕಾಳಜಿ ಇದ್ರೆ ಕೂಡಲೇ ಕೇಂದ್ರದ ಜೊತೆಗೆ ಮಾತನಾಡಿ. ಇಲ್ಲದಿದ್ದರೆ ನಮ್ಮ ಹೋರಾಟ ನಿಲ್ಲಲ್ಲ ಎಂದು ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.
ಕೇವಲ ರಾಜಕೀಯ ಕಾರಣಕ್ಕಾಗಿ ತಮಿಳುನಾಡು ತಕರಾರು ಮಾಡುತ್ತಿದೆ: ಸಿದ್ದರಾಮಯ್ಯ
ಮೇಕೆದಾಟು ವಿಚಾರದಲ್ಲಿ ಬಿಜೆಪಿಯಿಂದ ಸುಳ್ಳು ಪ್ರಚಾರ ಮಾಡಲಾಗುತ್ತಿದೆ. ತಮ್ಮ ತಪ್ಪು ಮುಚ್ಚಿಕೊಳ್ಳುವುದಕ್ಕೆ ಸುಳ್ಳು ಪ್ರಚಾರ ಮಾಡ್ತಿದೆ. ಕಾನೂನು ಬಲದಿಂದ ತಮಿಳುನಾಡು ತಕರಾರು ಮಾಡುತ್ತಿಲ್ಲ. ಕೇವಲ ರಾಜಕೀಯ ಕಾರಣಕ್ಕಾಗಿ ತಕರಾರು ಮಾಡುತ್ತಿದೆ. ಕೇಂದ್ರ, ರಾಜ್ಯ ಎರಡೂ ಕಡೆ ಬಿಜೆಪಿ ಸರ್ಕಾರವೇ ಇದೆ. ಆದರೂ ಒಂದು ಕ್ಲಿಯರೆನ್ಸ್ ಸರ್ಟಿಫಿಕೆಟ್ ಪಡೆಯಲು ಆಗಿಲ್ಲ ಎಂದು ಕೇಂದ್ರ, ರಾಜ್ಯ ಸರ್ಕಾರಗಳ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ಹೆದರಿ ನಾಡಿನ ಜನತೆಗೆ ಸುಳ್ಳು ಹೇಳುತ್ತಿದ್ದಾರೆ: ವಿಪಕ್ಷ ನಾಯಕ ಸಿದ್ದರಾಮಯ್ಯ
ಮೇಕೆದಾಟು ಯೋಜನೆಗಾಗಿ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೇ ಡಿಪಿಆರ್ ಮಾಡಲಾಗಿತ್ತು. ಆದರೆ ಬಿಜೆಪಿ ಹೆದರಿ ನಾಡಿನ ಜನತೆಗೆ ಸುಳ್ಳು ಹೇಳುತ್ತಿದ್ದಾರೆ. ಸುಳ್ಳು ಜಾಹೀರಾತು ನೀಡಿದ್ದಾರೆ ಎಂದು ರಾಮನಗರದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.
ಏನು ಮಾಡಬೇಕೆಂದು ತಿಳಿಯದೆ ಪಾದಯಾತ್ರೆ ಮಾಡ್ತಿದ್ದಾರೆ: ಕಾಂಗ್ರೆಸ್ ಪಾದಯಾತ್ರೆಗೆ ಸಚಿವ ಈಶ್ವರಪ್ಪ ತಿರುಗೇಟು
ಏನು ಮಾಡಬೇಕೆಂದು ತಿಳಿಯದೆ ಪಾದಯಾತ್ರೆ ಮಾಡ್ತಿದ್ದಾರೆ. ಅವರ ಸರ್ಕಾರದಲ್ಲಿ ಏಕೆ ಯೋಜನೆ ಜಾರಿ ಮಾಡಲಿಲ್ಲ? ಈಗ ಮೇಕೆದಾಟು ಪಾದಯಾತ್ರೆಯನ್ನು ಸುಮ್ಮನೆ ರಾಜಕೀಯ ಅಸ್ತ್ರವಾಗಿ ಬಳಸಿಕೊಳ್ತಿದ್ದಾರೆ ಎಂದು ಕಲಬುರಗಿಯಲ್ಲಿ ಕಾಂಗ್ರೆಸ್ ಪಾದಯಾತ್ರೆಗೆ ಸಚಿವ ಈಶ್ವರಪ್ಪ ತಿರುಗೇಟು ನೀಡಿದ್ದಾರೆ.
