ಬೆಂಗಳೂರು ರಾಮೇಶ್ವರಂ ಕೆಫೆ ಸ್ಫೋಟಕ್ಕೆ ಪಾಕಿಸ್ತಾನ ನಂಟು: ನೆರೆ ದೇಶದಲ್ಲಿ ತಲೆಮರೆಸಿಕೊಂಡ ಶಹೀದ್ ಫೈಸಲ್

| Updated By: ಗಣಪತಿ ಶರ್ಮ

Updated on: Nov 08, 2024 | 6:57 AM

ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣ ಸಂಬಂಧ ಈ ಹಿಂದೆಯೇ ಚಾರ್ಜ್​ಶೀಟ್​ ಸಲ್ಲಿಸಿದ್ದ ಎನ್​ಐಎ ಇದೀಗ ಮತ್ತಷ್ಟು ಸ್ಫೋಟಕ ಮಾಹಿತಿಯನ್ನು ಬಹಿರಂಗಪಡಿಸಿದೆ. ಸ್ಫೋಟಕ್ಕೂ ಪಾಕಿಸ್ತಾನಕ್ಕೂ ನಂಟಿರುವ ವಿಚಾರ ಈಗ ಬಯಲಾಗಿದೆ. ಆ ಬಗ್ಗೆ ಮಾಹಿತಿ ಇಲ್ಲಿದೆ.

ಬೆಂಗಳೂರು ರಾಮೇಶ್ವರಂ ಕೆಫೆ ಸ್ಫೋಟಕ್ಕೆ ಪಾಕಿಸ್ತಾನ ನಂಟು: ನೆರೆ ದೇಶದಲ್ಲಿ ತಲೆಮರೆಸಿಕೊಂಡ ಶಹೀದ್ ಫೈಸಲ್
ರಾಮೇಶ್ವರಂ ಕೆಫೆ
Follow us on

ಬೆಂಗಳೂರು, ನವೆಂಬರ್ 8: ಬೆಂಗಳೂರಿನ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ ತನಿಖೆ ಮಾಡಿದ ರಾಷ್ಟ್ರೀಯ ತನಿಖಾ ದಳ (ಎನ್​ಐಎ) ಈಗಾಗಲೇ ಕೋರ್ಟ್​ಗೆ ಚಾರ್ಜ್‌ಶೀಟ್‌ ಸಲ್ಲಿಕೆ ಮಾಡಿದೆ. ಎನ್​ಐಎ ಚಾರ್ಜ್​ಶೀಟ್​ನಲ್ಲಿ ಸ್ಫೋಟಕ ಮಾಹಿತಿ ಉಲ್ಲೇಖವಾಗಿರುವುದು ಈಗ ತಿಳಿದುಬಂದಿದೆ.

ರಾಮೇಶ್ವರಂ ಕೆಫೆ ಸ್ಫೋಟ​ ಪ್ರಕರಣಕ್ಕೆ ಪಾಕಿಸ್ತಾನದ ನಂಟಿದ್ದು, ಪಾಕ್ ಮೂಲದ ಶಂಕಿತ ಉಗ್ರ ಎ6 ಫೈಸಲ್ ಸದ್ಯ ಪಾಕಿಸ್ತಾನದಲ್ಲಿದ್ದಾನೆ ಎನ್ನಲಾಗಿದೆ. ಮಂಗಳೂರು ಕುಕ್ಕರ್ ಸ್ಫೋಟದ ಬಳಿಕ ತಾಹಾ ಮತ್ತು ಶಾಜಿಬ್ ನಾಪತ್ತೆಯಾಗಿದ್ದರು. ಕೆಲಕಾಲದ ಬಳಿಕ ಮತ್ತೆ ವಾಪಾಸ್ ಬೆಂಗಳೂರಿಗೆ ಬಂದಿದ್ದರು. ಆಗ ಮುಜಾಮಿಲ್ ಷರೀಫ್ ಜೊತೆಗೆ ಪರಿಚಯವಾಗಿತ್ತು. ಮುಜಾಮಿಲ್ ಮೆಜೆಸ್ಟಿಕ್ ಬಳಿಯ ಹೋಟೆಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದ. ಇದೇ ಮುಜಾಮಿಲ್ ಷರೀಫ್‌ನ ತಾಹಾ ಮತ್ತು ಶಾಜಿಬ್ ಮನಪರಿವರ್ತಿಸಿ ಐಸಿಸ್‌ಗೆ ಸೇರ್ಪಡೆ ಮಾಡಿದ್ದರು. ಮೊದಲ ಹಂತದಲ್ಲಿ ಕೆಲವು ದುಷ್ಕೃತ್ಯ ನಡೆಸಲು ಮುಜಾಮಿಲ್‌ಗೆ ತಾಹಾ ಮತ್ತು ಶಾಜಿಬ್ ಟಾಸ್ಕ್ ನೀಡಿದ್ದರು.

