
ಬೆಂಗಳೂರು, ಅಕ್ಟೋಬರ್ 22: ಮೈಸೂರು ಅರಮನೆ ಆವರಣದಲ್ಲಿ ನಿನ್ನೆ (ಆ.21) ನಡೆದ ನಂದಿಧ್ವಜ ಪೂಜೆ ಸಂದರ್ಭದಲ್ಲಿ ಸಚಿವರಾದ ಬಾಲಕೃಷ್ಣ, ನರೇಂದ್ರ ಸ್ವಾಮಿ, ಬಸವಂತಪ್ಪ ಅವರನ್ನು ಪೂಜೆ ಆವರಣ ಪ್ರವೇಶಿಸಲು ಪೊಲೀಸ್ ಅಧಿಕಾರಿಗಳು ನಿರ್ಬಂಧಿಸಿದ ವಿಚಾರವೀಗ ತೀವ್ರ ಸ್ವರೂಪ ಪಡೆದುಕೊಂಡಿದೆ. ಘಟನೆ ಬಗ್ಗೆ ವಿಚಾರಣೆ ನಡೆಸಿ ವರದಿ ನೀಡುವಂತೆ ಸಿಎಂ ಡಿ. ಕೆ. ಶಿವಕುಮಾರ್ ಅವರು ಸರಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಸೂಚನೆ ನೀಡಿದ್ದಾರೆ.
ಮಂತ್ರಿಗಳನ್ನೇ ನಿರ್ಬಂಧಿಸುವ ಮೂಲಕ ಅಧಿಕಾರಿಗಳು ಉದ್ಧಟತನದಿಂದ ವರ್ತಿಸಿರುವುದು ಕಂಡು ಬಂದಿದೆ. ತಕ್ಷಣ ಖುದ್ದು ನಾನೇ ಮಧ್ಯಪ್ರವೇಶಿಸಿ ಮಂತ್ರಿಗಳ ಪ್ರವೇಶಕ್ಕೆ ಅನುವು ಮಾಡಿಕೊಟ್ಟಿದ್ದೇನೆ. ಆದರೂ ಅಧಿಕಾರಿಗಳ ಉಡಾಫೆ ಸಹಿಸಲು ಆಗುವುದಿಲ್ಲ. ಹೀಗಾಗಿ ಇದಕ್ಕೆ ಹೊಣೆಗಾರರು ಯಾರು ಎಂಬ ಬಗ್ಗೆ ವಿಚಾರಣೆ ನಡೆಸಿ ವರದಿ ನೀಡುವಂತೆ ಮುಖ್ಯ ಕಾರ್ಯದರ್ಶಿ ಅವರಿಗೆ ಅದೇಶಿಸಿದ್ದೇನೆ ಎಂದು ಸಿಎಂ ಅವರು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ವರದಿ ಬಂದ ನಂತರ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಹೇಳಿದ್ದಾರೆ.
ಇದನ್ನೂ ಓದಿ: ‘ದಸರಾದಲ್ಲಿ ಸಚಿವರನ್ನು ತಡೆದಿರುವುದು ದಲಿತರಿಗೆ ಮಾಡಿದ ಅವಮಾನ’: ಕಾಂಗ್ರೆಸ್ನಲ್ಲೇ ಶುರುವಾಯ್ತು ವಿರೋಧ, ಕ್ರಮಕ್ಕೆ ಆಗ್ರಹ
ಮೈಸೂರು ದಸರಾ ಮಹೋತ್ಸವದ ಜಂಬೂಸವಾರಿಗೆ ಚಾಲನೆಗೂ ಮುನ್ನ ನಂದಿ ಧ್ವಜ ಪೂಜೆಗೆ ತೆರಳುತ್ತಿದ್ದ ಸಚಿವರನ್ನು ಎಸ್.ಪಿ. ರಿಷ್ಯಂತ್ ತಡೆದಿದ್ದರು. ಸಿಎಂ ಜೊತೆಗೇ ಬಂದಿದ್ದ ಸಚಿವ ಬಾಲಕೃಷ್ಣ, ನರೇಂದ್ರ ಸ್ವಾಮಿ ಮತ್ತು ಬಸವಂತಪ್ಪರನ್ನು ಭದ್ರತೆ ಕಾರಣ ಹೇಳಿ ಬಿಡಲು ಅವರು ನಿರಾಕರಿಸಿದ್ದರು. ಈ ವೇಳೆ ಸ್ವಲ್ಪ ಸಮಯ ಸಚಿವರು ಹಾಗೂ ಪೊಲೀಸ್ ಅಧಿಕಾರಿಗಳ ನಡುವೆ ಗೊಂದಲ ಉಂಟಾಗಿತ್ತು. ಕೂಡಲೇ ಪೊಲೀಸರಿಗೆ ಸೂಚನೆ ನೀಡಿದ್ದ ಸಿಎಂ ಡಿಕೆಶಿ ಸಚಿವರನ್ನು ಬಿಡುವಂತೆ ಸೂಚಿಸಿದ್ದರು. ಆ ಬೆನ್ನಲ್ಲೇ ದಲಿತ ಸಚಿವರಿಗೆ ಅವಮಾನ ಆರೋಪ ಕೇಳಿಬಂದಿದ್ದು, ಕೂಡಲೇ ಎಸ್‌ಪಿ ರಿಷ್ಯಂತ್ ಅವರನ್ನು ಸೇವೆಯಿಂದ ವಾಜಾ ಮಾಡುವಂತೆ ಮುಖ್ಯಮಂತ್ರಿ ಹಾಗೂ ಗೃಹ ಸಚಿವರಿಗೆ ಸಚಿವರು ಆಗ್ರಹಿಸಿದ್ದರು.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:02 pm, Thu, 22 October 26