AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ದಸರಾದಲ್ಲಿ ಸಚಿವರನ್ನು ತಡೆದಿರುವುದು ದಲಿತರಿಗೆ ಮಾಡಿದ ಅವಮಾನ’: ಕಾಂಗ್ರೆಸ್​ನಲ್ಲೇ ಶುರುವಾಯ್ತು ವಿರೋಧ, ಕ್ರಮಕ್ಕೆ ಆಗ್ರಹ

ಮೈಸೂರು ದಸರಾ ಜಂಬೂಸವಾರಿ ನಂದಿ ಕಂಬ ಪೂಜೆ ವೇಳೆ ಸಚಿವರಾದ ಬಿ. ಬಸವಂತಪ್ಪ, ಶಿವರಾಜ ತಂಗಡಗಿ ಹಾಗೂ ಪಿ.ಎಂ. ನರೇಂದ್ರ ಸ್ವಾಮಿ ಅವರನ್ನು ಎಸ್‌ಪಿ ರಿಷ್ಯಂತ್ ತಡೆದ ಘಟನೆ ಭಾರೀ ವಿವಾದಕ್ಕೆ ಕಾರಣವಾಗಿದೆ. ಇದು ಶಿಷ್ಟಾಚಾರ ಉಲ್ಲಂಘನೆ ಮತ್ತು ದಲಿತ ಸಚಿವರಿಗೆ ಅವಮಾನ ಎಂದು ಕಾಂಗ್ರೆಸ್ ನಾಯಕರು ಕಿಡಿಕಾರಿದ್ದಾರೆ. ಎಸ್‌ಪಿಯನ್ನು ಕೂಡಲೇ ಅಮಾನತುಗೊಳಿಸುವಂತೆ ಮುಖ್ಯಮಂತ್ರಿ ಮತ್ತು ಗೃಹ ಸಚಿವರಿಗೆ ಆಗ್ರಹಿಸಿದ್ದಾರೆ. ಈ ಬಗ್ಗೆ ಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.

‘ದಸರಾದಲ್ಲಿ ಸಚಿವರನ್ನು ತಡೆದಿರುವುದು ದಲಿತರಿಗೆ ಮಾಡಿದ ಅವಮಾನ’: ಕಾಂಗ್ರೆಸ್​ನಲ್ಲೇ ಶುರುವಾಯ್ತು ವಿರೋಧ, ಕ್ರಮಕ್ಕೆ ಆಗ್ರಹ
ಸಾಂದರ್ಭಿಕ ಚಿತ್ರ
ಪ್ರಸನ್ನ ಗಾಂವ್ಕರ್​
| Edited By: |

Updated on: Oct 22, 2026 | 11:18 AM

Share

ಮುಖ್ಯಾಂಶಗಳು

  • ಸಚಿವರ ಶಿಷ್ಟಾಚಾರ ಉಲ್ಲಂಘನೆ ಮತ್ತು ಪ್ರವೇಶ ನಿರ್ಬಂಧದ ವಿವಾದ
  • ಇದೀಗ ಈ ವಿಚಾರ ಕಾಂಗ್ರೆಸ್​​ನಲ್ಲಿ ಸಂಘರ್ಷಕ್ಕೆ ಕಾರಣವಾಗಿದೆ
  • ಮುಖ್ಯಮಂತ್ರಿ ಡಿಕೆ ಶಿವಕುಮಾರ್​​​ ಮಧ್ಯಪ್ರವೇಶ

