
ಬೆಂಗಳೂರು, ಸೆಪ್ಟೆಂಬರ್ 10: ಬೆಂಗಳೂರು ನಗರದ ಸಂಚಾರ ದಟ್ಟಣೆಗೆ ಮುಕ್ತಿ ನೀಡುವ ನಿಟ್ಟಿನಲ್ಲಿ ಅತ್ಯಂತ ಮಹತ್ವಾಕಾಂಕ್ಷೆಯ ನಮ್ಮ ಮೆಟ್ರೋ ಬ್ಲೂ ಲೈನ್ ಮಾರ್ಗದ ಕಾಮಗಾರಿಗೆ ಮುನ್ನಡೆ ಸಿಕ್ಕಿದೆ. ಫೇಸ್ 2ಎ ಮತ್ತು 2ಬಿ ಯೋಜನೆಯಡಿ ಮೆಟ್ರೋ ಟ್ರ್ಯಾಕ್ ಅಳವಡಿಸಲು ಕೇಂದ್ರ ರೈಲ್ವೆ ಮಂಡಳಿ ಅಧಿಕೃತ ಅನುಮೋದನೆ ನೀಡಿದ್ದು, ಕಾಮಗಾರಿಗೆ ಮತ್ತಷ್ಟು ಚುರುಕುಗೊಳ್ಳಲು ಹಾದಿ ಸುಗಮವಾಗಿದೆ.
ಬಿಎಂಆರ್‌ಸಿಎಲ್ ಈ ಹಿಂದೆ 2026ರ ಕೊನೆಗೆ ಅಥವಾ 2027 ಆರಂಭದಲ್ಲಿ ಬ್ಲೂ ಲೈನ್ ಮೊದಲ ಹಂತದ ಸುಮಾರು 19 ಕಿ.ಮೀ ಉದ್ದದ ಮಾರ್ಗವನ್ನು ತೆರೆಯುವ ಗುರಿಯನ್ನು ಹೊಂದಿತ್ತು. ಆದರೆ ಕೆಲಸಗಳು ಇನ್ನೂ ಬಾಕಿ ಇರುವುದರಿಂದ, ವಾಣಿಜ್ಯ ಕಾರ್ಯಾಚರಣೆಗಳನ್ನು ಮುಂದಿನ ವರ್ಷದ ಮಧ್ಯದವರೆಗೆ ಮುಂದೂಡುವ ಸಾಧ್ಯತೆ ದಟ್ಟವಾಗಿದೆ.
ಇದನ್ನೂ ಓದಿ: ನಮ್ಮ ಮೆಟ್ರೋ ಬೆಂಗಳೂರಿಗರ ಸಂಚಾರ ಜೀವನಾಡಿಯಾದ್ರೂ 20 ನಿಲ್ದಾಣಗಳಿಗಿಲ್ಲ ದೊಡ್ಡ ಮಟ್ಟದ ಪ್ರಯಾಣಿಕರ ಸಂಖ್ಯೆ!
ಕೆಆರ್ಪುರ ಮತ್ತು ಸಿಲ್ಕ್ ಬೋರ್ಡ್ ನಡುವಿನ ಬ್ಲೂ ಲೈನ್ ಮಾರ್ಗದ ಅನೇಕ ಸ್ಥಳಗಳಲ್ಲಿ ಇನ್ನೂ ಕಾಮಗಾರಿಗಳು ಬಾಕಿ ಇರುವುದರಿಂದ ಮುಂದಿನ ವರ್ಷದ ಆರಂಭದಲ್ಲಿ ವಾಣಿಜ್ಯ ಕಾರ್ಯಾಚರಣೆಯ ಗುರಿಯನ್ನು ತಲುಪುವುದು ಸಾಧ್ಯವಿಲ್ಲ. ಇತ್ತ ನಗರದ ಬಹುನಿರೀಕ್ಷಿತ ನಮ್ಮ ಮೆಟ್ರೋ ಬ್ಲೂ ಲೈನ್ ಫೇಸ್ 2ಎ ಮತ್ತು 2ಬಿ ಯೋಜನೆ ಸಂಬಂಧ ಟ್ರ್ಯಾಕ್ ಹಾಕಲು ರೈಲ್ವೆ ಮಂಡಳಿ ಅನುಮತಿ ನೀಡಿದೆ. ಬಿಎಂಆರ್‌ಸಿಎಲ್ ಟ್ರ್ಯಾಕ್ ಹಾಕಲು ಅನುಮತಿ ಕೇಳಿದ್ದ ಪ್ರಸ್ತಾವನೆಯನ್ನು ರೈಲ್ವೆ ಮಂಡಳಿ, ರಿಸರ್ಚ್ ಡಿಸೈನ್ ಆ್ಯಂಡ್ ಸ್ಟಾಂಡರ್ಡ್ಸ್ ಆರ್ಗನೈಸೇಷನ್ ಜೊತೆಗೆ ಸಮಾಲೋಚಿಸಿದ ಬಳಿಕ ಪರಿಶೀಲಿಸಿ ಪ್ರಾಧಿಕಾರದ ಅನುಮೋದನೆಗೆ ರೈಲ್ವೆ ಬೋರ್ಡ್ ನೀಡಿದೆ.
