- Kannada News Photo gallery PM Modi Inaugurates Bengaluru Namma Metro Yellow Line: Route, Stations and Details
ನಮ್ಮ ಮೆಟ್ರೋ ಹಳದಿ ಮಾರ್ಗದ ವಿಶೇಷತೆಗಳೇನು? ಇಲ್ಲಿದೆ ವಿವರ, ಫೋಟೋಸ್ ನೋಡಿ
ಬೆಂಗಳೂರಿನ ಹೊಸ ಹಳದಿ ಮೆಟ್ರೋ ಮಾರ್ಗವು ಆರ್ ವಿ ರಸ್ತೆಯಿಂದ ಬೊಮ್ಮಸಂದ್ರದವರೆಗೂ ಸಂಪರ್ಕಿಸುತ್ತದೆ. 7616 ಕೋಟಿ ರೂಪಾಯಿ ವೆಚ್ಚದ ಈ 19.15 ಕಿಲೋಮೀಟರ್ ಮಾರ್ಗದಲ್ಲಿ 16 ನಿಲ್ದಾಣಗಳಿವೆ. ಇದು ಹಸಿರು, ಗುಲಾಬಿ ಮತ್ತು ನೀಲಿ ಮಾರ್ಗಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಚಾಲಕ ರಹಿತ ರೈಲುಗಳು ಸಂಚರಿಸುವ ಈ ಮಾರ್ಗವು ಬೆಂಗಳೂರಿನ ಸಾರಿಗೆ ವ್ಯವಸ್ಥೆಯನ್ನು ಸುಧಾರಿಸಲಿದೆ.
Updated on: Aug 10, 2025 | 7:20 PM

ಬೆಂಗಳೂರಿನ ಜನರ ಜೀವನಾಡಿಯಾಗಿರುವ ನಮ್ಮ ಮೆಟ್ರೋ ಮತ್ತಷ್ಟು ವಿಸ್ತರಣೆಯಾಗಿದೆ. ಹಳದಿ ಮಾರ್ಗಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ರಾಗಿಗುಡ್ಡ ಮೆಟ್ರೋ ನಿಲ್ದಾಣದಲ್ಲಿ ರವಿವಾರ (ಆ.10) ಹಸಿರು ನಿಶಾನೆ ತೋರಿಸಿದರು. ಈ ಮೂಲಕ ಎಲೆಕ್ಟ್ರಾನಿಕ್ ಸಿಟಿ ಜನರ ಬಹುದಿನಗಳ ಕನಸು ನನಸಾಗಿದೆ. ಪ್ರಧಾನಿ ಮೋದಿ ಉದ್ಘಾಟಿಸಿರುವ ಹಳದಿ ಮಾರ್ಗದ ವಿಶೇಷತೆಗಳು ಇಲ್ಲಿದೆ.

ಐಟಿ ಹಬ್ ಎಲೆಕ್ಟ್ರಾನಿಕ್ ಸಿಟಿ ಸಂಪರ್ಕಿಸುವ ಚಾಲಕ ರಹಿತ ರೈಲು ಈ ಮಾರ್ಗದಲ್ಲಿ ಸಂಚರಿಸಲಿದೆ. ಸುಮಾರು 7,616 ಕೋಟಿ ರೂಪಾಯಿ ವೆಚ್ಚದಲ್ಲಿ ಹಳದಿ ಮಾರ್ಗವನ್ನು ನಿರ್ಮಿಸಲಾಗಿದೆ. ಆರ್ ವಿ ರಸ್ತೆಯಿಂದ ಬೊಮ್ಮಸಂದ್ರದವರೆಗೂ ಸಂಪರ್ಕ ಕಲಿಸಲಾಗಿದ್ದು, ಒಟ್ಟು 19.15 ಕಿಲೋ ಮೀಟರ್ ಉದ್ದದ ಮಾರ್ಗವಾಗಿದೆ. ಬೆಂಗಳೂರಿನ ಐಟಿ ಹಬ್ ಎಲೆಕ್ಟ್ರಾನಿಕ್ ಸಿಟಿಯಿಂದ ಬೆಂಗಳೂರಿನ ಕೇಂದ್ರ ಭಾಗದ ನಡುವೆ ಸಂಪರ್ಕ ಕೊಂಡಿಯಾಗಿದೆ.

ಹಳದಿ ಮಾರ್ಗದಲ್ಲಿ ಒಟ್ಟು 16 ನಿಲ್ದಾಣಗಳಿವೆ. ಹಳದಿ ಮಾರ್ಗದ ರೈಲು 3 ಮೆಟ್ರೋ ಲೈನ್‌ಗೆ ಕೂಡುತ್ತದೆ. ಹಳದಿ ಮಾರ್ಗವು ಹಸಿರು ಮಾರ್ಗ, ಗುಲಾಬಿ, ನೀಲಿ ಮಾರ್ಗಕ್ಕೆಕ್ಕೆ ಕೂಡುತ್ತದೆ. ಜಯದೇವ ಆಸ್ಪತ್ರೆ ನಿಲ್ದಾಣವು ಅತಿ ಎತ್ತರ ಹಾಗೂ ದೊಡ್ಡ ಮೆಟ್ರೋ ನಿಲ್ದಾಣ ಎಂಬ ಖ್ಯಾತಿ ಪಡೆದಿದೆ.