ಮೈಸೂರು, ಅ.22: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಜಂಬೂಸವಾರಿ ಹಾಗೂ ಅಂಬಾರಿ ಪುಷ್ಪಾರ್ಚನೆಗೆ ಮುಂಚೆ ನಡೆದ ಐತಿಹಾಸಿಕ ನಂದಿ ಕಂಬ ಪೂಜೆ ವೇಳೆ  ಶಿಷ್ಟಾಚಾರ ಉಲ್ಲಂಘನೆ ಮತ್ತು ಪ್ರವೇಶ ನಿರ್ಬಂಧದ ವಿವಾದವು ಈಗ ಕಾಂಗ್ರೆಸ್​​​ ಪಕ್ಷದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಸಚಿವರಾದ ಬಿ. ಬಸವಂತಪ್ಪ, ಶಿವರಾಜ ತಂಗಡಗಿ ಹಾಗೂ ಪಿ.ಎಂ. ನರೇಂದ್ರ ಸ್ವಾಮಿ ಸೇರಿದಂತೆ ಪ್ರಮುಖ ನಾಯಕರನ್ನು ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ರಿಷ್ಯಂತ್ ಅವರು ಭದ್ರತೆ ಕಾರಣ ಹೇಳಿ ಅಡ್ಡಗಟ್ಟಿದ್ದರು. ಈ ವೇಳೆ ಸ್ವಲ್ಪ ಸಮಯ ಸಚಿವರು ಹಾಗೂ ಪೊಲೀಸ್​​ ಅಧಿಕಾರಿಗಳ ನಡುವೆ ಗೊಂದಲ ಉಂಟಾಗಿತ್ತು. ನಂತರ ಮುಖ್ಯಮಂತ್ರಿ ಡಿಕೆ ಶಿವಕುಮಾರ್​​​ ಮಧ್ಯಪ್ರವೇಶ ಮಾಡಿ ಅಲ್ಲಿಂದ  ಎಲ್ಲ ಸಚಿವರನ್ನು ಕರೆದುಕೊಂಡು ಹೋಗಿದ್ದಾರೆ. ಇದೀಗ ಈ ವಿಚಾರ ಕಾಂಗ್ರೆಸ್​​ನಲ್ಲಿ ಸಂಘರ್ಷಕ್ಕೆ ಕಾರಣವಾಗಿದೆ. ದಲಿತ ಸಚಿವರಿಗೆ ಮಾಡಿ ಅವಮಾನ ಎಂಬ ಆರೋಪ ಕೇಳಿ ಬಂದಿದೆ. ದಲಿತ ಸಚಿವರಿಗೆ ಸಾರ್ವಜನಿಕವಾಗಿ ಅವಮಾನ ಎಸಗಲಾಗಿದೆ ಎಂದು ಕಿಡಿಕಾರಿರುವ ಸಚಿವರು ಹಾಗೂ ನಾಯಕರು, ಕೂಡಲೇ ಎಸ್‌ಪಿ ರಿಷ್ಯಂತ್ ಅವರನ್ನು ಸೇವೆಯಿಂದ ಸಸ್ಪೆಂಡ್ ಮಾಡಿ ಎಂದು ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರಿಗೆ ಕಟ್ಟುನಿಟ್ಟಿನ ಆಗ್ರಹ ಮಾಡಿದ್ದಾರೆ.

ಸಚಿವರ ಅಕ್ರೋಶಕ್ಕೆ ಕಾರಣವೇನು?

ದಸರಾ ಮಹೋತ್ಸವದ ಜಂಬೂಸವಾರಿಗೂ ಮುನ್ನ ಮುಖ್ಯಮಂತ್ರಿಗಳ ಜೊತೆ ಆಗಮಿಸುವ ಸಚಿವರು, ಶಾಸಕರು ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಜರುಗುವ ಪವಿತ್ರ ‘ನಂದಿ ಕಂಬ’ಕ್ಕೆ ಪೂಜೆ ಸಲ್ಲಿಸುವುದು ದಶಕಗಳ ವಾಡಿಕೆ. ಆದರೆ ಈ ಬಾರಿ ಸಿಎಂ ಜೊತೆ ಬಂದಿದ್ದ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅವರನ್ನು ಹೊರತುಪಡಿಸಿ, ಉಳಿದ ಸಚಿವರಿಗೆ ಪ್ರವೇಶ ನಿರಾಕರಿಸಲಾಗಿತ್ತು. ಅಂಬಾರಿ ಪುಷ್ಪಾರ್ಚನೆ ಹಾಗೂ ಪೂಜಾ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಸಚಿವರಾದ ಬಸವಂತಪ್ಪ, ಶಿವರಾಜ ತಂಗಡಗಿ ಹಾಗೂ ನರೇಂದ್ರ ಸ್ವಾಮಿ ಅವರನ್ನು ಎಸ್‌ಪಿ ರಿಷ್ಯಂತ್ ಏಕಾಏಕಿ ತಡೆದಿದ್ದಾರೆ. ಇಲ್ಲ ಸರ್, ಸಿಎಂ ಬಿಟ್ಟು ಬೇರೆ ಯಾರಿಗೂ ಪ್ರವೇಶವಿಲ್ಲ” ಎಂದು ಕಟ್ಟುನಿಟ್ಟಾಗಿ ಹೇಳಿ ತಡೆದಿರುವುದು, ದಲಿತ ಸಚಿವರು ಎಂಬ ಕಾರಣಕ್ಕೇ ಉದ್ದೇಶಪೂರ್ವಕವಾಗಿ ಅಡ್ಡಗಟ್ಟಲಾಗಿದೆ ಎಂಬ ಗಂಭೀರ ಟೀಕೆಗಳಿಗೆ ಹಾಗೂ ಆಕ್ರೋಶಕ್ಕೆ ಎಡೆಮಾಡಿಕೊಟ್ಟಿದೆ.

