ಸಿದ್ದರಾಮಯ್ಯ ವಿರುದ್ಧ ತನಿಖೆ ಏಕೆ? ಹೈಕೋರ್ಟ್ ಹೇಳಿದ್ದೇನು ? ತೀರ್ಪಿನ ಸಂಪೂರ್ಣ ವಿವರ ಇಲ್ಲಿದೆ
ಮುಡಾ ನಿವೇಶನ ಹಂಚಿಕೆಯಲ್ಲಿ ಅಕ್ರಮ ಲಾಭ ಪಡೆದ ಆರೋಪ ಎದುರಿಸ್ತಿರೋ ಸಿಎಂ ಸಿದ್ದರಾಮಯ್ಯ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಭ್ರಷ್ಟಾಚಾರ ತಡೆ ಕಾಯ್ದೆ ಸೆಕ್ಷನ್ 17 ಎ ಅಡಿ ತನಿಖೆಗೆ ಅನುಮತಿ ನೀಡಿದ್ದ ರಾಜ್ಯಪಾಲರ ಕ್ರಮ ಪ್ರಶ್ನಿಸಿ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಸಿದ್ದರಾಮಯ್ಯ ಪತ್ನಿಯೇ ಫಲಾನುಭವಿಯಾಗಿರುವುದರಿಂದ ನಿಸ್ಸಂದೇಹವಾಗಿ ತನಿಖೆ ಅವಶ್ಯಕತೆ ಇದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಹೈಕೋರ್ಟ್ ತೀರ್ಪಿನ ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ.
ಬೆಂಗಳೂರು, (ಸೆಪ್ಟೆಂಬರ್ 24): ಪತ್ನಿ ಹೆಸರಿಗೆ 14 ಮುಡಾ ನಿವೇಶನ ಹಂಚಿಕೆ ಪ್ರಕರಣ ಸಿಎಂ ಸಿದ್ದರಾಮಯ್ಯ ನಿದ್ದೆಗೆಡಿಸಿದೆ. ಭ್ರಷ್ಟಾಚಾರ ತಡೆ ಕಾಯ್ದೆ ಸೆಕ್ಷನ್ 17 ಎ ಅಡಿ ರಾಜ್ಯಪಾಲರು ನೀಡಿರುವ ಅನುಮತಿಯನ್ನು ಎತ್ತಿಹಿಡಿದಿರುವ ಹೈಕೋರ್ಟ್ ಸಿಎಂ ಅರ್ಜಿಯನ್ನು ವಜಾಗೊಳಿಸಿದೆ. ತೀರ್ಪು ಪ್ರಕಟಿಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ತನ್ನ 197 ಪುಟಗಳ ತೀರ್ಪಿನಲ್ಲಿ ವಿವರವಾದ ಕಾರಣಗಳನ್ನೂ ನೀಡಿದ್ದಾರೆ. ಸಿದ್ದರಾಮಯ್ಯ ವಿರುದ್ಧ ತನಿಖೆ ಏಕೆ ಅಗತ್ಯವೆಂಬುವುದಕ್ಕೂ ಹೈಕೋರ್ಟ್ ಸ್ಪಷ್ಟ ಕಾರಣಗಳನ್ನು ನೀಡಿದೆ. ರಾಜ್ಯಪಾಲರ ಆದೇಶ ಏಕೆ ಸರಿಯಾಗಿದೆ ಎಂಬುದಕ್ಕೂ ವಿವರಣೆಯನ್ನು ಹೈಕೋರ್ಟ್ ನೀಡಿದೆ.
ಸಿದ್ದರಾಮಯ್ಯ ವಿರುದ್ಧ ತನಿಖೆ ಏಕೆ? ಹೈಕೋರ್ಟ್ ಹೇಳಿದ್ದೇನು ?
ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 7 ಸಿ ಅಡಿ ಸಿದ್ದರಾಮಯ್ಯ ವಿರುದ್ಧ ಆರೋಪವಿದೆ. ಈ ಸೆಕ್ಷನ್ ಅಡಿ ಸಾರ್ವಜನಿಕ ಸೇವಕನಾದವನು ತನಗಾಗಲೀ ಅಥವಾ ಇತರರಿಗಾಗಲೀ ತನ್ನ ಅಧಿಕಾರ ದುರುಪಯೋಗಪಡಿಸಿಕೊಂಡು ನ್ಯಾಯವಲ್ಲದ ಲಾಭ ಪಡೆದರೆ ಅದು ಅಪರಾಧವಾಗುತ್ತದೆ. ಮುಡಾ ಪ್ರಕರಣದ ವಾಸ್ತವಾಂಶಗಳನ್ನು ಗಮನಿಸಿದರೆ ಮೇಲ್ನೋಟಕ್ಕೆ ಸಿಎಂ ಕುಟುಂಬ ನ್ಯಾಯವಲ್ಲದ ಲಾಭ ಪಡೆದಿರುವುದು ಸ್ಪಷ್ಟವಾಗಿದೆ. 40 ಕಿಲೋ ಮೀಟರ್ ದೂರದ ಜಮೀನು ಬಿಟ್ಟುಕೊಟ್ಟು ಅದರ ಬದಲಿಗೆ ಮೈಸೂರಿನ ಹೃದಯ ಭಾಗದ ನಿವೇಶನಗಳನ್ನು ಪಡೆದಿದ್ದಾರೆ. ಸಾರ್ವಜನಿಕ ಸೇವಕ ತನ್ನ ಕುಟುಂಬದವರಿಗಾಗಿ ಪ್ರಭಾವ ಬಳಸಿರುವುದಕ್ಕೆ ಇದು ಸಾಕು. ಪ್ರಭಾವ ಬಳಸಲು ಸಾರ್ವಜನಿಕ ಸೇವಕ ಯಾವುದೇ ಶಿಫಾರಸು ಅಥವಾ ಆದೇಶ ಮಾಡಬೇಕಿಲ್ಲ. ಪತ್ನಿಗೆ ಲಾಭವಾಗುವುದರ ಹಿಂದೆ ನಿಸ್ಸಂದೇಹವಾಗಿ ಸಿದ್ದರಾಮಯ್ಯ ಇದ್ದಾರೆ. ಸಿದ್ದರಾಮಯ್ಯ ಅವರಿಗಿರುವ ಅಧಿಕಾರದ ಬಲದಿಂದಲೇ ಅವರ ಕುಟುಂಬ ಅನುಕೂಲ ಪಡೆದಿದೆ.
ಇದನ್ನೂ ಓದಿ: ಮುಡಾ ಹಗರಣ: ಹೈಕೋರ್ಟ್ ತೀರ್ಪು ಬೆನ್ನಲ್ಲೇ ಜನಪ್ರತಿನಿಧಿಗಳ ಕೋರ್ಟ್ನಲ್ಲಿ ಮುಂದಿನ ಪ್ರಕ್ರಿಯೆ ಏನು?
ಕೆಸರೆ ಗ್ರಾಮದಲ್ಲಿ ಜಮೀನು ಕಳೆದುಕೊಂಡವರಿಗೆ ವಿಜಯನಗರ 3ನೇ ಹಂತದ ಬಡಾವಣೆಯಲ್ಲಿ ಬದಲಿ ನಿವೇಶನ ಮಂಜೂರು ಮಾಡಿದ ಬೇರೆ ಉದಾಹರಣೆಗಳಿಲ್ಲ. ಅಚ್ಚರಿಯ ವಿಚಾರವೆಂದರೆ ಸಿಎಂ ಪತ್ನಿಗೆ 50 – 50 ಅನುಪಾತದಲ್ಲಿ ನಿವೇಶನ ಹಂಚಿಕೆಯಾದ ಬಳಿಕ ಈ ನಿಯಮವನ್ನೇ ರದ್ದುಪಡಿಸಲಾಗಿದೆ. ಸಿಎಂ ಪುತ್ರ ಭಾಗಿಯಾಗಿದ್ದ ಸಭೆಯಲ್ಲಿ 50 50 ನಿವೇಶನ ಹಂಚಿಕೆ ತೀರ್ಮಾನವಾಗಿದೆ. 50-50 ಹಂಚಿಕೆ ಕಾನೂನುಬಾಹಿರವೆಂದು ರದ್ದಾಗಿದ್ದರೆ ಸಿಎಂ ಪತ್ನಿಗೆ ದೊರಕಿದ 14 ನಿವೇಶನಗಳಿಗೆ ಏನಾಗಲಿದೆ ಎಂಬ ಬಗ್ಗೆ ತನಿಖೆಯಾಗಬೇಕಿದೆ. ಸಾಮಾನ್ಯ ನಾಗರಿಕನಾಗಿದ್ದರೆ ತನಿಖೆಗೆ ನಾಚುತ್ತಿರಲಿಲ್ಲ. ಮುಖ್ಯಮಂತ್ರಿ ದಿನಗೂಲಿಯವರು, ಜನಸಾಮಾನ್ಯರ ನಾಯಕನಾಗಿ ತನಿಖೆಗೆ ಹಿಂಜರಿಯಬಾರದು. ಸಿದ್ದರಾಮಯ್ಯ ಕುಟುಂಬದ ವಿರುದ್ಧ 56 ಕೋಟಿಯ ಅಕ್ರಮ ಲಾಭ ಪಡೆದ ಆರೋಪ, ಅನುಮಾನಗಳಿರುವಾಗ ತನಿಖೆ ಅತ್ಯಗತ್ಯವೆಂದು ಭಾವಿಸುತ್ತೇನೆ. ಎಂದು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ ಅಭಿಪ್ರಾಯಪಟ್ಟಿದೆ.
