ಮಾಜಿ ಸಿಎಂ ಬಿಎಸ್ ಯಡಿಯೂರಪ್ಪಗೆ ಜಾಮೀನು ರಹಿತ ವಾರಂಟ್ ಜಾರಿಗೊಳಿಸಿದ ಕೋರ್ಟ್

| Updated By: ಕಿರಣ್ ಹನುಮಂತ್​ ಮಾದಾರ್

Updated on: Jun 13, 2024 | 5:35 PM

ಪೋಕ್ಸೋ ಪ್ರಕರಣ(POCSO Case)ದಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ(BS Yediyurappa )ಗೆ ಬಂಧನ ಭೀತಿ ಎದುರಾಗಿದ್ದು, ಯಡಿಯೂರಪ್ಪಗೆ ಬೆಂಗಳೂರಿನ 1ನೇ ತ್ವರಿತಗತಿ ನ್ಯಾಯಾಲಯ ಜಾಮೀನು ರಹಿತ ವಾರಂಟ್ ಜಾರಿಗೊಳಿಸಿ ಆದೇಶಿಸಿದೆ.

ಮಾಜಿ ಸಿಎಂ ಬಿಎಸ್ ಯಡಿಯೂರಪ್ಪಗೆ ಜಾಮೀನು ರಹಿತ ವಾರಂಟ್ ಜಾರಿಗೊಳಿಸಿದ ಕೋರ್ಟ್
ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ
Follow us on

ಬೆಂಗಳೂರು, ಜೂ.13: ಪೋಕ್ಸೋ ಪ್ರಕರಣದಲ್ಲಿ (POCSO Case)ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ(BS Yediyurappa )ಗೆ ಬಂಧನ ಭೀತಿ ಎದುರಾಗಿದ್ದು, ಯಡಿಯೂರಪ್ಪಗೆ ಬೆಂಗಳೂರಿನ 1ನೇ ತ್ವರಿತಗತಿ ನ್ಯಾಯಾಲಯ ಜಾಮೀನು ರಹಿತ ವಾರಂಟ್ ಜಾರಿಗೊಳಿಸಿ ಆದೇಶಿಸಿದೆ. ವಿಚಾರಣೆಗೆ ಬಿಎಸ್​ ಯಡಿಯೂರಪ್ಪ ಹಾಜರಾಗದ ಹಿನ್ನೆಲೆ ವಾರಂಟ್ ಹೊರಡಿಸಲು ಪೊಲೀಸರು ನಿನ್ನೆ(ಜೂ.12) ತ್ವರಿತ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಇದೀಗ ನ್ಯಾಯಾಲಯ ವಾರಂಟ್​ ಜಾರಿ ಮಾಡಿದೆ.

ಘಟನೆ ವಿವರ

ಮಹಿಳೆಯೊಬ್ಬರು ತಮ್ಮ ಅಪ್ರಾಪ್ತ ಪುತ್ರಿಯೊಂದಿಗೆ ಬಿಎಸ್‌ವೈ ಅಸಭ್ಯವಾಗಿ ವರ್ತಿಸಿದ್ದಾರೆಂದು ಆರೋಪಿಸಿ ಕಳೆದ ಮಾರ್ಚ್ ತಿಂಗಳಲ್ಲೇ ದೂರು ನೀಡಿದ್ದರು. ಆದರೆ, ಕಳೆದ ತಿಂಗಳು ಆ ಮಹಿಳೆ ಅನಾರೋಗ್ಯದಿಂದ ಮೃತಪಟ್ಟಿದ್ದರು. ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ವಿಚಾರಣೆಗೆ ಹಾಜರಾಗುವಂತೆ ಬಿ ಎಸ್ ಯಡಿಯೂರಪ್ಪಗೆ ಪೊಲೀಸರು ನೋಟಿಸ್ ನೀಡಿದ್ದರು.

