
ಬೆಂಗಳೂರು, ಜೂ.24: ಜಾಗತಿಕ ಮಟ್ಟದಲ್ಲಿ ಬೆಂಗಳೂರನ್ನು ಐಟಿ ಹಬ್ ಎಂದು ಕರೆಯುತ್ತಾರೆ. ಆದರೆ ಇಲ್ಲಿನ ವ್ಯವಸ್ಥೆಯ ಬಗ್ಗೆ ದಿನಕ್ಕೊಂದು ದೂರುಗಳು ಬರುತ್ತನೇ ಇದೆ. ರಾಜಧಾನಿಯ ತಾಂತ್ರಿಕ ಕ್ಷೇತ್ರಕ್ಕೆ ಬಗ್ಗೆ ಹೆಮ್ಮೆ ಪಡುವ ಜನರಿಗೆ ಇಲ್ಲಿನ ಸಾರಿಗೆ ವ್ಯವಸ್ಥೆ ಎಷ್ಟು ಟೊಳ್ಳಾಗಿದೆ ಎಂಬುದಕ್ಕೆ ನಮ್ಮ ಮೆಟ್ರೋದ (Namma Metro) ಒಂದು ಸಣ್ಣ ತಾಂತ್ರಿಕ ದೋಷವೇ ಸಾಕ್ಷಿಯಾಗಿದೆ. ನೆನ್ನೆ (ಜೂ.23) ಮೆಟ್ರೋ ರೈಲು ಸಂಚಾರದಲ್ಲಿ ಉಂಟಾದ ಏರುಪೇರಿನಿಂದಾಗಿ ಇಡೀ ಐಟಿ ಹಬ್ ಒಂದೇ ದಿನದಲ್ಲಿ ಮಂಡಿಯೂರಿ ಕೂರುವಂತಾಗಿತ್ತು. ನೆನ್ನೆ ಸಂಜೆ ಮೆಟ್ರೋದಲ್ಲಿ ಉಂಟಾದ ತಾಂತ್ರಿಕ ದೋಷದಿಂದ ಪ್ರಯಾಣಿಕರು ಪರದಾಡುವಂತಾಗಿದೆ. ಇದರಿಂದ ಐಟಿ ಉದ್ಯೋಗಿಗಳು ಪಟ್ಟ ಕಷ್ಟದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗಿದೆ.
ಮೆಟ್ರೋ ಸೇವೆ ದಿಢೀರ್ ಸ್ಥಗಿತಗೊಂಡಿದ್ದರಿಂದ ಸಾವಿರಾರು ಪ್ರಯಾಣಿಕರು ರಸ್ತೆಗಳಲ್ಲೇ ಅಸಹಾಯಕರಾಗಿ ನಿಲ್ಲಬೇಕಾಯಿತು. ಒಂದು ಕಡೆ ಆನ್‌ಲೈನ್ ಕ್ಯಾಬ್ ಆ್ಯಪ್‌ಗಳು ಸರಿಯಾಗಿ ಕೆಲಸವೇ ಮಾಡುತ್ತಿರಲಿಲ್ಲ. ಇನ್ನೊಂದು ಕಡೆ ಆಟೋ ಚಾಲಕರು ಎಂದಿನಂತೆ ರೈಡ್ಗೆ ನಿರಾಕರಿಸಿದರು. ವಿಶ್ವದರ್ಜೆಯ ತಂತ್ರಜ್ಞಾನವನ್ನು ಹೊಂದಿರುವ, ದೇಶದ ಬೊಕ್ಕಸಕ್ಕೆ ಕೋಟಿ ಕೋಟಿ ರೂಪಾಯಿ ತೆರಿಗೆ ಪಾವತಿಸುವ ಐಟಿ ಉದ್ಯೋಗಿಗಳು ಕೊನೆಗೆ ಬೇರೆ ದಾರಿಯಿಲ್ಲದೆ ಮನೆ ತಲುಪಲು ರಸ್ತೆಯಲ್ಲಿ ಹೋಗುತ್ತಿದ್ದ ಟ್ರಕ್ ಮತ್ತು ಲಾರಿಗಳಿಗೆ ಕೈ ಅಡ್ಡಹಾಕಿ, ಅವುಗಳ ಮೇಲೆ ಹತ್ತಿ ಕುಳಿತು ಸಾಗಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಈ ಬಗ್ಗೆ ವಿಡಿಯೋವೊಂದನ್ನು Karnataka Portfolio ಎಂಬ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ಬಗ್ಗೆ ನೆಟ್ಟಿಗರು ಕೂಡ ಕಮೆಂಟ್ ಮಾಡಿದ್ದಾರೆ.