ಮೊದಲ ಹಂತದ ಪಾದಯಾತ್ರೆಯ ಜನ ಬೆಂಬಲ ನೋಡಿ ಕೊವಿಡ್ ನೆಪದಿಂದ ನಿಲ್ಲಿಸಿದ್ದರು: ಬಿಕೆ ಹರಿಪ್ರಸಾದ್
ರಣದೀಪ್ ಸಿಂಗ್ ಸುರ್ಜೇವಾಲ್ ದೊಡ್ಡ ಭಾಷಣ ಬೇಕಿಲ್ಲ. ಬಹುದೂರು ನಡೆಯಬೇಕಿದೆ ಎಂದಿದ್ದಾರೆ. ನಾನು ಕೂಡ ಹೆಚ್ಚಿನ ಭಾಷಣ ಮಾಡಲ್ಲ. ಮೊದಲ ಹಂತದ ಪಾದಯಾತ್ರೆಯ ಜನ ಬೆಂಬಲ ನೋಡಿ ಕೊವಿಡ್ ನೆಪದಿಂದ ನಿಲ್ಲಿಸಿದ್ದರು. ಅವತ್ತು ಪ್ರತಿಜ್ಞೆ ಮಾಡಿದಂತೆ ಮತ್ತೆ ಕಾವೇರಿ ಮಾತೆಯ ರಕ್ಷಣೆಗೆ ಹೆಜ್ಜೆ ಇಡುತ್ತಿದ್ದೇವೆ. ಬೆಂಗಳೂರು ನಗರ 2050 ಇಸವಿಗೆ ನೀರಿಗೆ ಹಾಹಾಕಾರವಾಗುತ್ತೆ. ಮುಂದಾಲೋಚನೆಯಿಂದ ಈ ಒಂದು ಮೇಕೆದಾಟು ಜಲಾಶಯನಕ್ಕೆ ಅವಕಾಶ ಕೊಡಬೇಕೆಂದು ಹೋರಾಟ ಮಾಡ್ತಿದ್ದೇವೆ. ಇದಕ್ಕೆ ತಮಿಳುನಾಡು ಅಷ್ಟಾಗಿ ಅಡ್ಡಗಾಲು ಹಾಕ್ತಿಲ್ಲ. ಇದು ಬಿಜೆಪಿಯವರು ಹಾಕ್ತಿರುವ ಅಡ್ಡಗಾಲು ಎಂದು ಸುರ್ಜೇವಾಲಾ ಹೇಳಿದ್ದಾರೆ. ಅದನ್ನು ನಾನು ಹೇಳುತ್ತಿದ್ದೇನೆ. ಪಾದಯಾತ್ರೆಗೆ ನೀವೂ ಹೆಚ್ಚಿನ ಬೆಂಬಲ ಕೊಡಬೇಕು ಎಂದು ಬಿಕೆ ಹರಿಪ್ರಸಾದ್ ಜನರಲ್ಲಿ ಮನವಿ ಮಾಡಿದ್ದಾರೆ.
ನಮ್ಮ ನೀರು ನಮ್ಮ ಹಕ್ಕು ಕಿರುಹೊತ್ತಿಗೆ ಬಿಡುಗಡೆ
ರಾಮನಗರದಲ್ಲಿ ಎರಡನೇ ಹಂತದ ಕಾಂಗ್ರೆಸ್ ಪಾದಯಾತ್ರೆ ಹಿನ್ನೆಲೆ ನಡೆದ ಸಮಾವೇಶದಲ್ಲಿ ನಮ್ಮ ನೀರು ನಮ್ಮ ಹಕ್ಕು ಕಿರುಹೊತ್ತಿಗೆ ಬಿಡುಗಡೆ ಮಾಡಲಾಗಿದೆ. ಸುರ್ಜೇವಾಲ ಅವರು ಕಾರ್ಯಕ್ರಮದಲ್ಲಿ ಕಿರುಹೊತ್ತಿಗೆ ಬಿಡುಗಡೆ ಮಾಡಿದ್ದಾರೆ.
ಉದ್ದುದ್ದ ಭಾಷಣ ಮಾಡುವ ದಿನ ಇದಲ್ಲ, ಹೊಸ ಇತಿಹಾಸ ಸೃಷ್ಟಿಸುವ ದಿನ: ರಣದೀಪ್ ಸಿಂಗ್ ಸುರ್ಜೆವಾಲಾ
ಉದ್ದುದ್ದ ಭಾಷಣ ಮಾಡುವ ದಿನ ಇದಲ್ಲ. ಹೊಸ ಇತಿಹಾಸ ಸೃಷ್ಟಿಸುವ ದಿನ. ನಮ್ಮ ನೀರು, ನಮ್ಮ ಹಕ್ಕು ಇದು ನಿಮ್ಮ ಅಧಿಕಾರ. ಇಲ್ಲಿ ಸೃಷ್ಟಿಯಾದ ಕೂಗಿಗೆ ನ್ಯಾಯ ಸಿಕ್ಕೇ ಸಿಗುತ್ತದೆ. ನೀವು ಹೋರಾಟ ಮಾಡುತ್ತ ನಡೆಯುತ್ತಿರಿ. ತಾಯಿ ಕಾವೇರಿ ನಮಗೆ ನ್ಯಾಯ ಕೊಟ್ಟೇ ಕೊಡುತ್ತಾರೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಹೇಳಿಕೆ ನೀಡಿದ್ದಾರೆ.
ನಟ ನೆನಪಿರಲಿ ಪ್ರೇಮ್ ಮೇಕೆದಾಟು ಪಾದಯಾತ್ರೆಯಲ್ಲಿ ಭಾಗಿ
ಇಂದು ಎರಡನೇ ಹಂತದ ಕಾಂಗ್ರೆಸ್ ಪಾದಯಾತ್ರೆ ಹಿನ್ನೆಲೆಯಲ್ಲಿ ನಟ ನೆನಪಿರಲಿ ಪ್ರೇಮ್ ಕೂಡ ಆಗಮಿಸಿದ್ದಾರೆ. ಆ ಮೂಲಕ ಮೇಕೆದಾಟು ಪಾದಯಾತ್ರೆಯಲ್ಲಿ ನಟ ಪ್ರೇಮ್ ಭಾಗಿಯಾಗಲಿದ್ದಾರೆ.
