Namma Metro: ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ರೈಲು ಬರುತ್ತಿದ್ದಂತೆಯೇ ಹಳಿಗೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ಯುವಕ

ಬೆಂಗಳೂರಿನ ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ಯುವಕನೊಬ್ಬ ರೈಲು ಹಳಿಗೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಗಾಯಗೊಂಡ ಯುವಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆಯಿಂದ ಮೆಟ್ರೋ ಸುರಕ್ಷತೆಯ ಕುರಿತು ಪ್ರಶ್ನೆಗಳು ಎದ್ದಿದೆ. ಪ್ಲಾಟ್‌ಫಾರ್ಮ್ ಸ್ಕ್ರೀನ್ ಡೋರ್‌ಗಳು ಮತ್ತು ಹೆಚ್ಚುವರಿ ಭದ್ರತಾ ಕ್ರಮಗಳನ್ನು ಅಳವಡಿಸುವಂತೆ ಸಂಸದ ತೇಜಸ್ವಿ ಸೂರ್ಯ ಆಗ್ರಹಿಸಿದ್ದಾರೆ.

Namma Metro: ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ರೈಲು ಬರುತ್ತಿದ್ದಂತೆಯೇ ಹಳಿಗೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ಯುವಕ
ಜಯಂತ್​​ನನ್ನು ರಕ್ಷಣೆ ಮಾಡಿ ಆ್ಯಂಬುಲೆನ್ಸ್​​​ನಲ್ಲಿ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ಯಲಾಯಿತು.

Updated on: Aug 12, 2025 | 10:31 AM

ಬೆಂಗಳೂರು, ಆಗಸ್ಟ್ 12: ಯುವಕನೊಬ್ಬ ರೈಲು ಬರುತ್ತಿದ್ದಂತೆಯೇ ಮೆಟ್ರೋ ಹಳಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ಘಟನೆ ಬೆಂಗಳೂರಿನ (Bengaluru) ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ (Metro Station) ನಡೆದಿದೆ. ಸೋಮವಾರ ರಾತ್ರಿ 10 ಗಂಟೆ ಸುಮಾರಿಗೆ ಯುವಕ ಆತ್ಮಹತ್ಯೆಗೆ ಯತ್ನಿಸಿದ್ದು, ಗಾಯಗೊಂಡಿರುವ ಆತನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಯುವಕನನ್ನು 31 ವರ್ಷ ವಯಸ್ಸಿನ ಜಯಂತ್ ಎಂದು ಗುರುತಿಸಲಾಗಿದೆ.

ಬೈಯ್ಯಪ್ಪನಹಳ್ಳಿಯಿಂದ ನ್ಯಾಷನಲ್ ಕಾಲೇಜ್ ಕಡೆ ಹೊರಟಿದ್ದ ಜಯಂತ್ ರಾತ್ರಿ 10 ಗಂಟೆಗೆ ಮೆಜೆಸ್ಟಿಕ್ ನಿಲ್ದಾಣದಲ್ಲಿ ಇಳಿದಿದ್ದ. ಬಳಿಕ ನ್ಯಾಷನಲ್ ಕಾಲೇಜ್ ಕಡೆ ಹೋಗಲು ಪ್ಲಾಟ್​ಫಾರಂ ನಾಲ್ಕಕ್ಕೆ ಬಂದಿದ್ದ. ನಂತರ ರೈಲು ಬರುತ್ತಿದ್ದಂತೆಯೇ ಏಕಾಏಕಿ ಹಳಿ ಮೇಲೆ ಹಾರಿದ್ದ.

ಯುವಕ ಹಳಿಗೆ ಜಿಗಿಯುತ್ತಿರುವುದನ್ನು ಕಂಡ ಕೂಡಲೇ ಮೆಟ್ರೋ ಆಪರೇಟರ್ ಎಮರ್ಜೆನ್ಸಿ ಬ್ರೇಕ್ ಹಾಕಿ ರೈಲು ನಿಲ್ಲಿಸಿದ್ದರು. ತಕ್ಷಣವೇ ಮೆಟ್ರೋ ಸಿಬ್ಬಂದಿ ಹಳಿಯಲ್ಲಿ ಬಿದ್ದಿದ್ದ ಜಯಂತನನ್ನು ರಕ್ಷಣೆ ಮಾಡಿದ್ದು ಆ್ಯಂಬುಲೆನ್ಸ್​​​ನಲ್ಲಿ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದಾರೆ.

ಜಯಂತ್​​ನ ತಲೆ, ಕಣ್ಣು, ಹೊಟ್ಟೆ ಮತ್ತು ಕೈ-ಕಾಲುಗಳಿಗೆ ಗಾಯಗಳಾಗಿವೆ. ಘಟನೆ ನಂತರ ಸುಮಾರು 30 ನಿಮಿಷ ಕಾಲ ಮೆಟ್ರೋ ಸಂಚಾರದಲ್ಲಿ ವ್ಯತ್ಯಯವಾಗಿತ್ತು. ಸದ್ಯ ಪ್ರಾಣಾಪಾಯದಿಂದ ಪಾರಾಗಿರುವ ಜಯಂತ್​​ಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಘಟನೆ ಬಗ್ಗೆ ಉಪ್ಪಾರಪೇಟೆ ಪೊಲೀಸರು ಮಾಹಿತಿ ಪಡೆಯುತ್ತಿದ್ದಾರೆ.