ಇಲ್ಲಿದೆ ನೋಡಿ ನೋಡಿ ವಿಡಿಯೋ:
India’s Silicon Valley or India’s Biggest Infrastructure Failure? IT Employees Forced to Hitch Rides on Trucks After Yet Another Metro Breakdown
Bengaluru proudly calls itself India’s Silicon Valley, a global technology hub that powers innovation, startups, and multinational… pic.twitter.com/qAGDEQfyNj
— Karnataka Portfolio (@karnatakaportf) June 24, 2026
ಕೃತಕ ಬುದ್ಧಿಮತ್ತೆ (AI), ಸ್ಮಾರ್ಟ್ ಮೊಬಿಲಿಟಿ, ಎಲೆಕ್ಟ್ರಿಕ್ ವಾಹನಗಳು ಮತ್ತು ಭವಿಷ್ಯದ ಸಾರಿಗೆ ಪರಿಹಾರಗಳ ಬಗ್ಗೆ ದೊಡ್ಡದಾಗಿ ಮಾತನಾಡುವ ನಗರದಲ್ಲಿ, ನಾಗರಿಕರಿಗೆ ಕನಿಷ್ಠ ಹಾಗೂ ಸುರಕ್ಷಿತ ಸಾರಿಗೆಯನ್ನು ಖಾತರಿಪಡಿಸಲು ಸಾಧ್ಯವಾಗುತ್ತಿಲ್ಲ ಎಂಬುದು ಅತ್ಯಂತ ದೊಡ್ಡ ಸಮಸ್ಯೆಯಾಗಿದೆ ಎಂದು ವ್ಯಂಗ್ಯವಾಗಿ ಕಮೆಂಟ್ ಮಾಡಿದ್ದಾರೆ.
ನಮ್ಮ ಮೆಟ್ರೋ ಕೈಕೊಡುತ್ತದೆ, ಕ್ಯಾಬ್‌ಗಳು ಸಿಗುವುದಿಲ್ಲ, ಆಟೋಗಳು ಬರುವುದಿಲ್ಲ, ನಾಗರಿಕರು ನರಕ ಅನುಭವಿಸುತ್ತಾರೆ. ಕೊನೆಗೆ ಅಧಿಕಾರಿಗಳು ಒಂದು ಸ್ಪಷ್ಟೀಕರಣ ನೀಡುತ್ತಾರೆ. ಮರುದಿನ ಮತ್ತೆ ಅದೇ ಕಥೆ ಮುಂದುವರಿಯುತ್ತದೆ. ಇದೇ ಈಗ ಬೆಂಗಳೂರಿನ ಪ್ರತಿದಿನದ ಕಥೆಯಾಗಿದೆ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ. ನಾವು ಕಟ್ಟುವ ಭಾರಿ ಪ್ರಮಾಣದ ತೆರಿಗೆ, ಮೆಟ್ರೋ ಟಿಕೆಟ್ ದರ ಮತ್ತು ಮೂಲಸೌಕರ್ಯ ಹೂಡಿಕೆಗಳು ನಿಜಕ್ಕೂ ಎಲ್ಲಿಗೆ ಹೋಗುತ್ತಿವೆ? ಯಾವುದೇ ಜಾಗತಿಕ ದರ್ಜೆಯ ನಗರದಲ್ಲಿ ಒಪ್ಪಿಕೊಳ್ಳಲು ಸಾಧ್ಯವಿಲ್ಲದ ಇಂತಹ ವ್ಯವಸ್ಥಿತ ವೈಫಲ್ಯಗಳನ್ನು ಬೆಂಗಳೂರಿನ ಜನ ಎಲ್ಲಿಯವರೆಗೆ ಸಹಿಸಬೇಕು ಎಂಬ ಪ್ರಶ್ನೆಗಳು ನೆಟ್ಟಿಗರು ಕೇಳಿದ್ದಾರೆ.
ಹೈಪರ್‌ಲೂಪ್ ಮತ್ತು ಭವಿಷ್ಯದ ತಂತ್ರಜ್ಞಾನಗಳನ್ನೆಲ್ಲ ಸದ್ಯಕ್ಕೆ ಮರೆತುಬಿಡಿ, ಯಾಕಂದ್ರೆ ಬೆಂಗಳೂರು ಈಗಾಗಲೇ ದೈನಂದಿನ ಪ್ರಯಾಣಿಕರಿಗಾಗಿ ‘ಟ್ರಕ್-ಆಸ್-ಎ-ಸರ್ವೀಸ್’ ಎಂಬ ಹೊಸ ಕ್ರಾಂತಿಕಾರಿ ವ್ಯವಸ್ಥೆಯನ್ನು ಜಾರಿಗೆ ತಂದಂತಿದೆ ಎಂದು ನೆಟ್ಟಿಗರು ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಗರು ವ್ಯಂಗ್ಯವಾಡಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