ಬೆಂಗಳೂರು, ಜೂನ್ 14: ನಮ್ಮ ಮೆಟ್ರೋದ (Namma Metro) ಬಹುನಿರೀಕ್ಷಿತ ಪಿಂಕ್ ಲೈನ್ (Pink LIne) ಕಾಮಗಾರಿ ಮತ್ತಷ್ಟು ವಿಳಂಬವಾಗಲಿದೆ. ಈ ಮಾರ್ಗದ ಅಂಡರ್ ಗ್ರೌಂಡ್ ಕಾಮಗಾರಿಗಾಗಿ ನೆಲದೊಳಕ್ಕೆ ಇಳಿಸಿದ್ದ ಎರಡು ಟಿಬಿಎಂ ಮಷಿನ್ಗಳಿಗೆ ಬಂಡೆಗಲ್ಲುಗಳು ಅಡ್ಡಿಯಾಗಿವೆ. ಕಾಳೇನ ಅಗ್ರಹಾರದಿಂದ ನಾಗವಾರ ಸಂಪರ್ಕಿಸುವ ಪಿಂಕ್ ಲೈನ್ನ 21 ಕಿಮೀ ಮಾರ್ಗದ 13 ಕಿಮೀ ಸುರಂಗ ಮಾರ್ಗದಲ್ಲಿ ಮೆಟ್ರೋ ಲೈನ್ ಹಾದು ಹೋಗ್ತಿದ್ದು ಇದು ಬೆಂಗಳೂರಿನ ಅತಿ ದೊಡ್ಡ ಮೆಟ್ರೋ ಸುರಂಗ ಕಾಮಗಾರಿಯಾಗಿದೆ. ಈ ಕಾಮಗಾರಿಗೆ ಈಗಾಗಲೇ ಒಂಬತ್ತು ಟಿಬಿಎಂ ಮಷಿನ್ಗಳ ಮೂಲಕ ಸುರಂಗ ಕಾಮಗಾರಿ ಮಾಡಲಾಗ್ತಿದೆ. ಏಳು ಟಿಬಿಎಂ ಮಷಿನ್ಗಳು ಯಶ್ವಸಿಯಾಗಿ ಸುರಂಗ ಕೊರೆದು ಹೊರಗೆ ಬಂದಿದ್ದು, ಎರಡು ಟಿಬಿಎಂ ಮಷಿನ್ಗಳಿಗೆ ಇದೀಗ ಬಂಡೆಕಲ್ಲಿನ ಸವಾಲು ಎದುರಾಗಿದೆ ಇದರಿಂದ ಮೆಟ್ರೋ ಕಾಮಗಾರಿ ವಿಳಂಬವಾಗಲಿದೆ.
ತುಂಗಾ ಮತ್ತು ಭದ್ರಾ ಟಿಬಿಎಂ ಮಷಿನ್ಗಳು ಆಗಸ್ಟ್ ಒಳಗೆ ಸುರಂಗ ಕೊರೆದು ಹೊರ ಬರಬೇಕಿತ್ತು. ಆದರೆ ಬಂಡೆ ಕಲ್ಲುಗಳು ಸಿಕ್ಕಿರುವ ಕಾರಣ ಈ ವರ್ಷದ ಕೊನೆಯವರೆಗೂ ಕಾಮಗಾರಿ ನಡೆಯಲಿದೆಯಂತೆ. ಮುಂದೆಯೂ ಬಂಡೆ ಕಲ್ಲುಗಳು ಎದುರಾದರೆ ಮತ್ತಷ್ಟು ವಿಳಂಬ ವಾಗಲಿದೆ. ತುಂಗಾ ಟಿಬಿಎಂ ಶೇ 45 ರಷ್ಟು ಸುರಂಗ ಕೊರೆದಿದ್ದು, ಭದ್ರಾ ಶೇ 22 ರಷ್ಟು ಸುರಂಗ ಕೊರೆದಿದೆ. ಈ ಎರಡು ಟಿಬಿಎಂಗಳು ಪ್ರತಿದಿನ ಐದು ಕಿಮೀ ನಷ್ಟು ಸುರಂಗ ಕೊರೆಯುವ ಸಾಮರ್ಥ್ಯ ಹೊಂದಿದ್ದು ಬಂಡೆಗಲ್ಲು ಸಿಕ್ಕಿರುವ ಕಾರಣ 3 ಕಿಮೀ ನಷ್ಟು ಮಾತ್ರ ಕೊರೆಯಲು ಸಾಧ್ಯವಾಗಲಿದೆ.
ಈ ಮಾರ್ಗದಲ್ಲಿ ಒಟ್ಟು 18 ಸ್ಟೇಷನ್ ಬರಲಿದ್ದು ಅದರಲ್ಲಿ ಆರು ಎಲಿವೇಟೆಡ್ 12 ಅಂಡರ್ ಗ್ರೌಂಡ್ ಸ್ಟೇಷನ್ಗಳು ಇರಲಿದೆ. ಈ ಬಗ್ಗೆ ಮಾತಾನಾಡಿದ ಮೆಟ್ರೋ ಅಧಿಕಾರಿಗಳು, ಸುರಂಗ ಕೊರೆಯುವ ಕಾರ್ಯ ಎರಡ್ಮೂರು ತಿಂಗಳು ಸುರಂಗ ತಡವಾಗಬಹುದು ಎಂದಿದ್ದಾರೆ. ಈ ಬಗ್ಗೆ ಬಿಎಂಆರ್ಸಿಎಲ್ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಯಶ್ವಂತ್ ಚೌವ್ಹಾಣ್ ಕೂಡ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಕೆಟ್ಟು ನಿಂತ ಮೆಟ್ರೋ: ಡೋರ್ ಓಪನ್ ಆಗದೆ ಒಳಗಿದ್ದ ಪ್ರಯಾಣಿಕರು ಪರದಾಟ
ಒಟ್ಟಿನಲ್ಲಿ ಆಗಸ್ಟ್ ವೇಳೆಗೆ ಎರಡು ಟಿಬಿಎಂ ಮಷಿನ್ಗಳು ಸುರಂಗ ಕೊರೆದು ಹೊರಗೆ ಬರುತ್ತದೆ ಅಂದುಕೊಂಡಿದ್ದ ಮೆಟ್ರೋ ಅಧಿಕಾರಿಗಳಿಗೆ ಈ ಬಂಡೆಗಲ್ಲು ಅಡ್ಡಲಾಗಿ ಸಿಕ್ಕಿರುವುದು ದೊಡ್ಡ ತಲೆ ನೋವಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