ಅನ್ನದಾನೇಶ್ವರ ಸ್ವಾಮಿಜಿಯಿಂದ ಗಿಡಕ್ಕೆ ನೀರು ಹಾಕಿ ಕಾರ್ಯಕ್ರಮಕ್ಕೆ ಚಾಲನೆ
ಅನ್ನದಾನೇಶ್ವರ ಸ್ವಾಮಿಜಿಯಿಂದ ಗಿಡಕ್ಕೆ ನೀರು ಹಾಕಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ. ರಾಜ್ಯ ಕಾಂಗ್ರೆಸ್ ಸುರ್ಜೇವಾಲ ಹಾಗೂ ಇತರೆ ನಾಯಕರು ನಗಾರಿ ಬಾರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ. ನಟ ನೆನಪಿರಲಿ ಪ್ರೇಮ್ ಕೂಡ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.
ಒಬ್ಬೇ ಒಬ್ಬ ಬಿಜೆಪಿ ನಾಯಕರು ಕೂಡ ಮೇಕೆದಾಟು ಆಗಬೇಕು ಅಂತ ಧ್ವನಿ ಎತ್ತಲೇ ಇಲ್ಲ: ಡಿಕೆ ಸುರೇಶ್
ಮೇಕೆದಾಟು ಯೋಜನೆ ಆಗಬೇಕು ಅಂತ ನಮ್ಮ ನೀರಿನ ಹಕ್ಕು ಉಳಿಸುವುದಕ್ಕೋಸ್ಕರ ಡಿಕೆಶಿ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ. ಕೊವಿಡ್ ಕಾರಣದಿಂದ ಸಾರ್ವಜನಿಕ ಆರೋಗ್ಯ ದೃಷ್ಟಿಯಿಂದ ಸರ್ಕಾರದ ನೀತಿ ನಿಯಮ ಕಾನೂನು ಪಾಲನೆ ದೃಷ್ಟಿಯಿಂದ ನಾವು ಮೊದಲ ಹೋರಾಟ ಮೊಟಕುಗೊಳಿಸಿದ್ದೆವು. ಸಿದ್ದರಾಮಯ್ಯ ಅವಧಿಯಲ್ಲಿ ಎಂಬಿ ಪಾಟೀಲ್ ನೀರಾವರಿ ಸಚಿವರಾಗಿದ್ದರು. ಮೂರು ಬಾರಿ ಡಿಪಿಆರ್ ರೆಡಿ ಮಾಡಿ ಸಲ್ಲಿಕೆ ಮಾಡಿದ್ದರು. ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದೆ ಒಬ್ಬೇ ಒಬ್ಬ ಬಿಜೆಪಿ ನಾಯಕರು ಕೂಡ ಮೇಕೆದಾಟು ಆಗಬೇಕು ಅಂತ ಧ್ವನಿ ಎತ್ತಲೇ ಇಲ್ಲ ಎಂದು ಎಂದು ಡಿ.ಕೆ. ಸುರೇಶ್ ತಿಳಿಸಿದ್ದಾರೆ.
ಸಮಾವೇಶದಲ್ಲಿ ಹಲವು ಕಾಂಗ್ರೆಸ್ ಮುಖಂಡರು ಭಾಗಿ
ಇಂದಿನಿಂದ 2ನೇ ಹಂತದಲ್ಲಿ ಮೇಕೆದಾಟು ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್ ಪಾದಯಾತ್ರೆ ನಡೆಯಲಿದೆ. ಪಾದಯಾತ್ರೆಗೂ ಮುನ್ನ ಕಾಂಗ್ರೆಸ್‌ನಿಂದ ಸಮಾವೇಶ ಎರ್ಪಡಿಸಲಾಗಿದ್ದು, ರಾಮನಗರದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಸಮಾವೇಶದಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೆವಾಲ, ಕೆಪಿಸಿಸಿ ಅಧ್ಯಕ್ಷ ಡಿಕೆಶಿ, ಸಿಎಲ್‌ಪಿ ನಾಯಕ ಸಿದ್ದರಾಮಯ್ಯ, ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಭಾಗಿಯಾಗಿದ್ದಾರೆ.
ಮೇಕೆದಾಟು ಪಾದಯಾತ್ರೆ ಸಮಾವೇಶ ಪ್ರಾರಂಭ
ಮೇಕೆದಾಟು ಯೋಜನೆ ಆಗ್ರಹಿಸಿ ಕಾಂಗ್ರೆಸ್ ನಾಯಕರು ನಡೆಸುತ್ತಿರುವ ಪಾದಯಾತ್ರೆ ಸಮಾವೇಶ ಪ್ರಾರಂಭವಾಗಿದೆ.
ಪಾದಯಾತ್ರೆಗೆ ಇನ್ನೂ ಆಗಮಿಸದ ಕಾರ್ಯಕರ್ತರು
ಕಾರ್ಯಕರ್ತರು ಪಾದಯಾತ್ರೆಗೆ ಇನ್ನೂ ಆಗಮಿಸಿಲ್ಲ. ಕಾಂಗ್ರೆಸ್ ನಾಯಕರು ವೇದಿಕೆ ಮೇಲೆ ಆಸೀನರಾಗಿದ್ದಾರೆ. ಸಮಾವೇಶದ ವೇದಿಕೆ ತುಂಬಿ ತುಳುಕುತ್ತಿದೆ. ಆದರೆ ಕಾರ್ಯಕರ್ತರು ಮಾತ್ರ ಇನ್ನೂ ಸಮಾವೇಶಕ್ಕೆ ಆಗಮಿಸಿಲ್ಲ.
ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲು ತೆರಳಿದ ರಣದೀಪ್ ಸಿಂಗ್ ಸುರ್ಜೇವಾಲಾ ಹಾಗೂ ಸಿದ್ದರಾಮಯ್ಯ
ರಾಮನಗರದ ಸರ್ಕಲ್ನಲ್ಲಿ ಆಯೋಜಿಸಿರುವ ಸಮಾವೇಶಕ್ಕೆ ಪಾಲ್ಗೊಳ್ಳಲು ರಣದೀಪ್ ಸಿಂಗ್ ಸುರ್ಜೇವಾಲಾ ಹಾಗೂ ಸಿದ್ದರಾಮಯ್ಯ ತೆರಳಿದ್ದಾರೆ.
ಇನ್ನೇನೂ ಕೆಲವೇ ನಿಮಿಷಗಳಲ್ಲಿ ಕಾರ್ಯಕ್ರಮ ಆರಂಭ
ಮೇಕೆದಾಟು ಎರಡನೇ ಹಂತದ ಪಾದಯಾತ್ರೆ ಇಂದು ಆರಂಭವಾಗಲಿದ್ದು, ಇನ್ನೇನೂ ಕೆಲವೇ ನಿಮಿಷಗಳಲ್ಲಿ ಕಾರ್ಯಕ್ರಮ ಆರಂಭವಾಗಲಿದೆ. ಕಾರ್ಯಕ್ರಮಕ್ಕೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ ಚಾಲನೆ ನೀಡಲಿದ್ದಾರೆ. ಈಗಾಗಲೇ ಕಾರ್ಯಕ್ರಮಕ್ಕೆ ಕಾಂಗ್ರೆಸ್ ನಾಯಕರು ಆಗಮಿಸಿದ್ದಾರೆ. ಕಾರ್ಯಕ್ರಮದ ನಂತರ ಪಾದಯಾತ್ರೆ ಆರಂಭವಾಗಲಿದೆ.
10 ಗಂಟೆ ಬಳಿಕ ಪ್ರಾರಂಭವಾಗಲಿರುವ ಸಮಾವೇಶ
ಡಿ.ಕೆ. ಶಿವಕುಮಾರ್ ಸಮಾವೇಶ ಮೈದಾನ ತಲುಪಿದ್ದಾರೆ. 10 ಗಂಟೆ ಬಳಿಕ ಸಮಾವೇಶ ಪ್ರಾರಂಭವಾಗಲಿದೆ.
ಸರ್ಕಾರಕ್ಕೆ ಎಚ್ಚರಿಕೆ ಗಂಟೆ ಕೊಡಬೇಕಿದೆ: ಮಾಜಿ ಸಚಿವ ಪ್ರೀಯಾಂಕ ಖರ್ಗೆ
ಮೊದಲ ಪಾದಯಾತ್ರೆಯಲ್ಲಿ ಸಾಕಷ್ಟು ಬೆಂಬಲ ಸಿಕ್ಕಿತ್ತು. ಸರ್ಕಾರಕ್ಕೆ ಎಚ್ಚರಿಕೆ ಗಂಟೆ ಕೊಡಬೇಕಿದೆ. ಹಲವು ಸಂಘಟನೆಗಳು, ಜನರಲ್ಲಿ ಚರ್ಚೆ ನಡೆಯುತ್ತಿದೆ. ಈ ಬಾರಿ ಮತ್ತೆ ಹೆಚ್ಚಿನ ಬೆಂಬಲ ಸಿಗಲಿದೆ. ಯೋಜನೆಯಿಂದ ಸಾಕಷ್ಟು ಅನುಕೂಲವಾಗಲಿದೆ. ಜನರಿಗೆ ಅರಿವು ಮೂಡಿಸಬೇಕಿದೆ. ಕಳೆದ ಬಾರಿ ಸರ್ಕಾರ ಅನುಮತಿ ನೀಡಿತ್ತು. ಆದರೆ ಕಳೆದ ಬಾರಿ ಕೊವಿಡ್ ಕೇಸ್ಗಳನ್ನ ಜಾಸ್ತಿ ಮಾಡಿದ್ರು. ಜನರ ಜೊತೆ ಸರ್ಕಾರ ಚರ್ಚೆ ಮಾಡಲಿ ಎಂದು ಮಾಜಿ ಸಚಿವ ಪ್ರೀಯಾಂಕ ಖರ್ಗೆ ಹೇಳಿಕೆ ನೀಡಿದ್ದಾರೆ.