ಪೊಲೀಸ್ ಅಧಿಕಾರಿಯ ಈ ಧೋರಣೆಯಿಂದ ತೀವ್ರವಾಗಿ ಅಕ್ರೋಶಗೊಂಡ ಸಚಿವ ನರೇಂದ್ರ ಸ್ವಾಮಿ ಹಾಗೂ ಇತ್ತೇತರ ಸಚಿವರು ಸ್ಥಳದಲ್ಲೇ ಎಸ್‌ಪಿ ರಿಷ್ಯಂತ್ ಅವರನ್ನು ತರಾಟೆಗೆ ತೆಗೆದುಕೊಂಡು ತೀವ್ರ ವಾಗ್ವಾದ ನಡೆಸಿದರು. “ಹೇ ನಾನು ಸಚಿವ ಕಂಡ್ರಿ, ನಮ್ಮನ್ನೇ ತಡಿತೀರಾ?” ಎಂದು ಏರುಧ್ವನಿಯಲ್ಲಿ ಅಸಮಾಧಾನ ಹೊರಹಾಕಿದರು.

ಕಾಂಗ್ರೆಸ್ ಪಕ್ಷದೊಳಗೆ ವ್ಯಾಪಕ ವಿರೋಧ:

ಕೇವಲ ನಂದಿ ಕಂಬ ಪೂಜೆ ಮಾತ್ರವಲ್ಲದೆ, ಅಂಬಾರಿ ಪುಷ್ಪಾರ್ಚನೆ ವೇಳೆಯೂ ಪ್ರೊಟೋಕಾಲ್ ಉಲ್ಲಂಘನೆಯಾಗಿದೆ ಎಂದು ಆಡಳಿತ ಪಕ್ಷದ ಶಾಸಕರು ಹಾಗೂ ಮುಖಂಡರು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಿರಿಯ ಶಾಸಕ ತನ್ವೀರ್ ಸೇಠ್ ಹಾಗೂ ಸ್ಥಳೀಯ ಬಿಜೆಪಿ ಶಾಸಕ ಶ್ರೀವತ್ಸ ಅವರನ್ನು ಸಹ ಹೊರಗಡೆ ನಿಲ್ಲಿಸಲಾಗಿತ್ತು. ನಂತರ ಸಿಎಂ ಮಧ್ಯಪ್ರವೇಶಿಸಿ ತನ್ವೀರ್ ಸೇಠ್ ಅವರನ್ನು ಒಳಗೆ ಕರೆದೊಯ್ದರೆ, ಇತರೆ ಶಾಸಕರಾದ ಅನಿಲ್ ಚಿಕ್ಕಮಾದು, ಡಿ. ರವಿಶಂಕರ್, ದರ್ಶನ ಧ್ರುವನಾರಾಯಣ್ ಹಾಗೂ ವಿಧಾನ ಪರಿಷತ್ ಸದಸ್ಯರಾದ ಕೆ. ಶಿವಕುಮಾರ್ ಮತ್ತು ತಿಮ್ಮಯ್ಯ ದೂರದಿಂದಲೇ ಪೂಜೆ ವೀಕ್ಷಿಸುವಂತಾಯಿತು.

ಸರ್ಕಾರದ ಸಚಿವರಿಗೆ ಹಾಗೂ ಜನಪ್ರತಿನಿಧಿಗಳಿಗೆ ಸಾರ್ವಜನಿಕವಾಗಿ ಈ ರೀತಿಯ ಅವಮಾನ ಹಾಗೂ ಶಿಷ್ಟಾಚಾರ ಉಲ್ಲಂಘನೆ ಎಸಗಿರುವ ಎಸ್‌ಪಿ ರಿಷ್ಯಂತ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಕಾಂಗ್ರೆಸ್ ಪಕ್ಷದ ವಲಯದಿಂದಲೂ ತೀವ್ರ ಒತ್ತಡ ಹಾಗೂ ಆಕ್ರೋಶ ಕೇಳಿಬಂದಿದೆ.