ಹಳದಿ ಮಾರ್ಗದಲ್ಲಿ ಸದ್ಯ 20 ರಿಂದ 25 ನಿಮಿಷಗಳ ಅಂತರದಲ್ಲಿ ಒಂದು ಮೆಟ್ರೋ ಸಂಚಾರ ಮಾಡುತ್ತದೆ. ಈ ಮಾರ್ಗದಲ್ಲಿ ನಿತ್ಯ 20-30 ಸಾವಿರ ಜನರು ಸಂಚಾರ ಮಾಡಲಿದ್ದಾರೆ ಎಂದು ಅಂದಾಜಿಸಲಾಗಿದೆ. ಇನ್ನು 2026 12 ರೈಲುಗಳು ಹಳದಿ ಮಾರ್ಗಕ್ಕೆ ಸೇರ್ಪಡೆಯಾಗಲಿದೆ. ಅಂತೆಯೇ ಮುಂಬರುವ ದಿನಗಳಲ್ಲಿ ಮೆಟ್ರೋ ಪ್ರಯಾಣಿಕರ ಸಂಖ್ಯೆಯೂ ಹೆಚ್ಚಾಗಲಿದ್ದು, 3.5 ಲಕ್ಷ ಮಂದಿ ಪ್ರಯಾಣಿಕರು ಪ್ರಯಾಣಿಸಬಹುದು ಎಂದು ಬಿಎಂಆರ್ಸಿಎಲ್ ಅಂದಾಜಿಸಿದೆ.

ವಿಶೇಷ ಅಂದ್ರೆ ಹಳದಿ ಮಾರ್ಗದಲ್ಲಿ ಡಬಲ್ ಡೆಕ್ಕರ್ ಫ್ಲೈಓವರ್ ನಿರ್ಮಾಣವಾಗಿದೆ. ರಾಗಿಗುಡ್ಡದಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್‌ವರೆಗೆ ಡಬ್ಬಲ್ ಡೆಕ್ಕರ್ ಫ್ಲೈಓವರ್ ನಿರ್ಮಾಣವಾಗಿದೆ. ಆರ್ ವಿ ನಿಲ್ದಾಣದಲ್ಲಿ ಗ್ರೀನ್ ಲೈನ್‌ಗೆ, ಜಯದೇವ ಆಸ್ಪತ್ರೆ ಬಳಿ ಪಿಂಕ್ ಲೈನ್‌ಗೆ ಇಂಟರ್ ಚೇಂಜ್ ವ್ಯವಸ್ಥೆ ಮಾಡಲಾಗಿದೆ.

ನಮ್ಮ ಮೆಟ್ರೋ ಹಳದಿ ಮಾರ್ಗದ ನಿಲ್ದಾಣಗಳು: ಬೊಮ್ಮಸಂದ್ರ, ಹೆಬ್ಬಗೋಡಿ, ಹುಸ್ಕೂರ್ ರಸ್ತೆ, ಇನ್ಫೋಸಿಸ್ ಫೌಂಡೇಶನ್ ಕೋನಪ್ಪನ ಅಗ್ರಹಾರ, ಎಲೆಕ್ಟ್ರಾನಿಕ್ ಸಿಟಿ, ಬೆರತೇನ ಅಗ್ರಹಾರ, ಹೊಸ ರೋಡ್, ಸಿಂಗಸಂದ್ರ, ಕೂಡ್ಲು ಗೇಟ್, ಹೊಂಗಸಂದ್ರ, ಬೊಮ್ಮನಹಳ್ಳಿ, ಸೆಂಟ್ರಲ್ ಸಿಲ್ಕ್ ಬೋರ್ಡ್, ಬಿಟಿಎಂ ಲೇಔಟ್, ಜಯದೇವ ಆಸ್ಪತ್ರೆ, ರಾಗಿ ಗುಡ್ಡ ದೇವಸ್ಥಾನ, ಆರ್.ವಿ (ರಾಷ್ಟ್ರೀಯ ವಿದ್ಯಾಲಯ) ರಸ್ತೆ

ಮೆಟ್ರೋ ಹಳದಿ ಮಾರ್ಗದಿಂದ ಟ್ರಾಫಿಕ್ ಸಮಸ್ಯೆ ಕಡಿಮೆಯಾಗುವ ಸಾಧ್ಯತೆ ಇದೆ. HSR ಲೇಔಟ್, BTM ಲೇಔಟ್, ಸಿಂಗಸಂದ್ರ, ಬೊಮ್ಮನಹಳ್ಳಿ, ಜಯನಗರ, ತಿಲಕ್‌ನಗರ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಿಗೆ ಅನುಕೂಲವಾಗಲಿದೆ. ಪ್ರತಿಷ್ಠಿತ ಜಯದೇವ ಆಸ್ಪತ್ರೆ, ಇನ್ಫೋಸಿಸ್‌ಗೆ ತೆರಳುವ ಸಾವಿರಾರು ಜನರಿಗೆ ಮತ್ತು ಬೆಂಗಳೂರಿನಿಂದ ಹೊಸೂರು ಭಾಗಕ್ಕೆ ತೆರಳುವ ಪ್ರಯಾಣಿಕರಿಗೂ ಅನುಕೂಲವಾಗಲಿದೆ.




