ಬೆಂಗಳೂರಿನಲ್ಲಿ ಪಾಸ್​ಪೋರ್ಟ್ ದಾಖಲೆ​ ಪರಿಶೀಲನೆಗೆ ಹೊಸ ಮಾರ್ಗಸೂಚಿ

ಬೆಂಗಳೂರಿನಲ್ಲಿ ಪಾಸ್​ಪೋರ್ಟ್ ದಾಖಲೆ ಪರಿಶೀಲನೆಯನ್ನು ಜನಸ್ನೇಹಿಯಾಗಿಸಲು ಕಟ್ಟುನಿಟ್ಟಿನ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಮಾರ್ಗಸೂಚಿ ಪ್ರಕಟಿಸಿದ್ದು, ಅಧಿಕಾರಿಗಳು ಪಾಸ್‌ಪೋರ್ಟ್ ಪರಿಶೀಲನೆ ವೇಳೆ ಬಾಡಿ-ವೋರ್ನ್ ಕ್ಯಾಮೆರಾ ಧರಿಸುವುದು ಕಡ್ಡಾಯವಾಗಿದೆ. ಇನ್ನೂ ಹಲವು ವಿಷಯಗಳು ಮಾರ್ಗಸೂಚಿಯಲ್ಲಿ ಅಡಕವಾಗಿದ್ದು, ಆ ಕುರಿತ ವಿವರ ಇಲ್ಲಿದೆ.

ಬೆಂಗಳೂರಿನಲ್ಲಿ ಪಾಸ್​ಪೋರ್ಟ್ ದಾಖಲೆ​ ಪರಿಶೀಲನೆಗೆ ಹೊಸ ಮಾರ್ಗಸೂಚಿ
ಸಾಂದರ್ಭಿಕ ಚಿತ್ರ
Image Credit source: TV9 Network

Updated on: Feb 27, 2026 | 12:20 PM

ಬೆಂಗಳೂರು, ಫೆಬ್ರವರಿ 27: ಪಾಸ್‌ಪೋರ್ಟ್ ದಾಖಲೆ ಪರಿಶೀಲನೆ (Passport Verification) ಪ್ರಕ್ರಿಯೆಯನ್ನು ಹೆಚ್ಚು ಪಾರದರ್ಶಕ ಮತ್ತು ಜನಸ್ನೇಹಿಯಾಗಿಸಲು ಬೆಂಗಳೂರು (Bangalore) ನಗರ ಪೊಲೀಸರಿಂದ ಹೊಸ ಮಾರ್ಗಸೂಚಿ ಜಾರಿಗೊಳಿಸಲಾಗಿದೆ. ಪಾಸ್‌ಪೋರ್ಟ್ ಪರಿಶೀಲನೆ ವೇಳೆ ಅನುಸರಿಸಬೇಕಾದ ಕಟ್ಟುನಿಟ್ಟಿನ ನಿಯಮಗಳನ್ನು ಡಿಜಿ ಹಾಗೂ ಐಜಿಪಿ ಸೂಚನೆಯಂತೆ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಪ್ರಕಟಿಸಿದ್ದಾರೆ. ಹೊಸ ಮಾರ್ಗಸೂಚಿಯಂತೆ, ಪಾಸ್‌ಪೋರ್ಟ್ ಪರಿಶೀಲನೆ ವೇಳೆ ಅಧಿಕಾರಿಗಳು ಬಾಡಿ-ವೋರ್ನ್ ಕ್ಯಾಮೆರಾ (Body Worn Camera) ಧರಿಸುವುದು ಕಡ್ಡಾಯವಾಗಿದೆ. ಪರಿಶೀಲನೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಹಾಗೂ ಸಾರ್ವಜನಿಕರ ವಿಶ್ವಾಸ ಹೆಚ್ಚಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ.