ಇದನ್ನೂ ಓದಿ:ಅಗತ್ಯವೆನಿಸಿದರೆ ಸಿಐಡಿಯವರು ಯಡಿಯೂರಪ್ಪರನ್ನು ಬಂಧಿಸುತ್ತಾರೆ: ಗೃಹಸಚಿವ ಜಿ ಪರಮೇಶ್ವರ್​

ಮಹಿಳೆಯ ದೂರಿಗೆ ಸಂಬಂಧಿಸಿದಂತೆ ಬಿಎಸ್ ಯಡಿಯೂರಪ್ಪಗೆ ನೋಟಿಸ್ ಜಾರಿಗೊಳಿಸಿದ್ದ ಪೊಲೀಸರು ನಿನ್ನೆ(ಜೂ.12) ತನಿಖೆಗೆ ಹಾಜರಾಗುವಂತೆ ಸೂಚಿಸಿದ್ದರು. ಈ ಹಿನ್ನಲೆ ಬಿಎಸ್ ವೈ ಅವರು ಪ್ರಕರಣ ರದ್ದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಪ್ರಕರಣಕ್ಕೆ ತಡೆಯಾಜ್ಞೆ ನೀಡುವಂತೆ ಮನವಿ ಮಾಡಿದ್ದಾರೆ. ಇನ್ನು ವಿಚಾರಣೆಗೆ ಹಾಜರಾಗುವಂತೆ ನೀಡಿರುವ ನೋಟಿಸ್​ಗೂ ಉತ್ತರ ನೀಡಿರುವ ಬಿಎಸ್‌ವೈ ಸೋಮವಾರ ಜೂನ್ 17 ರಂದು ವಿಚಾರಣೆಗೆ ಹಾಜರಾಗುವುದಾಗಿ ತಿಳಿಸಿದ್ದಾರೆ.

ನಿನ್ನೆಯಷ್ಟೇ ಸಂತ್ರಸ್ತೆಯ ಸಹೋದರನಿಂದ ಹೈಕೋರ್ಟ್‌ಗೆ ರಿಟ್​ ಅರ್ಜಿ ಸಲ್ಲಿಕೆ

ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಬಂಧಿಸುವಂತೆ ನಿರ್ದೇಶನ ಕೋರಿ ಪೋಕ್ಸೋ ಕೇಸ್  ಸಂತ್ರಸ್ತೆಯ ಸಹೋದರ ನಿನ್ನೆ(ಜೂ.12) ಹೈಕೋರ್ಟ್‌ಗೆ ರಿಟ್​ ಅರ್ಜಿ ಸಲ್ಲಿಸಿದ್ದರು.  ಘಟನೆ ನಡೆದು ಹಲವು ತಿಂಗಳಾದರೂ ಪೊಲೀಸರಿಂದ ಕ್ರಮವಿಲ್ಲ. ಯಡಿಯೂರಪ್ಪರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿಲ್ಲ. ಅವರ ಮನೆಯ ಸಿಸಿಟಿವಿ ದೃಶ್ಯಾವಳಿ ಸೀಜ್ ಮಾಡಿಲ್ಲ. ಕನಿಷ್ಠ 41A ಅಡಿ ನೋಟಿಸ್ ನೀಡಿ ಅವರನ್ನು ವಿಚಾರಣೆಗೆ ಕರೆದಿಲ್ಲ.ಈ ಮಧ್ಯೆ ದೂರು ನೀಡಿದ ಸಂತ್ರಸ್ತೆಯ ತಾಯಿ ಮೃತಪಟ್ಟಿದ್ದಾರೆ. ಲೈಂಗಿಕ ದೌರ್ಜನ್ಯ ನಡೆದು ಹಲವು ತಿಂಗಳಾದರೂ ಸಂತ್ರಸ್ತೆಗೆ ನ್ಯಾಯ ಸಿಕ್ಕಿಲ್ಲ. ಹೀಗಾಗಿ ಯಡಿಯೂರಪ್ಪರನ್ನು ಬಂಧಿಸುವಂತೆ ನಿರ್ದೇಶಿಸಲು ಮನವಿ ಮಾಡಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:08 pm, Thu, 13 June 24