ಕೈ ಮುರಿದು, ಕಣ್ಣಿಗೆ ಚಾಕು ಇರಿದ ಪತ್ನಿ: ಪೊಲೀಸ್ ಠಾಣೆಗೆ ಓಡೋಡಿ ಬಂದ ರೌಡಿಶೀಟರ್
ರೌಡಿಶೀಟರ್ ಮೇಲೆ ಆತನ ಪತ್ನಿಯೇ ಮಾರಣಾಂತಿವಾಗಿ ಹಲ್ಲೆ ಮಾಡಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ. ಎರಡನೇ ಪತ್ನಿ ವಿಷಯಕ್ಕೆ ಪತ್ನಿಯಿಂದ ತೀವ್ರ ಹಲ್ಲೆಗೊಳಗಾದ ಆತ, ಜೆಜೆ ನಗರ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಿಸಿದ್ದಾನೆ. ಪುಂಡರಿಗೆ ಅಂಜದ, ಪೊಲೀಸರಿಗೆ ಬೆದರದ ರೌಡಿಶೀಟರ್ ಪತ್ನಿಯಿಂದಲೇ ಏಟು ತಿಂದಿರೋದು ಇಲ್ಲಿ ಗಮನಾರ್ಹ.

ಬೆಂಗಳೂರು, ಜನವರಿ 06: ಖಾಕಿ ಭಯವಿಲ್ಲದೆ ರೌಡಿಶೀಟರ್ಗಳು ಮೇಲಿಂದ ಮೇಲೆ ಅಟ್ಟಹಾಸ ಮೆರೆಯೋದನ್ನು ನಾವು ನೋಡಿದ್ದೇವೆ, ಕೇಳಿದ್ದೇವೆ. ಜೈಲಿಗೆ ಹೋಗಿ ಶಿಕ್ಷೆ ಅನುಭವಿಸಿ ಬಂದರೂ ಕೆಲವರು ಮಾತ್ರ ಬುದ್ಧಿ ಕಲಿಯಲ್ಲ. ಕಾರಾಗೃಹದಿಂದ ಹೊರಬಂದ ಬಳಿಕವೂ ಮತ್ತದೇ ತಮ್ಮ ಹಳೇ ಚಾಳಿ ಮುಂದುವರಿಸುತ್ತಾರೆ. ಕೆಲವೊಮ್ಮೆ ಪೊಲೀಸರ ಕಣ್ಣಿಗೂ ಯಾಮಾರಿಸಿ ಓಡಾಡಿಕೊಂಡು ಇರ್ತಾರೆ. ಇಂತಹುದ್ದೇ ಸಾಲಿಗೆ ಸೇರುವ ರೌಡಿಶೀಟರ್ ಸೈಯದ್ ಅಸ್ಗರ್ ಈಗ ತಾನಾಗಿಯೇ ಪೊಲೀಸರ ಬಳಿ ಓಡೋಡಿ ಬಂದಿದ್ದಾನೆ. ಇದಕ್ಕೆಲ್ಲ ಕಾರಣ ಆತನ ಹೆಂಡತಿ ಅಂದ್ರೆ ನೀವು ನಂಬಲೇ ಬೇಕು.