ಮೆಟ್ರೋ ನಿಲ್ದಾಣಗಳಲ್ಲಿ ಸುರಕ್ಷತೆಗೆ ಆದ್ಯತೆ ನೀಡಲು ತೇಜಸ್ವಿ ಸೂರ್ಯ ಆಗ್ರಹ

ಈ ಮಧ್ಯೆ, ಭಾನುವಾರ ಲೋಕಾರ್ಪಣೆಗೊಂಡು ಸಂಚಾರ ಆರಂಭಿಸಿರುವ ಮೆಟ್ರೋ ಯೆಲ್ಲೋ ಲೈನ್ ನಿಲ್ದಾಣಗಳಲ್ಲಿ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುವಂತೆ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಬಿಎಂಆರ್​​​ಸಿಎಲ್​​ಗೆ ಮನವಿ ಮಾಡಿದ್ದಾರೆ. ಯಲ್ಲೋ ಲೈನ್ ಮೆಟ್ರೋದಲ್ಲಿ ಸೋಮವಾರ ಸಂಚಾರ ಮಾಡಿ ಪ್ರಯಾಣಿಕರ ಅಭಿಪ್ರಾಯ, ಅಹವಾಲುಗಳನ್ನು ಆಲಿಸಿದ ತೇಜಸ್ವಿ ಸೂರ್ಯ, ನಿಲ್ದಾಣಗಳಲ್ಲಿ ಸ್ಕ್ರೀನ್​​​ ಡೋರ್​​ಗಳನ್ನು ಅಳವಡಿಸುವಂತೆ ಆಗ್ರಹಿಸಿದ್ದಾರೆ. ಅಲ್ಲದೆ, ವಿಶೇಷವಾಗಿ ಆರ್​ವಿ ರಸ್ತೆ ನಿಲ್ದಾಣದಲ್ಲಿ ಹೆಚ್ಚಿನ ಕಾಳಜಿ ವಹಿಸುವಂತೆ ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ನಮ್ಮ ಮೆಟ್ರೋ ಹಳದಿ ಮಾರ್ಗದ ವಿಶೇಷತೆಗಳೇನು? ಇಲ್ಲಿದೆ ವಿವರ, ಫೋಟೋಸ್​ ನೋಡಿ

ಈ ಹಿಂದೆ ನಾನು 2024ರಲ್ಲಿ ಬರೆದ ಪತ್ರದಲ್ಲಿ ಇತರ ಇಂಟರ್‌ಚೇಂಜ್ ನಿಲ್ದಾಣಗಳಲ್ಲಿ, ವಿಶೇಷವಾಗಿ ಕೆಂಪೇಗೌಡ ಮೆಜೆಸ್ಟಿಕ್ ನಿಲ್ದಾಣದಲ್ಲಿ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದೇನೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಅಪಘಾತಗಳು ಮತ್ತು ಜನದಟ್ಟಣೆಯನ್ನು ತಡೆಗಟ್ಟಲು ಬಿಎಂಆರ್‌ಸಿಎಲ್ ಪ್ಲಾಟ್‌ಫಾರ್ಮ್ ಸ್ಕ್ರೀನ್ ಡೋರ್​ಗಳು, ಬ್ಯಾರಿಕೇಡ್‌ಗಳು, ನಿಖರವಾದ ಫಲಕಗಳನ್ನು ಸ್ಥಾಪಿಸುವುದು ಮತ್ತು ಹೆಚ್ಚುವರಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸುವುದು ಅತ್ಯಗತ್ಯವಾಗಿದೆ. 30.7.2025 ರಂದು ಬಿಡುಗಡೆಯಾದ ಸಿಎಂಐ 8 ತಪಾಸಣಾ ವರದಿಯು ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಜಯದೇವ ನಿಲ್ದಾಣ ಸೇರಿದಂತೆ ಅನೇಕ ಸ್ಥಳಗಳಲ್ಲಿ ಫಲಕಗಳಲ್ಲಿ ಸುಧಾರಣೆಗಳನ್ನು ಶಿಫಾರಸು ಮಾಡಿದೆ. ಇದನ್ನು ಆರ್‌ವಿ ರಸ್ತೆ ಮೆಟ್ರೋ ನಿಲ್ದಾಣದಲ್ಲಿ ಅಗತ್ಯ ಜನಸಂದಣಿ ನಿಯಂತ್ರಣ ಮತ್ತು ಸುರಕ್ಷತಾ ಪ್ರೋಟೋಕಾಲ್‌ಗಳನ್ನು ಆದಷ್ಟು ಬೇಗ ಜಾರಿಗೆ ತರಲು ಮತ್ತು ತೆಗೆದುಕೊಂಡ ಕ್ರಮಗಳ ವಿವರಗಳನ್ನು ಒದಗಿಸುವಂತೆ ನಾನು ನಿಮ್ಮನ್ನು ವಿನಂತಿಸುತ್ತೇನೆ ಎಂದು ತೇಜಸ್ವಿ ಸೂರ್ಯ ಕೇಳಿಕೊಂಡಿದ್ದಾರೆ.

ವರದಿ: ಪ್ರದೀಪ್ ಚಿಕ್ಕಾಟಿ, ಟಿವಿ9, ಬೆಂಗಳೂರು

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