ಮಲ್ಲೇಶ್ವರ ಬಿಜೆಪಿ ಕಚೇರಿ ಪ್ಲಾನ್​ ಟುಸ್

ಉಗ್ರರು 2023 ಡಿಸೆಂಬರ್‌ನಲ್ಲಿ ಬೆಂಗಳೂರಲ್ಲಿ ಬಾಂಬ್ ಸ್ಫೋಟ ನಡೆಸಲು ಸಂಚು ಹೂಡಿದ್ದರು. ಆನ್‌ಲೈನ್ ಹ್ಯಾಂಡ್ಲರ್ ಮೂಲಕ ಈ ಸೂಚನೆ ಬಂದಿತ್ತು. ಜನವರಿ 22, 2024ರಂದು ಆಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಇದೆ. ಅಂದೇ ಸ್ಫೋಟ ನಡೆಸಿ ಎಂಬ ಸೂಚನೆ ಇತ್ತು. ಈ ಹಿನ್ನೆಲೆಯಲ್ಲಿ ಮಲ್ಲೇಶ್ವರಂ ಬಿಜೆಪಿ ಕಚೇರಿ ಟಾರ್ಗೆಟ್ ಮಾಡಿದ್ದ ಶಾಜಿಬ್, ಹೀಗಾಗಿ ಬೆಂಗಳೂರಿನಿಂದ ಚೆನ್ನೈಗೆ ಶಿಫ್ಟ್ ಆಗಿದ್ದ. ಟ್ರಿಪ್ಲಿಕೇನ್ ಎಂಬಲ್ಲಿ ಬಾಡಿಗೆ ಮನೆಯಲ್ಲಿದ್ದುಕೊಂಡೆ ಐಇಡಿ ಬಾಂಬ್ ತಯಾರಿಕೆ ಮಾಡಿದ್ದ. 2024 ಜನವರಿ 22ರಂದು ಬೆಳಗ್ಗೆ ಐಇಡಿ ಬಾಂಬ್ ಹಿಡ್ಕೊಂಡು ಬೆಂಗಳೂರಿಗೆ ಬಂದಿದ್ದ ಶಾಜಿಬ್, ಬಿಜೆಪಿ ಕಚೇರಿ ಮುಂಭಾಗದಲ್ಲಿ ಬಾಂಬ್ ಇಡಲು ಸಂಚು ಹೂಡಿದ್ದ. ಹೆಚ್ಚಿನ ಭದ್ರತೆ ಹಿನ್ನೆಲೆ ಬಿಜೆಪಿ ಕಚೇರಿ ಹಿಂಭಾಗದಲ್ಲಿ ಬಾಂಬ್ ಇಟ್ಟಿದ್ದ. 90 ನಿಮಿಷಕ್ಕೆ ಟೈಮರ್ ಸೆಟ್ ಮಾಡಿದ್ದ. ಬಾಂಬ್​ ಬ್ಲಾಸ್ಟ್​ ಆಗಲಿಲ್ಲ. ಬಾಂಬ್​ ಇಟ್ಟವನೇ ಚೆನ್ನೈಗೆ ಎಸ್ಕೇಪ್​ ಆಗಿದ್ದ. ಬಾಂಬ್ ಸ್ಫೋಟವಾಗುವುದಿರಲಿ, ಕನಿಷ್ಠಪಕ್ಷ ಆ ಬಾಂಬ್ ಪತ್ತೆಯೂ ಆಗಲಿಲ್ಲ.

ಇದನ್ನೂ ಓದಿ: ಬೆಂಗಳೂರು: ದೆಹಲಿ, ಮುಂಬೈ ಮೂಲದ ಕಂಪನಿಗಳ ಮೇಲೆ ಐಟಿ ದಾಳಿ

ಒಂದೇ ವಾರದಲ್ಲಿ ಬಾಂಬ್​ ತಯಾರಿಸಿ ರಾಮೇಶ್ವರಂ ಬ್ಲಾಸ್ಟ್

ಬೆಂಗಳೂರಿನ ಮಲ್ಲೇಶ್ವರ ಬಿಜೆಪಿ ಕಚೇರಿಯಲ್ಲಿ ಹಿಂಭಾಗ ಇಟ್ಟಿದ್ದ ಬಾಂಬ್ ಸ್ಫೋಟಗೊಳ್ಳದ ಹಿನ್ನೆಲೆ ಮತ್ತೆ ಜನನಿಬಿಡ ಪ್ರದೇಶದಲ್ಲಿ ಬಾಂಬ್ ಸ್ಫೋಟಕ್ಕೆ ಪ್ಲಾನ್ ಮಾಡಿದ್ದ. ಅಂತಿಮವಾಗಿ ಫೆಬ್ರವರಿ ತಿಂಗಳಲ್ಲಿ ಐಇಡಿ ಬಾಂಬ್ ತಯಾರಿಸಿ, ಫೆಬ್ರವರಿ 29ರಂದು ಶಾಜಿಬ್ ಚೆನ್ನೈನಿಂದ ಬೆಂಗಳೂರಿಗೆ ಬಂದು ಕೆಆರ್ ಪುರಂ ಟಿನ್ ಫ್ಯಾಕ್ಟರಿ ಬಳಿ ಇಳಿದು, ಕುಂದಲಹಳ್ಳಿಗೆ ಬಂದು ರಾಮೇಶ್ವರಂ ಕೆಫೆಯಲ್ಲಿ ಐಇಡಿ ಬಾಂಬ್ ಇಟ್ಟಿದ್ದರ ಬಗ್ಗೆ ಎನ್​ಐಎ ಎಳೆ ಎಳೆಯಾಗಿ ಚಾರ್ಜ್​ ಶೀಟ್​ನಲ್ಲಿ ಬಿಚ್ಚಿಟ್ಟಿದೆ.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