ಬೆಂಗಳೂರಿನಲ್ಲಿ ಜುಲೈ 26-27ರಂದು ಕುಂದಾಪ್ರ ಕನ್ನಡ ಹಬ್ಬ ಆಚರಣೆ
ಜುಲೈ 26 ಮತ್ತು 27 ರಂದು ಬೆಂಗಳೂರಿನ ಹೊಸಕೆರೆಹಳ್ಳಿಯಲ್ಲಿ "ಕುಂದಾಪ್ರ ಕನ್ನಡ ಹಬ್ಬ-2025" ನಡೆಯಲಿದೆ. ಈ ಎರಡು ದಿನಗಳ ಹಬ್ಬದಲ್ಲಿ ಯಕ್ಷಗಾನ, ಸಂಗೀತ, ನೃತ್ಯ, ಕುಂದಾಪುರದ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಕುಂದಾಪುರದ ವಿಶೇಷ ಖಾದ್ಯಗಳನ್ನು ಒಳಗೊಂಡಿದೆ. 5000 ಜನರಿಗೆ ಆಸನ ವ್ಯವಸ್ಥೆ ಮಾಡಲಾಗಿದೆ.

ಬೆಂಗಳೂರು, ಜೂನ್ 22: ‘ಕುಂದಾಪ್ರ ಕನ್ನಡ ಪ್ರತಿಷ್ಠಾನ (ರಿ.)’ ಪ್ರತಿ ವರ್ಷ ಆಯೋಜಿಸುತ್ತಿರುವ ‘ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ’ ಪ್ರಯುಕ್ತ ಈ ಸಲ ಹಮ್ಮಿಕೊಂಡಿರುವ “ಕುಂದಾಪ್ರ ಕನ್ನಡ ಹಬ್ಬ-2025” ಜುಲೈ 26, 27ರಂದು ಬೆಂಗಳೂರಿನ (Bengaluru) ಹೊಸಕೆರೆಹಳ್ಳಿ ನೈಸ್ ರೋಡ್ ಜಂಕ್ಷನ್‌ನ ನಂದಿ ಲಿಂಕ್ ಗ್ರೌಂಡ್‌ನಲ್ಲಿ ನಡೆಯಲಿದೆ.
ಈ ಸಲದ ಕಾರ್ಯಕ್ರಮದ ವಿವರ ನೀಡುವ ಸಲುವಾಗಿ ಮಾಗಡಿ ರಸ್ತೆ ಕೊಟ್ಟಿಗೆಪಾಳ್ಯದ ‘ಸುದೀಕ್ಷಾ ಕನ್ವೆನ್ಷನ್ ಸೆಂಟರ್’ನಲ್ಲಿ ಆಯೋಜಿಸಿದ್ದ ‘ವಾಲ್ಗ’ ಸಮಾರಂಭದಲ್ಲಿ ಕುಂದಾಪ್ರ ಕನ್ನಡ ಪ್ರತಿಷ್ಠಾನದ ಅಧ್ಯಕ್ಷ ಡಾ. ದೀಪಕ್ ಶೆಟ್ಟಿ ಮಾಹಿತಿ ನೀಡಿದರು.
ಎಂದಿನಂತೆ ಈ ಸಲ ಕುಂದಾಪ್ರ ಕನ್ನಡ ಹಬ್ಬವನ್ನು ಹಲವು ವಿಶೇಷತೆಗಳೊಂದಿಗೆ ಆಚರಿಸಲಿದ್ದು, ಪ್ರತಿ ಸಲದಂತೆ ಭಾರಿ ಸಂಖ್ಯೆಯಲ್ಲಿ ಜನರು ಭಾಗಿಯಾಗುವ ನಿರೀಕ್ಷೆ ಇದೆ. ಅದರಲ್ಲೂ ಈ ಬಾರಿ 5 ಸಾವಿರ ಜನಕ್ಕೆ ಆಸನ ವ್ಯವಸ್ಥೆ ಮಾಡಲಾಗಿದೆ. ಎರಡು ದಿನಗಳ ಈ ಸಂಭ್ರಮದಲ್ಲಿ ದಿನವಿಡೀ ಕಾರ್ಯಕ್ರಮಗಳಿದ್ದು, ಮತ್ತೊಂದು ಅದ್ಧೂರಿಗೆ ಈ ಸಮಾರಂಭ ಸಾಕ್ಷಿಯಾಗಲಿದೆ. ಎರಡೂ ದಿನ ಕುಂದಾಪುರ ಮೂಲದ ಒಬ್ಬೊಬ್ಬರು ಅತಿಗಣ್ಯ ಸಾಧಕರನ್ನು ವಿಶೇಷವಾಗಿ ಸನ್ಮಾನಿಸಲಾಗುವುದು. ಆ ಕುರಿತ ವಿವರ, ಮುಖ್ಯ ಅತಿಥಿಗಳ ಮಾಹಿತಿ ಸದ್ಯದಲ್ಲೇ ನೀಡಲಾಗುವುದು ಎಂದು ಅವರು ತಿಳಿಸಿದರು.