ಜೊಲ್ಲೆ ಪ್ರಕರಣ ನಿರಾಕರಿಸಿ, ಸಿಎಂ ಕೇಸ್ ನಲ್ಲಿ ಅನುಮತಿ ಕೊಟ್ಟಿದ್ಯಾಕೆ?
ಇನ್ನು ಶಶಿಕಲಾ ಜೊಲ್ಲೆ ಪ್ರಕರಣದಲ್ಲಿ ತನಿಖೆಗೆ ಅನುಮತಿ ನಿರಾಕರಿಸಿ, ಸಿಎಂ ಕೇಸ್ ನಲ್ಲಿ ಅನುಮತಿ ಕೊಟ್ಟಿದ್ದೇಕೆಂದು ಉತ್ತರಿಸಲು ಜೊಲ್ಲೆ ಪ್ರಕರಣ ತಮ್ಮ ಮುಂದಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ. ಅಲ್ಲದೇ ಸಿಎಂ ಪರ ವಕೀಲರು ಎತ್ತಿರುವ ಪ್ರಶ್ನೆಗಳಿಗೆ 11 ಅಂಶಗಳ ಕಾರಣಗಳನ್ನೂ ಸಹ ಕೊಟ್ಟಿದ್ದು ಅವು ಈ ಕೆಳಗಿನಂತಿವೆ.
- ದೂರುದಾರರು ತಮ್ಮ ದೂರು ಸಲ್ಲಿಸಿರುವುದು ಅಥವಾ ರಾಜ್ಯಪಾಲರಿಂದ ಅನುಮತಿ ಕೋರಿರುವುದು ಸೂಕ್ತವಾಗಿದೆ.
- ಈ ಪ್ರಕರಣದಲ್ಲಿನ ವಾಸ್ತವಾಂಶಗಳನ್ನು ಗಮನಿಸಿದರೆ ಸೆಕ್ಷನ್ 17 ಎ ಅಡಿ ಅನುಮತಿ ಪಡೆಯುವುದು ಅತ್ಯಗತ್ಯವಾಗಿತ್ತು.
- ಸೆ. 17 ಎ ಅಡಿ ಪೊಲೀಸ್ ಅಧಿಕಾರಿಯೇ ಅನುಮತಿ ಪಡೆಯಬೇಕೆಂದಿಲ್ಲ. ಅನುಮತಿ ಪಡೆಯುವುದು ಕೋರ್ಟ್ ಗೆ ಸಿಆರ್‌ಪಿಸಿ ಸೆಕ್ಷನ್ 200 ಅಡಿ ನೇರವಾಗಿ ದೂರು ಸಲ್ಲಿಸುವ ಖಾಸಗಿ ದೂರುದಾರರ ಕರ್ತವ್ಯವಾಗಿದೆ.
- ರಾಜ್ಯಪಾಲರು ಸಾಮಾನ್ಯ ಸಂದರ್ಭಗಳಲ್ಲಿ ಸಚಿವ ಸಂಪುಟದ ನಿರ್ದೇಶನ ಪಾಲಿಸಬೇಕು. ಅಪರೂಪದ ಸಂದರ್ಭದಲ್ಲಿ ರಾಜ್ಯಪಾಲರು ಸ್ವಂತ ವಿವೇಚನೆ ಬಳಸಬಹುದು. ಈ ಪ್ರಕರಣ ಸ್ವಂತ ವಿವೇಚನೆ ಬಳಸಲು ಅರ್ಹವಾದ ಪ್ರಕರಣ.
- ಸ್ವತಂತ್ರ ವಿವೇಚನೆ ಬಳಸಿದ ರಾಜ್ಯಪಾಲರ ಕ್ರಮದಲ್ಲಿ ತಪ್ಪು ಕಂಡಿಲ್ಲ.