ಇದನ್ನೂ ಓದಿ: ಮೈಸೂರು ದಸರಾದಲ್ಲಿ ಹೈಡ್ರಾಮಾ: ನಂದಿ ಕಂಬ ಪೂಜೆಗೆ ತೆರಳುತ್ತಿದ್ದ ಸಚಿವರು, ಶಾಸಕರನ್ನು ಅಡ್ಡಗಟ್ಟಿದ ಎಸ್‌ಪಿ ರಿಷ್ಯಂತ್

“ಸಚಿವರನ್ನು ತಡೆದಿದ್ದ ಎಸ್‌ಪಿಯಿಂದ ನಾನೇ ಬಿಡಿಸಿದೆ, ಸಿಎಸ್‌ ವಿಡಿಯೋ ಪರಿಶೀಲಿಸುತ್ತಾರೆ” : ಸಿಎಂ ಡಿ.ಕೆ. ಶಿವಕುಮಾರ್

ಮುಖ್ಯಮಂತ್ರಿ ಡಿಕೆ ಶಿವಕುಮಾರ್​ ಅವರು ಈ ಬಗ್ಗೆ ಮಾತನಾಡಿದ್ದಾರೆ. “ನಂದಿಧ್ವಜ ಪೂಜೆಗೆ ಹೋಗುತ್ತಿದ್ದ ಸಚಿವರನ್ನು ಪೊಲೀಸರು ತಡೆದಾಗ ನಾನೇ ಸ್ವತಃ ಹೋಗಿ ಬಿಡಿಸಿಕೊಂಡು ಬಂದಿದ್ದೇನೆ. ಈ ಘಟನೆಗೆ ಸಂಬಂಧಿಸಿದಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಎಲ್ಲಾ ವಿಡಿಯೋ ತುಣುಕುಗಳನ್ನು ಪರಿಶೀಲಿಸಲಿದ್ದಾರೆ” ಎಂದು ತಿಳಿಸಿದ್ದಾರೆ. “ದಸರಾದಂತಹ ದೊಡ್ಡ ಕಾರ್ಯಕ್ರಮದ ನಿರ್ವಹಣೆ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಒಬ್ಬರ ಕೈಯಲ್ಲೇ ಎಲ್ಲವೂ ಆಗುವುದಿಲ್ಲ. ಹಾಗಾಗಿಯೇ ಪ್ರತಿಯೊಬ್ಬರಿಗೂ ಜವಾಬ್ದಾರಿ ಹಂಚಿಕೆ ಮಾಡಿದ್ದೆ. ಕೆ.ಜೆ. ಜಾರ್ಜ್ ಹಾಗೂ ಬಸವರಾಜ ರಾಯರೆಡ್ಡಿ ಅವರು ತಮ್ಮ ಜವಾಬ್ದಾರಿಯನ್ನು ಅತ್ಯಂತ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಕೆಲವು ನಾಯಕರು ಉಪಚುನಾವಣೆ ಕೆಲಸಗಳಲ್ಲಿ ಬ್ಯುಸಿಯಾಗಿದ್ದರು” ಎಂದು ಹೇಳಿದರು.

ಜಂಬೂಸವಾರಿಯಲ್ಲಿ ಚಿತ್ರರಂಗದ ಪ್ರಮುಖರು ಪಾಲ್ಗೊಂಡಿದ್ದರು. ಜಯಮಾಲಾ, ಬಿ.ಆರ್. ವೆಂಕಟೇಶ್ ಹಾಗೂ ಚಿತ್ರರಂಗದ ತಂಡಕ್ಕೆ ಧನ್ಯವಾದಗಳು. ಕೇಂದ್ರ ಸರ್ಕಾರದಿಂದಲೂ ಈ ಬಾರಿ ವಿಶೇಷ ಸ್ತಬ್ಧಚಿತ್ರ ಕಳುಹಿಸಿಕೊಡಲಾಗಿತ್ತು. ಮುಂದಿನ ವರ್ಷ ದಸರಾವನ್ನು ಇನ್ನೂ ವಿಜೃಂಭಣೆಯಿಂದ ನಡೆಸಲಿದ್ದೇವೆ ಎಂದರು. ಅಹೋರಾತ್ರಿ ಶ್ರಮಿಸಿ ದಸರಾ ಮಹೋತ್ಸವವನ್ನು ಯಶಸ್ವಿಗೊಳಿಸಿದ ಪೊಲೀಸ್ ಇಲಾಖೆ ಹಾಗೂ ಎಲ್ಲಾ ಇಲಾಖೆಯ ಅಧಿಕಾರಿ ಸಿಬ್ಬಂದಿಗೆ ಸಿಎಂ ಅಭಿನಂದನೆ ಸಲ್ಲಿಸಿದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಪ್ರಸನ್ನ ಗಾಂವ್ಕರ್​
ಪ್ರಸನ್ನ ಗಾಂವ್ಕರ್​

