ಯಡಿಯೂರಪ್ಪ ವಿರುದ್ಧ ಪೋಕ್ಸೋ ಕೇಸ್: ಇದು ಹಗೆತನ ರಾಜಕೀಯವಲ್ಲವೇ? ಸಿಎಂಗೆ ಬಿಜೆಪಿ ನಾಯಕರ ಪ್ರಶ್ನೆ
ರಾಜ್ಯ ರಾಜಕೀಯದ ಮುತ್ಸದಿ ರಾಜಕಾರಣಿ ಬಿಎಸ್ ಯಡಿಯೂರಪ್ಪ ಅವರು ಸದ್ಯ ಬಂಧನದ ಭೀತಿಯಲ್ಲಿದ್ದಾರೆ. ಮೂರು ತಿಂಗಳ ಹಿಂದಿನ ಪ್ರಕರಣದಲ್ಲಿ ಮಾಜಿ ಸಿಎಂಗೆ ಜಾಮೀನು ರಹಿತ ವಾರಂಟ್ ಜಾರಿಯಾಗಿದೆ. ಯಾವುದೇ ಕ್ಷಣದಲ್ಲಾದ್ರೂ ಯಡಿಯೂರಪ್ಪ ಬಂಧನ ಆಗುವ ಸಾಧ್ಯತೆ ಇದೆ. ಸದ್ಯ ಈ ವಿಚಾರವಾಗಿ ಸಿ.ಟಿ.ರವಿ ಸೇರಿದಂತೆ ಹಲವರು ಪ್ರತಿಕ್ರಿಯಿಸಿದ್ದು, ರಾಜ್ಯ ಸರಕಾರ ಹಗೆತನ ಮಾಡುತ್ತಿದೆ ಎಂದಿದ್ದಾರೆ.
ಬೆಂಗಳೂರು, ಜೂನ್ 13: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ (BS Yediyurappa) ಅವರ ವಿಚಾರದಲ್ಲಿ ರಾಜ್ಯ ಸರಕಾರವು ಹಗೆತನದ ರಾಜಕೀಯ ಮಾಡುತ್ತಿದೆ. ಇದು ಹಗೆತನದ ರಾಜಕಾರಣ ಅಲ್ಲವೇ ಎಂದು ಮುಖ್ಯಮಂತ್ರಿಯವರು ಉತ್ತರ ಕೊಡಬೇಕು ಎಂದು ಬಿಜೆಪಿ (BJP) ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ವಿಧಾನಪರಿಷತ್ ಮುಖ್ಯ ಸಚೇತಕ ಎನ್.ರವಿಕುಮಾರ್, ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಅವರು ಪ್ರಶ್ನಿಸಿದ್ದಾರೆ.
ಹಗೆತನದ ರಾಜಕೀಯ ಮಾಡುವುದಿಲ್ಲ ಎಂದು ಮುಖ್ಯಮಂತ್ರಿಯವರು ಭಾಷಣದಲ್ಲಿ ಹೇಳಿದ್ದರು. ಆದರೆ, ಇದೀಗ ಹಗೆತನದ ರಾಜಕಾರಣ ಮಾಡಿದ್ದು, ರಾಜ್ಯದ ಜನರು ಇದನ್ನು ಪ್ರಶ್ನೆ ಮಾಡಲಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪೋಕ್ಸೋ ಪ್ರಕರಣ ದಾಖಲಿಸಿ 4 ತಿಂಗಳ ಕಾಲ ನೀವೆಲ್ಲಿ ಮಲಗಿದ್ದಿರಿ ಎಂದೂ ಜನರು ಕೇಳುವಂತಾಗಿದೆ. ಆರಂಭದಲ್ಲಿ ಈ ಕೇಸಿನಲ್ಲಿ ಹುರುಳಿಲ್ಲ ಎಂದು ಗೃಹ ಸಚಿವರು ಹೇಳಿದ್ದರಲ್ಲವೇ ಎಂದು ಕೇಳಿದ್ದಾರೆ.
