ಮಂತ್ರಾಲಯದಲ್ಲಿ ಆರಾಧನಾ ಮಹೋತ್ಸವ: ರಾಯರಿಗಾಗಿ ತಿರುಮಲದಿಂದ ಬಂದ ಶೇಷವಸ್ತ್ರಗಳು
ಶ್ರೀ ರಾಘವೇಂದ್ರ ಸ್ವಾಮಿಗಳ 354ನೇ ಆರಾಧನಾ ಮಹೋತ್ಸವದ ಪೂರ್ವಾರಾಧನೆ ಮಂತ್ರಾಲಯದಲ್ಲಿ ವಿಜೃಂಭಣೆಯಿಂದ ನೆರವೇರಿತು. ವಿವಿಧ ಪೂಜಾ ಕೈಂಕರ್ಯಗಳು, ಪಲ್ಲಕ್ಕಿ ಉತ್ಸವ, ಮತ್ತು ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ತಿರುಪತಿ ಮತ್ತು ತಮಿಳುನಾಡಿನ ದೇವಾಲಯಗಳಿಂದ ಬಂದ ಪ್ರಸಾದವನ್ನು ಸ್ವೀಕರಿಸಲಾಯಿತು. ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದು, ರಾಯರ ದರ್ಶನ ಪಡೆದರು.
Updated on: Aug 10, 2025 | 4:44 PM

ಕಲಿಯುಗ ಕಾಮಧೇನು ಶ್ರೀಗುರು ರಾಘವೇಂದ್ರ ಸ್ವಾಮಿಗಳ 354 ನೇ ಆರಾಧನಾ ಮಹೋತ್ಸವ ಹಿನ್ನೆಲೆ ಮಂತ್ರಾಲಯದಲ್ಲಿ ಪೂರ್ವಾರಾಧನೆ ನೆರವೇರಿತು. ಪೂರ್ವಾರಾಧನೆ ಹಿನ್ನೆಲೆಯಲ್ಲಿ ಶ್ರೀಮಠದಲ್ಲಿ ವಿಶೇಷ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದೆ.

ರಾಯರು ಸಶರೀರರಾಗಿ ವೃಂದಾವನಸ್ಥರಾದ ದಿನದ ಮುನ್ನಾ ದಿನವನ್ನು ಪೂರ್ವಾರಾಧನೆಯಾಗಿ ಮಂತ್ರಾಲಯ ಸೇರಿದಂತೆ ದೇಶದ ಎಲ್ಲ ರಾಯರ ಮಠಗಳಲ್ಲಿ ಆಚರಿಸಲಾಗುತ್ತಿದೆ. ಇಂದು (ಆ.10) ಬೆಳಿಗ್ಗೆಯಿಂದಲೇ ಮಂತ್ರಾಲಯದ ರಾಯರ ಮಠದಲ್ಲಿ ಪೂಜಾ ಕೈಂಕರ್ಯಗಳು ನಡೆಯುತ್ತಿದ್ದು, ನಿರ್ಮಾಲ್ಯ ವಿಸರ್ಜನೆ, ಉತ್ಸವರಾಯರ ಪಾದಪೂಜೆ, ಪಂಚಾಮೃತ ಅಭಿಷೇಕ, ರಜತ ಸಿಂಹವಾಹನೋತ್ಸವ ಜರುಗಿದವು.

ತಮಿಳುನಾಡಿನ ಮುಜರಾಯಿ ಇಲಾಖೆಯ ಅಧಿಕಾರಿಗಳು ಶ್ರೀರಂಗಂನ ಶ್ರೀರಂಗನಾಥ ದೇವಸ್ಥಾನ ಹಾಗೂ ಕುಂಬಕೋಣಂನ ಉಪ್ಪಲಿ ಅಪ್ಪನ್ ದೇವಾಲಯದಿಂದ ರಾಯರಿಗೆ ವಸ್ತ್ರ ರೂಪದ ಪ್ರಸಾದ ಹಾಗೂ ತಿರುಪತಿ ತಿರುಮಲದಿಂದ ಬಂದ ಶೇಷವಸ್ತ್ರವನ್ನು ರಾಯರ ವೃಂದಾವನಕ್ಕೆ ಸಮರ್ಪಿಸಲಾಯಿತು.

