ಸಮಸ್ಯೆ ಹೇಳಲು ಬಂದ ಮಹಿಳೆ ಮೇಲೆ ಶಾಸಕ ಅರವಿಂದ್ ಲಿಂಬಾವಳಿ ದರ್ಪ: ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್
ಸಮಸ್ಯೆ ಹೇಳಲು ಬಂದ ಮಹಿಳೆಗೆ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಬೈದಿದ್ದಾರೆ ಎಂದು ಆರೋಪ ಮಾಡಲಾಗಿದೆ. ಬೆಂಗಳೂರಿನ ವರ್ತೂರು ಕೆರೆ ಕೋಡಿ ವೀಕ್ಷಣೆ ವೇಳೆ ಘಟನೆ ನಡೆದಿದೆ.
ಬೆಂಗಳೂರು: ಸಮಸ್ಯೆ ಹೇಳಲು ಬಂದ ಮಹಿಳೆಗೆ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ (Arvind Limbavali) ಬೈದಿದ್ದಾರೆ ಎಂದು ಆರೋಪ ಮಾಡಲಾಗಿದೆ. ಬೆಂಗಳೂರಿನ ವರ್ತೂರು ಕೆರೆ ಕೋಡಿ ವೀಕ್ಷಣೆ ವೇಳೆ ಘಟನೆ ನಡೆದಿದೆ. ಮಹಿಳೆಗೆ ಬೈದಿರುವ ಎನ್ನಲಾಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಳೆ ಹಾನಿ ವೀಕ್ಷಣೆ ವೇಳೆ ಮನವಿ ಸಲ್ಲಿಸಲು ಮಹಿಳೆ ಬಂದಿದ್ದರು. ಮನವಿ ಪತ್ರ ಕಸಿದುಕೊಂಡು ಮಹಿಳೆ (woman) ಗೆ ಆವಾಜ್ ಹಾಕಿದ ಆರೋಪ ಮಾಡಲಾಗಿದೆ. ನಿನಗೆ ಮಾನ ಮರ್ಯಾದೆ ಏನಾದ್ರೂ ಇದ್ಯಾ? ನಾಚಿಕೆ ಆಗಲ್ವಾ? ಮಹಿಳೆಯನ್ನು ಠಾಣೆಗೆ ಕರೆದೊಯ್ದು ಕೂರಿಸಿ ಎಂದು ಶಾಸಕರು ಆವಾಜ್ ಹಾಕಿದ್ದಾರೆ ಎನ್ನಲಾಗುತ್ತಿದೆ. ಸಮಸ್ಯೆ ಹೇಳಲು ಬಂದ ಮಹಿಳೆ ಮೇರಿ ಸಗಾಯಿಯನ್ನು ಪೊಲೀಸರು ಬಂಧಿಸಿದ್ದು, ಈ ಹಿನ್ನೆಲೆ ವೈಟ್‌ಫೀಲ್ಡ್ ಪೊಲೀಸ್ ಸ್ಟೇಷನ್ ಬಳಿ ಮಹಿಳೆಯರು ಪ್ರತಿಭಟನೆ ನಡೆಸಿದರು. ಮೇರಿ ಸಗಾಯಿಯನ್ನು ಯಾಕೆ ಸ್ಟೇಷನ್‌ಗೆ ಕರೆದೋಯ್ದಿದ್ದೀರಾ? ಯಾಕೆ ಪೊಲೀಸರು ಈ ರೀತಿ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಕಾರ್ಯಕರ್ತರು ನನ್ನ ವಿರುದ್ಧ ಧರಣಿ ಮಾಡುತ್ತಿದ್ದಾರೆ: ಅರವಿಂದ ಲಿಂಬಾವಳಿ
ಈ ಕುರಿತಾಗಿ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಟಿವಿ9ಗೆ ಹೇಳಿಕೆ ನೀಡಿದ್ದು, ಸರ್ಕಾರಿ ಜಾಗ ಅತಿಕ್ರಮಿಸಿ ಅಲ್ಲಿ ಕಟ್ಟಡ ನಿರ್ಮಿಸಿಕೊಂಡಿದ್ದಾರೆ. ದೂರು ನೀಡಿದ ಮಹಿಳೆ ಕಾಂಗ್ರೆಸ್ ಕಾರ್ಯಕರ್ತೆ. ಕಾಂಗ್ರೆಸ್ ಕಾರ್ಯಕರ್ತರು ನನ್ನ ವಿರುದ್ಧ ಧರಣಿ ಮಾಡುತ್ತಿದ್ದಾರೆ. ಈ ಮೂಲಕ ಕಾಂಗ್ರೆಸ್ ಪಕ್ಷದವರು ಅಕ್ರಮಕ್ಕೆ ಬೆಂಬಲಿಸುತ್ತಿದ್ದಾರೆ. ದರ್ಪ, ಹಲ್ಲೆ ಸೇರಿದಂತೆ ಏನ್ ಬೇಕಾದರೂ ಪದ ಬಳಸಿಕೊಳ್ಳಲಿ. ಅಕ್ರಮವಾಗಿ ರಾಜಕಾಲುವೆ ಮೇಲೆ ಮನೆ ಕಟ್ಟಿಕೊಂಡಿದ್ದಾರೆ. ಅಕ್ರಮ ಕಟ್ಟಡವನ್ನು ಮೊದಲು ತೆರವು ಮಾಡಲಿ ಎಂದು ಹೇಳಿದರು.
