New Year Guidelines: ಸಂಜೆ 6ಕ್ಕೆ ಎಂಜಿ ರಸ್ತೆ, ಬ್ರಿಗೇಡ್ ರಸ್ತೆಗೆ ಬ್ಯಾರಿಕೇಡ್, ರಾತ್ರಿ 10ಕ್ಕೆ ಎಲ್ಲವೂ ಬಂದ್: ಬೆಂಗಳೂರು ಪೊಲೀಸರ ಸೂಚನೆ
ಟಿಕೆಟ್ ಬುಕ್ ಮಾಡಿರುವವರು ಕಡ್ಡಾಯವಾಗಿ ಎರಡು ಡೋಸ್ ಲಸಿಕೆ ತೆಗೆದುಕೊಂಡಿರಬೇಕು.
ಬೆಂಗಳೂರು: ಹೊಸವರ್ಷದ ಮುನ್ನಾ ದಿನವಾದ ಶುಕ್ರವಾರ (ಡಿ.31) ಬೆಂಗಳೂರಿನ ಎಂಜಿ ರಸ್ತೆ ಮತ್ತು ಬ್ರಿಗೇಡ್ ರಸ್ತೆಗೆ ಸಂಜೆ 6 ಗಂಟೆಗೆ ಬ್ಯಾರಿಕೇಡ್ ಹಾಕಲಾಗುತ್ತದೆ. ಪಬ್, ರೆಸ್ಟೊರೆಂಟ್ಗಳಲ್ಲಿ ಮುಂಗಡ ಕಾಯ್ದಿರಿಸಿಕೊಂಡಿದ್ದವರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಕೇಂದ್ರ ವಿಭಾಗ ಡಿಸಿಪಿ ಎಂ.ಎನ್.ಅನುಚೇತ್ ಹೇಳಿದರು. ಟಿಕೇಟ್ ಬುಕ್ಕಿಂಗ್ ಮೆಸೇಜ್ ಪರಿಶೀಲಿಸಿದ ನಂತರವೇ ಜನರನ್ನು ಒಳಗೆ ಬಿಡಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.
ಸುಮ್ಮನೆ ಯಾರೊಬ್ಬರಿಗೂ ಅವಕಾಶ ನೀಡುವುದಿಲ್ಲ. ಟಿಕೆಟ್ ಬುಕ್ ಮಾಡಿರುವವರು ಕಡ್ಡಾಯವಾಗಿ ಎರಡು ಡೋಸ್ ಲಸಿಕೆ ತೆಗೆದುಕೊಂಡಿರಬೇಕು. ಎರಡೂ ರಸ್ತೆಗಳಲ್ಲಿ ಎಲ್ಲ ಅಂಗಡಿಗಳು, ಪಬ್, ಬಾರ್, ರೆಸ್ಟೊರೆಂಟ್ಗಳನ್ನು ರಾತ್ರಿ 10 ಗಂಟೆಗೆ ಬಂದ್ ಮಾಡಲಾಗುತ್ತದೆ. ಅವಧಿ ಮೀರಿಯೂ ತೆರೆದಿದ್ದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸುತ್ತೇವೆ. ಎಂಜಿ ರಸ್ತೆಯಲ್ಲಿ ಯಾವುದೇ ಸಂಭ್ರಮಾಚರಣೆಗೆ ಅವಕಾಶ ಇರುವುದಿಲ್ಲ ಎಂದು ಹೇಳಿದರು.
ಕನ್ನಡಪರ ಸಂಘಟನೆಗಳು ಮತ್ತು ನಾಯಕರು ಬಂದ್ ಹಿಂಪಡೆದಿದ್ದಾರೆ. ಆದರೆ ಜಾಥಾ ನಡೆಸುತ್ತಾರೆ ಎಂಬ ಮಾಹಿತಿಯಿದೆ. ಈವರೆಗೂ ನಾವು ಯಾವುದೇ ಅನುಮತಿ ಕೊಟ್ಟಿಲ್ಲ. ಕಚೇರಿ ಅನುಮತಿ ಪಡೆಯಲು ಬರುತ್ತೇವೆ ಎಂದಿದ್ದಾರೆ. ಒಂದು ವೇಳೆ ಅನುಮತಿ ಕೋರಿದರೆ ಜಾಥಾ ನಡೆಸಲು ಅವಕಾಶ ನೀಡುವ ಕುರಿತು ಪರಿಶೀಲಿಸುತ್ತೇವೆ ಎಂದರು.
