ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕ್ಯಾಬ್ ಸಿಗದೆ ಪ್ರಯಾಣಿಕರ ಪರದಾಟ! ಪೀಕ್ ಅವರ್, ರಾತ್ರಿ ವೇಳೆ ಸಿಗ್ತಿಲ್ಲ ಟ್ಯಾಕ್ಸಿ

| Updated By: Ganapathi Sharma

Updated on: Nov 19, 2024 | 8:09 AM

ಕೆಂಪೇಗೌಡ ವಿಮಾನ ನಿಲ್ದಾಣ ಅಂದರೆ, ಸಾವಿರಾರು ಜನ ಪ್ರಯಾಣಿಕರಿಂದ ವ್ಯಸ್ತವಾಗಿರುವುದು ಸಹಜ. ಅದರಲ್ಲೂ ಶೇ 60 ರಷ್ಟು ಜನ ಟ್ಯಾಕ್ಸಿಗಳ ಮೂಲಕ ಪ್ರಯಾಣ ಮಾಡುತ್ತಾರೆ. ಆದರೆ, ಇದೀಗ ಏರ್ಪೋಟ್​​ನಲ್ಲಿ ಇದೇ ಕ್ಯಾಬ್​​ಳಿಗೆ ಬೇಡಿಕೆ ಹೆಚ್ಚಾಗಿದ್ದು, ಟ್ಯಾಕ್ಸಿಗಾಗಿ ಗಂಟೆಗಟ್ಟಲೆ ಕಾದು ನಿಲ್ಲುವ ಸ್ಥಿತಿ ನಿರ್ಮಾಣವಾಗಿದೆ.

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕ್ಯಾಬ್ ಸಿಗದೆ ಪ್ರಯಾಣಿಕರ ಪರದಾಟ! ಪೀಕ್ ಅವರ್, ರಾತ್ರಿ ವೇಳೆ ಸಿಗ್ತಿಲ್ಲ ಟ್ಯಾಕ್ಸಿ
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕ್ಯಾಬ್ ಸಿಗದೆ ಪ್ರಯಾಣಿಕರ ಪರದಾಟ
Follow us on

ಬೆಂಗಳೂರು, ನವೆಂಬರ್ 19: ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಪೀಕ್ ಅವರ್​ನಲ್ಲಿ ನೂರಾರು ಜನ ಟ್ಯಾಕ್ಸಿಗಾಗಿ ಕ್ಯಾಬ್ ಸ್ಟಾಂಡ್​ನಲ್ಲಿ ಸರತಿ ಸಾಲಿನಲ್ಲಿ ನಿಂತಿರುತ್ತಾರೆ. ಆದರೆ, ಗಂಟೆಗಟ್ಟಲೆ ಕಾದರೂ ಟ್ಯಾಕ್ಸಿಗಳ ಸಂಖ್ಯೆ ತೀರ ವಿರಳವಾಗಿದೆ. ಬೇಡಿಕೆ ಹೆಚ್ಚಾಗಿದ್ದು, ಟ್ಯಾಕ್ಸಿ ಸೇವೆಯಲ್ಲಿ ಸಮಸ್ಯೆ ಉಂಟಾಗಿದೆ. ಏರ್​ಪೋರ್ಟ್​​ನಿಂದ ನಿತ್ಯ ಸಾವಿರಾರು ಜನ ಕ್ಯಾಬ್​​ಗಳ ಮೂಲಕವೇ ಸಂಚರಿಸುತ್ತಿದ್ದು, ಕಡಿಮೆ ಬೆಲೆಗೆ ಸಿಗುವ ಆ್ಯಪ್ ಆಧಾರಿತ ಕ್ಯಾಬ್​​ಳಿಗೆ ಹೆಚ್ಚಿನ ಬೇಡಿಕೆ ಇದೆ. ಜೊತೆಗೆ ಮೊದಲೆಲ್ಲ ಪ್ರಯಾಣಿಕರ ಸಂಖ್ಯೆಗೆ ತಕ್ಕಂತೆ ಕ್ಯಾಬ್​ಗಳು ಏರ್ಪೋರ್ಟ್​ಗೆ ಬರುತ್ತಿದ್ದವು. ಆದರೆ, ಕಳೆದ ಒಂದು ತಿಂಗಳಿಂದ ಮಾತ್ರ ಕ್ಯಾಬ್​​ಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿಲ್ಲ. ಹೀಗಾಗಿ ನಿತ್ಯ ದೇಶ-ವಿದೇಶಗಳಿಂದ ಬರುವ ಸಾವಿರಾರು ಜನ ಪ್ರಯಾಣಿಕರು ಎರ್​ಪೋರ್ಟ್​ನಿಂದ ಸಿಲಿಕಾನ್ ಸಿಟಿಗೆ ತೆರಳಲು ಪರದಾಡುವಂತಾಗಿದೆ.

