ಮಂಗಳೂರು: ಉಪನ್ಯಾಸಕರಿಂದಲೇ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ, ಬೆಂಗಳೂರಿನಲ್ಲಿ ಮೂವರ ಬಂಧನ
ಮೂಡುಬಿದಿರೆಯ ಕಾಲೇಜೊಂದರ ಇಬ್ಬರು ಉಪನ್ಯಾಸಕರು ಮತ್ತು ಅವರ ಸ್ನೇಹಿತನೊಬ್ಬ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಬೆಂಗಳೂರಿನಲ್ಲಿ ಬಂಧನಕ್ಕೊಳಗಾಗಿದ್ದಾರೆ. ನೋಟ್ಸ್ ನೀಡುವ ನೆಪದಲ್ಲಿ ವಿದ್ಯಾರ್ಥಿನಿ ಜತೆ ಸಲುಗೆ ಬೆಳೆಸಿಕೊಂಡು ನಂತರ ಬ್ಲ್ಯಾಕ್‌ಮೇಲ್ ಮಾಡಿ ನಿರಂತರ ಅತ್ಯಾಚಾರ ಎಸಗಿದ್ದಾರೆ ಎಂದು ಮಾರತಹಳ್ಳಿ ಪೊಲೀಸರಿಗೆ ಸಂತ್ರಸ್ತೆ ನೀಡಿದ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಬೆಂಗಳೂರು, ಜುಲೈ 15: ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಮೂಡುಬಿದಿರೆಯ ಕಾಲೇಜೊಂದರ ಇಬ್ಬರು ಉಪನ್ಯಾಸಕರು ಹಾಗೂ ಅವರ ಸ್ನೇಹಿತನೊಬ್ಬ ವಿದ್ಯಾರ್ಥಿನಿ ಮೇಲೆ ನಿರಂತರ ಅತ್ಯಾಚಾರ ಎಸಗಿದ ಆರೋಪ ಸಂಬಂಧ ಬೆಂಗಳೂರಿನ (Bengaluru) ಮಾರತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ಸಂಬಂಧ ಇದೀಗ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಫಿಸಿಕ್ಸ್ ಉಪನ್ಯಾಸಕ ನರೇಂದ್ರ, ಬಯಾಲಜಿ ಉಪನ್ಯಾಸಕ ಸಂದೀಪ್ ಹಾಗೂ ಅವರ ಗೆಳೆಯ ಅನೂಪ್ ಎಂದು ಗುರುತಿಸಲಾಗಿದೆ.
ನೋಟ್ಸ್ ನೀಡುವ ನೆಪದಲ್ಲಿ ಕೃತ್ಯ
ಫಿಸಿಕ್ಸ್ ಉಪನ್ಯಾಸಕ ನರೇಂದ್ರ ನೋಟ್ಸ್ ನೀಡುವ ನೆಪದಲ್ಲಿ ವಿದ್ಯಾರ್ಥಿನಿ ಜತೆ ಹತ್ತಿರವಾಗಿದ್ದ. ಬಳಿಕ ಹಂತ ಹಂತವಾಗಿ ಚಾಟ್ ಮಾಡುವುದು, ನೋಟ್ಸ್ ನೀಡುವುದು ಮಾಡಿದ್ದ. ಹಾಗೆಯೇ ವಿದ್ಯಾರ್ಥಿನಿ ಜತೆ ಸಲುಗೆ ಬೆಳೆಸಿಕೊಂಡಿದ್ದ ಉಪನ್ಯಾಸಕ, ಆಕೆ ಬೆಂಗಳೂರಿಗೆ ಬಂದ ನಂತರವೂ ಚಾಟ್ ಮಾಡುವುದು, ನೋಟ್ಸ್ ನೀಡುವುದನ್ನು ಮುಂದುವರಿಸಿದ್ದ. ಅದೇ ನೆಪದಲ್ಲಿ ಮಾರತಹಳ್ಳಿಯ ಗೆಳೆಯನ ರೂಮ್ಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದ. ಅಷ್ಟೇ ಅಲ್ಲದೆ, ವಿಚಾರ ಯಾರಿಗೂ ತಿಳಿಸದಂತೆ ಬೆದರಿಕೆ ಹಾಕಿದ್ದ.