ಪಾಸ್‌ಪೋರ್ಟ್ ಅರ್ಜಿದಾರರನ್ನು ಯಾವುದೇ ಕಾರಣಕ್ಕೂ ಪೊಲೀಸ್ ಠಾಣೆಗೆ ಕರೆಸಬಾರದು ಎಂದು ಸ್ಪಷ್ಟ ಸೂಚನೆ ನೀಡಲಾಗಿದೆ. ಬದಲಾಗಿ, ಸಂಬಂಧಪಟ್ಟ ಅಧಿಕಾರಿಗಳು ಕಡ್ಡಾಯವಾಗಿ ಅರ್ಜಿದಾರರ ವಾಸಸ್ಥಳಕ್ಕೆ ಭೇಟಿ ನೀಡಬೇಕು. ಭೇಟಿ ಸಂದರ್ಭದಲ್ಲಿ ನೆರೆಹೊರೆಯವರಿಂದ ಅಗತ್ಯ ಮಾಹಿತಿ ಸಂಗ್ರಹಿಸುವುದೂ ಮಾರ್ಗಸೂಚಿಯ ಭಾಗವಾಗಿದೆ.

ಅರ್ಜಿದಾರರ ವಿಳಾಸಕ್ಕೆ ಭೇಟಿ ನೀಡುವ ಕನಿಷ್ಠ 24 ಗಂಟೆಗಳ ಮುನ್ನ SMS ಅಥವಾ ದೂರವಾಣಿ ಕರೆ ಮೂಲಕ ಮಾಹಿತಿ ನೀಡಬೇಕು. ಯಾವುದೇ ರೀತಿಯ ಆಮಿಷ ಅಥವಾ ಹಣದ ನಿರೀಕ್ಷೆ ಇಡಬಾರದು. ಈ ಉದ್ದೇಶಕ್ಕಾಗಿ ಅರ್ಜಿದಾರರಿಗೆ ಕಿರುಕುಳ ನೀಡುವುದು, ವಿನಾಕಾರಣ ಅಲೆದಾಡಿಸುವುದು ಅಥವಾ ವರದಿ ಸಲ್ಲಿಕೆಯಲ್ಲಿ ವಿಳಂಬ ಮಾಡುವುದು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲೂ ಅಂಡಾಣು ಮಾರಾಟ ದಂಧೆ? ಐವಿಎಫ್ ಕೇಂದ್ರಗಳ ಮೇಲೆ ಕಟ್ಟುನಿಟ್ಟಿನ ನಿಗಾಕ್ಕೆ ಆರೋಗ್ಯ ಇಲಾಖೆ ಸೂಚನೆ

ಪ್ರತಿಕೂಲ ವರದಿ ಸಲ್ಲಿಸುವ ಸಂದರ್ಭದಲ್ಲಿ ಅಧಿಕಾರಿಗಳು ಸೂಕ್ತ ಮತ್ತು ಸ್ಪಷ್ಟವಾದ ಪುರಾವೆಗಳನ್ನು ಹೊಂದಿರಬೇಕು ಎಂದು ಸೂಚಿಸಲಾಗಿದೆ. ತರ್ಕಬದ್ಧ ಕಾರಣಗಳಿಲ್ಲದೆ ನಕಾರಾತ್ಮಕ ವರದಿ ಸಲ್ಲಿಸಿದರೆ ಕ್ರಮ ಕೈಗೊಳ್ಳಲಾಗುತ್ತದೆ. ಈ ಎಲ್ಲಾ ನಿಯಮಗಳು ಕಟ್ಟುನಿಟ್ಟಾಗಿ ಪಾಲನೆಯಾಗುತ್ತಿವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಸಂಬಂಧಿತ ಡಿಸಿಪಿ ವಾರಕ್ಕೊಮ್ಮೆ ವರದಿ ಸಲ್ಲಿಸಬೇಕಾಗಿದೆ. ಮಾರ್ಗಸೂಚಿ ಉಲ್ಲಂಘಿಸುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುತ್ತದೆ ಎಂದು ಪೊಲೀಸ್ ಇಲಾಖೆ ಎಚ್ಚರಿಕೆ ನೀಡಿದೆ.

ವರದಿ: ಪ್ರದೀಪ್ ಚಿಕ್ಕಾಟಿ, ಟಿವಿ9 ಬೆಂಗಳೂರು

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us