ಇದನ್ನೂ ಓದಿ: ಮಾಜಿ ಸಿಎಂ ಬಿಎಸ್ ಯಡಿಯೂರಪ್ಪಗೆ ಜಾಮೀನು ರಹಿತ ವಾರಂಟ್ ಜಾರಿಗೊಳಿಸಿದ ಕೋರ್ಟ್
ರಾಹುಲ್ ಗಾಂಧಿಯವರು ಕೋರ್ಟಿಗೆ ಬಂದ ಕಾರಣ ಬಿಜೆಪಿಯವರನ್ನು ಕೋರ್ಟಿಗೆ ತಂದು ನಿಲ್ಲಿಸಬೇಕೆಂಬ ಕಾಂಗ್ರೆಸ್ ಪಕ್ಷದ ದುರುದ್ದೇಶವು ಈಗ ಜಗಜ್ಜಾಹೀರಾಗಿದೆ. ಅದನ್ನು ಬಿಜೆಪಿಯ ನಾವೆಲ್ಲರೂ ಖಂಡಿಸುತ್ತೇವೆ. ನಮ್ಮ ಪಕ್ಷದ ಹಿರಿಯರು, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ವಿಚಾರದಲ್ಲಿ ಕೋರ್ಟಿನಿಂದ ಬಂದ ಆದೇಶವನ್ನು ನಾವು ಗೌರವಿಸುತ್ತೇವೆ. ಆದರೆ, ಇದು ಒಂದು ರಾಜಕೀಯ ಷಡ್ಯಂತ್ರದ ಅಥವಾ ರಾಜಕೀಯ ಪ್ರೇರಿತ ವಿಚಾರ ಎಂದು ಟೀಕಿಸಿದ್ದಾರೆ. ಫೆಬ್ರವರಿ 2ರಂದು ಘಟನೆ ನಡೆದಿದೆ ಎಂದು ಮಾರ್ಚ್‍ನಲ್ಲಿ ಕೇಸ್ ಕೊಟ್ಟಿದ್ದು, ಪ್ರಕರಣ ದಾಖಲಾಗಿದೆ. ಆಗ, ಯಡಿಯೂರಪ್ಪನವರು ಪೊಲೀಸ್ ಠಾಣೆಗೆ ತೆರಳಿ ಹೇಳಿಕೆ ನೀಡುವುದಾಗಿ ತಿಳಿಸಿದ್ದರು. ನಂತರ ಪೊಲೀಸಿನವರು ಬರುವ ಅವಶ್ಯಕತೆ ಇಲ್ಲ ಎಂದಿದ್ದರು. ಮನೆಯಲ್ಲಿ ಹೇಳಿಕೆಯನ್ನೂ ಪಡೆದಿದ್ದರು ಎಂದಿದ್ದಾರೆ.
ಸತ್ಯ- ಸತ್ವ ರಹಿತ ಕೇಸ್
ಈ ಕೇಸಿನಲ್ಲಿ ಸತ್ಯ- ಸತ್ವ ಇಲ್ಲವೆಂದು ಸಾಬೀತಾಗಿದೆ. ಅದಾದ ಬಳಿಕ ಮಾನ್ಯ ಗೃಹಸಚಿವರು, ಕೇಸು ದಾಖಲಿಸಿದವರು ಮಾನಸಿಕ ಅಸ್ವಸ್ಥೆ ಇದ್ದಾರೆ. ಐಎಎಸ್, ಐಪಿಎಸ್ ಹಾಗೂ ರಾಜಕಾರಣಿಗಳ ಮೇಲೆ 60ಕ್ಕೂ ಹೆಚ್ಚು ಕೇಸು ದಾಖಲಿಸಿದ್ದಾರೆ. ಆದ್ದರಿಂದ ಆ ಕೇಸಿಗೆ ಮಹತ್ವ ಇಲ್ಲ ಎಂಬ ಮಾತನ್ನು ಹೇಳಿದ್ದರು ಎಂದು ಅವರು ಗಮನ ಸೆಳೆದಿದ್ದಾರೆ. ಸರಕಾರವೇ ಒಮ್ಮೆ ಹೇಳಿದ್ದರಿಂದ ಈ ಕೇಸಿಗೆ ಮಹತ್ವ ಇಲ್ಲ. ಅದಾದ ಬಳಿಕ ಯಡಿಯೂರಪ್ಪನವರು ಹೇಳಿಕೆ ಕೊಡಲು ಬರುವುದಾಗಿ ಅನೇಕ ಬಾರಿ ಹೇಳಿದರೂ ಪೊಲೀಸರು, ಯಾವುದೇ ಅವಶ್ಯಕತೆ ಇಲ್ಲ. ಧ್ವನಿ ಸ್ಯಾಂಪಲ್ ಕೊಡಿ ಸಾಕು ಎಂದಿದ್ದರು. ಬಳಿಕ ಏಪ್ರಿಲ್‍ನಲ್ಲಿ ಧ್ವನಿ ಸ್ಯಾಂಪಲನ್ನೂ ಪಡೆದಿದ್ದರು ಎಂದಿದ್ದಾರೆ.
