ಬೆಂಗಳೂರು: ಇಸ್ರೇಲ್-ಭಾರತ ವ್ಯಾಪಾರ ಶೃಂಗಸಭೆ ವೇಳೆ ‘ಪ್ಯಾಲೆಸ್ತೀನ್ ಧ್ವಜ’ ಪ್ರದರ್ಶನ

| Updated By: ಕಿರಣ್ ಹನುಮಂತ್​ ಮಾದಾರ್

Updated on: Sep 24, 2024 | 8:47 PM

ಕರ್ನಾಟಕದಲ್ಲಿ ಇತ್ತೀಚೆಗೆ ಹೆಚ್ಚಾಗಿ ಪ್ಯಾಲೆಸ್ತೀನ್ ಧ್ವಜ ಹಾರಾಟ ಕಂಡುಬರುತ್ತಿದೆ. ಬಾಗಲಕೋಟೆ, ಬೆಳಗಾವಿ ಆಯ್ತು, ಇದೀಗ ಬೆಂಗಳೂರಿನಲ್ಲೂ ಕೂಡ ಬೆಳಕಿಗೆ ಬಂದಿದೆ. ನಿನ್ನೆ (ಸೆ.23) ಬೆಂಗಳೂರಿನ ಐಐಎಸ್ ಕ್ಯಾಂಪಸ್​ನಲ್ಲಿ ನಡೆದ ಇಸ್ರೆಲ್-ಭಾರತ ವ್ಯಾಪಾರ ಶೃಂಗಸಭೆ ವೇಳೆ ಪ್ಯಾಲೆಸ್ತೀನ್ ಧ್ವಜ ಪ್ರದರ್ಶನ ಮಾಡಲಾಗಿದ್ದು, ಪೊಲೀಸರು ಖಡಕ್​ ಎಚ್ಚರಿಕೆ ಕೊಟ್ಟು, ಧ್ವಜವನ್ನು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಒಂದು ವರದಿ ಇಲ್ಲಿದೆ.

ಬೆಂಗಳೂರು: ಇಸ್ರೇಲ್-ಭಾರತ ವ್ಯಾಪಾರ ಶೃಂಗಸಭೆ ವೇಳೆ ‘ಪ್ಯಾಲೆಸ್ತೀನ್ ಧ್ವಜ’ ಪ್ರದರ್ಶನ
ಪ್ಯಾಲೆಸ್ತೀನ್ ಧ್ವಜ ಹಾರಾಟ
Follow us on

ಬೆಂಗಳೂರು, ಸೆ.24: ಬೆಂಗಳೂರಿನ ಐಐಎಸ್​ಸಿ ಕ್ಯಾಂಪಸ್​ನ ಹೊರಗಡೆ ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ ಸಂಸ್ಥೆ ಸುದ್ದಿಗೋಷ್ಟಿ‌ ನಡೆಸುವ ವೇಳೆ ಪ್ಯಾಲೆಸ್ತೀನ್ ಧ್ವಜ(Palestine flag) ಪ್ರದರ್ಶನ ಮಾಡಲಾಗಿದ್ದು, ಕೂಡಲೇ ಸುದ್ದಿಗೋಷ್ಟಿ‌ ನಿಲ್ಲಿಸಿದ ಪೊಲೀಸರು, ಧ್ವಜ‌ವನ್ನು ತಮ್ಮ ವಶಕ್ಕೆ ಪಡೆದುಕೊಂಡು ಸುದ್ದಿಗೋಷ್ಟಿಗೆ ಅನುಮತಿ ಮಾಡಿಕೊಟ್ಟಿದ್ದಾರೆ. ಹೌದು, ನಿನ್ನೆ (ಸೋಮವಾರ) ಬೆಂಗಳೂರಿನ ಐಐಎಸ್ ಕ್ಯಾಂಪಸ್​ನಲ್ಲಿ ಇಸ್ರೆಲ್-ಭಾರತ ವ್ಯಾಪಾರ ಶೃಂಗಸಭೆಯನ್ನು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್‌ನ ಸಭಾಂಗಣದಲ್ಲಿ ಥಿಂಕ್ ಇಂಡಿಯಾ ಹಾಗೂ ಇಂಡಿಯನ್ ಚೇಂಬರ್ ಆಫ್ ಇಂಟರ್‌ನ್ಯಾಷನಲ್ ಬ್ಯುಸಿನೆಸ್ ಮತ್ತು ಮೈಸೂರು ಲ್ಯಾನ್ಸರ್ಸ್ ಹೆರಿಟೇಜ್ ಫೌಂಡೇಶನ್ ಆಯೋಜನೆ ಮಾಡಲಾಗಿತ್ತು. ಇದಕ್ಕೆ ಐಐಎಸ್‌ಸಿ, ಐಐಎಂ, ಐಐಐಟಿಬಿ, ಎನ್‌ಐಎಸ್‌ ಹಾಗೂ ರಾಜ್ಯ ಸರ್ಕಾರದಿಂದಲೂ ಶೃಂಗಸಭೆಗೆ ಬೆಂಬಲವಿತ್ತು.

