ರಸ್ತೆ ಗುಂಡಿ ತಪ್ಪಿಸಲು ಹೋಗಿ ಅಪಘಾತ: ಸಮಸ್ಯೆ ಬಗ್ಗೆ ಬಿಬಿಎಂಪಿ ಆಯುಕ್ತರ ಜತೆ ಚರ್ಚೆ ಮಾಡುತ್ತೇನೆ ಎಂದ ಸಚಿವ ಆರ್. ಅಶೋಕ್
ಮಳೆ ಸಮಸ್ಯೆಗಳ ಬಗ್ಗೆ ಮುಖ್ಯವಾಗಿ ಚರ್ಚೆ ಮಾಡಿದ್ದು, ಡಿಸಿಗಳಿಗೆ ಹಲವಾರು ಸೂಚನೆ ನೀಡಲಾಗಿದೆ. ಮನೆಗಳು ಹಾನಿಯಾಗಿರುವ ಬಗ್ಗೆ ಮಾಹಿತಿ ಪಡೆಯಲಾಗಿದೆ ಎಂದು ಸಚಿವ ಆರ್. ಅಶೋಕ ಹೇಳಿದರು.
ಬೆಂಗಳೂರು: ನಗರದಲ್ಲಿ ರಸ್ತೆ ಗುಂಡಿ ತಪ್ಪಿಸಲು ಹೋಗಿ ಅಪಘಾತವಾಗಿದೆ. ಸಮಸ್ಯೆ ನಮಗೂ ಅರ್ಥವಾಗಿದೆ. ಕೂಡಲೇ ಬಿಬಿಎಂಪಿ ಆಯುಕ್ತರ ಜತೆ ಚರ್ಚೆ ಮಾಡುತ್ತೇವೆ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿಕೆ ನೀಡಿದರು. ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು. ಮಳೆ ಹಿನ್ನೆಲೆಯಲ್ಲಿ ಹಾಕಿದ ಟಾರ್ ಕಿತ್ತುಹೋಗುತ್ತಿದೆ. ಒಂದು ವೇಳೆ ಮಳೆ ಬಿಡುವು ಕೊಟ್ಟರೆ ರಸ್ತೆ ದುರಸ್ತಿ ಪೂರ್ತಿಗೊಳಿಸುತ್ತೇವೆ. ಮಳೆ ಸಮಸ್ಯೆಗಳ ಬಗ್ಗೆ ಮುಖ್ಯವಾಗಿ ಚರ್ಚೆ ಮಾಡಿದ್ದು, ಡಿಸಿಗಳಿಗೆ ಹಲವಾರು ಸೂಚನೆ ನೀಡಲಾಗಿದೆ. ಮನೆಗಳು ಹಾನಿಯಾಗಿರುವ ಬಗ್ಗೆ ಮಾಹಿತಿ ಪಡೆಯಲಾಗಿದೆ. ಎಷ್ಟು ಮನೆಗಳ ಹಾನಿ, ಎಷ್ಟು ನಿರ್ಮಿಸಲಾಗಿದೆ, ಇನ್ನೆಷ್ಟು ಬಾಕಿ ಇದೆ ಅಂತ ಮಾಹಿತಿ ಪಡೆಯಲಾಗಿದೆ ಎಂದರು. ಒತ್ತುವರಿ ಬಗ್ಗೆ ಮಾತನಾಡಿದ ಅವರು ರಾಜಾ ಕಾಲುವೆಗಳ ಒತ್ತುವರಿಯನ್ನೂ ತೆರವು ಮಾಡುತ್ತೇವೆ. ಯಾರು ಎಷ್ಟೇ ಪ್ರಭಾವ ಬೀರಿದರು ಎಷ್ಟೇ ದೊಡ್ಡವರಿದ್ದರೂ ಒತ್ತುವರಿ ತೆರವು ಮಾಡದೇ ಬಿಡುವುದಿಲ್ಲ ಎಂದು ಗುಡುಗಿದರು.
ತಾಂಡಾಗಳಿಗೆ ದಾಖಲೆ ಒದಗಿಸಲು ಚಿಂತನೆ:
ಲಂಬಾಣಿ ತಾಂಡಾಗಳು, ಕುರುಬರ ಹಟ್ಟಿಗಳಿಗೆ ದಾಖಲೆ ಇಲ್ಲದ ಬಗ್ಗೆ ಚರ್ಚಿಸಲಾಗಿದೆ. ಡಿಸೆಂಬರ್ ಒಳಗೆ ಕಂದಾಯ ಗ್ರಾಮಗಳು ಅಂತ ದಾಖಲೆ ನೀಡಲು ನಿರ್ಧರಿಸಿದ್ದು, ಅರಣ್ಯ ಜಮೀನುಗಳ ಬಗ್ಗೆ ಚರ್ಚೆಯಾಗಿದೆ. ಡೀಮ್ಡ್ ಅರಣ್ಯ ಭೂಮಿ ಸಾಗುವಳಿ ಮಾಡುವವರಿಗೆ ಕೊಡುವ ಚರ್ಚೆ ಆಗಿದೆ. ಇದರ ಬಗ್ಗೆ ತಹಸೀಲ್ದಾರ್ಗೆ ಅಧಿಕಾರ ಕೊಟ್ಟಿದ್ದೇವೆ. ರೈತರಿಗೆ ಸಮಸ್ಯೆ ಆಗದಂತೆ ನೋಡಿಕೊಳ್ಳಲು ಹೇಳಿದ್ದೇವೆ. ಸಮಾಜಕಲ್ಯಾಣ ಹಾಸ್ಟೆಲ್‌ಗಳ ಆಹಾರ ಪರೀಕ್ಷೆಗೆ ಡಿಸಿಗಳಿಗೆ ಸೂಚಿಸಲಾಗಿದೆ. ರಸಗೊಬ್ಬರ ವಿತರಣೆ ವ್ಯವಸ್ಥೆ ಇನ್ನಷ್ಟು ಪಾರದರ್ಶಕಗೊಳಿಸಲು ತಿಳಿಸಲಾಗಿದೆ ಎಂದು ಹೇಳಿದರು.