ಮತ್ತೊಬ್ಬ ಉಪನ್ಯಾಸಕನ ಕೃತ್ಯವನ್ನಿಟ್ಟುಕೊಂಡು ಬ್ಲ್ಯಾಕ್‌ಮೇಲ್, ಮತ್ತೆ ರೇಪ್
ಉಪನ್ಯಾಸಕ ನರೇಂದ್ರ ದುಷ್ಕೃತ್ಯ ಎಸಗಿದ ಬಳಿಕ ಬಯಾಲಜಿ ಉಪನ್ಯಾಸಕ ಸಂದೀಪ್ ಸಹ ಯುವತಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ. ಆ ಸಂದರ್ಭದಲ್ಲಿ ಆಕೆ ವಿರೋಧ ವ್ಯಕ್ತಪಡಿಸಿದ್ದಳು. ಆಗ, ‘ನೀನು ನರೇಂದ್ರನ ಜೊತೆಗೆ ಇರುವ ಫೋಟೊ ಹಾಗೂ ವಿಡಿಯೋ ತನ್ನ ಬಳಿ ಇದೆ. ಅದನ್ನು ಕಾಲೇಜಿನಲ್ಲಿ ಎಲ್ಲರಿಗೂ ಗೊತ್ತಾಗುವಂತೆ ಮಾಡುವೆ’ ಎಂದು ಬ್ಲ್ಯಾಕ್‌ಮೇಲ್ ಮಾಡಿದ್ದ ಸಂದೀಪ್, ಅತ್ಯಾಚಾರ ಎಸಗಿದ್ದ.
ಉಪನ್ಯಾಸಕರ ಸ್ನೇಹಿತನಿಂದಲೂ ಬ್ಲ್ಯಾಕ್‌ಮೇಲ್, ರೇಪ್
ವಿದ್ಯಾರ್ಥಿನಿ ಮೇಲೆ ಸಂದೀಪ್ ಅತ್ಯಾಚಾರ ಎಸಗಿದ ರೂಮ್ ಅನೂಪ್ ಎಂಬಾತನದ್ದಾಗಿತ್ತು. ಘಟನೆ ಬೆನ್ನಲ್ಲೇ ವಿದ್ಯಾರ್ಥಿನಿಯನ್ನು ಸಂಪರ್ಕಿಸಿದ್ದ ಅನೂಪ್, ‘ನೀನು ನನ್ನ ರೂಮ್ಗೆ ಬಂದಿರುವುದು ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ನನ್ನ ರೂಮ್ನಲ್ಲಿ ಸಿಸಿಟಿವಿ ಇದೆ’ ಎಂದು ಬೆದರಿಕೆ ಹಾಕಿದ್ದ. ಬಳಿಕ ಆತನಿಂದಲೂ ಯುವತಿ ಮೇಲೆ ಅತ್ಯಾಚಾರ ನಡೆದಿದೆ.
ಉಪನ್ಯಾಸಕರನ್ನು ಎದುರಿಸಲು ಸಾಧ್ಯವಾಗದೆ ಆರಂಭದಲ್ಲಿ ಸುಮ್ಮನಿದ್ದ ವಿದ್ಯಾರ್ಥಿನಿ, ನಂತರ ಸಮಸ್ಯೆ ಹೆಚ್ಚಾಗಲು ಆರಂಭವಾದಾಗ ಕೃತ್ಯದ ಬಗ್ಗೆ ಪೋಷಕರ ಬಳಿ ಹೇಳಿಕೊಂಡಿದ್ದಾಳೆ. ಪೊಷಕರು ಆಕೆಯನ್ನು ಮಹಿಳಾ ಆಯೋಗಕ್ಕೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಆಕೆಗೆ ಕೌನ್ಸೆಲಿಂಗ್ ಮಾಡಿ ಪೊಲೀಸರಿಗೆ ದೂರು ಕೊಡಿಸಿದ್ದಾರೆ.
ಇದನ್ನೂ ಓದಿ: ಅತ್ಯಾಚಾರವಾಗಿದೆ ಎಂದ ಮಗಳು, ಆಟೋದಿಂದ ಬಿದ್ದಳು ಎಂದ ಅಪ್ಪ; ಕೊಲ್ಕತ್ತಾ ಅತ್ಯಾಚಾರ ಕೇಸಿಗೆ ಹೊಸ ತಿರುವು
ಸದ್ಯ ಮೂವರು ಆರೋಪಿಗಳನ್ನು ಬಂಧಿಸಿರುವ ಮಾರತಹಳ್ಳಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಈ ಉಪನ್ಯಾಸಕರು ಈ ಹಿಂದೆಯೂ ಕೆಲವು ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರ ಮಾಡಿ ಯಾರಿಗೂ ಹೇಳದಂತೆ ಬೆದರಿಕೆ ಹಾಕಿರುವ ಅನುಮಾನ ವ್ಯಕ್ತವಾಗಿದ್ದು, ಈ ಕುರಿತು ತನಿಖೆ ನಡೆಯತ್ತಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:51 pm, Tue, 15 July 25







