AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜೀವ ಕೈಯಲ್ಲಿ ಹಿಡಿದು ಹಳ್ಳ ದಾಟುವ ಶಾಲಾ ಮಕ್ಕಳು: ಯಾದಗಿರಿಯ ಲಿಂಗಸನಳ್ಳಿ ತಾಂಡದ ಜನರ ದುಸ್ಥಿತಿ; ಕಣ್ಣು ಮುಚ್ಚಿ ಕುಳಿತ ಜನಪ್ರತಿನಿಧಿಗಳು

ಯಾದಗಿರಿ ಜಿಲ್ಲೆಯ ಲಿಂಗಸನಳ್ಳಿ ತಾಂಡದ ವಿದ್ಯಾರ್ಥಿಗಳು ಪ್ರೌಢ ಶಿಕ್ಷಣಕ್ಕಾಗಿ ಪ್ರತಿದಿನ ಅಪಾಯಕಾರಿ ಹಳ್ಳವನ್ನು ದಾಟುವ ಅನಿವಾರ್ಯತೆ ಎದುರಿಸುತ್ತಿದ್ದಾರೆ. ಸೇತುವೆ ಇಲ್ಲದ ಕಾರಣ ಮಳೆಗಾಲದಲ್ಲಿ ಶಾಲೆಗೆ ಹೋಗುವುದೇ ಅಸಾಧ್ಯ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಜೀವಭಯದಲ್ಲಿರುವ ಮಕ್ಕಳಿಗೆ ಸುರಕ್ಷಿತ ರಸ್ತೆ ಮತ್ತು ಸೇತುವೆ ನಿರ್ಮಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಜೀವ ಕೈಯಲ್ಲಿ ಹಿಡಿದು ಹಳ್ಳ ದಾಟುವ ಶಾಲಾ ಮಕ್ಕಳು: ಯಾದಗಿರಿಯ ಲಿಂಗಸನಳ್ಳಿ ತಾಂಡದ ಜನರ ದುಸ್ಥಿತಿ; ಕಣ್ಣು ಮುಚ್ಚಿ ಕುಳಿತ ಜನಪ್ರತಿನಿಧಿಗಳು
ಹಳ್ಳ ದಾಟುವ ಮಕ್ಕಳು
ಅಮೀನ್​ ಸಾಬ್​
| Edited By: |

Updated on: Jun 24, 2026 | 11:32 AM

Share

ಯಾದಗಿರಿ, ಜೂ.24: ಸ್ವಾತಂತ್ರ್ಯ ಬಂದು ದಶಕಗಳೇ ಕಳೆದರೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸಾರಿಗೆ ಸಂಪರ್ಕ ಮತ್ತು ಸುರಕ್ಷಿತ ರಸ್ತೆ ಕಲ್ಪಿಸಲು ಸರ್ಕಾರ ಮತ್ತು ಅಧಿಕಾರಿಗಳು ಸಂಪೂರ್ಣ ವಿಫಲರಾಗಿದ್ದಾರೆ ಎಂಬುದಕ್ಕೆ ಯಾದಗಿರಿ ತಾಲೂಕಿನ ಲಿಂಗಸನಳ್ಳಿ ತಾಂಡದ ಈ ದೃಶ್ಯಗಳೇ ಜೀವಂತ ಸಾಕ್ಷಿ. ಇಲ್ಲಿನ ತಾಂಡದ ಮಕ್ಕಳು ಪ್ರೌಢ ಶಿಕ್ಷಣಕ್ಕಾಗಿ ಹಳ್ಳವೊಂದನ್ನು ಎದ್ನೋ ಬಿದ್ನೋ ಎಂದು ಅಪಾಯಕಾರಿ ಸ್ಥಿತಿಯಲ್ಲಿ ದಾಟಿಕೊಂಡು ಶಾಲೆಗೆ ಹೋಗಬೇಕಾದ ದಯನೀಯ ಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಟಿವಿ9 ಕನ್ನಡ ಒಂದು ಸಂಪೂರ್ಣ ವರದಿಯನ್ನು ನೀಡಿದೆ.