ಬಿಎಂಆರ್‌ಸಿಎಲ್ ಜುಲೈ 2ರಂದು ಆರ್‌ಡಿಎಸ್‌ಒ ಆನ್ಲೈನ್ ಪೋರ್ಟಲ್‌ನಲ್ಲಿ ಅಗತ್ಯ ದಾಖಲೆಗಳು ಹಾಗೂ ಅನುಸರಣೆ ವಿವರಗಳೊಂದಿಗೆ ಪ್ರಸ್ತಾವನೆ ಸಲ್ಲಿಸಿತ್ತು. ಇದೀಗ ಅನುಮೋದಿತ ಟ್ರ್ಯಾಕ್ ರಚನೆಯ ಪ್ರತಿಯನ್ನು ಬಿಎಂಆರ್ಸಿಎಲ್ಗೆ ಕಳುಹಿಸಲಾಗಿದೆ. ನೀಲಿ ಮಾರ್ಗ ಸೆಂಟ್ರಲ್ ಸಿಲ್ಕ್ ಬೋರ್ಡ್‌ನಿಂದ ಕೆ.ಆರ್.ಪುರ ಮೂಲಕ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದವರೆಗೆ, ಸಂಪರ್ಕ ಕಲ್ಪಿಸುವ ಮಹತ್ವದ ಮೆಟ್ರೋ ಮಾರ್ಗವಾಗಿದೆ. ಫೇಸ್ 2ಎ ಸಿಲ್ಕ್ ಬೋರ್ಡ್- ಕೆ.ಆರ್.ಪುರ ಮತ್ತು ಫೇಸ್ 2 ಬಿ ಕೆ. ಆರ್.ಪುರ-ವಿಮಾನ ನಿಲ್ದಾಣ ಮಾರ್ಗವನ್ನು ಒಳ ಗೊಂಡಿದ್ದು, ಒಟ್ಟು ಸುಮಾರು 58 ಕಿ.ಮೀ. ಉದ್ದವಿದೆ. ಈ ಬಗ್ಗೆ ಸಂತಸ ವ್ಯಕ್ತಪಡಿಸಿದ ಪ್ರಯಾಣಿಕರು ‘ಈ ಮಾರ್ಗ ಓಪನ್ ಆದರೆ ನಮಗೆ ತುಂಬಾ ಸಹಾಯ ಆಗುತ್ತದೆ’ ಎಂದಿದ್ದಾರೆ.
ಇದನ್ನೂ ಓದಿ: ಸೋಲಾರ್ ನಿಂದ ನಮ್ಮ ಮೆಟ್ರೋ ರೈಲು ಓಡಿಸಲು ಪ್ಲ್ಯಾನ್: ಕೋಟ್ಯಂತರ ರೂ ಉಳಿತಾಯ
ಒಟ್ಟಿನಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾರ್ಗದ ಬ್ಲೂ ಲೈನ್ನಲ್ಲಿ ಟ್ರ್ಯಾಕ್ ಅಳವಡಿಸಿ ರೈಲ್ವೆ ಬೋರ್ಡ್ ಅನುಮತಿಗಾಗಿ ಕಾಯುತ್ತಿದ್ದ ನಮ್ಮ ಮೆಟ್ರೋ ಅಧಿಕಾರಿಗಳಿಗೆ ಇದೀಗ
ಗ್ರೀನ್ ಸಿಗ್ನಲ್ ಸಿಕ್ಕಿದ್ದು, ಆದಷ್ಟು ಈ ಮಾರ್ಗ ಓಪನ್ ಆಗಲಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:42 pm, Thu, 10 September 26