ಭಾನುವಾರ ಮತ್ತು ಸೋಮವಾರ ಇತರೆ ರಾಜ್ಯಗಳಿಗೆ ತೆರಳಿದ್ದ ಪ್ರಯಾಣಿಕರು ರಾತ್ರಿಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಬೆಂಗಳೂರಿಗೆ ಬಂದಿದ್ದು, ವಿಮಾನ ನಿಲ್ದಾಣದಲ್ಲಿ ಕ್ಯಾಬ್​​ಗಳಿಲ್ಲದೆ ಗಂಟ್ಟೆಗಟ್ಟಲೆ ಸರದಿಯಲ್ಲಿ ನಿಂತು ಪರದಾಡಿದರು. ಟ್ಯಾಕ್ಸಿ ಬುಕ್ ಮಾಡೋಣ ಅಂದರೆ, ಬುಕ್ಕಿಂಗ್ ಸಹ ಆಗುತ್ತಿರಲಿಲ್ಲ. ಟ್ಯಾಕ್ಸಿ ನಂಬಿಕೊಂಡು ಬಂದಾಗ ಈ ರೀತಿಯಾದರೆ ಏನು ಮಾಡುವುದು ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದರು.

ವಿಮಾನ ನಿಲ್ದಾಣದಲ್ಲಿ ಟ್ಯಾಕ್ಸಿಗಳ ಕೊರತೆಗೆ ಕಾರಣವೇನು?

ವಿಮಾನ ನಿಲ್ದಾಣದಲ್ಲಿ ಇದ್ದಕ್ಕಿದ್ದಂತೆ ಟ್ಯಾಕ್ಸಿಗಳ ಕೊರತೆ ಶುರುವಾಗಲು ಕಾರಣ ಚಾಲಕರು ಮತ್ತು ಆ್ಯಪ್ ಆಧಾರಿತ ಕೆಲ ಸಂಸ್ಥೆಗಳ ನಡುವಿನ ಶೀತಲ ಸಮರ ಎನ್ನಲಾಗಿದೆ. ವಿಮಾನ ನಿಲ್ದಾಣಕ್ಕೆ ಬರುವ ಟ್ಯಾಕ್ಸಿಗಳಿಗೆ ಕೆಲ ಆ್ಯಪ್ ಆಧಾರಿತ ಸಂಸ್ಥೆಗಳು ಪ್ರಯಾಣಿಕರಿಂದ ಟ್ರಿಪ್​ಗೆ ಪಡೆಯುವ ಹಣದಲ್ಲಿ ಸಿಂಹಪಾಲನ್ನು ತಾವೇ ಪಡೆದು ಅಲ್ಪ ಸ್ವಲ್ಪ ಹಣವನ್ನು ಚಾಲಕರಿಗೆ ನೀಡುತ್ತಿವೆಯಂತೆ. ಇದರಿಂದಾಗಿ ನಿರ್ವಹಣೆ ಕಷ್ಟವಾಗುತ್ತಿವೆ ಎಂದು ಶೇ 30 ರಷ್ಟು ಕ್ಯಾಬ್​ಗಳು ವಾರಾಂತ್ಯದಲ್ಲಿ ವಿಮಾನ ನಿಲ್ದಾಣಕ್ಕೆ ಬರುವುದನ್ನೇ ನಿಲ್ಲಿಸಿವೆ.

ಇದನ್ನೂ ಓದಿ: ಕಲಾವಿದರ ಚಿತ್ತಾರ: ನಮ್ಮ ಮೆಟ್ರೋ 8 ಗೋಡೆಗಳು ಹೇಳಲಿವೆ ಬೆಂಗಳೂರಿನ ವಿಶಿಷ್ಟ ಕಥೆಗಳು

ವಾರಾಂತ್ಯದಲ್ಲಿ ನಗರದ ಒಳಗೆಯೇ ಬಾಡಿಗೆಗಳು ಹೆಚ್ಚಾಗಿ ಸಿಗ್ತಿದ್ದು, ಕಿಲೋ ಮೀಟರ್​ ಲೆಕ್ಕದಲ್ಲಿ ಹೆಚ್ಚು ಬೆಲೆ ಸಿಗುತ್ತದೆ. ಏರ್ಪೋಟ್​ನಿಂದ ಕಡಿಮೆ ಬೆಲೆ ದೊರೆಯುತ್ತದೆ ಎಂದು ಅಂತ ಟ್ಯಾಕ್ಸಿ ಚಾಲಕರು ಆ್ಯಪ್ ಆಧಾರಿತ ಸಂಸ್ಥೆಗಳ ವಿರುದ್ದ ಆಕ್ರೋಶ ಹೊರ ಹಾಕಿದ್ದಾರೆ.

ಒಟ್ಟಾರೆಯಾಗಿ, ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ದಿನದಿಂದ ದಿನಕ್ಕೆ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿದ್ದರೂ ಅದಕ್ಕೆ ಸಮನಾಗಿ ಕ್ಯಾಬ್​ಗಳು ದೊರೆಯದೇ ಇರುವುದು ವಾರಾಂತ್ಯದಲ್ಲಿ ಪ್ರಯಾಣಿಕರು ಪರದಾಡುವಂತೆ ಮಾಡಿದೆ.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