ರಾಮನಗರದ ಪ್ರವಾಸಿ ಮಂದಿರದಲ್ಲಿ ಮೇಕೆದಾಟು ಪಾದಯಾತ್ರೆ ಕುರಿತು ಹಿರಿಯ ನಾಯಕರ ಚರ್ಚೆ
ಸಿದ್ದರಾಮಯ್ಯ, ರಣದೀಪ್ ಸಿಂಗ್ ಸುರ್ಜೇವಾಲಾಗೆ ಹೋರಾಟದ ರೂಪುರೇಷೆ ಕುರಿತು ತಿಳಿಸುತ್ತಿದ್ದಾರೆ. ರಾಮನಗರದ ಪ್ರವಾಸಿ ಮಂದಿರದಲ್ಲಿ ಮೇಕೆದಾಟು ಪಾದಯಾತ್ರೆ ಕುರಿತು ಹಿರಿಯ ನಾಯಕರು ಚರ್ಚೆ ಮಾಡುತ್ತಿದ್ದಾರೆ. ಸುರ್ಜೇವಾಲಾ, ಸಿದ್ದರಾಮಯ್ಯ ಆಗಮಿಸುತ್ತಿದ್ದಂತೆ ಕಾಂಗ್ರೆಸ್ನ ಕೆಲ ಶಾಸಕರು ಆಗಮಿಸಲಿದ್ದಾರೆ. ಈಶ್ವರ್ ಖಂಡ್ರೆ, ಹೆಚ್.ಕೆ ಪಾಟೀಲ್, ಕೆಜೆ ಜಾರ್ಜ್, ರೆಹಮಾನ್ ಖಾನ್ ಆಗಮಿಸಲಿದ್ದಾರೆ.
ಇದು ಹೋರಾಟ, ಹೋರಾಟಕ್ಕೆ ಸರ್ಕಾರ ಅನುಮತಿ ಬೇಡ: ಸಂಸದ ಡಿಕೆ ಸುರೇಶ್
ಸರ್ಕಾರಕ್ಕೆ ಪಾದಯಾತ್ರ ಬಗ್ಗೆ ಮಾಹಿತಿ ನೀಡಿದ್ದೇವೆ. ಕೇಸ್ ಬೇಕಾದರೆ ಹಾಕಲಿ. ಕಾದು ನೋಡುತ್ತೇವೆ. ಇದು ಹೋರಾಟ, ಹೋರಾಟಕ್ಕೆ ಸರ್ಕಾರ ಅನುಮತಿ ಬೇಡ ಎಂದು ಹೇಳಿದ್ದಾರೆ. ಬಳಿಕ ಮಾತನಾಡಿದ ಅವರು, ಹೆಚ್ಡಿಕೆ ಅವರು ನಮ್ಮ ಕಾರ್ಯಕ್ರಮ ಹೈಜಾಕ್ ಮಾಡಿದ್ರು ಅಂತಾ ಹೇಳಿದ್ರು. ಇದೀಗ ಯಾಕೆ ಮಾತನಾಡುತ್ತಾರೆ ಎಂದು ಸಂಸದ ಡಿಕೆ ಸುರೇಶ್ ತಿರುಗೇಟು ನೀಡಿದ್ದಾರೆ.
ಕೆಂಗಲ್ ಸ್ಮಾರಕಕ್ಕೆ ಡಿ.ಕೆ.ಶಿವಕುಮಾರ್ ಮಾಲಾರ್ಪಣೆ
ಇಂದು ಎರಡನೇ ಹಂತದ ಕಾಂಗ್ರೆಸ್ ಪಾದಯಾತ್ರೆ ಹಿನ್ನೆಲೆಯಲ್ಲಿ ಕೆಂಗಲ್ ಸ್ಮಾರಕಕ್ಕೆ ಡಿ.ಕೆ.ಶಿವಕುಮಾರ್ ಮಾಲಾರ್ಪಣೆ ಮಾಡಿದ್ದಾರೆ.
ಹಜರತ್ ಪೀರುನ್ ಷಾವಲಿ ದರ್ಗಾಕ್ಕೆ ಭೇಟಿ ಕೊಟ್ಟ ಡಿಕೆಶಿ
ರಾಮನಗರದ ಹಜರತ್ ಪೀರುನ್ ಷಾವಲಿ ದರ್ಗಾಕ್ಕೆ ಡಿಕೆಶಿ ಭೇಟಿ ನೀಡಿದ್ದಾರೆ. ದರ್ಗಾದಲ್ಲಿ ಚಾದರ್ ಹೊದೆಸಿ ಡಿ.ಕೆ. ಶಿವಕುಮಾರ್ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ. ಪಾದಯಾತ್ರೆ ಸುಗಮವಾಗಿ ಸಾಗಲು ಡಿಕೆಶಿ ವಿಶೇಷ ಕಾಣಿಕೆ ನೀಡಿ ದರ್ಗಾದಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ.
ರಾಮನಗರದ ಪ್ರವಾಸಿ ಮಂದಿರಕ್ಕೆ ಆಗಮಿಸಿದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ
ರಾಮನಗರದ ಪ್ರವಾಸಿ ಮಂದಿರಕ್ಕೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಆಗಮಿಸಿದ್ದಾರೆ. ಮೇಕೆದಾಟು 2.O ನಲ್ಲಿ ಭಾಗವಹಿಸಿ ಸುರ್ಜೇವಾಲಾ ಚಾಲನೆ ನೀಡಲಿದ್ದಾರೆ.
ರಾಮನಗರದ ಪ್ರವಾಸಿ ಮಂದಿರಕ್ಕೆ ಆಗಮಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ
ರಾಮನಗರದ ಪ್ರವಾಸಿ ಮಂದಿರಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ಆಗಮಿಸಿದ್ದಾರೆ. ಬಳಿಕ ಮೇಕೆದಾಟು ಪಾದಯಾತ್ರೆಯಲ್ಲಿ ಸಿದ್ದರಾಮಯ್ಯ ಭಾಗವಹಿಸಲಿದ್ದಾರೆ.
