ನನ್ನ ಹೇಳಿಕೆ ತಿರುಚಿದ್ದಾರೆ, ಮಾಧ್ಯಮಗಳ ಮೇಲೆ ಹಕ್ಕುಚ್ಯುತಿ ಮಂಡನೆ ಮಾಡ್ತೀನಿ -ಬಿಕೆ ಹರಿಪ್ರಸಾದ್
ಪಾಕಿಸ್ತಾನ ನಮ್ಮ ಶತ್ರು ರಾಷ್ಟ್ರವಲ್ಲ, ನೆರೆಯ ರಾಷ್ಟ್ರ ಎಂದು ಬಿ.ಕೆ ಹರಿಪ್ರಸಾದ್ ಹೇಳಿಕೆ ನೀಡಿದ್ದರು. ಈ ಹೇಳಿಕೆಯನ್ನು ಮಾಧ್ಯಮಗಳು ತಿರುಚಿವೆ. ಇದರಿಂದ ಬಿಜೆಪಿ ನನ್ನ ಮೇಲೆ ಹರಿಹಾಯ್ದಿದೆ, ನಾನು ಮಾಧ್ಯಮಗಳ ಮೇಲೆ ಹಕ್ಕುಚ್ಯುತಿ ಮಂಡನೆ ಮಾಡುತ್ತೇನೆ ಎಂದು ವಿಧಾನ ಪರಿಷತ್ನಲ್ಲಿ ಬಿಕೆ ಹರಿಪ್ರಸಾದ್ ತಿಳಿಸಿದ್ದಾರೆ.
ಬೆಂಗಳೂರು, ಫೆ.29: ರಾಜ್ಯಸಭೆ ಚುನಾವಣೆ ಗೆಲುವಿನ ಬಳಿಕ ನಾಸೀರ್ ಹುಸೇನ್ (Nasser Hussain) ಬೆಂಬಲಿಗರು ಪಾಕ್ ಪರ ಘೋಷಣೆ ಕೂಗಿರುವ ಆರೋಪ ಪ್ರಕರಣ ಇಡೀ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ನಿನ್ನೆ ವಿಧಾನಪರಿಷತ್ನಲ್ಲೂ ಈ ಬಗ್ಗೆ ಬಿಸಿಬಿಸಿ ಚರ್ಚೆ ನಡೆದಿದ್ದು ಈ ವೇಳೆ ಕಾಂಗ್ರೆಸ್ ಎಂಎಲ್ಸಿ ಬಿಕೆ ಹರಿಪ್ರಸಾದ್ (MLA BK Hariprasad) ನೀಡಿರುವ ಹೇಳಿಕೆ ವಿರೋಧ ಪಕ್ಷಗಳ ಆಕ್ರೋಶಕ್ಕೆ ಕಾರಣವಾಗಿದೆ. ಪಾಕಿಸ್ತಾನ (Pakistan) ನಮ್ಮ ಶತ್ರು ರಾಷ್ಟ್ರವಲ್ಲ, ನೆರೆಯ ರಾಷ್ಟ್ರ ಎಂದಿದ್ದಾರೆ. ಸದ್ಯ ಈ ಹೇಳಿಕೆಗೆ ವಿರೋಧ ಪಕ್ಷಗಳು ಕೆಂಡಕಾರಿದ್ದಾರೆ. ಆದರೆ ಬಿ.ಕೆ ಹರಿಪ್ರಸಾದ್ ಮಾಧ್ಯಮಗಳ ಮೇಲೆ ಹಕ್ಕುಚ್ಯುತಿ ಮಂಡನೆ ಮಾಡುವುದಾಗಿ ಹೇಳಿದ್ದಾರೆ.
ವಿಧಾನ ಪರಿಷತ್ನಲ್ಲಿ ನಿನ್ನೆ ನಡೆದ ವಿಚಾರದಲ್ಲಿ ಕೆಲವು ಮಾಧ್ಯಮಗಳು ತಿರುಚಿ ಪ್ರಸಾರ ಮಾಡುತ್ತಿವೆ. ಇದು ಪರಿಷತ್ ಹಕ್ಕುಚ್ಯುತಿ ದಕ್ಕೆ ಆಗಲಿದೆ. ಹಾಗಾಗಿ ಸಭಾಧ್ಯಕ್ಷರಿಗೆ ಮನವಿ ಮಾಡಿದ್ದೇನೆ. ಇವತ್ತು ಕೆಲ ಮಾಧ್ಯಮಗಳ ಮೇಲೆ ಹಕ್ಕುಚ್ಯುತಿ ಮಂಡನೆ ಮಾಡುತ್ತೇನೆ. ಬಿಜೆಪಿಯವರು ತಮ್ಮ ಪ್ರಚಾರಕ್ಕೆ ಬಳಸುತ್ತಿದ್ದಾರೆ. ಬಿಜೆಪಿ ಡರ್ಟಿ ಟ್ರೀಕ್ಸ್ ಗಳಿಗೆ ಕಡಿವಾಣ ಹಾಕಬೇಕು. ನಾನು ನಿನ್ನೆ ಉತ್ತರ ನೀಡುವಾಗ ಹೇಳಿದ್ದೆ, ಪಾಕಿಸ್ತಾನ ಬಿಜೆಪಿಗೆ ಶತ್ರು ರಾಷ್ಟ್ರ ಆಗಿರಬಹುದು ಆದರೆ ನೆರೆ ರಾಷ್ಟ್ರ ಅಂತ ನಾನು ಹೇಳಿದ್ದೆ. ಅದನ್ನು ಮಾಧ್ಯಮಗಳಲ್ಲಿ ಬೇರೆ ತರಹ ಬಿಂಬಿಸಲಾಗುತ್ತಿದೆ. ಇದರ ವಿರುದ್ದ ನಾನು ಹಕ್ಕುಚ್ಯುತಿ ಮಂಡಿಸುತ್ತೇನೆ ಎಂದು ಬಿಕೆ ಹರಿಪ್ರಸಾದ್ ಇಂದು ನಡೆಯುತ್ತಿರುವ ವಿಧಾನ ಪರಿಷತ್ನಲ್ಲಿ ಹೇಳಿದರು.