ಬಳಿಕ ಆ ಶೇಷವಸ್ತ್ರವನ್ನು ರಾಯರ ಮೂಲ ವೃಂದಾವನಕ್ಕೆ ಅರ್ಪಿಸಿ, ಪೂಜೆ ಸಲ್ಲಿಸಲಾಯಿತು. ಮಠದ ಪ್ರಾಂಗಣದಲ್ಲಿ ರಾಯರು ರಚಿಸಿರುವ ಪರಿಮಳ ಗ್ರಂಥವನ್ನು ಪಲ್ಲಕ್ಕಿಯಲ್ಲಿ ಇಟ್ಟು ಮಠದ ಪ್ರಾಂಗಣದಲ್ಲಿ ಪಲ್ಲಕ್ಕಿ ಉತ್ಸವ ನೆರವೇರಿಸಲಾಯಿತು.

ಈ ಬಾರಿ ಶ್ರೀಮಠದಲ್ಲಿ ಪರಿಮಳ ತೀರ್ಥ ಹೆಸರಿನ ಪುಷ್ಕರಣೆಯನ್ನ ಭಕ್ತರೊಬ್ಬರು ನಿರ್ಮಿಸಿ ಕೊಟ್ಟಿದ್ದಾರೆ. ಇದೇ ಪುಷ್ಕರಣಿಯಲ್ಲಿ ಆರಾಧನಾ ನಿಮಿತ್ತ ವಿಶೇಷ ಪೂಜೆ ಸಲ್ಲಿಸಲಾಗಿದೆ. ಶ್ರೀಮಠಕ್ಕೆ ಸಣ್ಣ ನೀರಾವರಿ ಸಚಿವ ಎನ್ ಎಸ್ ಬೋಸರಾಜು, ಹೈಕೋರ್ಟ್ ನ್ಯಾಯಮೂರ್ತಿ ವಿ.ಶ್ರೀಶಾನಂದ ಅವರು ಭೇಟಿ ನೀಡಿ, ರಾಯರ ದರ್ಶನ ಪಡೆದರು. ಮಠದ ಪೀಠಾಧಿಪತಿಗಳಾದ ಸುಬುಧೇಂದ್ರ ತೀರ್ಥರು ಗಣ್ಯರನ್ನು ಪುಷ್ಕರಣಿಗೆ ಕರೆದೊಯ್ದು ಅದರ ಹಿನ್ನೆಲೆಯನ್ನು ತಿಳಿಸಿದರು.

ರಾಯರ ಆರಾಧನೆ ಹಿನ್ನೆಲೆಯಲ್ಲಿ ಭಕ್ತ ಸಾಗರವೇ ಮಠಕ್ಕೆ ಹರಿದು ಬರುತ್ತಿದೆ. ಏಳು ದಿನಗಳ ರಾಯರ ಆರಾಧನಾ ಮಹೋತ್ಸವದ ಪೈಕಿ ಇಂದಿನಿಂದ ಮೂರು ದಿನಗಳು ಅತಿ ಮಹತ್ವದ ದಿನಗಳಾಗಿದ್ದು, ರಾಘವೇಂದ್ರ ಸ್ವಾಮಿಗಳು ವೃಂದಾವನಸ್ಥರಾಗಿರುವ ಈ ದಿನಗಳಲ್ಲಿ ರಾಯರ ದರ್ಶನ ಪಡೆದರೆ ಸಕಲ ಸಂಕಷ್ಟಗಳು ದೂರಾಗುತ್ತವೆ ಎಂಬ ನಂಬಿಕೆ ಭಕ್ತರಲ್ಲಿದೆ.

ಪೂರ್ವರಾಧನೆ ಹಿನ್ನೆಲೆಯಲ್ಲಿ ಶ್ರೀಮಠ ವಿಜೃಂಭಣೆಯಿಂದ ನಡೆದ ವಿಶೇಷ ಧಾರ್ಮಿಕ ಕೈಂಕರ್ಯಗಳಿಗೆ ಸಾಕ್ಷಿಯಾಗಿದೆ.