ಪಾದಯಾತ್ರೆಗೆ ಪಕ್ಷಾತೀತವಾಗಿ ಕರೆ ಕೊಟ್ಟಿದ್ದೇವೆ: ಸಂಸದ ಡಿಕೆ ಸುರೇಶ್
ಪಾದಯಾತ್ರೆ ಕೊವಿಡ್ನಿಂದ ನಿಂತಿತ್ತು. ಮತ್ತೆ ಇದೀಗ ಪ್ರಾರಂಭವಾಗಿದೆ. 90 ಕಿಲೋ ಮೀಟರ್ ಬಾಕಿ ಇತ್ತು. 25 ಕಿಲೋ ಮೀಟರ್ ಕಡಿತ ಮಾಡಿದ್ದೇವೆ. ಸುರ್ಜೆವಾಲ ಅವರು ಈ ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದಾರೆ. ಎಲ್ಲ ನಾಯಕರು ಪಾದಯಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ. ಪಕ್ಷಾತೀತವಾಗಿ ಕರೆ ಕೊಟ್ಟಿದ್ದೇವೆ ಎಂದು ಸಂಸದ ಡಿಕೆ ಸುರೇಶ್ ಹೇಳಿದ್ದಾರೆ.
ಚಾಮುಂಡೇಶ್ವರಿ ದೇವಸ್ಥಾನದಿಂದಲೇ ಪಾದಯಾತ್ರೆ ಸಾಂಕೇತಿಕ ಚಾಲನೆ
ಡಿ.ಕೆ.ಶಿವಕುಮಾರ್ಗೆ ಪೂರ್ಣ ಕುಂಭ ಸ್ವಾಗತ ಕೋರಲಾಗಿದ್ದು, ಚಾಮುಂಡೇಶ್ವರಿ ದೇವಸ್ಥಾನದಿಂದಲೇ ಪಾದಯಾತ್ರೆಗೆ ಸಾಂಕೇತಿಕ ಚಾಲನೆ ನೀಡಿದ್ದಾರೆ. ರಾಮನಗರದ ಚಾಮುಂಡೇಶ್ವರಿ ನಗರದ ಸಣ್ಣ ಸಣ್ಣ ಗಲ್ಲಿಗಳಲ್ಲಿ ಡಿ.ಕೆ.ಶಿವಕುಮಾರ್ ಹೆಜ್ಜೆ ಹಾಕುತ್ತಿದ್ದಾರೆ.
ಶ್ವಾನ ದಳ, ಬಾಂಬ್ ನಿಷ್ಕ್ರೀಯ ದಳದಿಂದ ತಪಾಸಣೆ
ಮೇಕೆದಾಟು ಪಾದಯಾತ್ರೆ ಹಿನ್ನೆಲೆ ರಾಮನಗರದ ಕನಕಪುರ ಸರ್ಕಲ್ ಬಳಿ ಬೃಹತ್ ವೇದಿಕೆ ನಿರ್ಮಾಣ ಮಾಡಲಾಗಿದೆ. ಹೀಗಾಗಿ ಮುಂಜಾಗ್ರತ ಕ್ರಮವಾಗಿ ಶ್ವಾನ ದಳ, ಬಾಂಬ್ ನಿಷ್ಕ್ರೀಯ ದಳದಿಂದ ತಪಾಸಣೆ ನಡೆಸಲಾಗಿದೆ.
ಪಾದಯಾತ್ರೆ ಸುಗಮವಾಗಿ ನಡೆಯುವಂತೆ ಕೋರಿ ವಿಶೇಷ ಪೂಜೆ ಸಲ್ಲಿಕೆ
ರಾಮನಗರದ ಚಾಮುಂಡೇಶ್ವರಿ ಬಡಾವಣೆ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಡಿ.ಕೆ.ಶಿವಕುಮಾರ್ ಪೂಜೆ ಸಲ್ಲಿಸಿದ್ದಾರೆ. ಪಾದಯಾತ್ರೆ ಸುಗಮವಾಗಿ ನಡೆಯುವಂತೆ ಕೋರಿ ವಿಶೇಷ ಪೂಜೆ ಸಲ್ಲಿಸಲಾಗಿದೆ.
ರಾಮನಗರದಲ್ಲಿ ಬೃಹತ್ ವೇದಿಕೆ ಸಿದ್ಧ
ರಾಮನಗರದಲ್ಲಿ ಬೃಹತ್ ವೇದಿಕೆ ಸಿದ್ದವಾಗಿದ್ದು, ವೇದಿಕೆಗೆ ಆಗಮಿಸಿ ಸಿದ್ದತೆ ಬಗ್ಗೆ ಡಿ.ಕೆ.ಶಿವಕುಮಾರ್ ಹಾಗೂ ಡಿ.ಕೆ. ಸುರೇಶ್ ಪರಿಶೀಲಿಸುತ್ತಿದ್ದಾರೆ.