ಕೇಸಿನ ಬಿ ರಿಪೋರ್ಟ್ ನಿರೀಕ್ಷೆಯಲ್ಲಿತ್ತು. ಆದರೆ, ಕಳೆದೆರಡು ಮೂರು ದಿನಗಳಲ್ಲಿ ದೊಡ್ಡ ಬೆಳವಣಿಗೆ ಆಗಿದೆ. ಡಿ.ಕೆ.ಶಿವಕುಮಾರ್, ಸಿಎಂ ಸಿದ್ದರಾಮಯ್ಯನವರು ಕಳೆದ ವಾರ ಕೋರ್ಟ್ ಮೆಟ್ಟಿಲು ಹತ್ತುವ ಪರಿಸ್ಥಿತಿ ಬಂದಿದೆ. ಬಸವರಾಜ ಬೊಮ್ಮಾಯಿಯವರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ನಮ್ಮ ಪಕ್ಷದ ವಿರುದ್ಧ ಶೇ 40 ಕಮೀಷನ್ ಪಡೆಯುವ ವಿಚಾರದಲ್ಲಿ ಕಾಂಗ್ರೆಸ್ ಆಪಾದನೆ ಮಾಡಿದ್ದಲ್ಲದೇ ಪೋಸ್ಟರ್ ಅಂಟಿಸಿದ್ದರು. ಅದನ್ನು ಪ್ರಶ್ನಿಸಿ ನಮ್ಮ ಕಾರ್ಯಕರ್ತರು ಕೋರ್ಟಿಗೆ ಹೋಗಿದ್ದರು.
ಇದನ್ನೂ ಓದಿ: ಅಗತ್ಯವೆನಿಸಿದರೆ ಸಿಐಡಿಯವರು ಯಡಿಯೂರಪ್ಪರನ್ನು ಬಂಧಿಸುತ್ತಾರೆ: ಗೃಹಸಚಿವ ಜಿ ಪರಮೇಶ್ವರ್
ತನಿಖೆಗಾಗಿ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಯನ್ನು ಕರೆಸಿದ್ದರು. ಇದರಲ್ಲಿ ಎಐಸಿಸಿ ಹಿಂದಿನ ಅಧ್ಯಕ್ಷ, ಈಗಿನ ಸಂಸದ ರಾಹುಲ್ ಗಾಂಧಿಯವರ ಹೆಸರೂ ಇತ್ತು. ರಾಹುಲ್ ಗಾಂಧಿಯವರು ಇಲ್ಲಿ ಬಂದು ಕೋರ್ಟ್ ಕಟೆಕಟೆಯಲ್ಲಿ ನಿಂತು ವಾಪಸ್ ಹೋದ ಬಳಿಕ ಇವರೆಲ್ಲರೂ ಬಿಜೆಪಿ ಮೇಲೆ ಮುಯ್ಯಿಗೆ ಮುಯ್ಯಿ, ಹಗೆತನ ತೀರಿಸಿಕೊಳ್ಳಲು ಮುಂದಾಗಿದ್ದಾರೆ. ಇದೇ ಉದ್ದೇಶದಿಂದ ಸುರ್ಜೇವಾಲಾ ಅವರ ಆದೇಶದಡಿ ಮಾನ್ಯ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳು, ಗೃಹ ಸಚಿವರು ಸೇರಿ ಈ ಷಡ್ಯಂತ್ರ ಮಾಡಿದ್ದಾಗಿ ಆರೋಪಿಸಿದ್ದಾರೆ.
ಒಂದೇ ದಿನ ಕಾಂಗ್ರೆಸ್ಸಿಗೆ ಅರ್ಜೆನ್ಸಿ
ಕೇಸ್ ಕೊಟ್ಟವರು ತೀರಿಕೊಂಡಿದ್ದಾರೆ. ಕೇಸ್ ಕೊಟ್ಟ ಮಹಿಳೆಯ ಮಗನ ದೂರು ಪಡೆದು ತಕ್ಷಣಕ್ಕೆ ಕೋರ್ಟಿಗೆ ಹೋದ ಪೊಲೀಸರು ಹೀಗೆ ಮಾಡಿದ್ದಾರೆ. ಯಡಿಯೂರಪ್ಪನವರು ದೆಹಲಿಯಲ್ಲಿ ಇದ್ದು, ಎರಡು ದಿನಗಳಲ್ಲಿ ಬರುವುದಾಗಿ ಹೇಳಿದ್ದರೂ ಅರ್ಜೆನ್ಸಿ ಮಾಡಿದ್ದಾರೆ. 4 ತಿಂಗಳು ಇಲ್ಲದ ಅರ್ಜೆನ್ಸಿ ಕಾಂಗ್ರೆಸ್ಸಿಗೆ ಇವತ್ತು ಒಂದೇ ದಿನ ಬಂದಿದೆ. ಇವತ್ತು ಜಾಮೀನುರಹಿತ ವಾರಂಟ್ ಪಡೆದು ಅರೆಸ್ಟ್ ಮಾಡಲು ಹೋಗಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದು ಖಂಡನಾರ್ಹ ವಿಚಾರ. ಕಾಂಗ್ರೆಸ್ ಪಕ್ಷ ಹಗೆತನದ ರಾಜಕೀಯ ಮಾಡುತ್ತಿದೆ ಎಂದು ಟೀಕಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.