ಪ್ಯಾಲೆಸ್ತೀನ್ ಬಾವುಟ ಹಾರಿಸದಂತೆ ಎಚ್ಚರಿಕೆ  ನೀಡಿದ ಪೊಲೀಸರು

ಆದರೆ, ಕೆಲ ವಿದ್ಯಾರ್ಥಿ ಸಂಘಟನೆ ಇದನ್ನೂ ವಿರೋಧಿಸಿತ್ತು. ಈ ಹಿನ್ನಲೆ ಕ್ಯಾಂಪಸ್​ನ ಒಂದು ಕಡೆ ಕೆಲ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು. ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ ಸಂಸ್ಥೆಯ ಕಾರ್ಯದರ್ಶಿ ಐಶ್ವರ್ಯ ಅವರು ಕ್ಯಾಂಪಸ್ ಹೊರಗೆ ಸುದ್ದಿಗೋಷ್ಟಿ ನಡೆಸಿದ್ದರು. ಈ ವೇಳೆ  ಭಾರತ ಮತ್ತು ಪ್ಯಾಲೆಸ್ತೀನ್ ಬಾವುಟಗಳನ್ನು ಒಟ್ಟಿಗೆ ಪ್ರದರ್ಶನ ಮಾಡಲಾಗಿದೆ. ಇದನ್ನು ನೋಡಿದ ಪೋಲಿಸರು ಬಂದು ಪ್ಯಾಲೆಸ್ತೀನ್ ಬಾವುಟ ಹಾರಿಸದಂತೆ ಎಚ್ಚರಿಕೆ ನೀಡಿ ಪ್ರತಿಭಟನಾಕಾರರ ಕೈಯಿಂದ ವಶಕ್ಕೆ ಪಡೆದ ನಂತರವೇ ಸುದ್ದಿಗೋಷ್ಠಿಗೆ ಅವಕಾಶ ಮಾಡಿಕೊಟ್ಟಿದ್ದಾರೆ.

ಇದನ್ನೂ ಓದಿ:ಬೆಳಗಾವಿ: ದರ್ಬಾರ್ ಗಲ್ಲಿಯಲ್ಲಿ 200 ಮೀಟರ್​ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜದ ದರ್ಬಾರ್

ಸಾಮಾಜಿಕ ಜಾಲತಾಣದಲ್ಲಿ ಪೊಲೀಸರು, ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ

ಇದಾದ ಮೇಲೆ ಸಾಮಾಜಿಕ ಜಾಲತಾಣ ‘ಎಕ್ಸ್​’ ನಲ್ಲಿಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ ಸಂಸ್ಥೆಯ ಸದಸ್ಯರು ಪೊಲೀಸರು ಹಾಗೂ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:43 pm, Tue, 24 September 24