ಇದನ್ನೂ ಓದಿ: ಪಾಕಿಸ್ತಾನ ಶತ್ರು ರಾಷ್ಟ್ರವಲ್ಲವೆಂಬ ಬಿಕೆ ಹರಿಪ್ರಸಾದ್ ಹೇಳಿಕೆ ನಾಚಿಕೆಗೇಡಿನದ್ದು: ಶೋಭಾ ಕರಂದ್ಲಾಜೆ ಆಕ್ರೋಶ
ನಿನ್ನೆ ಬಿಕೆ ಹರಿಪ್ರಸಾದ್ ಹೇಳಿದ್ದೇನು?
ಪಾಕಿಸ್ತಾನ ನಮ್ಮ ಶತ್ರು ರಾಷ್ಟ್ರವಲ್ಲ, ನೆರೆಯ ರಾಷ್ಟ್ರ. ಬಿಜೆಪಿಯವರಿಗೆ ಪಾಕಿಸ್ತಾನ ಮತ್ತು ಮುಸ್ಲಿಂ ಎಂಬ ಎರಡು ವಿಷಯಗಳನ್ನು ಬಿಟ್ಟು ಬೇರೆ ಏನು ಮಾತಾಡೋದಕ್ಕೆ ಬರಲ್ಲ. ದೇಶದ ಶೇ.5ರಷ್ಟು ಜನರು ಪ್ರತಿದಿನ 46 ರೂಪಾಯಿಯಲ್ಲಿ ಜೀವನ ನಡೆಸುತ್ತಿರೋದರ ಬಗ್ಗೆ ಯಾರು ಮಾತನಾಡಲ್ಲ ಯಾಕೆ? ಚೀನಾ ನಾಲ್ಕೂವರೆ ಸಾವಿರ ಸೆಕ್ವೇರ್ ಮೀಟರ್ ಭೂಮಿಯನ್ನು ಅತಿಕ್ರಮಣ ಮಾಡಿಕೊಂಡಿದೆ. ಇಂತಹ ವಿಷಯಗಳ ಬಗ್ಗೆ ಮಾತನಾಡದ ಇವರು ಶತ್ರು ರಾಷ್ಟ್ರದ ಜೊತೆಗೆ ನಮ್ಮ ಸಂಬಂಧದ ಬಗ್ಗೆ ಮಾತನಾಡುತ್ತಾರೆ. ಇವರ ಪ್ರಕಾರ ಶತ್ರು ರಾಷ್ಟ್ರ ಅಂದ್ರೆ ಪಾಕಿಸ್ತಾನ. ಅದು ನಮಗೆ ಶತ್ರು ರಾಷ್ಟ್ರ ಅಲ್ಲ. ಅದು ನಮ್ಮ ಪಕ್ಕದಲ್ಲಿರೋ ರಾಷ್ಟ್ರ ಎಂದು ಬಿಕೆ ಹರಿಪ್ರಸಾದ್ ಹೇಳಿದ್ದರು.
ಸದ್ಯ ಬಿಕೆ ಹರಿಪ್ರಸಾದ್ರ ಈ ಹೇಳಿಕೆ ವಿರೋಧ ಪಕ್ಷಗಳಿಗೆ ಅಸ್ತ್ರವಾಗಿದೆ. ಹರಿಪ್ರಸಾದ್ ಹೇಳಿಕೆ ಸಂಪೂರ್ಣ ನಾಚಿಕೆಗೇಡು ಎಂದು ಅವರು ಶೋಭಾ ಕರಂದ್ಲಾಜೆ ಟೀಕಿಸಿದ್ದಾರೆ. ಕಾಂಗ್ರೆಸ್ ಎಂಎಲ್ಸಿ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಸಂದೇಶ ಪ್ರಕಟಿಸಿರುವ ಅವರು, ಪ್ರಸಾದ್ ಅವರ ಈ ಹೇಳಿಕೆಯಿಂದ ಕಾಂಗ್ರೆಸ್ ಪಕ್ಷದ ನಿಜ ಬಣ್ಣ ಬದಲಾಗಿದೆ ಎಂದಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