AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು ಕೆಐಎ ಎಕ್ಸ್​ಪ್ರೆಸ್​ವೇ ಸರಣಿ ರಸ್ತೆ ಅಪಘಾತದಲ್ಲಿ ಒಂದು ಸಾವು ಇಬ್ಬರಿಗೆ ಗಾಯ

ಶುಕ್ರವಾರ ರಾತ್ರಿ ಸುಮಾರು 9 ಗಂಟೆಗೆ ಅಪಘಾತ ಸಂಭವಿಸಿದೆ. ಬಹಳ ವೇಗದಲ್ಲಿ ಓಡುತ್ತಿದ್ದ ಅಂಬ್ಯುಲೆನ್ಸ್ ತನ್ನ ಮುಂದೆ ಹೋಗುತ್ತಿದ್ದ ಕಾರಿಗೆ ಗುದ್ದಿದೆ. ಕಾರು ತನ್ನ ಮುಂದಿದ್ದ ಆಟೋರಿಕ್ಷಾಗೆ ಢಿಕ್ಕಿ ಹೊಡೆದಿದೆ.

ಬೆಂಗಳೂರು ಕೆಐಎ ಎಕ್ಸ್​ಪ್ರೆಸ್​ವೇ ಸರಣಿ ರಸ್ತೆ ಅಪಘಾತದಲ್ಲಿ ಒಂದು ಸಾವು ಇಬ್ಬರಿಗೆ ಗಾಯ
ಸಾಂದರ್ಭಿಕ ಚಿತ್ರ
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ|

Updated on: Jul 25, 2022 | 3:50 PM

Share

ಬೆಂಗಳೂರು ಜಕ್ಕೂರು ವಿಮಾನ ನಿಲ್ದಾಣದ ಬಳಿಯ ಕೆಐಎ ಎಕ್ಸ್​ಪ್ರೆಸ್​ವೇನಲ್ಲಿ (KIA Expressway) ಶುಕ್ರವಾರ ರಾತ್ರಿ ಒಂದು ಅಂಬ್ಯುಲೆನ್ಸ್ (ambulance), ಒಂದು ಕಾರು ಮತ್ತು ಒಂದು ಆಟೋ ರಿಕ್ಷಾ ಒಳಗೊಂಡ ಸರಣಿ ಅಪಘಾತವೊಂದರಲ್ಲಿ 32-ವರ್ಷ-ವಯಸ್ಸಿನ ಖಾಸಗಿ ಸಂಸ್ಥೆಯೊಂದರ (private firm) ಉದ್ಯೋಗಿ ಸಾವಿಗೀಡಾಗಿರುವುದು ತಡವಾಗಿ ವರದಿಯಾಗಿದೆ.

ಮೃತ ದುರ್ದೈವಿಯನ್ನು ಸಂಜೀವ ಕುಮಾರ ಎಂದು ಗುರುತಿಸಲಾಗಿದ್ದು, ಜಾರ್ಖಂಡ್ ಮೂಲದವರಾಗಿದ್ದ ಅವರು ಜಾಲಹಳ್ಳಿಗೆ ಸಮೀಪದ ಶೆಟ್ಟಿಹಳ್ಳಿಯಲ್ಲಿ ವಾಸವಾಗಿದ್ದರು. 52-ವರ್ಷ-ವಯಸ್ಸಿನ ಆಟೋ ರಿಕ್ಷಾ ಡ್ರೈವರ್ ಯಾರಬ್ ಮತ್ತು ಅಂಬ್ಯುಲೆನ್ಸ್ ಡ್ರೈವರ್ ರಮೇಶ್ ಗಾಯಗೊಂಡಿದ್ದಾರೆ.