ಲಿಂಗಸನಳ್ಳಿ ತಾಂಡದಲ್ಲಿ ಸದ್ಯ ಒಂದರಿಂದ ಐದನೇ ತರಗತಿಯವರೆಗೆ ಮಾತ್ರ ಪ್ರಾಥಮಿಕ ಶಾಲೆ ಇದೆ. ಐದನೇ ತರಗತಿ ಮುಗಿಸಿದ ನಂತರ ಮುಂದಿನ ಪ್ರೌಢ ಶಿಕ್ಷಣಕ್ಕಾಗಿ ವಿದ್ಯಾರ್ಥಿಗಳು ಪಕ್ಕದ ಯರಗೋಳ ಗ್ರಾಮಕ್ಕೆ ಬರಬೇಕಾಗುತ್ತದೆ. ತಾಂಡದಿಂದ ಯರಗೋಳ ಗ್ರಾಮಕ್ಕೆ ಕೇವಲ 4 ಕಿಲೋಮೀಟರ್ ದೂರವಿದೆಯಾದರೂ, ಈ ಮಾರ್ಗದ ಮಧ್ಯೆ ಒಂದು ದೊಡ್ಡ ಹಳ್ಳವಿದೆ. ಮಳೆಗಾಲ ಬಂತೆಂದರೆ ಈ ಹಳ್ಳವು ಸಂಪೂರ್ಣವಾಗಿ ತುಂಬಿ ಹರಿಯುತ್ತದೆ. ಹಳ್ಳ ತುಂಬಿ ಹರಿದಾಗ ಜೀವಭಯದಿಂದ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸುವುದನ್ನೇ ನಿಲ್ಲಿಸುತ್ತಾರೆ. ಇನ್ನು ಮಳೆ ಇಲ್ಲದ ಸಾಮಾನ್ಯ ದಿನಗಳಲ್ಲೂ ಪೋಷಕರೇ ಖುದ್ದಾಗಿ ನಿಂತು ಮಕ್ಕಳನ್ನು ಹಳ್ಳ ದಾಟಿಸಿ ಕಳುಹಿಸಬೇಕಾದ ಅನಿವಾರ್ಯತೆ ಇದೆ.

ಈ ಹಳ್ಳಕ್ಕೆ ಅಡ್ಡಲಾಗಿ ಒಂದು ಸಣ್ಣ ಸೇತುವೆ ನಿರ್ಮಿಸಿಕೊಡುವಂತೆ ತಾಂಡದ ನಿವಾಸಿಗಳು ಹಲವು ಬಾರಿ ಶಾಸಕರಿಗೆ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಆದರೆ ಯಾರೊಬ್ಬರೂ ಈವರೆಗೆ ಇವರ ಮನವಿಗೆ ಸ್ಪಂದಿಸಿಲ್ಲ. ಒಂದು ವೇಳೆ ಮಳೆಗಾಲದಲ್ಲಿ ಹಳ್ಳ ತುಂಬಿದಾಗ ಯರಗೋಳ ಗ್ರಾಮಕ್ಕಾಗಲಿ ಅಥವಾ ತಾಲೂಕು ಕೇಂದ್ರಕ್ಕಾಗಲಿ ತುರ್ತು ಕೆಲಸಗಳಿಗೆ ಹೋಗಬೇಕಾದರೆ ಗ್ರಾಮಸ್ಥರು ಬರೋಬ್ಬರಿ 14 ಕಿಲೋಮೀಟರ್ ಸುತ್ತುವರೆದು ಬರಬೇಕಾಗಿದೆ. 4 ಕಿ.ಮೀ ತಲುಪುವ ಹಾದಿಗೆ ಸೇತುವೆ ಇಲ್ಲದ ಕಾರಣ ಇಡೀ ತಾಂಡದ ಸಂಪರ್ಕವೇ ಕಡಿತಗೊಂಡಿದೆ.

ಇದನ್ನೂ ಓದಿ: ಸಚಿವ ಸತೀಶ್ ಜಾರಕಿಹೊಳಿ ಸಹೋದರಿಯ ಪತಿಗೆ ಇಡಿ ಶಾಕ್: ಹೆಚ್ಚುವರಿ ಅಬಕಾರಿ ಆಯುಕ್ತ ವೈ. ಮಂಜುನಾಥ್ ಮನೆ ಸೇರಿ 6 ಕಡೆ ದಾಳಿ

ಅಧಿಕಾರಿಗಳ ಮತ್ತು ರಾಜಕಾರಣಿಗಳ ನಿರ್ಲಕ್ಷ್ಯದ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿರುವ ತಾಂಡದ ನಿವಾಸಿಗಳು, ಇನ್ನಾದರೂ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಹಳ್ಳಕ್ಕೆ ಅಡ್ಡಲಾಗಿ ಸೇತುವೆ ನಿರ್ಮಿಸಿಕೊಡಬೇಕು, ನಮ್ಮ ಮಕ್ಕಳ ಜೀವಕ್ಕೆ ಸುರಕ್ಷತೆ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us