ಬಿಜಿಎಸ್ ಮಠದಿಂದ ತೆರಳಿದ ಡಿ.ಕೆ. ಶಿವಕುಮಾರ್
ಬಿಜಿಎಸ್ ಮಠದಿಂದ ರಾಮನಗರದ ಚಾಮುಂಡೇಶ್ವರಿ ದೇವಾಸ್ಥಾನಕ್ಕೆ ಡಿ.ಕೆ.ಶಿವಕುಮಾರ್ ತೆರಳಿದ್ದಾರೆ.
ರಾಮನಗರದ ಬಿಜೆಎಸ್ ಮಠದಲ್ಲಿ ಗಂಗಾಧರಶ್ವೇರ ದೇವರ ಆಶೀರ್ವಾದ ಪಡೆದ ಡಿ.ಕೆ. ಶಿವಕುಮಾರ್
ಇಂದಿನಿಂದ ಎರಡನೇ ಹಂತದ ಮೇಕೆದಾಟು ಪಾದಯಾತ್ರೆ ಆರಂಭ ಹಿನ್ನೆಲೆಯಲ್ಲಿ. ದೇವರ ಆಶೀರ್ವಾದ ಪಡೆದು ಡಿಕೆಶಿ ಪಾದಯಾತ್ರೆ ದಿನಚರಿ ಆರಂಭ ಮಾಡಿದ್ದಾರೆ. ಡಿ.ಕೆ. ಶಿವಕುಮಾರ್ ರಾಮನಗರದ ಬಿಜೆಎಸ್ ಮಠದಲ್ಲಿ ಗಂಗಾಧರಶ್ವೇರ ದೇವರ ಆಶೀರ್ವಾದ ಪಡೆದಿದ್ದಾರೆ.
ಶುಭ ಭಾನುವಾರ ಶುಭಗಳಿಗೆಯಲ್ಲಿ ಪಾದಯಾತ್ರೆ ಶುರುವಾಗಲಿದೆ: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್
ಶುಭ ಭಾನುವಾರ ಶುಭಗಳಿಗೆಯಲ್ಲಿ ಪಾದಯಾತ್ರೆ ಶುರುವಾಗಲಿದೆ. ಯಶಸ್ವಿಯಾಗಿ ಪಾದಯಾತ್ರೆ ಸಾಗಲಿದೆ. ಇದು ನೀರಿಗಾಗಿ ನಡೆಸುತ್ತಿರುವ ಹೋರಾಟ. ಪಾದಯಾತ್ರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಭಾಗವಹಿಸಲಿದ್ದಾರೆ. ಬಿಸಿಲು ಸ್ವಲ್ಪ ಜಾಸ್ತಿ ಇದೆ. ಹೀಗಾಗಿ ಮಜ್ಜಿಗೆ ಎಳನೀರು ಊಟ ತಿಂಡಿ ವ್ಯವಸ್ಥೆ ಎಲ್ಲವೂ ಇದೆ. ಬಸವರಾಜ ಬೊಮ್ಮಾಯಿಯವರು ರಾಜಕೀಯ ಗಿಮಿಕ್ ಅಂತಾ ನಮ್ಮ ಮೇಲೆ ಆರೋಪಿಸಿದ್ದಾರೆ. ಆದರೆ ನಾವೂ ಮಾಡ್ತಿರೋದು ನೀರಿಗಾಗಿ. ನಮ್ಮ ನೀರಿಗಾಗಿ ಮಾಡುತ್ತಿರುವ ಹೋರಾಟ ಇದು. ಬಿಬಿಎಂಪಿ ವ್ಯಾಪ್ತಿಯಲ್ಲೂ ಅನುಮತಿ ಪಡೆದುಕೊಂಡಿದ್ದೇವೆ. ಬೆಂಗಳೂರಿನಲ್ಲಿ ಟ್ರಾಫಿಕ್ ಆಗದ ರೀತಿಯಲ್ಲಿ ಪೊಲೀಸರು ವ್ಯವಸ್ಥೆ ಮಾಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿಕೆ ನೀಡಿದ್ದಾರೆ.
ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಸಂಚರಿಸುವ ಪ್ರಯಾಣಿಕರಿಗೆ ತಟ್ಟಲಿದೆ ಟ್ರಾಫಿಕ್ ಬಿಸಿ
ಮೇಕೆದಾಟು ಪಾದಯಾತ್ರೆ ಹಿನ್ನೆಲೆ ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಒಂದು ಟ್ರಾಫಿಕ್ ಬಿಸಿ ತಟ್ಟಲಿದೆ. ಬೆಂಗಳೂರಿನಿಂದ ಮೈಸೂರಿಗೆ ಪ್ರಯಾಣಿಸುವವರಿಗೆ ಮಾತ್ರ ಹೆದ್ದಾರಿಯಲ್ಲಿ ಅವಕಾಶ ನೀಡಲಾಗುತ್ತದೆ. ಮೈಸೂರಿನಿಂದ ಬೆಂಗಳೂರಿಗೆ ಬರುವವರಿಗೆ ಬದಲಿ ಮಾರ್ಗದಲ್ಲಿ ಬರುವಂತೆ ಮನವಿ ಮಾಡಲಾಗಿದೆ. ಮೈಸೂರು, ಮದ್ದೂರು, ಚನ್ನಪಟ್ಟಣದ ಮೂಲಕ ಬದಲಿ ಮಾರ್ಗದ ವ್ಯವಸ್ಥೆ ಮಾಡಲಾಗಿದೆ.
