ಜನವರಿಯಲ್ಲಿ ಮೂರು ದಿನ ಬೆಂಗಳೂರಿನಲ್ಲಿ ವಿಶ್ವಮಟ್ಟದ ಸಿರಿಧಾನ್ಯ ಮೇಳ: ಕೃಷಿ ಸಚಿವ ಬಿ.ಸಿ.ಪಾಟೀಲ
ಸಿರಿಧಾನ್ಯ ಮೇಳದಲ್ಲಿ ವ್ಯಾಪಾರಸ್ಥರು, ರಫ್ತುದಾರರು ಕೂಡ ಭಾಗಿಯಾಗಲಿದ್ದಾರೆ. ಸಿಎಂ ಮೂಲಕ ಪ್ರಧಾನಿಗೂ ಆಹ್ವಾನ ನೀಡುತ್ತೇವೆ ಎಂದು ಬಿ.ಸಿ.ಪಾಟೀಲ ಹೇಳಿದರು.
ಬೆಂಗಳೂರು: ಸಿರಿಧಾನ್ಯಗಳಲ್ಲಿ ಕರ್ನಾಟಕ ಅತ್ಯುತ್ತಮ ಸಾಧನೆ ಮಾಡಿದೆ. 2021ರಲ್ಲಿ ಗರಿಷ್ಠ ಪ್ರಮಾಣದಲ್ಲಿ ಸಿರಿಧಾನ್ಯ ಬೆಳೆದ ಕರ್ನಾಟಕಕ್ಕೆ ‘ಅತ್ಯುತ್ತಮ ರಾಜ್ಯ’ ಪ್ರಶಸ್ತಿ ಬಂದಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಹೇಳಿದರು. ವಿಕಾಸಸೌಧದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂದಿನ ವರ್ಷ ಅಂದರೆ 2023ರ ಜನವರಿ 20, 21 ಮತ್ತು 22 ರಂದು ನಗರದಲ್ಲಿ ಅಂತರಾಷ್ಟ್ರೀಯ ಸಿರಿಧಾನ್ಯ ಮೇಳ ಆಯೋಜಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.
ವಿದೇಶಗಳಲ್ಲಿ ರೈತರಿಗೆ ಸಿರಿಧಾನ್ಯದ ಬಗ್ಗೆ ಅರಿವು ಮೂಡಿಸಬೇಕಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಸಿರಿಧಾನ್ಯಗಳ ಬಗ್ಗೆ ಜಾಗೃತಿ ಮೂಡಿದೆ. ಪ್ರಧಾನಿ ನರೇಂದ್ರ ಮೋದಿ ಸಹ ಸಿರಿಧಾನ್ಯದ ಬಗ್ಗೆ ಮಾತನಾಡಿದ್ದಾರೆ. ಸಿರಿಧಾನ್ಯ ಮೇಳದಲ್ಲಿ ವ್ಯಾಪಾರಸ್ಥರು, ರಫ್ತುದಾರರು ಕೂಡ ಭಾಗಿಯಾಗಲಿದ್ದಾರೆ. ಸಿಎಂ ಮೂಲಕ ಪ್ರಧಾನಿಗೂ ಆಹ್ವಾನ ನೀಡುತ್ತೇವೆ. ಅವರು ಬಂದರೆ ನಮ್ಮ ಶಕ್ತಿ ಮತ್ತಷ್ಟು ಹೆಚ್ಚಲಿದೆ ಎಂದರು.
ರಾಜ್ಯದಲ್ಲಿ ನಿಯೋಜಿಸಲು ಉದ್ದೇಶಿಸಿದ್ದ 164 ಕೃಷಿ ಸಂಜೀವಿನಿ ವಾಹನಗಳ ಪೈಕಿ ಈಗಾಗಲೇ ನೂರು ವಾಹನಗಳನ್ನು ಬಿಡುಗಡೆ ಮಾಡಲಾಗಿದೆ. ಈ ವಾಹನಗಳ ಮೂಲಕ ‘ಲ್ಯಾಂಡ್ ಟು ಲ್ಯಾಬ್’ ಕಾರ್ಯಕ್ರಮ ಮಾಡುತ್ತೇವೆ. ಬೆಳೆಗೆ ಸಮಸ್ಯೆ ಇದ್ದಲ್ಲಿ ಸಮಸ್ಯೆ ಪರಿಹಾರ ಕೊಡಲಾಗುವುದು. ಮಳೆಯಿಂದಾಗಿ ರಾಜ್ಯದಲ್ಲಿ 10.20 ಲಕ್ಷ ಹೆಕ್ಟೇರ್ ಪ್ರದೇಶದ ಬೆಳೆ ಹಾನಿಯಾಗಿದ್ದು, ಸುಮಾರು ₹ 1,020 ಕೋಟಿ ಪರಿಹಾರ ಕೊಡಲಾಗಿದೆ ಎಂದು ಹೇಳಿದರು.
Published On - 2:05 pm, Wed, 19 October 22