ಬೆಂಗಳೂರು, ಫೆ.14: 2006ರ ಎಪ್ರಿಲ್ 1ರ ಪೂರ್ವದಲ್ಲಿನ ನೇಮಕಾತಿ ಅಧಿಸೂಚನೆಗಳ ಮೂಲಕ ಆಯ್ಕೆ ಹೊಂದಿ ಆ ದಿನಾಂಕದಂದು ಅಥವಾ ನಂತರದಲ್ಲಿ ರಾಜ್ಯ ಸರ್ಕಾರದ ಸೇವೆಗೆ ಸೇರಿದ ನೌಕರರನ್ನು ಹಿಂದಿನ ಡಿಫೈನ್ಡ್ ಪಿಂಚಣಿ ಯೋಜನೆಗೆ ಒಳಪಡಿಸುವ ಕುರಿತು ರಾಜ್ಯ ಸರ್ಕಾರ ಅಧಿಕೃತ ರಾಜ್ಯಪತ್ರ ಹೊರಡಿಸಿದೆ (Old Pension Scheme).
ಸರ್ಕಾರಿ ಆದೇಶದ ಪ್ರಕಾರ 2006ರ ಏಪ್ರಿಲ್ 1ರಂದು ಹಾಗೂ ನಂತರ ಸರ್ಕಾರಿ ಸೇವೆಗೆ ಸೇರಿದ ಎಲ್ಲಾ ನೌಕರರಿಗೆ ಸರ್ಕಾರ ಸಿಹಿ ಸುದ್ದಿ ನೀಡಿದ್ದು ನೂತನ ಅಂಶದಾಯಿ ಕೊಡುಗೆ ಯೋಜನೆಯನ್ನು (ರಾಷ್ಟ್ರೀಯ ಪಿಂಚಣಿ ಯೋಜನೆ) ಕಡ್ಡಾಯವಾಗಿ ಜಾರಿಗೊಳಿಸಲಾಗಿದೆ. ಸರ್ಕಾರಿ ಆದೇಶದಲ್ಲಿನ ಸೂಚನೆಗಳನ್ವಯ ರಾಷ್ಟ್ರೀಯ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವ ಮಾರ್ಗಸೂಚಿಯನ್ನು ರೂಪಿಸುವುದರೊಂದಿಗೆ ಈ ಯೋಜನೆಯನ್ನು ಕಾರ್ಯಗತಗೊಳಿಸಲಾಗಿದೆ.
ಕೇಂದ್ರ ಸರ್ಕಾರವು ತನ್ನ ನೌಕರರಿಗೆ 2023ರ ಡಿಸೆಂಬರ್ 22ರ ಮೊದಲು ನೇಮಕಾತಿ / ನೇಮಕಾತಿಗಾಗಿ ಜಾಹೀರಾತು / ಅಧಿಸೂಚಿಸಲಾದ ಹುದ್ದೆ ಅಥವಾ ರಿಕ್ತ ಸ್ಥಾನದ ಎದುರಾಗಿ ನೇಮಕಾತಿ ಹೊಂದಿ 2004ರ ಜನವರಿ 1ರಂದು ಅಥವಾ ತದನಂತರ ಕರ್ತವ್ಯಕ್ಕೆ ಸೇರಿದ ನೌಕರರಿಗೆ ಹಿಂದಿನ ಡಿಫೈನ್ಸ್ ಪಿಂಚಣಿ ಯೋಜನೆಗೆ ಒಳಪಡಿಸಲು ಒಂದು ಬಾರಿಯ ಆಯ್ಕೆಯ ಅವಕಾಶವನ್ನು ಕಲ್ಪಿಸಿ ಕೇಂದ್ರ ಸರ್ಕಾರ 2023ರ ಮಾರ್ಚ್ 3 ರಂದು ಮಾರ್ಗಸೂಚಿ ಹೊರಡಿಸಿದೆ. ರಾಜ್ಯ ಸರ್ಕಾರದ ಸೇವೆಯಲ್ಲಿರುವ ಅಖಿಲ ಭಾರತ ಸೇವೆಗೆ ಸೇರಿದ ಅರ್ಹ ಅಧಿಕಾರಿಗಳನ್ನು ಹಿಂದಿನ ಡಿಫೈನ್ಸ್ ಪಿಂಚಣಿ ಯೋಜನೆಗೆ ಒಳಪಡಿಸಿ ಆದೇಶ ಹೊರಡಿಸಲಾಗಿದೆ.
ಇದನ್ನೂ ಓದಿ: OPS vs NPS: ಹಳೆ ಪಿಂಚಣಿ ಪರ ಕೂಗೆದ್ದಿರುವುದೇಕೆ? ಒಪಿಎಸ್, ಎನ್ಪಿಎಸ್ ವ್ಯತ್ಯಾಸದ ಬಗ್ಗೆ ಇಲ್ಲಿದೆ ಸಮಗ್ರ ಮಾಹಿತಿ
ಹಳೆಯ ಪಿಂಚಣಿ ಯೋಜನೆಯಡಿಯಲ್ಲಿ ನೌಕರರು ನಿವೃತ್ತಿಯ ಸಂದರ್ಭದಲ್ಲಿ ಹೊಂದಿದ್ದ ಮೂಲ ವೇತನದ ಶೇಕಡಾ 50ರಷ್ಟು ಮತ್ತು ಇದರ ಜತೆಗೆ ತುಟ್ಟಿಭತ್ಯೆ ಅಥವಾ ಸೇವಾ ಅವಧಿಯ ಕೊನೆಯ 10 ತಿಂಗಳ ಸರಾಸರಿ ಗಳಿಕೆ, ಈ ಎರಡರಲ್ಲಿ ಯಾವುದು ಹೆಚ್ಚೋ ಅದನ್ನು ಪಡೆಯಲು ಅರ್ಹರಾಗಿರುತ್ತಾರೆ. ಈ ಯೋಜನೆಗೆ ಮಾನ್ಯರಾಗಲು ನೌಕರರು ಕನಿಷ್ಠ 10 ವರ್ಷ ಸೇವೆ ಸಲ್ಲಿಸಿರಬೇಕು. ಹಳೆ ಪಿಂಚಣಿ ಯೋಜನೆಯಲ್ಲಿ ಉದ್ಯೋಗಿಗಳು ಪಿಂಚಣಿಗೆ ಕೊಡುಗೆ ನೀಡಬೇಕಾಗಿಲ್ಲ. ಇದು ಸರ್ಕಾರಿ ಉದ್ಯೋಗಿಗಳಿಗೆ ಬಹುದೊಡ್ಡ ಪ್ರಯೋಜನ ಮಾಡಿಕೊಟ್ಟಿದ್ದಲ್ಲದೆ, ನಿವೃತ್ತಿಯ ಬಳಿಕ ಕುಟುಂಬಕ್ಕೆ ಪಿಂಚಣಿಯ ಖಾತರಿ ದೊರೆಯುತ್ತಿತ್ತು. ಒಂದು ವೇಳೆ ನಿವೃತ್ತ ನೌಕರರು ಮೃತಪಟ್ಟರೂ ಅವರ ಅವಲಂಬಿತರಿಗೆ ಪಿಂಚಣಿ ಮುಂದುವರಿಯುತ್ತದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