ಹುಟ್ಟೂರು ಯಲ್ಲಾಪುರ, ಬೆಳೆದೂರು ದಾಂಡೇಲಿಯ ದಟ್ಟ ಕಾಡುಗಳ ನಡುವೆ. ರವಿ ಬೆಳಗೆರೆ ಎಂಬ ಅಕ್ಷರ ರಾಕ್ಷಸನ ಕಟ್ಟಾಭಿಮಾನದಿಂದ ಹಾಳಾಗಿ, ಸೈನ್ಸ್ ನಲ್ಲಿ ಡಿಗ್ರಿ ಪಡೆದು ಜರ್ನಲಿಸಂಗೆ ಹಿಂಬದಿ ಕಿಟಕಿಯಿಂದ ನುಸುಳಿದ್ದು 2010 ರ ಅಕ್ಟೋಬರ್ ನಲ್ಲಿ. ಉಡುಪಿಯಲ್ಲಿ ಮೊದಲ ಪತ್ರಿಕೋದ್ಯಮ ಕರ್ತವ್ಯ ಪ್ರಾರಂಭಿಸಿದ್ದು 2010 ರಲ್ಲಿಯೇ. ಜನಶ್ರೀ ನ್ಯೂಸ್ ಮೊದಲು ಅನ್ನ ನೀಡಿದ ಸಂಸ್ಥೆ. ಉಡುಪಿ ಜಿಲ್ಲಾ ವರದಿಗಾರನಾಗಿ ಮೂರು ವರ್ಷ ಕೆಲಸ ಮಾಡಿ 2013 ರ ಅಂತ್ಯಕ್ಕೆ ಸಮಯ ನ್ಯೂಸ್ ಮೂಲಕ ಬೆಂಗಳೂರಿಗೆ ಎಂಟ್ರಿ. ಬಿಗ್ ೩, ಬೆಂಗಳೂರ್ ಲೈವ್, ಸಮಯ ಸಕಾಲ ಕಾರ್ಯಕ್ರಮದಲ್ಲಿ ವರದಿಗಾರಿಕೆ ಮಾಡಿದ ಖುಷಿ. 2014 ರ ಡಿಸೆಂಬರ್ ನಿಂದ ಟಿವಿ9 ನಲ್ಲಿ ಕೆಲಸ ಪ್ರಾರಂಭ. ಟಿವಿ9 ನಲ್ಲಿ ಮೊದಲು ಮೆಟ್ರೋ ರಿಪೋರ್ಟಿಂಗ್ ಮೂಲಕ ಬೆಂಗಳೂರು ಸುತ್ತುವ ಅರಿಯುವ ರಾಜಧಾನಿಯ ನಾಡಿಮಿಡಿತ ಹುಡುಕುವ ಅವಕಾಶ. ಮೆಟ್ರೋ ಬ್ಯೂರೋ ದಲ್ಲಿ ಶೈಕ್ಷಣಿಕ ಹಾಗೂ ಬಿಬಿಎಂಪಿ ವರದಿಗಾರಿಕೆ. ಚಪ್ಪಲಿಯಿಂದ ಹಿಡಿದು ಚಾದರ್ ತನಕ ಸ್ಟೋರಿ ಮಾಡಿದ ಅನುಭವ. ಮೆಟ್ರೋ ಟೀಂ ನಿಂದ ರಾಜಕೀಯ ವರದಿಗಾರಿಕೆಗೆ ಶಿಫ್ಟ್ ಆದ ತಕ್ಷಣ- ಮುಂದುವರಿದಿದೆ ನಿರಂತರ ಪಯಣ. ಕಥೆ, ಕಾದಂಬರಿ, ಕವನ, ಸಿನಿಮಾ, ಸುತ್ತಾಟ, ಆಗಾಗ ಕಿತ್ತಾಟ, ಸ್ನೇಹಿತರೊಂದಿಗೆ ಒಡನಾಟ ಇವೆಲ್ಲ ಮಾಮೂಲಿ ದಿನಚರಿ. ಇವತ್ತಿಗೂ ಬರವಣಿಗೆಯೊಂದೇ ಖುಷಿ ಕೊಡುವ ಖರ್ಜೂರ. ಸ್ಟಾಕ್ ಮಾರ್ಕೆಟ್ ನಲ್ಲಿ 2019 ರಿಂದ ಆ್ಯಕ್ಟಿವ್.

Read More