ವೇದಿಕೆಯಲ್ಲಿನ ವಿವಿಧ ಕಾರ್ಯಕ್ರಮಗಳಲ್ಲದೆ ಹೊರಾಂಗಣದಲ್ಲಿ ಹುಲಿವೇಷ, ಕೊರಗರ ಡೋಲು ವಾದನ, ಬಿಳಿ ಪಟಾಕಿ, ನವರಾತ್ರಿ ವೇಷ, ಹಗ್ಗಜಗ್ಗಾಟ ಮತ್ತು ವಿವಿಧ ಕ್ರೀಡೆಗಳಲ್ಲದೆ, ಕುಂದಾಪುರದ ಬಹುತೇಕ ಎಲ್ಲ ವಸ್ತುಗಳು ಸಿಗುವ ಕುಂದಾಪ್ರ ಸಂತೆ ಕೂಡ ಇರಲಿದೆ ಎಂದು ಅವರು ತಿಳಿಸಿದರು.
ಕುಂದಾಪ್ರ ಕನ್ನಡ ಪ್ರತಿಷ್ಠಾನದ ಗೌರವಾಧ್ಯಕ್ಷ ಉದಯ ಹೆಗ್ಡೆ, ಉಪಾಧ್ಯಕ್ಷ ನರಸಿಂಹ ಬೀಜಾಡಿ, ಕೋಶಾಧಿಕಾರಿ ವಿಜಯ್ ಶೆಟ್ಟಿ ಹಾಲಾಡಿ, ಕಾರ್ಯದರ್ಶಿ ರಾಘವೇಂದ್ರ ಕಾಂಚನ್, ಜಂಟಿ ಕಾರ್ಯದರ್ಶಿ ಅಜಿತ್ ಶೆಟ್ಟಿ ಉಳ್ತೂರು, ಉದ್ಯಮಿ ಶಿವರಾಮ ಹೆಗ್ಡೆ, ಕರ್ನಾಟಕ ರಾಜ್ಯ ಹೋಟೆಲುಗಳ ಸಂಘದ ಅಧ್ಯಕ್ಷ ಜಿ.ಕೆ.ಶೆಟ್ಟಿ, ಕುಂದಾಪ್ರ ಕನ್ನಡ ಹಬ್ಬದ ರೂವಾರಿಗಳಾದ ಉದಯಕುಮಾರ್ ಶೆಟ್ಟಿ ಪಡುಕರೆ, ವಸಂತ ಗಿಳಿಯಾರ್, ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಕುಮಾರ್ ಶೆಟ್ಟಿ, ಶಿವಾನಂದ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಸಮಾಲೋಚನಾ ಸಭೆ
ಮಂಗಳೂರು ವಿಶ್ವವಿದ್ಯಾಲಯದಲ್ಲಿ ಸ್ಥಾಪಿಸಲಾಗಿರುವ ಕುಂದಾಪುರ ಕನ್ನಡ ಅಧ್ಯಯನ ಪೀಠದ ಕುರಿತು ಇದೇ ವೇಳೆ ಮಾಜಿ ಸಂಸದ ಕೆ.ಜಯಪ್ರಕಾಶ್ ಹೆಗ್ಡೆ ಅವರ ಸಮ್ಮುಖದಲ್ಲಿ ಸಮಾಲೋಚನಾ ಸಭೆ ನಡೆಯಿತು. ಹಿಂದಿನ ಕುಂದಾಪ್ರ ಕನ್ನಡ ಹಬ್ಬದ ಸಂದರ್ಭ ಈ ಪೀಠಕ್ಕೆ ಸರ್ಕಾರದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 1.5 ಕೋಟಿ ಅನುದಾನ ನೀಡಿದ್ದರು. ಅಧ್ಯಯನ ಪೀಠದ ಮುಂದಿನ ಕಾರ್ಯಕ್ರಮಗಳ ಸಲುವಾಗಿ ಕುಂದಾಪುರದಲ್ಲಿ ಜನತೆಯ ಅಭಿಪ್ರಾಯ ಸಂಗ್ರಹಿಸಲಾಗಿದೆ. ಅದೇ ರೀತಿ ಬೆಂಗಳೂರಿನಲ್ಲೂ ಅಭಿಪ್ರಾಯ ಸಂಗ್ರಹಿಸಲಾಗುವುದು ಎಂದು ಜಯಪ್ರಕಾಶ್ ಹೆಗ್ಡೆ ತಿಳಿಸಿದರು. ಪೀಠದ ಸದಸ್ಯ ಕೆ.ಸಿ.ರಾಜೇಶ್ ಮುಂತಾದವರು ಉಪಸ್ಥಿತರಿದ್ದರು.