- ನಿರ್ಧಾರ ಕೈಗೊಳ್ಳುವ ಸಕ್ಷಮ ಪ್ರಾಧಿಕಾರದ ಕಡತದಲ್ಲಿ ಕಾರಣಗಳಿದ್ದರೆ ಸಾಕು. ಅದರಲ್ಲೂ ಉನ್ನತ ಪ್ರಾಧಿಕಾರವು ನೀಡುವ ಕಾರಣ ಆದೇಶದ ಭಾಗವಾಗಲಿದೆ. ಆಕ್ಷೇಪಣೆಯ ರೂಪದಲ್ಲಿ ಅಂತಹ ಕಾರಣಗಳನ್ನು ಹೈಕೋರ್ಟ್ ಗೆ ಸಲ್ಲಿಸಬೇಕಿಲ್ಲ.
- ರಾಜ್ಯಪಾಲರ ಆದೇಶದಲ್ಲಿ ವಿವೇಚನೆ ಬಳಸಿಲ್ಲ ಎಂಬುವಂತಿಲ್ಲ. ಸಂಪೂರ್ಣ ವಿವೇಚನೆ ಬಳಸಿಯೇ ಆದೇಶ ನೀಡಿದ್ದಾರೆ.
- ಸೆ. 17 ಎ ಅಡಿಯಲ್ಲಿ ಆದೇಶಕ್ಕೂ ಮುನ್ನ ಎದುರುದಾರರ ಅಹವಾಲು ಅಲಿಸಬೇಕೆಂದಿಲ್ಲ. ಸಕ್ಷಮ ಪ್ರಾಧಿಕಾರಕ್ಕೆ ಬೇಕೆನಿಸಿದರೆ ಎದುರುದಾರರ ಅಹವಾಲು ಆಲಿಸಬಹುದು.
- ರಾಜ್ಯಪಾಲರ ತರಾತುರಿಯ ಕ್ರಮ ಕೈಗೊಂಡಿದ್ದಾರೆಂಬ ಆರೋಪ ಅವರ ಆದೇಶವನ್ನು ನಿಷ್ಪಲಗೊಳಿಸಿಲ್ಲ.
- ರಾಜ್ಯಪಾಲರು ಭ್ರಷ್ಟಾಚಾರ ತಡೆ ಕಾಯ್ದೆ ಸೆಕ್ಷನ್ 17 ಎ ಅಡಿಯಲ್ಲಿ ತನಿಖೆ ನಡೆಸಲು ಅನುಮತಿಯಷ್ಟೇ ನೀಡಿದ್ದಾರೆ ಬಿಎನ್ ಎಸ್ಎಸ್ 218 ಅಡಿ ಪೂರ್ವಾನುಮತಿ ನೀಡಿಲ್ಲವೆಂದು ಸೀಮಿತವಾಗಿ ರಾಜ್ಯಪಾಲರ ಆದೇಶವನ್ನು ಓದತಕ್ಕದ್ದು.
- ದೂರಿನಲ್ಲಿರುವ ಅಂಶಗಳು ನಿಸ್ಸಂದೇಹವಾಗಿ ತನಿಖೆಯನ್ನು ಬಯಸುತ್ತವೆ. ಏಕೆಂದರೆ ಫಲಾನುಭವಿಗಳು ಹೊರಗಿನವರಲ್ಲ . ಸಿದ್ದರಾಮಯ್ಯ ಪತ್ನಿಯೇ ಇದರ ಫಲಾನುಭವಿಯಾಗಿದ್ದಾರೆ ಎಂದು ರಾಜ್ಯಪಾಲರ ಕ್ರಮ ಎತ್ತಿಹಿಡಿಯಲು 11 ಕಾರಣಗಳನ್ನು ನೀಡಿರುವ ಹೈಕೋರ್ಟ್ ಅಂತಿಮವಾಗಿ ತತ್ವಜ್ಞಾನಿ ಬೆಂಜಮಿನ್ ಡಿಸ್ರೇಲಿಯ ಹೇಳಿಕೆಯನ್ನೂ ಉಲ್ಲೇಖಿಸಿದೆ.
ಎಲ್ಲ ಅಧಿಕಾರಗಳೂ ನಂಬಿಕೆಯ ಆಧಾರದಲ್ಲಿ ನೀಡಲ್ಪಟ್ಟಿವೆ. ಅಧಿಕಾರ ಬಳಸುವವರು ಉತ್ತರದಾಯಿಗಳಾಗಿರಬೇಕು. ಜನರಿಂದ ಜನರಿಗಾಗಿ ಈ ಅಧಿಕಾರ ಬಂದಿದೆ. ಅವರಿಗಾಗಿಯೇ ಅದನ್ನು ಮೀಸಲಿಡಬೇಕು ಎಂದು ಉಲ್ಲೇಖಿಸಿ ಸಿಎಂ ಸಿದ್ದರಾಮಯ್ಯ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:15 pm, Tue, 24 September 24