ಹೌದು, ಪುಂಡರಿಗೆ ಅಂಜದ ಮತ್ತು ಪೊಲೀಸರು ಅಂದ್ರೂ ಭಯ ಪಡದ ರೌಡಿಶೀಟರ್ ಸೈಯದ್ ಅಸ್ಗರ್ ಹೆಂಡತಿ ಅಂದ್ರೆ ಬೆಚ್ಚಿ ಬೀಳ್ತಾನೆ. ಗಾಂಜಾ ಪೆಡ್ಲಿಂಗ್, ಕಳ್ಳತನ, ಕೊಲೆ ಯತ್ನದಂತಹ ಗಂಭೀರ ಆರೋಪ ಹೊಂದಿರೋ ಈತ ಕೇಸ್ಗಳಾದ ಪೊಲೀಸರಿಗೂ ಚಳ್ಳೆಹಣ್ಣು ತಿನ್ನಿಸಿ ಎಸ್ಕೇಪ್ ಆಗ್ತಿದ್ದ. ಹೀಗಿರುವಾಗ ಇತ್ತೀಚೆಗಷ್ಟೇ ಜೈಲಿನಿಂದ ಹೊರ ಬಂದಿರೋ ಈತ ಮತ್ತೆ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದ್ದಾನೆ. ವಿಶೇಷ ಅಂದ್ರೆ ಪ್ರತಿಬಾರಿ ಆರೋಪಿಯಾಗಿ ಬರ್ತಿದ್ದ ಈತ ಈ ಬಾರಿ ಸಂತ್ರಸ್ತನಾಗಿ ಬಂದಿದ್ದಾನೆ. 2ನೇ ಪತ್ನಿಯನ್ನ ಬಿಡು ಎಂದು ಮೊದಲ ಹೆಂಡತಿ ರೌಡಿಶೀಟರ್ ಶೀಟರ್ ಕೈ ಮುರಿದಿದ್ದಲ್ಲದೆ, ಕಣ್ಣಿಗೆ ಚಾಕು ಕೂಡ ಇರಿದಿದ್ದಾಳೆ. ಹೀಗಾಗಿ ಪತ್ನಿ ವಿರುದ್ಧ ಜೆಜೆ ನಗರ ಠಾಣೆಗೆ ಸೈಯದ್ ಅಸ್ಗರ್ ದೂರು ನೀಡಿದ್ದಾರೆ. ಆತನಿಗೆ ಎರಡನೇ ಪತ್ನಿ ಸಾಥ್ ಕೊಟ್ಟಿದ್ದಾಳೆ.
ಇದನ್ನೂ ಓದಿ: ಬಳ್ಳಾರಿ ಬೆನ್ನಲ್ಲೇ ಬೆಂಗಳೂರಿನಲ್ಲೂ ಗಲಭೆ; ಓಂ ಶಕ್ತಿ ಮಾಲಾಧಾರಿಗಳ ಮೇಲೆ ಕಲ್ಲು ತೂರಾಟ
ರೌಡಿಶೀಟರ್ ಸೈಯದ್ ಅಸ್ಗರ್ ಮೊದಲ ಪತ್ನಿ ಈ ಮೊದಲು ಕೂಡ ವಿಡಿಯೋ ಮಾಡಿ ಬೆದರಿಕೆ ಹಾಕಿದ್ದಳು. ನಿನ್ನ ತಲೆ ಕಡಿಯುತ್ತೇನೆ, ಎರಡು ದಿನ ಕಾಯ್ತಿರು ಎಂದು ವಾರ್ನಿಂಗ್ ಮಾಡಿದ್ದಳು. ಮಚ್ಚು ಮತ್ತು ಬಾಕು ಹಿಡಿದು ವಿಡಿಯೋ ಮಾಡಿದ್ದ ಬೆನ್ನಲ್ಲೇ ಪತಿಯ ಮೇಲೆ ಆಕೆ ಅಟ್ಯಾಕ್ ಮಾಡಿದ್ದಾಳೆ. ಸದ್ಯ ರೌಡಿಶೀಟರ್ನಿಂದ ದೂರು ಪಡೆದಿರುವ ಪೊಲೀಸರು, ಘಟನೆ ಸಂಬಂಧ ಕೇಸ್ ದಾಖಲಿಸಿಕೊಂಡಿದ್ದಾರೆ. ಇಷ್ಟು ದಿನ ಬೇರೆಯವರಿಗೆ ಬೆದರಿಕೆ ಹಾಕುತ್ತಿದ್ದ ಸೈಯದ್ ಅಸ್ಗರ್ ಈಗ ಪತ್ನಿ ಬೆದರಿಕೆಗೆ ಅಂಜಿರೋದಿಲ್ಲಿ ಗಮನಾರ್ಹ.
ವರದಿ: ಪ್ರದೀಪ್, ಟಿವಿ9 ಬೆಂಗಳೂರು
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