ಈಗಾಗಲೇ ಲಭ್ಯವಿರುವ ಮಾಹಿತಿಯಂತೆ ಟೌನ್ ಹಾಲ್, ಕಾರ್ಪೋರೇಷನ್ ಸರ್ಕಲ್, ಮೈಸೂರು ಬ್ಯಾಂಕ್, ಮೆಜೆಸ್ಟಿಕ್, ಆನಂದರಾವ್ ಸರ್ಕಲ್ ಮೂಲಕ ಜಾಥಾ ಫ್ರೀಡಂ ಪಾರ್ಕ್ ತಲುಪಲಿದೆ. ನಾವು ಎಲ್ಲ ರೀತಿಯ ಬಂದೋಬಸ್ತ್ ಮಾಡಿಕೊಂಡಿದ್ದೇವೆ. ಎಷ್ಟು ಜನ ಸೇರುತ್ತಾರೆ ಎನ್ನುವ ಮಾಹಿತಿ ಸದ್ಯಕ್ಕೆ ಲಭ್ಯವಿಲ್ಲ. ಕೋವಿಡ್ ನಿಯಾಮಾವಳಿಗಳ ಪಾಲನೆ ಮಾಡಬೇಕಿದೆ ಎಂದು ಸ್ಪಷ್ಟಪಡಿಸಿದರು.
ನಿಯಮ ಪಾಲನೆ ಕಡ್ಡಾಯ: ಬಿಬಿಎಂಪಿ ಆಯುಕ್ತ ಹೊಸ ವರ್ಷದ ಸಂಭ್ರಮದಲ್ಲಿಯೂ ಕೊವಿಡ್ ನಿಯಮ ಪಾಲನೆ ಕಡ್ಡಾಯವಾಗಿ ಆಗಬೇಕು. ಕೊವಿಡ್ ನಿಯಮ ಉಲ್ಲಂಘನೆಯಾದರೆ ಮುಂದೆ ಮೂರನೇ ಅಲೆ ಹೆಚ್ಚಾಗಬಹುದು. ಹೆಲ್ತ್ ಇನ್ಸ್ಪೆಕ್ಟರ್, ಮಾರ್ಷಲ್ ಹಾಗೂ ಪೊಲೀಸರು ಎಲ್ಲರೂ ಕೊವಿಡ್ ನಿಯಮ ಪಾಲಿಸುವಂತೆ ಕೆಲಸ ಮಾಡಬೇಕು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಹೇಳಿದ್ದಾರೆ.
ಹೊಸ ವರ್ಷಾಚರಣೆಗೆ ರಾತ್ರಿ ಹತ್ತು ಗಂಟೆಗಿಂತಲೂ ಹೆಚ್ಚಿನ ಸಮಯ ನೀಡಲು ಆಗುವುದಿಲ್ಲ. ಹಾಸ್ಟೆಲ್, ಅಪಾರ್ಟ್ಮೆಂಟ್ ಹಾಗೂ ಸ್ಥಳೀಯವಾಗಿ ಹೊಸ ವರ್ಷಾಚರಣೆ ಮಾಡುವಾಗಲೂ ನಿಯಮ ಪಾಲನೆ ಕಡ್ಡಾಯ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ವರ್ಷಾಚರಣೆಗೆ ಬ್ರೇಕ್ ಹಾಕಲು ‘ಖಾಕಿ’ ತಯಾರಿ: ಸಾವಿರಕ್ಕೂ ಅಧಿಕ ಪೊಲೀಸರ ನಿಯೋಜನೆ, ಎಂಜಿ ರೋಡ್ ಹಾಗೂ ಬ್ರಿಗೇಡ್ ರಸ್ತೆಗಳು ಬಂದ್ ಇದನ್ನೂ ಓದಿ: ಮುಂಬೈನಲ್ಲಿ ಹೊಸ ವರ್ಷಾಚರಣೆಗೆ ಫುಲ್ ಬ್ರೇಕ್; ನಗರಾದ್ಯಂತ ಇಂದಿನಿಂದಲೇ ಸೆಕ್ಷನ್ 144 ಜಾರಿ