ಕುಂದಾಪ್ರ ಕನ್ನಡ ಹಬ್ಬದ ವೈವಿಧ್ಯಮಯ ಕಾರ್ಯಕ್ರಮಗಳು
- ಸಾವ್ರ್ ಹಣ್ಣಿನ್ ವಸಂತ
- ಹೌದರಾಯನ ವಾಲ್ಗ
- ಕುಂದಾಪ್ರದಡುಗೆ: ಉಪ್ಪಿನ್ಹೊಡಿ to ಮದಿಮನಿ ಊಟ
- ಮೂಕಜ್ಜಿಯ ಕನಸುಗಳು: ಬೂಕ್ ತಕಣಿ ಬೂಕ್
- ಸ್ವರ ಕುಂದಾಪ್ರ: ನಮ್ ಊರ್ಮನಿ ಮಕ್ಳ್ ಹಾಡುಹಸೆ
- ಪಟ್ಟಾಂಗ: ಮಾತಿನ ಚಾವಡಿ
- ಬಾರ್ಕೂರಿನ್ ಹಡ್ಗ್: ನೃತ್ಯ ನಾಟಕ (ಪ್ರಥಮ ಪ್ರದರ್ಶನ)
- ಉದ್ಘಾಟನಾ ಪರ್ವ, ಸಮಾಪನ ಸಮಾರಂಭ: ಊರ ಗೌರವ (ಕುಂದಾಪುರ ಮೂಲದ ಇಬ್ಬರು ಅತಿಗಣ್ಯ ಸಾಧಕರಿಗೆ ಸನ್ಮಾನ)
- ಈ ವರ್ಷದ ಬೃಹತ್ ಆಕರ್ಷಣೆ, ‘ಅಟ್ಟಣ್ಗಿ ಆಟ’: ಎರಡು ರಂಗಸ್ಥಳದ ಯಕ್ಷಗಾನ
- ಸಾಹಿತಿ ವೈದೇಹಿ ಉದ್ಘಾಟನೆಗೆ ಮುಖ್ಯ ಅತಿಥಿ
- ಪಿಳ್ಳಂಗೋವಿಯ ಚೆಲುವ ಕೃಷ್ಣನಾ: ಡಾ.ವಿದ್ಯಾಭೂಷಣರ ಗಾಯನ, ಅಮೆರಿಕದಲ್ಲಿ ಭಾರಿ ಯಶಸ್ವಿ ಕಂಡ ಕಾರ್ಯಕ್ರಮದ ಮಾದರಿ.
- ಬಾಲಗೋಪಾಲ: ಮಕ್ಕಳ ಮಹಾಸಂಗಮದ ಯಕ್ಷನೃತ್ಯ
- ಹಂದಾಡಿ ಕ್ವಿಜ್: ಕುಂದಾಪುರ ಕುರಿತು ಮನು ಹಂದಾಡಿ ಅವರ ರಸಪ್ರಶ್ನೆ
- ಮಿಡ್ಕಣಿ: ಚೆಂದಾಮುಡಿ ಕುಂದಾಪ್ರದ ಸುರ-ಸುಂದರಿಯರ ಸೆಲೆಬ್ರಿಟಿ ಫ್ಯಾಷನ್ ಶೋ.
- ಕಾಳಿಂಗ-ಕಾಳಿಂಗ: ಭಾಗವತ ಕಾಳಿಂಗ ನಾವಡ, ಗಾಯಕ ಪಿ.ಕಾಳಿಂಗ ರಾಯರ ಪದ-ಪದ್ಯಗಳ ಅನುರಣನ.
- ರಾಸಲೀಲೆ: ಆಳ್ವಾಸ್ ವಿದ್ಯಾರ್ಥಿನಿಯರ ವಿಶೇಷ ಕಾರ್ಯಕ್ರಮ.
- ಇಲ್ಕಾಣಿ ಕುಂದಾಪ್ರ: ಖುಷಿಯಲೆಗಳ ಕಡಲೂರು. ಇಡೀ ಕುಂದಾಪುರದ ಚಿತ್ರಣ ಇರುವ ಸಾಕ್ಷ್ಯಚಿತ್ರ.
- ದ್ಯಸಿ: ತಾಂಗ್ರೆ ತಾಂಗ್ಲಿ, ವಿಶೇಷ ರೀತಿಯ ಲಕ್ಕಿಡಿಪ್.
- ಸಂಗೀತ ಸಂಜೆ
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