ಮಾಜಿ ಸೈನಿಕರಿಗೆ ನಿವೇಶನ:
ಬೆಳೆ ಔಷಧಗಳ ಪೂರೈಕೆಗೆ ತೊಡಕಾಗದಂತೆ ನೋಡಿಕೊಳ್ಳಲು ಹೇಳಿದ್ದು, ಎಸ್ಸಿ ಎಸ್ಟಿ ಸಮುದಾಯಗಳ ಮೇಲಿನ ದೌರ್ಜನ್ಯ ತಡೆಗೆ ಮತ್ತು ದೌರ್ಜನ್ಯಕ್ಕೆ ಒಳಗಾದ ಕುಟುಂಬಸ್ಥರಿಗೆ ಕೆಲಸ ಕೊಡಲು ಸೂಚಿಸಲಾಗಿದೆ. ಮಾಜಿ ಸೈನಿಕರಿಗೆ ನಗರ ಪ್ರದೇಶಗಳಲ್ಲಿ, ಜಿಲ್ಲಾ ಕೇಂದ್ರಗಳು, ನಗರ ಕೇಂದ್ರಗಳ ಪಕ್ಕದಲ್ಲಿ ನಿವೇಶನ ಕೊಡಲು ಜಾಗ ಗುರುತಿಸಲು ಅಧಿಕಾರಿಗಳಿಗೆ ತಿಳಿಸಲಾಗಿದೆ. ಜಿಲ್ಲಾಧಿಕಾರಿಗಳಿಗೆ ಟ್ರೈನಿಂಗ್ ಕ್ಯಾಂಪ್ ಮಾಡಲು ನಿರ್ಧರಿಸಿದ್ದು, ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಆಯಾಯ ಜಿಲ್ಲೆಗಳಿಗೆ ಸಂಬಂಧಿಸಿದಂತೆ ಡಿಸಿಗಳಿಗೆ ಟ್ರೈನಿಂಗ್ ಕ್ಯಾಂಪ್ ಮಾಡುತ್ತೇವೆ. ಕೆಲವು ಡಿಸಿಗಳಿಗೆ ಸಿಎಂ ವಾರ್ನಿಂಗ್ ಕೊಟ್ಟಿದಾರೆ. ಸರಿಯಾಗಿ ಕೆಲಸ ಮಾಡಿ ಅಂತ ಎಚ್ಚರಿಸಿದ್ದಾರೆ ಎಂದು ಸಚಿವ ಆರ್ ಅಶೋಕ ಹೇಳಿದರು.
ಇದನ್ನೂ ಓದಿ: ರಸ್ತೆ ಗುಂಡಿ ತಪ್ಪಿಸಲು ಹೋಗಿ ಅಪಘಾತ: ಕೆಎಸ್ಆರ್ಟಿಸಿ ಬಸ್ ಹರಿದು ಮಹಿಳೆ ಸ್ಥಿತಿ ಗಂಭೀರ
ಪೌತಿ ಖಾತೆಯಲ್ಲಿ ಸತ್ತವರ ಹೆಸರು ಕೈಬಿಡಲು ಸೂಚನೆ:
ಪೌತಿ ಖಾತೆಯಲ್ಲಿ ಸತ್ತವರ ಹೆಸರನ್ನು ಕೈಬಿಡಲು ಸೂಚಿಸಲಾಗಿದೆ. ಡಿಸಿ, ಎಸಿ, ತಹಶೀಲ್ದಾರ್ ಕಚೇರಿಯಲ್ಲಿ ಕೇಸ್ ಮುಂದುವರೆಯುತ್ತಿತ್ತು. ಪ್ರತೀ ತಿಂಗಳು ಸಭೆ ಕರೆದು ಚರ್ಚೆ ಮಾಡಿ ಕ್ಲಿಯರ್ ಮಾಡಲು ಸೂಚಿಸಲಾಗಿದೆ. 200ಕ್ಕೂ ಹೆಚ್ಚು ಸೈನಿಕರಿಗೆ ಜಿಲ್ಲಾ ವ್ಯಾಪ್ತಿಯಲ್ಲಿ ಗುರುತಿಸಿ ಸೈಟ್ ಕೊಡಲು ಸೂಚಿಸಲಾಗಿದೆ. ಮಳೆ ಬರುತ್ತಿದ್ದು ರಸಗೊಬ್ಬರ, ಬಿತ್ತನೆ ಬೀಜ ಕೊಡಬೇಕಾಗಿದೆ. ಸಿಎಂ ನಗರೋತ್ಥಾನ ಯೋಜನೆ ಅಡಿ ಟೆಂಡರ್ ಪ್ರಾರಂಭಿಸಲು ಅನುಮೋದನೆ ನೀಡಲಾಗಿದೆ. ಆಯುಷ್ಮಾನ್ ಭಾರತ್ ಪ್ರಾರಂಭಿಸಲು ಸಲಹೆ ಸೂಚನೆ ನೀಡಿದ್ದು, ನಾವು ಹೇಳಿದ್ದು ಬಂದು ಕೇಳಿಕೊಂಡು ಹೋಗುವುದಲ್ಲ. ಅವರಿಗೂ ಸಮಸ್ಯೆ ಬಗ್ಗೆ ಚರ್ಚಿಸಲು ಅವಕಾಶ ನೀಡಿದ್ದೆವು ಎಂದು ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:49 pm, Mon, 17 October 22