ಶಾಸಕರು ಸಾರ್ವಜನಿಕವಾಗಿ ಕ್ಷಮೇ ಕೇಳಬೇಕು: ಮೇರಿ ಸಗಾಯಿ ಪತಿ ಅಶೋಕ್
ಮೇರಿ ಸಗಾಯಿ ಪತಿ ಅಶೋಕ್ ಮೃತ್ಯುಂಜಯ ಹೇಳಿಕೆ ನೀಡಿದ್ದು, ಶಾಸಕರ ವರ್ತನೆ ತುಂಬಾ ಬೇಸರವಾಗಿದೆ. ನ್ಯಾಯ ಕೇಳಲು ಹೋದ ನನ್ನ ಮೇಲೆ ಗಲಾಟೆಗೆ ಮುಂದಾಗಿದ್ರು. ಪೊಲೀಸ್ರನ್ನ ಕರೆದು ಅರೆಸ್ಟ್ ಮಾಡಿ ಇವನಿಗೆ ಅಂದ್ರು. ಬಿಜೆಪಿ ಹೆಸರು ಹಾಳಾಗುತ್ತೆ ಇತಂಹ ಶಾಸಕರಿಂದ. ಶಾಸಕರು ಸಾರ್ವಜನಿಕವಾಗಿ ಕ್ಷಮೇ ಕೇಳಬೇಕು. ಕ್ಷಮೆಯಾಚಿಸುವವರೆಗೂ ಕಾನೂನು ಹೋರಾಟ ಮಾಡ್ತೀವಿ ಎಂದು ಹೇಳಿದರು.
ಶಾಸಕರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ಮಹಿಳೆ ವಿರುದ್ಧ ಎಫ್ಐಆರ್
ಇನ್ನೂ ಈ ವಿಚಾರವಾಗಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪ ಹಿನ್ನಲೆ ಮಹಿಳೆ ವಿರುದ್ಧ ವೈಟ್ ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲು ಮಾಡಲಾಗಿದೆ. ಕಂದಾಯ ಅಧಿಕಾರಿ ಪಾರ್ಥ ಸಾರಥಿ ಕೊಟ್ಟ ದೂರಿನ ಆಧಾರದ ಮೇಲೆ ಎಫ್ಐಆರ್ ದಾಖಲಾಗಿದೆ. ಮಹಿಳೆ ಮೇರಿ ಸಗಾಯಿ ವೈಟ್ ಭಾಗದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಆಗಿದ್ದು, ಮಹಿಳೆಯ ಕಮರ್ಷಿಯಲ್ ಬಿಲ್ಡಿಂಗ್ ಇದ್ದು, ಕಾಂಪೌಂಡ್ ರಾಜಕಾಲುವೆ ಒತ್ತುವರಿಯಾಗಿದೆ ಎಂಬ ಆರೋಪ ಮಾಡಲಾಗಿದೆ.
ಸಿಎಂ ಬರುವ ಹಿನ್ನಲೆ ಅಂದು ಮಧ್ಯಾಹ್ನ ಅಧಿಕಾರಿಗಳು ಒತ್ತುವರಿ ತೆರವು ಮಾಡಿದ್ದರು. ಇದೇ ವೇಳೆ ಪರಿಶೀಲನೆಗೆ ಬಂದಿದ್ದ ಶಾಸಕ ಅರವಿಂದ ಲಿಂಬಾವಳಿಗೆ ನೋಟೀಸ್ ಸಹ ನೀಡದೆ ಕಾಂಪೌಂಡ್ ತೆರವು ಎಂದು ದೂರು ನೀಡಲಾಗಿದೆ. ಯಾವುದೇ ಒತ್ತುವರಿ ಬಿಡುವುದಿಲ್ಲ ಎಂದು ಕೋಪದಲ್ಲಿ ಶಾಸಕರು ಬೈಯ್ದಿದ್ದಾರೆ ಎನ್ನಲಾಗುತ್ತಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:18 am, Sat, 3 September 22