ಪೊಲೀಸ್ ನೀಡಿರುವ ಮಾಹಿತಿ ಪ್ರಕಾರ ಕೈ ಮೂಳೆ ಮುರಿದುಕೊಂಡಿದ್ದ ಚಿಕ್ಕಬಳ್ಳಾಪುರದ ವ್ಯಕ್ತಿಯೊಬ್ಬರನ್ನು ರಮೇಶ ಓಡಿಸುತ್ತಿದ್ದ ಅಂಬ್ಯುಲೆನ್ಸ್ ಒಂದರಲ್ಲಿ ನಗರದ ಆಸ್ಪತ್ರೆಯೊಂದಕ್ಕೆ ಕರೆತರಲಾಗುತಿತ್ತು. ಶುಕ್ರವಾರ ರಾತ್ರಿ ಸುಮಾರು 9 ಗಂಟೆಗೆ ಅಪಘಾತ ಸಂಭವಿಸಿದೆ. ಬಹಳ ವೇಗದಲ್ಲಿ ಓಡುತ್ತಿದ್ದ ಅಂಬ್ಯುಲೆನ್ಸ್ ತನ್ನ ಮುಂದೆ ಹೋಗುತ್ತಿದ್ದ ಕಾರಿಗೆ ಗುದ್ದಿದೆ. ಕಾರು ತನ್ನ ಮುಂದಿದ್ದ ಆಟೋರಿಕ್ಷಾಗೆ ಢಿಕ್ಕಿ ಹೊಡೆದಿದೆ.

ತೀವ್ರವಾಗಿ ಗಾಯಗೊಂಡಿದ್ದ ಸಂಜೀವ್ ಕುಮಾರ ಅವರನ್ನು ಕೂಡಲೇ ಹತ್ತಿರದ ಅಸ್ಪತ್ರೆಯೊಂದಕ್ಕೆ ಒಯ್ಯಲಾದರೂ ಶನಿವಾರ ಬೆಳಗಿನ ಜಾವ 3 ಗಂಟೆಗೆ ಅವರು ಕೊನೆಯುಸಿರೆಳೆದಿದ್ದಾರೆ. ಯಾರಬ್ ಮತ್ತು ರಮೇಶ್ ಗೆ ಸಣ್ಣಪುಟ್ಟ ಗಾಯಗಳಾಗಿವೆ. ಯಲಹಂಕ ಸಂಚಾರಿ ಪೊಲೀಸ್ ಪ್ರಕಾರ ಅಪಘಾತಕ್ಕೊಳಗಾದ ಎಲ್ಲ ವಾಹನಗಳು ವಿಮಾನ ನಿಲ್ದಾಣ ಕಡೆಯಿಂದ ನಗರದೆಡೆ ಬರುತ್ತಿದ್ದವು. ಆಟೋನಲ್ಲಿ ಯಾವುದೇ ಪ್ರಯಾಣಿಕನಿರಲಿಲ್ಲ ಮತ್ತು ಸಂಜೀವ ಕುಮಾರ ಕಾರಲ್ಲಿ ಒಬ್ಬರೇ ಇದ್ದರು.

ಅಂಬ್ಯುಲೆನ್ಸ್ ನಲ್ಲಿದ್ದ ಗಾಯಾಳು ಮತ್ತು ಅವರ ಜೊತೆಯಿದ್ದವರಿಗೆ ಗಾಯಗಳಾಗಿಲ್ಲ. ಅಪಘಾತದಿಂದಾಗಿ ಎಕ್ಸ್ ಪ್ರೆಸ್ ವೇನಲ್ಲಿ ಸುಮಾರು ಒಂದು ಗಂಟೆ ಕಾಲ ಟ್ರಾಫಿಕ್ ಜಾಮ್ ಆಗಿತ್ತು.

ಕೇಸು ದಾಖಲಿಸಿಕೊಂಡಿರುವ ಪೊಲೀಸರು ಎಲ್ಲ ಮೂರು ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಯಲಹಂಕದ ಸರ್ಕಾರೀ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಸಂಜೀವ ಅವರ ದೇಹವನ್ನು ಕುಟುಂಬದ ಸದಸ್ಯರಿಗೆ ಹಸ್ತಾಂತರಿಸಲಾಯಿತು.