ಮೊದಲ ದಿನವಾದ ಇಂದು 16 ಕಿ.ಮೀ. ಪಾದಯಾತ್ರೆ
ಮೇಕೆದಾಟು ಯೋಜನೆಗೆ ಆಗ್ರಹಿಸಿ ಮೊದಲ ದಿನವಾದ ಇಂದು 16 ಕಿ.ಮೀ. ಕಾಂಗ್ರೆಸ್ ಪಾದಯಾತ್ರೆ ನಡೆಯಲಿದೆ. ರಾಮನಗರದಿಂದ ಬಿಡದಿಯವರೆಗೆ ಕಾಂಗ್ರೆಸ್ ಪಾದಯಾತ್ರೆ ನಡೆಯಲಿದೆ. ರಾಮನಗರದ ಮಾಯಗಾನಹಳ್ಳಿ ಬಳಿ ಊಟದ ವ್ಯವಸ್ಥೆ ಮಾಡಲಾಗಿದ್ದು, ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಪಾದಯಾತ್ರೆ ನಡೆಯಲಿದೆ.
ಕಾಂಗ್ರೆಸ್ ಪಾದಯಾತ್ರೆಗೆ ಪೊಲೀಸ್ ಬಂದೋಬಸ್ತ್
ಮೇಕೆದಾಟು ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್ ಪಾದಯಾತ್ರೆ ಹಿನ್ನೆಲೆ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಕೇಂದ್ರ ವಲಯ ಐಜಿಪಿ ನೇತೃತ್ವದಲ್ಲಿ ಭದ್ರತೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಒಬ್ಬ ಎಸ್‌ಪಿ, ಇಬ್ಬರು ಎಎಸ್‌ಪಿಗಳು, 4 ಡಿವೈಎಸ್ಪಿಗಳು, 12 ಇನ್ಸ್‌ಪೆಕ್ಟರ್‌ಗಳು, 38 ಪಿಎಸ್‌ಐ, 37 ಎಎಸ್‌ಐ, 600 ಪೊಲೀಸ್ ಸಿಬ್ಬಂದಿ, 50 ಮಹಿಳಾ ಪಿಸಿಗಳು, 100 ಹೋಮ್‌ಗಾರ್ಡ್, 20 ಕೆಎಸ್‌ಆರ್‌ಪಿ ತುಕಡಿ, 12 ಡಿಎಆರ್ ಸೇರಿದಂತೆ 1,200 ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.
ಕನಕಪುರ ಸರ್ಕಲ್ ಬಳಿ ವಿಶಾಲವಾದ ಮೈದಾನದಲ್ಲಿ ಬೃಹತ್ ವೇದಿಕೆ ನಿರ್ಮಾಣ
ಇಂದಿನಿಂದ ಎರಡನೇ ಹಂತದ ಕಾಂಗ್ರೆಸ್ ಪಾದಯಾತ್ರೆ ಹಿನ್ನೆಲೆಯಲ್ಲಿ ಕನಕಪುರ ಸರ್ಕಲ್ ಬಳಿ ವಿಶಾಲವಾದ ಮೈದಾನದಲ್ಲಿ ಬೃಹತ್ ವೇದಿಕೆ ನಿರ್ಮಾಣ ಮಾಡಲಾಗಿದೆ. 100 ಅಡಿ ಅಗಲ, 60 ಅಡಿ ಉದ್ದದ ಬೃಹತ್ ವೇದಿಕೆ ನಿರ್ಮಾಣ ಮಾಡಿದ್ದಾರೆ. ಮೊದಲಿಗೆ ನಗರ ದೇವತೆ ಚಾಮುಂಡೇಶ್ವರಿ ದೇವಸ್ತಾನದಲ್ಲಿ ಪೂಜೆ ಸಲ್ಲಿಸಿ, ನಂತರ ಫಿರಾನ್ ಷಾ ಹೊಲಿ ದರ್ಗಾದಲ್ಲಿ ಪ್ರಾರ್ಥನೆ ಮಾಡಲಾಗುತ್ತದೆ. ಅಲ್ಲಿಂದ ಕನಕಪುರ ಸರ್ಕಲ್ವರೆಗೂ ಮೆರವಣಿಗೆ ಬಂದು ಪಾದಯಾತ್ರೆ ಅರಂಭ ಮಾಡಲಾಗುತ್ತದೆ.
ಮೇಕೆದಾಟು ಯೋಜನೆಗೆ ಒತ್ತಾಯಿಸಿ ಇಂದಿನಿಂದ ಕಾಂಗ್ರೆಸ್ ಪಾದಯಾತ್ರೆ ಪುನಾರಂಭ
ರಾಮನಗರದ ಕನಕಪುರ ಸರ್ಕಲ್‌ನಿಂದ ಕಾಂಗ್ರೆಸ್ ಪಾದಯಾತ್ರೆ ಆರಂಭವಾಗಲಿದೆ. ಇಂದು ಬೆಳಗ್ಗೆ 9 ಗಂಟೆಗೆ ಆರಂಭವಾಗಲಿರುವ ಪಾದಯಾತ್ರೆಗೂ ಮುನ್ನ ಬೃಹತ್ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮವನ್ನು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ ಉದ್ಘಾಟಿಸಲಿದ್ದಾರೆ.
Published On - Feb 27,2022 7:45 AM