ಮಹಾತ್ಮ ಗಾಂಧಿ ಮೌಲ್ಯಗಳಿಗೆ ವಿರೋಧ ವಿಷಾದನೀಯ: ರಾಮಲಿಂಗಾರೆಡ್ಡಿ
ಮಹಾತ್ಮ ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಈ ದೇಶ ಕಂಡ ಮಹಾನ್ ವ್ಯಕ್ತಿಗಳು. ಆದರೆ ಹೊಸ ಪೀಳಿಗೆ ಈ ಮಹಾತ್ಮರ ಬಗ್ಗೆ ತಿಳಿದುಕೊಳ್ಳುತ್ತಿಲ್ಲ. ಬದಲಾಗಿ ಅವರ ಮೌಲ್ಯಗಳನ್ನು ವಿರೋಧಿಸುವ ಪ್ರವೃತ್ತಿ ಇತ್ತೀಚೆಗೆ ಹೆಚ್ಚುತ್ತಿರುವುದು ವಿಷಾದನೀಯ ಎಂದು ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.

ಬೆಂಗಳೂರು, ಅಕ್ಟೋಬರ್ 02: ರಾಜ್ಯ ಸರ್ಕಾರದ ವತಿಯಿಂದ ಮಹಾತ್ಮ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀ ಅವರ ಜಯಂತಿ ಕಾರ್ಯಕ್ರಮ ವಿಧಾನಸೌಧದಲ್ಲಿ (Vidhana Soudha) ನಡೆಯಿತು. ಮುಖ್ಯಮಂತ್ರಿಗಳ ಪೂರ್ವನಿಮಿತ್ತ ಕಾರ್ಯಕ್ರಮಗಳ ಕಾರಣ ಅವರ ಅನುಪಸ್ಥಿತಿಯಲ್ಲಿ ಸರ್ಕಾರದ ಪರವಾಗಿ ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಕಾರ್ಯಕ್ರಮ ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ಭಾರತೀಯರ ಮನಸ್ಸಿನಲ್ಲಿ ಅಚ್ಚಳಿಯದೇ ಸದಾ ಶಾಶ್ವತವಾಗಿರುವ ಹೆಸರು ಅಂದರೆ ಅದು ರಾಷ್ಟ್ರಪಿತ ಮಹಾತ್ಮ ಗಾಂಧಿ. ಅಹಿಂಸಾ ಮಾರ್ಗದಲ್ಲಿ ನಡೆದು ದೇಶಕ್ಕೆ ಸ್ವಾತಂತ್ರ್ಯ ಗಳಿಸಿಕೊಟ್ಟ ಗಾಂಧಿಜಿ ದೇಶ ಕಂಡ ಮಹಾನ್ ನಾಯಕ. ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಹಲವು ಮಹನೀಯ ಪಾತ್ರವಿದೆ. ಗೋಪಾಲಕೃಷ್ಣ ಗೋಖಲೆ, ಲಾಲಲಜಪತರಾಯ್, ಬಿಪಿನ್ ಚಂದ್ರ ಪಾಲ್, ಬಾಲಗಂಗಾಧರ ನಾಥ್ ತಿಲಕ್, ಮೋತಿಲಾಲ್ ನೆಹರು ಸೇರಿ ಹಲವರು 1930 ರ ಮುಂಚೆಯೇ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದರು. ಪಶ್ಚಿಮ ಬಂಗಾಳದಲ್ಲಿ ಸುಭಾಸ್ ಚಂದ್ರ ಬೋಸ್ , ಗುಜರಾತ್ ನಲ್ಲಿ ಸರದಾರ್ ವಲ್ಲಭಬಾಯಿ ಪಟೇಲ್ ಹೀಗೆ ದೇಶದ ವಿವಿಧ ಪ್ರಾಂತ್ಯಗಳಲ್ಲಿ ಸ್ವಾತಂತ್ರ್ಯ ಹೋರಾಟಗಾರರು ಬೇರೂರಿದ್ದರೂ ದೇಶದಲ್ಲಿ ವಿವಿಧತೆಯಲ್ಲಿ ಏಕತೆಗೆ ಕಾರಣರಾಗಿದ್ದು ಮಹಾತ್ಮ ಗಾಂಧೀಜಿ. ದೇಶದ ಮೂಲೆ ಮೂಲೆಯಲ್ಲಿನ ವಿವಿಧ ಧರ್ಮ, ಜಾತಿ, ಸಂಸ್ಕೃತಿಯ ಜನರನ್ನು ಒಟ್ಟಾಗಿಸಿ ದೇಶಾಭಿಮಾನ ಮೂಡುವಂತೆ ಮಾಡಿ ಜನರನ್ನು ಸ್ವಾತಂತ್ರ್ಯ ಹೋರಾಟಕ್ಕೆ ಅಣಿ ಮಾಡಿದ್ದು ಅವರು ಎಂದು ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ಇದನ್ನೂ ಓದಿ: ಬೆಂಗಳೂರಲ್ಲಿ ಧಾರಾಕಾರ ಮಳೆ: ವಾಹನ ಸವಾರರ ಪರದಾಟ
ಗ್ರಾಮ ನೈರ್ಮಲ್ಯ, ಆರೋಗ್ಯ, ಶಿಕ್ಷಣ, ನೀರು, ವಿದ್ಯುತ್, ರಸ್ತೆಗಳು ಸೇರಿದಂತೆ ಮೂಲ ಸೌಕರ್ಯಗಳ ಸಮರ್ಪಕ ಅಭಿವೃದ್ಧಿ ಗಾಂಧೀಜಿ ಕನಸಾಗಿತ್ತು. ಸಮಾಜದ ದುರ್ಬಲ ವರ್ಗದವರಿಗೆ ಶಕ್ತಿ ತುಂಬಿದಾಗ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ ಎಂಬುದು ಅವರ ತತ್ತ್ವವಾಗಿತ್ತು. ಅದೇ ರೀತಿ ದೇಶ ಕಂಡ ಮತ್ತೊಬ್ಬ ಅತ್ಯಂತ ಪ್ರಾಮಾಣಿಕ, ಸರಳ, ಸಜ್ಜನ, ಸಮರ್ಪಣೆಗೆ ಹೆಸರಾದ ವ್ಯಕ್ತಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರು. ಆದರೆ ಹೊಸ ಪೀಳಿಗೆ ಈ ಮಹಾತ್ಮರ ಬಗ್ಗೆ ತಿಳಿದುಕೊಳ್ಳುತ್ತಿಲ್ಲ. ಬದಲಾಗಿ ಅವರ ಮೌಲ್ಯಗಳನ್ನು ವಿರೋಧಿಸುವ ಪ್ರವೃತ್ತಿ ಇತ್ತೀಚೆಗೆ ಹೆಚ್ಚುತ್ತಿರುವುದು ವಿಷಾದನೀಯ ಎಂದು ಸಚಿವರು ಅಭಿಪ್ರಾಯಪಟ್ಟಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.




